ಗ್ರಾಹಕನಿಗೆ ನೀಡುವ ಸೇವೆಯ ಬಗ್ಗೆ ಇದುವರೆಗೆ ಪಾಠ ಕಲಿಯದ ರಾಷ್ಟ್ರೀಕೃತ ಬ್ಯಾಂಕ್‌ಗಳು ಮಧ್ಯಮ ಹಾಗೂ ಕೆಳ ವರ್ಗದ ಗ್ರಾಹಕರು ಮೂರನೇ ದರ್ಜೆಯ ಜನ ಎಂಬ ಮನೋಭಾವವನ್ನು ಕೈ ಬಿಡದಿದ್ದರೆ. ಬಹುಶಃ ಮುಂದಿನ ದಿನಗಳಲ್ಲಿ ಈ ವರ್ಗದ ಜನರೇ ಆ ಬ್ಯಾಂಕಗಳಿಗೆ ಬಹುದೊಡ್ಡ ಪಾಠ ಕಲಿಸುತ್ತಾರೆ ಎಂಬುದರಲ್ಲಿ ಯಾವುದೇ ಅತಿಶೋಯೋಕ್ತಿ ಇಲ್ಲ.
ಏಕೆಂದರೆ ಈ ದೇಶದ ಅರ್ಥಿಕ ವ್ಯವಸ್ಥೆಯ ದೊಡ್ಡ ಅಂಗವಾದ ಈ ವರ್ಗಗಳಿಗೆ ಇನ್ನೂ ಬ್ಯಾಂಕ್ ವ್ಯವಸ್ಥೆ ಎನ್ನುವುದು ಅರ್ಥವಾಗದ ಗಣಿತವಾಗಿಯೇ ಉಳಿದಿದೆ. ಅಂತಹದ್ದರಲ್ಲಿಯೇ ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿ ವರ್ತನೆ ಮಾಡುವ ಬದಲು ಬ್ಯಾಂಕ್‌ಗೆ ಬರುವ ಗ್ರಾಹಕ ಹಾಕಿರುವ ಉಡುಪನ್ನು ನೋಡಿ ಸೌಜನ್ಯ ತೋರಿಸಬೇಕೋ ಬೇಡವೋ ಎಂಬ ಮನೋಭಾವ ಖಂಡಿತವಾಗಿ ಬದಲಾಗಬೇಕಾಗಿದೆ. ಬದಲಾಗದಿದ್ದರೆ ಜನರೇ ಅದನ್ನು ಬದಲಾಯಿಸುತ್ತಾರೆ !.
೨೦೦೯ ರಲ್ಲಿ ಬ್ಯಾಂಕ್‌ಗಳ ಗ್ರಾಹಕ ಸೇವೆ ಹೇಗಿರಬೇಕು ಎಂದು ಏಷ್ಯಾ-ಫೆಸಿಫಿಕ್ ಜರನಲ್ ಫಾರ್ ಸೋಷಿಯಲ್ ಸೈನ್ಸ್ ಅರ್ಥಶಾಸ್ತ್ರಜ್ಞ ಆರ್.ಕೆ.ಉಪ್ಪಲ್ ಅವರ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ಗಳು ಗ್ರಾಹಕರಿಗೆ ಸಂತೃಪ್ತಿ ಸೇವೆ ನೀಡುವುದರಲ್ಲಿ ಸಾಕಷ್ಟು ಹಿಂದುಳಿದಿವೆ ಎಂಬ ಅಂಶ ಗೋಚರವಾಯಿತು. ಈ ಬ್ಯಾಂಕ್‌ಗಳ ಸಿಬ್ಬಂದಿಯ ವರ್ತನೆ ಮತ್ತು ಧೋರಣೆಯಿಂದಾಗಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಣೆ ಮಾಡಲು ಸಾಕಷ್ಟು ತೊಡಕು ಉಂಟಾಗಿದೆ ಎಂಬುದು ತಿಳಿದು ಬಂತು. ಆಶ್ಚರ್ಯವೆಂದರೆ ಭಾರತೀಯ ಖಾಸಗಿ ಬ್ಯಾಂಕ್‌ಗಳು ತನ್ನ ಅಂಗಳಕ್ಕೆ ಕಾಲಿಡುವ ಪ್ರತಿಯೊಬ್ಬ ಗ್ರಾಹಕನೂ ತಮ್ಮ ಸೇವೆಗೆ ಅರ್ಹ ಮತ್ತು ಆತನಿಗೆ ಉತ್ತಮ ಸೇವೆ ನೀಡುವುದು ತಮ್ಮ ಆದ್ಯ ಕರ್ತವ್ಯಗಳಲ್ಲಿ ಮೊದಲನೆಯದು ಎಂಬ ನೀತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಅಂಶ ಪತ್ತೆಯಾಯಿತು.
