Thursday, February 26, 2009

ಅಮೆರಿಕದ ಸ್ಲಂ ಡಾಗ್‌ಗಳನ್ನು ಕುರಿತು ಒಂದಿಷ್ಟು...ಕಳೆದ ನಾಲ್ಕು ತಿಂಗಳಿಂದ ಗಂಜೀ ಕೇಂದ್ರಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಸುಮಾರು ೨೮ ಮಿಲಿಯನ್ ಮಂದಿ ಒಂದೊತ್ತಿನ ಆಹಾರಕ್ಕಾಗಿ ಗಂಜೀ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಮುಂದೆ ಇದರ ಸಂಖ್ಯೆ ಹೆಚ್ಚಲಿದೆ.

ಹೀಗೆಂದು ಅಮೆರಿಕದ ಕೃಷಿ ಮತ್ತು ಆಹಾರ ಇಲಾಖೆಯನ್ನು ನೋಡಿಕೊಳ್ಳುವ ಅಧಿಕಾರಿಯೊಬ್ಬ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾನೆ. ಹಾಗಾದರೆ ನಿಜಕ್ಕೂ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಏನಾಗಿದೆ?

ಕಾರಣ ಅರ್ಥಿಕ ಹಿಂಜರಿತ.

***ಅಮೆರಿಕದಲ್ಲಿ ನಮಗಿಂತ ಜನರು ಕೀಳು ಮಟ್ಟದಲ್ಲಿ ಬದುಕುತ್ತಿದ್ದಾರೆ. ನಿಜಕ್ಕೂ ಭಾರತೀಯರೇ ಧನ್ಯವಂತರು. ಭರತ ಖಂಡದಲ್ಲಿ ಹುಟ್ಟಿದ್ದಾಕ್ಕಾಗಿ ಅವರು ಇಲ್ಲಿಗೆ ಚಿರಋಣಿಯಾಗಿರಬೇಕು

ಹೀಗೆಂದು ಅಮೆರಿಕಕ್ಕೆ ಹೋಗಿಬಂದ ಸ್ನೇಹಿತನೊಬ್ಬ ಹೇಳುತ್ತಿದ್ದರೆ ಆಶ್ವರ್ಯ. ಅಲ್ಲಿಗೆ ಹೋಗಿಬಂದವರೆಲ್ಲಾ ನ್ಯೂಯಾರ್ಕ್‌ನ ಕಣ್ಣು ಕೋರೈಸುವ ಬೆಳಕಿನಲ್ಲಿ ಕಳೆದುಹೋದದ್ದೆ ಹೆಚ್ಚು. ಐಷಾರಾಮಿ ಜೀವನ, ಸ್ವೇಚ್ಛೆಯ ಬದುಕು, ಎಲ್ಲ ರೀತಿಯ ಸ್ವಾತಂತ್ರ್ಯ, ಮುಂದುವರಿದ ತಂತ್ರಜ್ಞಾನ, ಬದುಕುವ ಶಿಸ್ತು... ಹೀಗೆ ಅಮೆರಿಕವನ್ನು ಕೊಂಡಾಡದ ಪ್ರವಾಸಿಗರೇ ಇಲ್ಲ. ಆದರೆ, ಅಲ್ಲಿನ ಬದುಕಿನ ಒಳನೋಟದ ಬಗ್ಗೆ ಪ್ರಸ್ತಾಪವಾಗಿದ್ದೆ ಕಡಿಮೆ. ಹಾಗಾಗಿ ಅಲ್ಲಿನ ಶ್ರೀಸಾಮಾನ್ಯನೊಬ್ಬನ ಬದುಕಿನ ಬಗ್ಗೆ ತಿಳಿಯುವುದು ಸಾಧ್ಯವಿಲ್ಲದ ಸಂಗತಿ.