ಈ ಹಿನ್ನಲೆಯಲ್ಲಿ ಆರ್.ಕೆ.ಉಪ್ಪಲ್ ಅವರು ಸಮೀಕ್ಷೆಯಲ್ಲಿ ಕಂಡು ಬಂದ ಅಂಶಗಳ ಆಧಾರವಾಗಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳು ಬದಲಾಗುತ್ತಿರುವ ಕಾಲಮಾನಕ್ಕೆ ಹೇಗೆ ಗ್ರಾಹಕರೊಂದಿಗೆ ವರ್ತನೆ ಮಾಡಬೇಕು ಎಂಬ ವರದಿಯೊಂದನ್ನು ನೀಡಿದರು. ಆದರೆ, ಅವರು ವರದಿಯಲ್ಲಿ ಕಾಣಿಸಿದ ಸುಧಾರಣೆಯ ಒಂದಂಶವನ್ನು ಈ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಳವಡಿಸಿಕೊಂಡಂತೆ ಕಾಣುತ್ತಿಲ್ಲ. ಕಾರಣ ದೇಶದಲ್ಲಿ ೫ ಲಕ್ಷ ಗ್ರಾಮಗಳಲ್ಲಿ ಬ್ಯಾಂಕ್ ವ್ಯವಸ್ಥೆ ತಲುಪಲು ಸಾಧ್ಯವಾಗಿರವುದು ಶೇ.೪೧ ರಷ್ಟು ಮಾತ್ರ. ಅಂದರೆ ಇನ್ನೂ ಶೇ.೫೯ ಗ್ರಾಮಗಳಲ್ಲಿ ಅದು ಲಭ್ಯವಿಲ್ಲ.
ಗ್ರಾಮೀಣ ಪ್ರದೇಶಕ್ಕೆ ತಲುಪುವುದು ಸಾಧ್ಯವಾಗುತ್ತಿಲ್ಲ ಎಂಬುದು ಒತ್ತಟ್ಟಿಗಿರಲಿ, ನಗರ ಪ್ರದೇಶದಲ್ಲಿರುವ ಎಷ್ಟೋ ಮಧ್ಯಮ ಹಾಗೂ ಕೆಳ ವರ್ಗದ ಜನರು ಇದುವರೆಗೆ ಬ್ಯಾಂಕ್ ವ್ಯವಸ್ಥೆಗೆ ಸೇರ್ಪಡೆಯಾಗದೆ ಉಳಿದಿದ್ದಾರೆ. ಕಾರಣ ಬ್ಯಾಂಕ್ ಸಿಬ್ಬಂದಿಗಳು ಅಂತಹ ಜನರೊಂದಿಗೆ ವರ್ತಿಸುವ ರೀತಿ. ಬ್ಯಾಂಕ್‌ಗೆ ಹೊಸದಾಗಿ ಗ್ರಾಹಕನಾಗಲು ಬರುವ ವ್ಯಕ್ತಿಗೆ ಆ ವ್ಯವಸ್ಥೆಯ ಅಂಶಗಳನ್ನು ತಿಳಿ ಹೇಳುವ ಯಾವ ಸೌಜನ್ಯವನ್ನು ನಮ್ಮ ರಾಷ್ಟ್ರೀಕೃತ ಬ್ಯಾಂಕಗಳು ಹೊಂದಿಲ್ಲ. ಗ್ರಾಹಕನೊಬ್ಬ ಹೊಸದಾಗಿ ತನ್ನ ಅಕೌಂಟ್ ತೆರೆಯಲು ಬ್ಯಾಂಕ್‌ಗೆ ಹೋದರೆ, ಆತ ಸುಸ್ತಿದಾರನೋ ಎಂಬಂತೆ ಅಸಡ್ಡೆಯಿಂದ ಉತ್ತರ ನೀಡಲಾರಂಭಿಸುತ್ತಾರೆ. ನೀವೆಲ್ಲಾ ಪಾಮರರು ನಿಮಗೆಲ್ಲಿ ಅರ್ಥವಾದೀತು ಈ ವ್ಯವಸ್ಥೆ ಎಂಬ ಮನಸ್ಥಿತಿಯಲ್ಲಿ ಅವರೊಂದಿಗೆ ವ್ಯವಹರಿಸುತ್ತಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ನಿಮ್ಮಿಂದ ಈ ಬ್ಯಾಂಕ್‌ನಲ್ಲಿ ಸುಸ್ಥಿರ ವಹಿವಾಟು ನಡೆಸಲು ಸಾಧ್ಯವಿಲ್ಲ ಬಿಡಿ. ನಿಮ್ಮ ಆದಾಯದಲ್ಲಿ ಉಳಿಸುವುದುಂಟೆ ಎಂಬರ್ಥದ ವ್ಯಂಗ್ಯ ಮಿಶ್ರಿತ ಮಾತುಗಳನ್ನು ಆಡುತ್ತಾರೆ.
ಅಂದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯಕ್ತಿ ಗೌರವಕ್ಕೆ ಬೆಲೆಯಿಲ್ಲ. ಏಕೆಂದರೆ ನಿತ್ಯವೂ ಹಣವೆಂಬ ಮಾಯಾ ಲೋಕದಲ್ಲಿಯೇ ಅವರು ಮುಳುಗೇಳುವುದರಿಂದ ಅವರು ಮಧ್ಯಮ ಹಾಗೂ ಕೆಳ ವರ್ಗದ ಜನರನ್ನು ಬ್ಯಾಂಕ್ ವ್ಯವಸ್ಥೆಯ ಬಗ್ಗೆ ತಿಳಿಯದ ಅನಕ್ಷರಸ್ಥರು ಎಂದೇ ಭಾವಿಸಿ ಬಿಡುತ್ತಾರೆ. ಇದು ಒಂದು ವಿಚಿತ್ರವೇ ಸರಿ. ನಮ್ಮ ಹಣವನ್ನು ಆ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯಲ್ಲಿಟ್ಟು ಅದನ್ನು ಹಿಂಪಡೆಯಲು ಅವರ ಬಳಿ ದಮಯ್ಯ ಎನ್ನುವ ಪರಿಸ್ಥಿತಿ. ಅಂದರೆ ಗ್ರಾಹಕನೊಬ್ಬ ತನ್ನ ಉಳಿತಾಯ ಖಾತೆಯಲ್ಲಿರುವ ಹಣ ಪಡೆಯಲು ಸಿಬ್ಬಂದಿ ಮೂಗಿನ ನೇರಕ್ಕೆ ಆಡುವ ಮಾತುಗಳನ್ನು ಕೇಳಿಕೊಂಡು ಸಹಿಸಿಕೊಳ್ಳಬೇಕು. ಇದು ಯಾವ ಸಾಮಾಜಿಕ ನ್ಯಾಯ. ಗ್ರಾಹಕರು ಬ್ಯಾಂಕ್ ಆಸ್ತಿ ಎಂಬುದನ್ನು ಮರೆತಂತೆ ಧಿಮಾಕಿನಿಂದಲೇ ವರ್ತನೆ ಮಾಡುವ ಸಿಬ್ಬಂದಿಗೆ ತಾವೂ ಆ ವರ್ಗದ ಜನರ ಮಧ್ಯದಲ್ಲಿಯೇ ಬದುಕುತ್ತಿದ್ದೇವೆ ಎಂಬುದನ್ನು ಏಕೆ ಮರೆತು ಬಿಡುತ್ತಾರೆ?