ಅರ್ಥಿಕ ಹಿಂಜರಿತವಾದ ಅನಂತರ ಅಮೆರಿಕದ ಸುಮಾರು ೨ ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ೩ ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ದಿನವೂ ಸುಮಾರು ೨ ಸಾವಿರ ಮಂದಿ ಪಿಂಕ್ ಸ್ಲಿಪ್ ಪಡೆಯುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿರುದ್ಯೋಗ ಎನ್ನುವುದು ಅಲ್ಲಿನ ಸಾಮಾನ್ಯ ವಿಷಯವಾಗುವ ಎಲ್ಲ ಸಾಧ್ಯತೆಗಳು ಇವೆ. ಕೋಟ್ಯಂತರ ರೂ. ಸಾಲ ನೀಡುವ ಅಮೆರಿಕದ ಸ್ಥಿತಿ ಹೀಗಾದರೆ, ಭಾರತದ್ದು..?

ನಿಜವಾಗಲೂ ನಾವು ಸೇಫ್. ಏಕೆಂದರೆ ಅಮೆರಿಕದಷ್ಟು ವೇಗದ ಜೀವನ ನಮ್ಮದಲ್ಲ. ಸ್ಲಂಡಾಗ್‌ನ ವಾಸ್ತವತೆ ಹೇಗೆ ಅರಿತಿದ್ದೇವೆಯೋ ಹಾಗೆ ಬದುಕುತ್ತಿದ್ದೇವೆ. ದಿನಕ್ಕೊಂದು ಕಾರು, ದಿನಕ್ಕೊಂದು ವೇಷವಿಲ್ಲ. ಹುಟ್ಟಿದಾರಭ್ಯ ಬಡತನದ ಎಲ್ಲ ಬೇಗೆಗಳನ್ನು ನಮ್ಮದೇ ಕೆಟ್ಟ ವ್ಯವಸ್ಥೆಯ ನಡುವೆ ಸಹಿಸಿಕೊಂಡು ಬಂದಿದ್ದೇವೆ. ಅದಕ್ಕಾಗಿ ಇದುವರೆಗೆ ಬೇಸರಿಸಿಕೊಂಡಿಲ್ಲ. ಹಾಗಾಗಿ ಅಮೆರಿಕದವರ ತರಹ ಗಂಜೀ ಕೇಂದ್ರದ ಮುಂದೆ ನಿಲ್ಲುವ ಅವಶ್ಯಕತೆ ನಮಗಿನ್ನೂ ಬಂದಿಲ್ಲ.

***ಅಮೆರಿಕದಲ್ಲಿ ನಿರುದ್ಯೋಗಿಯೊಬ್ಬ ಕಾರು ಹೊಂದಿದ್ದಾನೆಂದರೆ ಆತನಿಗೆ ಸದ್ಯಕ್ಕೆ ಮನೆಯಿಲ್ಲ ಎಂದೇ ಅರ್ಥ. ವಾಸ್ತವವೆಂದರೆ, ಇಡೀ ಕಾರು ಆತನನ್ನು ದಿನವೂ ನಿಭಾಯಿಸುತ್ತದೆ. ಕಾರನ್ನೇ ಆತ ಮನೆಯ ತರಹ ಅಲಂಕರಿಸಿಕೊಂಡಿರುತ್ತಾನೆ. ಅಗತ್ಯ ವಸ್ತುಗಳನ್ನು ಅಲ್ಲೆ ಇಟ್ಟುಕೊಂಡಿರುತ್ತಾನೆ. ಕೆಲಸ ಸಿಕ್ಕ ಊರಿನಲ್ಲಿ ಉಳಿದುಕೊಳ್ಳುವುದು, ಇಲ್ಲವಾದರೆ ಮುಂದಿನ ಊರು ಎಂಬಂತಹ ಸ್ಥಿತಿ ಆತನದ್ದು. ಸಾವಿರಾರು ಡಾಲರ್ ಸಂಬಳ ಪಡೆದರೂ ಅಲ್ಲಿ ಜೀವನವನ್ನು ನಿಭಾಯಿಸಲು ಸಾಧ್ಯವಿಲ್ಲದಷ್ಟು ಕಡುಬಡತನ. ಅಮೆರಿಕದಲ್ಲಿ ಇತ್ತೀಚಿನ ಬಡವರ ಸಂಖ್ಯೆ ಶೇ.೨೧ ರಷ್ಟು ಏರಿದೆ. ಅಂದರೆ ಬಡತನ ರೇಖೆಗಿಂತ ಕೆಳಗಿರುವವರು ಶೇ.೨೭ ಮಂದಿ. ಅವರಿಗೆ ಅಲ್ಲಿನ ಸರಾಸರಿ ೧೪ ಸಾವಿರ ಡಾಲರ್‌ಗಿಂತಲೂ ಕಡಿಮೆ ವೇತನ ಸಿಗುತ್ತಿದೆ. ಮೂಲಭೂತ ಸೌಕರ್ಯಗಳು ಇಲ್ಲ, ಒಂದೊತ್ತಿನ ಊಟಕ್ಕೂ ಪರದಾಟ ನಡೆಸಬೇಕು. ಹೀಗೆ ಶೇ.೧೨ ರಷ್ಟು ಕುಟುಂಬಗಳು ಕಡುಬಡತನದಿಂದ ನರಳುತ್ತಿವೆ. ಬಹಳಷ್ಟು ಕುಟುಂಬಗಳು ಇರಲು ಸೂರಿಲ್ಲದೆ ಬೀದಿಗಳಲ್ಲಿ, ದೊಡ್ಡ ಬಂಗಲೆಗಳ ಪಕ್ಕದಲ್ಲಿ ವಾಸ ಮಾಡುತ್ತಾ ಕಾಲ ಕಳೆಯುತ್ತಿವೆ ಎಂದು ಅಮೆರಿಕ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳುತ್ತಿವೆ.

ಕಣ್ಣು ಕೋರೈಸುವ ನ್ಯೂಯಾರ್ಕ್ ನಗರ ಹಾಗೂ ಕ್ಯಾಲಿಪೋನಿರ್ಯಾಗಳಲ್ಲಿ ಬಡತನದ ಸಂಖ್ಯೆ ಹೆಚ್ಚಿದೆ. ಅಲ್ಲಿ ನಿರುದ್ಯೋಗಿಗಳು ದಿನೇ ದಿನೇ ಹೆಚ್ಚುತ್ತಿದ್ದಾರೆ ಎಂಬ ಆತಂಕ ಅಮೆರಿಕಾ ಸರಕಾರದ್ದು. ಸುಮಾರು ೧೨ ರಾಜ್ಯಗಳಲ್ಲಿ ಅತಿ ಹೆಚ್ಚು ಬಡತನ ಕಾಣಿಸಿಕೊಂಡಿದೆ. ಪೌಷ್ಟಿಕಾಂಶ ಆಹಾರ, ಸೂರು, ನೀರು ಇವುಗಳನ್ನು ಪಡೆಯಲು ಈ ಬಡವರು ಆಶಕ್ತರಾಗಿದ್ದಾರೆ ಎಂದು ತನ್ನ ವರದಿಯಲ್ಲಿ ಸರಕಾರ ಹೇಳಿಕೊಳ್ಳುತ್ತದೆ.