ಎಲ್ಲದಕ್ಕಿಂತ ಒಂದಿಷ್ಟು ಅಕ್ಷರಸ್ಥರು ಈ ಲೇಖನದ ಆಶಯವನ್ನು ಬೇರೆ ದೃಷ್ಟಿಕೋನದಿಂದಲೇ ನೋಡುತ್ತಾರೆ. ಏಕೆಂದರೆ ಮಧ್ಯಮ ವರ್ಗದ ಕೆಲವರು ಸುರಕ್ಷಿತ ವಲಯದಲ್ಲಿ ಬದುಕುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಅದರಲ್ಲಿ ಜಾಗತೀಕರಣದ ಅನಂತರ ಆರಂಭವಾದ ಮಾಹಿತಿ ತಂತ್ರಜ್ಞಾನದ ಫಲಾನುಭವಿಗಳು. ಅವರೆಲ್ಲಾ ಬ್ಯಾಂಕ್ ವ್ಯವಸ್ಥೆಯ ಆಚೆ ಹಣಕಾಸು ವಹಿವಾಟು ನೋಡಲು ಸಾಧ್ಯವಿಲ್ಲ. ಅಲ್ಲದೆ, ಅವರು ಕೆಲಸ ಮಾಡುವ ಸಂಸ್ಥೆಗಳು ಬ್ಯಾಂಕ್‌ಗಳ ನೆರವಿನ ಅಡಿಯಲ್ಲಿಯೇ ಇರುತ್ತದೆ. ಇವರೆಲ್ಲಾ ಬ್ಯಾಂಕ್ ವ್ಯವಸ್ಥೆ ಎಷ್ಟೆಲ್ಲಾ ಸುಧಾರಣೆಯಾಗಿದೆ ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ೨೦೧೧ ರಲ್ಲೂ ಭಾರತದಲ್ಲಿ ನಗರದ ಪ್ರದೇಶದ ಶೇ ೨೨ ರಷ್ಟು ಕೊಳಚೆ ನಿವಾಸಿಗಳು ಬ್ಯಾಂಕ್ ಮೆಟ್ಟಿಲು ಹತ್ತಿಲ್ಲ ಎಂಬ ಸ್ವಯಂ ಸೇವಾ ಸಂಸ್ಥೆಯೊಂದರ ಸಮೀಕ್ಷೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ಅಘಾತ ತರುವ ಸಂಗತಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ವೇಳೆ ಅವರು ಬ್ಯಾಂಕ್ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಜನರ ಬಳಿ ತೆರಳಿ ಕೆಲಸ ಮಾಡುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡುತ್ತಿದ್ದರು. ಸರಕಾರದ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೆ ತರುವಲ್ಲಿ ಬ್ಯಾಂಕ್ ಸಹಕಾರವೂ ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಒಮ್ಮೆಯೂ ಬ್ಯಾಂಕ್‌ಗಳು ಅಂತ ವಿಶಾಲ ಮನೋಸ್ಥಿತಿಯಿಂದ ವರ್ತನೆ ಮಾಡಲಿಲ್ಲ. ಅಷ್ಟೇ ಏಕೆ, ಪಿ.ಸಾಯಿನಾಥ್ ಅವರು ವಿದರ್ಭ ರೈತರ ಆತ್ಮಹತ್ಯೆ ಕುರಿತು ಸರಣಿ ಲೇಖನದಲ್ಲಿ ಪ್ರಸ್ತಾಪ ಮಾಡಿದಂತೆ ಬ್ಯಾಂಕ್ ಸಿಬ್ಬಂದಿಗಳ ವರ್ತನೆ ರೈತರ ಮೇಲೆ ಹೆಚ್ಚು ಮಾನಸಿಕ ಪರಿಣಾಮ ಉಂಟು ಮಾಡಿತು ಎಂಬ ಅಂಶವನ್ನು ನಾವು ಮರೆಯುವಂತಿಲ್ಲ.
೨೦೦೩ ರಲ್ಲಿ ಓವರ್‌ಸೀಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಗುಪ್ತ ಅವರ ನೇತ್ವತ್ವೃದಲ್ಲಿ ನೇಮಕವಾಗಿದ್ದ ಸಮಿತಿ ೨೦೨೦ರ ವೇಳೆಗೆ ಬ್ಯಾಂಕ್ ವ್ಯವಸ್ಥೆಯ ಮುನ್ನೋಟ ಎಂಬ ವರದಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಅವರು ಪ್ರಮುಖವಾಗಿ ಪ್ರಸ್ತಾಪ ಮಾಡಿರುವ ಅಂಶ. ಭಾರತದಂತಹ ಹಳ್ಳಿಗಳ ದೇಶದಲ್ಲಿ ಜನರನ್ನು ಬ್ಯಾಂಕ್ ವ್ಯವಸ್ಥೆಯೊಳಗೆ ತರಲು ಗ್ರಾಹಕ ಸ್ನೇಹಿ ಮಂತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬುದು.