***ಅಮೆರಿಕಾದ ಬಡ ಮಕ್ಕಳ ಸಂಖ್ಯೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ಶೇ.೧೮ ರಿಂದ ೨೧ ರವರೆಗೆ ಬಡ ಮಕ್ಕಳು ಅಲ್ಲಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಅವರಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ವಾಷಿಂಗ್ಟನ್ ಸೇರಿದಂತೆ ೧೩ ರಾಜ್ಯಗಳಲ್ಲಿ ಶೇ.೩೩ರಷ್ಟು ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಅಪರಾಧ ಪ್ರಕರಣಗಳು ನಿಯಂತ್ರಣ ಮಾಡಲು ಸಾಧ್ಯವಿಲ್ಲದಷ್ಟು ವೇಗದಲ್ಲಿವೆ. ದೊಂಬಿ, ಗಲಭೆ ನ್ಯೂಯಾರ್ಕ್ ನಗರದಲ್ಲಿ ನಿತ್ಯ ಸಂಗತಿಗಳಾಗಿ ಹೋಗಿವೆ. ಅಮೆರಿಕಾದಲ್ಲಿ ಬಡಗಿ ಮತ್ತು ಬಟ್ಟೆ ತೊಳೆಯುವಾತ ಅತ್ಯಂತ ಕಡಿಮೆ ಸಂಬಳ ತೆಗೆದುಕೊಳ್ಳುವ ಮಂದಿ. ಸುಮಾರು ೧೬ ಸಾವಿರ ಡಾಲರ್ ವಾರ್ಷಿಕ ಆದಾಯದಲ್ಲಿ ಅವರು ಬದುಕಬೇಕಾಗಿದೆ. ಹಾಗೆಯೇ ಮೂರನೇ ದರ್ಜೆ ಕೆಲಸ ಮಾಡುವವರೂ ೨೦ ಸಾವಿರ ಡಾಲರ್‌ಗಿಂತ ಹೆಚ್ಚೇನೂ ಸಂಬಳ ಪಡೆಯುವುದಿಲ್ಲ. ಹೀಗೆ ಅಮೆರಿಕ ಎನ್ನುವುದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಕಾಣುತ್ತದೆ.

****

ಆದರೆ, ಅಮೆರಿಕದ ಜನ ಒಂದು ವಿಚಾರದಲ್ಲಿ ಬುದ್ಧಿವಂತರಾಗಿದ್ದಾರೆ. ಅದು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ. ಆಶ್ಚರ್ಯವೆಂದರೆ, ಅಮೆರಿಕದಲ್ಲಿರುವ ನೈಸರ್ಗಿಕ ಸಂಪತ್ತು ಅಪಾರ. ಅಲ್ಲಿನ ಜನರು ಕೃಷಿ ಮಾಡುವುದು ಕಡಿಮೆಯೇ. ಅವರ ಭೂಮಿಯನ್ನು ಇನ್ನೂ ಫಲವತ್ತಾಗಿಯೇ ಉಳಿಸಿಕೊಂಡಿದ್ದಾರೆ. ಅಮೆರಿಕನ್ನರಿಗೆ ಚೀನಾ ಗೊಂಬೆಗಳು, ಶರ್ಟ್‌ಗಳು, ಭಾರತದ ಗೋಧಿ, ಅಕ್ಕಿ ಇನ್ನಿತರ ವಸ್ತುಗಳು ಬೇಕು. ಆದರೆ, ಅವರು ಬೆಳೆಯಲು ಸಿದ್ಧರಿಲ್ಲ. ಏಕೆ ಹೀಗೆ? ಉತ್ತರ ಬಹಳ ಸುಲಭ. ಮುಂದೊಂದು ದಿನ ವಿಶ್ವದ ಇತರ ರಾಷ್ಟ್ರಗಳ ನೈಸರ್ಗಿಕ ಸಂಪನ್ಮೂಲ ಕಳೆದು ಹೋದ ಮೇಲೆ ಅಮೆರಿಕ ರಂಗಕ್ಕೆ ಧುಮುಕಲಿದೆ. ಆಗ ಒಂದಕ್ಕೆ ದುಪ್ಪಟ್ಟು ಕೊಟ್ಟು ಅಮೆರಿಕದ ವಸ್ತುಗಳನ್ನೆ ಆಶ್ರಯಿಸಿಕೊಳ್ಳಬೇಕಾದ ಅನಿವಾರ್ಯತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಎದುರಾಗಲಿದೆ. ಅಲ್ಲಿಗೆ ಅಮೆರಿಕಾ ಹೇಳಿದಂತೆ ಕೇಳುವ ದಿನಗಳು ಮುಂದುವರೆಯುತ್ತವೆ. ನಾವು ಇಲ್ಲಿ ಬೆಳೆಯುವ ಮೊದಲ ದರ್ಜೆಯ ಅಕ್ಕಿಯನ್ನು ಅಮೆರಿಕಾ ಆಮದು ಮಾಡಿಕೊಳ್ಳುತ್ತದೆ. ಅದು ಕೆ.ಜಿ.೧೦೦ ರೂ ಆದರೂ, ಸರಿ. ಆದರೆ, ನಾವು ಉತ್ತಮ ದರ್ಜೆಯ ಅಕ್ಕಿ ಅಲ್ಲಿಗೆ ಕಳುಹಿಸಿ ತೃತೀಯ ದರ್ಜೆಯ ಅಕ್ಕಿಯನ್ನು ಊಂಡು ಸಂತೋಷ ಪಡುತ್ತೇವೆ. ಇದು ವಿಪರ್ಯಾಸ. ಅಮೆರಿಕಾ ಕೇವಲ ನಮ್ಮಲ್ಲಿನ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಇಲ್ಲಿನ ಭೂಮಿಯ ಫಲವತ್ತತೆ ಕಡಿಮೆ ಮಾಡುವ ಎಲ್ಲ ತಂತ್ರಗಳನ್ನು ಪರೋಕ್ಷವಾಗಿ ಮಾಡುತ್ತಿದೆ. ನೈಸರ್ಗಿಕವಾಗಿ ನಡೆಯುತ್ತಿದ್ದ ಕೃಷಿಗೆ ರಾಸಾಯನಿಕ ರುಚಿ ತೋರಿಸಿದವರು ಅವರೆ. ಈಗ ಕೃಷಿಯ ವಿಚಾರದಲ್ಲಿ ನಾವು ಅವರು ಹೇಳಿದಂತೆ ಕೇಳಬೇಕಾದ ಸ್ಥಿತಿ.

ಇದು ಭಾರತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿಯನ್ನು ಅಮೆರಿಕ ಮುಂದುವರಿಸಿದೆ. ದುರಂತವೆಂದರೆ, ತಮ್ಮ ನಾಡಿನಲ್ಲಿ ತುತ್ತು ಅನ್ನಕ್ಕಾಗಿ ಗಂಜೀ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ತನ್ನ ಪ್ರಜೆಗಳ ಸಂಕಷ್ಟವನ್ನು ತೆರೆಯ ಮೇಲೆ ತೋರಿಸದ ಅಮೆರಿಕಾ ಭಾರತದಂತಹ ರಾಷ್ಟ್ರಗಳ ಬಡತವನ್ನು ಬಂಡವಾಳ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಅದಕ್ಕೆ ಸ್ಲಂಡಾಗ್ ಮಿಲೇನಿಯರ್ ಉತ್ತಮ ಉದಾಹರಣೆ.

***

ಸ್ಲಂಡಾಗ್ ಮಿಲೇನಿಯರ್ ಚಿತ್ರ ನಿರ್ಮಾಣಕ್ಕೆ ವೆಚ್ಚ ಮಾಡಿದ್ದು ೭೫ ಕೋಟಿ ರೂ. ಆದರೆ ಗಳಿಕೆಯಾದದ್ದು ೮೦೦ ಕೋಟಿ ರೂ. ಎಂದು ಪತ್ರಿಕೆಯೊಂದು ವರದಿ ಮಾಡಿದೆ. ನಮ್ಮದೇ ಬಾಲಿವುಡ್ ಸಿನಿಮಾ ೧೨೦ ರಿಂದ ೧೮೦ ಕೋಟಿ ರೂ. ಗಳಿಕೆ ಮಾಡಿದರೆ, ಅದು ಸಾರ್ವತ್ರಿಕ ದಾಖಲೆಯಾಗುತ್ತದೆ. ಆದರೆ, ಅದೇ ಅಮೆರಿಕ ಹಾಗೂ ಇತರ ರಾಷ್ಟ್ರಗಳು ಹೇಗೆ ಭಾರತದ ಮನೋರಂಜನಾ ಕ್ಷೇತ್ರವನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿವೆ ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ. ದಿನನಿತ್ಯ ನಾವು ಅನುಭವಿಸುವ ಜಂಜಾಟವನ್ನು, ಬದುಕಿನ ಹೋರಾಟವನ್ನೂ ಭಾವುಕವಾಗಿ ಸರಕು ಮಾಡಿಕೊಳ್ಳಬಹುದು ಎಂಬ ಅವರ ಬುದ್ಧಿವಂತಿಕೆಗೆ ಮೆಚ್ಚಲೇಬೇಕು. ಭಾರತದ ಬಡತನದ ಬಗ್ಗೆ ಹೇಳುತ್ತಾ ಹೋಗುವ ಅವರು, ತಮ್ಮದೇ ಬಡತನ ಇನ್ನೆಷ್ಟು ಕ್ರೂರ ಎಂಬುದನ್ನು ತೋರಿಸಲು