ಇಷ್ಟೇಲ್ಲಾ ಯಾಕೆ, ಚಿತ್ರದುರ್ಗ ಜಿಲ್ಲೆಯ ಅನೇಕ ಹೋಬಳಿ ಕೇಂದ್ರದಲ್ಲಿ ಇರುವುದು ಒಂದೇ ಬ್ಯಾಂಕ್ ಶಾಖೆ. ಅಲ್ಲಿರುವ ಎಟಿಎಂ ಕೇಂದ್ರ ಯಾವಾಗಲೂ ರಿಪೇರಿಯಲ್ಲಿರುತ್ತದೆ. ಹಾಗಾದರೆ, ಗ್ರಾಮೀಣ ಜನರು ಇಂತಹ ಸೇವೆಯಿಂದ ವಂಚಿತರಾಗಬೇಕಾ? ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ ಎಂಬುದು ಬ್ಯಾಂಕ್ ಆಡಳಿತಕ್ಕೂ ಗೊತ್ತಿದೆ. ಅದಕ್ಕಾಗಿ ಕಾಟಾಚಾರದ ವ್ಯವಸ್ಥೆಯನ್ನು ಕಡ್ಡಾಯ ಮಾಡುವ ಪ್ರಯತ್ನ ಮಾಡುತ್ತಲೇ ಇವೆ. ಉತ್ತರ ಕರ್ನಾಟಕದ ಬಹುತೇಕ ಹೋಬಳಿ ಕೇಂದ್ರದಲ್ಲಿ ಎಟಿಎಂ ವ್ಯವಸ್ಥೆಯೂ ಇಲ್ಲ ಎಂಬುದು ೨೧ ನೇ ಶತಮಾನದ ಆಚ್ಚರಿಯೂ ಹೌದು. ನಗರ ಪ್ರದೇಶದಲ್ಲೂ ಕೆಳವರ್ಗದವರಿಗೆ ತಲುಪದ ಬ್ಯಾಂಕ್, ಕೊನೆ ಪಕ್ಷ ಭಾರತದ ನಾಡಿಯಾದ ಗ್ರಾಮೀಣ ಭಾರತದಲ್ಲೂ ತನ್ನ ಸೇವೆಯನ್ನು ಸಮರ್ಥವಾಗಿ ನೀಡಲು ಮುಂದಾಗುವುದಿಲ್ಲ ಎನ್ನುವುದು ಬೇಸರದ ಸಂಗತಿ.
ಸರಕಾರದ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವ ವಿಚಾರದಲ್ಲಂತೂ ಬ್ಯಾಂಕ್‌ಗಳು ಅನುಸರಿಸುವ ಕ್ರಮಗಳು ಎಂತಹವರಿಗೆ ರೊಚ್ಚು ತರಿಸುತ್ತವೆ. ಹಾಗೆಂದು ಬ್ಯಾಂಕ್‌ಗಳು ತಮ್ಮ ನೀತಿನಿಯಮ ಹೊರತುಪಡಿಸಿ ಸಾಲ ನೀಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀತಿ ನಿಯಮದ ನಡುವೆಯೆಯೂ ಸರಕಾರದ ಯೋಜನೆ ಒಬ್ಬ ನಿಜವಾದ ಫಲಾನುಭವಿಗೆ ತಲುಪಬೇಕು ಎಂಬ ಆಶಯ ಇರಬೇಕಾಗುತ್ತದೆ. ಜತೆಗೆ ಅಂತಹ ಫಲಾನುಭವಿಯನ್ನು ಬ್ಯಾಂಕ್ ವ್ಯವಸ್ಥೆಯ ಅನುಸರಣೆಗೆ ಒಳಪಡಿಸುವಂತಹ ಜಾಗೃತಿ ಮೂಡಿಸುವುದು ಆ ಸಿಬ್ಬಂದಿಯ ಕರ್ತವ್ಯವಾಗಿರುತ್ತದೆ. ಹಾಗೆಯೇ ಜನರಲ್ಲಿ ಅರ್ಥಿಕ ಉಳಿತಾಯ ಮತ್ತು ಸಾಲ ಸೌಲಭ್ಯದ ಬಳಕೆಯ ಕುರಿತು ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ. ಆದರೆ, ಅದಾವುದನ್ನೂ ಮಾಡದ ಬ್ಯಾಂಕ್ ಆಡಳಿತ ಸಮಾಜದ ಇತರ ಕ್ಷೇತ್ರಗಳಿಂದ ದೂರವೇ ಉಳಿದು ಅರ್ಥ ವ್ಯವಸ್ಥೆಯೆಂಬುದು ಭಾರತದ ರಕ್ಷಣಾ ವ್ಯವಸ್ಥೆಗಿಂತಲೂ ಕಠಿಣ ಎಂಬಂತೆ ವರ್ತನೆ ಮಾಡುವುದು ಎಷ್ಟು ಸರಿ?