ಸಿದ್ಧರಿಲ್ಲ. ನ್ಯೂಯಾರ್ಕ್‌ನ ಬೀದಿ ಬೀದಿಗಳಲ್ಲಿ ಭಿಕ್ಷುಕರು ಇರುವುದನ್ನು ತೆರೆಯ ಮೇಲೆ ತರಲು ಅವರು ಮುಂದಾಗುವುದಿಲ್ಲ. ಆದರೆ, ನಾವು ಇನ್ನಷ್ಟು ಹೃದಯವಂತರು. ಅಮೆರಿಕನ್ನರು ನಮ್ಮ ಬಡತವನ್ನು ವಿಶ್ವಾದ್ಯಂತ ತೋರಿಸಲು ಹೊರಟರೂ ಅದಕ್ಕೆ ಪ್ರತಿರೋಧ ತೋರುವುದೇ ಇಲ್ಲ. ಇರುವ ವಾಸ್ತವತೆಗೆ ಪ್ರತಿರೋಧ ಏತಕ್ಕೆ ಎಂಬುದು ನಮ್ಮ ಧೋರಣೆ. ಎಲ್ಲರೂ ನಮ್ಮವರೆ ಎಂದು ಬಂದವರನ್ನು ಆದರಾತಿಥ್ಯದಿಂದ ನೋಡುವ ನಮ್ಮ ಗುಣ ಇನ್ನೂ ಮುಕ್ಕಾಗಿಲ್ಲ. ಅದು ಭಾರತೀಯರ ಕಣಕಣದಲ್ಲೂ ಹಾಸುಹೊಕ್ಕಾಗಿದೆ ಎನ್ನುವುದೂ ಅಷ್ಟೇ ಸತ್ಯ.

***ಭಾರತದ ಬಡತನವನ್ನು ಒಪ್ಪಿಕೊಳ್ಳುವ ನಾವು ಹಾಗೆಯೇ ಇತರ ದೇಶಗಳ ಬಡತನದ ಬೇಗೆಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಕೇವಲ ರಾಜಕೀಯ ತಂತ್ರಗಳಿಂದ ಅಮೆರಿಕ ದೊಡ್ಡ ದೇಶವಾಗಬಹುದೇ ಹೊರತು, ಅಲ್ಲಿನ ಬಡತನವನ್ನು ಮುಚ್ಚಿಡುವುದರಿಂದ ಅಲ್ಲ. ಒಂದು ಹೊತ್ತು ಬ್ರೆಡ್ ತಿಂದು ದಿನದೂಡುವ ೩೫ ಮಿಲಿಯನ್ ಅಮೆರಿಕದ ಜನರೂ ಇಂದು ಸ್ಲಂಡಾಗ್‌ನಲ್ಲಿ ಕಂಡ ಬಡತನಕ್ಕಿಂತ ಕಟುವಾದ ಬದುಕು ಸಾಗಿಸುತ್ತಿದ್ದಾರೆ. ಆದರೆ, ಬಡತನ ಎನ್ನುವುದು ದೇಶದ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಿದೆಯೇ ಹೊರತು, ಹಸಿವು, ಸೂರು, ಮೂಲಸೌಕರ್ಯಗಳಲ್ಲಿ ಅಲ್ಲ. ಹಾಗೆ ನೋಡಿದರೆ, ಭಾರತ ನಿಜಕ್ಕೂ ನೆಮ್ಮದಿಯ ದೇಶ. ನಾವು ಇಲ್ಲಿ ಪರಸ್ಪರ ವೈರುಧ್ಯಗಳ ನಡುವೆ ಬದುಕು ನಡೆಸುತ್ತೇವೆ. ಅದನ್ನು ಹಾಗೆ ಒಪ್ಪಿಕೊಂಡು ಬಂದಿದ್ದೇವೆ.