ಇದರ ನಡುವೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಈ ಮಡಿವಂತಿಕೆಯನ್ನು ಸಮರ್ಥವಾಗಿ ಸದುಪಯೋಗ ಮಾಡಿಕೊಂಡು ಸೌಜನ್ಯದಿಂದ ವರ್ತನೆ ಮಾಡುವ ಮುಖವಾಡ ಹಾಕಿಕೊಂಡು ಬಂದ ಭಾರತದ ಖಾಸಗಿ ಬ್ಯಾಂಕ್‌ಗಳು ಬಲಿತ ಮೇಲೆ ಬಲವಂತವಾಗಿ ತನ್ನ ಗ್ರಾಹಕರ ಮೇಲೆ ಗದಾಪ್ರಹಾರ ಆರಂಭ ಮಾಡಿದವು. ಆರಂಭದಲ್ಲಿ ಗ್ರಾಹಕ ದೇವರು ಎಂದೆಳೇತ್ತಾ ಅವನ ಜೇಬಿಗೆ ಸದಾ ಕತ್ತರಿ ಪ್ರಯೋಗದಲ್ಲಿ ನಿರತವಾಗಿರುವ ಈ ಬ್ಯಾಂಕ್‌ಗಳ ಉದ್ಯಮಿ ಮನಸ್ಥಿತಿ ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಕಂಗೆಡಿಸಿದೆ. ಇದಕ್ಕೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್ ವರ್ತನೆ ಹಾಗೂ ಸರಕಾರದ ಆಲೋಚನೆಗಳೇ ನೇರ ಕಾರಣ.
ಭಾರತೀಯ ರಿಸರ್ವ್ ಬ್ಯಾಂಕ್ ಗರ್ವನರ್ ಡಾ.ಡಿ.ಸುಬ್ಬರಾವ್ ಮೊನ್ನೆ ಹೇಳಿದ ಮಾತು ಇಲ್ಲಿ ಪ್ರಸ್ತಾಪಿಸಬೇಕು. “ಬ್ಯಾಂಕಿಂಗ್ ಕ್ಷೇತ್ರ ತನ್ನೆಲ್ಲಾ ಜಡತ್ವಗಳನ್ನು ಕಳಚಿಕೊಂಡು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ತನ್ನ ಸೇವೆಯನ್ನು ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಈಗ ಇದೆ. ಇಲ್ಲದಿದ್ದರೆ, ನಮ್ಮ ನಡುವೆ ಇರುವ ಸಾಮಾಜಿಕ ಅರ್ಥ ವ್ಯವಸ್ಥೆ ಕುಸಿದು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅವರು ಹೇಳಿರುವುದರ ಹಿಂದೆ ಅನೇಕ ಅರ್ಥಗಳಿವೆ.
ದೇಶದಲ್ಲಿ ಶೇ.೭೨ ರಷ್ಟು ಅರ್ಥಿಕ ವಹಿವಾಟು ನಡೆಸುವ ಕೃಷಿ ಸಂಬಂಧಿತ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದರ ಭಾಗವಾಗಿ ಉಳಿದಿರುವ ಜನರ ನಡುವೆ ರಾಷ್ಟ್ರೀಕೃತ ಬ್ಯಾಂಕ್ ಬೆಳೆಯಬೇಕಾಗಿದೆ. ಇದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಲೋಚನೆಯೂ ಆಗಿತ್ತು. ಆದ್ದರಿಂದಲೇ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲು ಮುಂದಾಗಿದ್ದು.
ಬ್ಯಾಂಕ್‌ನಲ್ಲಿ ತನ್ನ ಉಳಿತಾಯ ಖಾತೆಯನ್ನು ತೆರೆಯಲು ಬರುವ ಗ್ರಾಹಕನಿಗೆ ನಾವು ಸದಾ ಸಹಾಯ ನೀಡುವ ಮನಸ್ಥಿತಿಯಲ್ಲಿರಬೇಕು ಎಂಬ ಆಲೊಚನೆ ಬ್ಯಾಂಕ್ ಸಿಬ್ಬಂದಿಗೆ ಎಲ್ಲಿಯವರೆಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಈ ಬ್ಯಾಂಕ್‌ಗಳು ಸಮಾಜದ ಶೇ ೫೯ ರಷ್ಟು ಮಧ್ಯಮ ಹಾಗೂ ಕೆಳ ವರ್ಗದ ಮಂದಿಗೆ ಅರ್ಥವಾಗದ ವ್ಯವಸ್ಥೆಗಳಾಗಿಯೇ ಉಳಿದು ಬಿಡುತ್ತವೆ.
ನಮ್ಮ ಶಂಕರ ನ ನೆನಪೇ ಸ್ಮಾರಕ!
5 years ago
No comments:
Post a Comment