***

ನಿಮಗೇನು ಅರ್ಥಿಕ ಹಿಂಜರಿತದ ಪ್ರಭಾವವಾಗಿಲ್ಲವೇ?
ಸ್ನೇಹಿತರೊಬ್ಬರನ್ನು ಕೇಳಿದೆ.
ಹುಟ್ಟಿದಾಗಿನಿಂದ ನಮ್ಮದು ಅರ್ಥಿಕ ಹಿಂಜರಿತ, ಈಗೆಲ್ಲಿಯದು ಎಂದರು ಅವರು!

Friday, February 20, 2009

ಇವನೊಬ್ಬ ರಂಗಭೂಮಿಯ ಸಂತಬಯಲ ಬೆಂಗಾವಲಿನಲ್ಲಿ ಕೆಟ್ಟು ನಿಂತಿರುವ ಎರಡು ಬಸ್‌ಗಳನ್ನೆ ವೇದಿಕೆಯಾಗಿಸಿಕೊಂಡು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ವಿರುದ್ಧ ಆದೇ ನೆಲದಲ್ಲಿ ನಿಂತು ಲೇವಡಿ ಮಾಡುತ್ತಾನೆ. ಯುದ್ಧ, ಜಾಗತೀಕರಣ, ಉದಾರೀಕರಣಗಳ ಬಗ್ಗೆ ವ್ಯಂಗ್ಯವಾಗಿ ಹಾಡು ಹೇಳುತ್ತಾನೆ. ಅಮೆರಿಕದ ಅಧ್ಯಕ್ಷನನ್ನು ಬಹಿರಂಗವಾಗಿ ತನ್ನ ನಾಟಕದ ಸಂಭಾಷಣೆಗಳಿಂದ ಹೀಗಳೆಯುತ್ತಾನೆ. ಹೀಗೆ ೩೦ ವರ್ಷಗಳಿಂದ ತನ್ನ ಕಾಯಕವನ್ನು ನೆಚ್ಚಿಕೊಂಡು ಬಂದಿದ್ದಾನೆ. ಇಂದಿಗೂ ರಟ್ಟೆ ಮುರಿದು ದುಡಿಯುತ್ತಾ ತನ್ನ ಹೊಲದಲ್ಲಿ ಬೆಳೆದ ಗೋಧಿಯಿಂದಲೇ ಬ್ರೆಡ್ ಮಾಡಿ ತಿಂದು ಬದುಕುತ್ತಾನೆ. ಬ್ರೆಡ್‌ವೊಂದೇ ಆತನ ನಿತ್ಯ ಆಹಾರ.

ಆತನ ಹೆಸರು ಪೀಟರ್ ಶೋಮನ್.

***

ಅದು ಎರಡನೇ ಮಹಾಯುದ್ಧದ ಕಾಲ. ಮಿತ್ರ ರಾಷ್ಟ್ರಗಳು ಜರ್ಮನಿಯ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿದ್ದವು. ಜರ್ಮನಿ ಸೈನಿಕರ ಶವಗಳ ಮೇಲೆ ಅವರ ಅಟ್ಟಹಾಸ ಮುಗಿಲು ಮುಟ್ಟಿತ್ತು. ಕಂಡಲೆಲ್ಲಾ ಹೆಣಗಳ ರಾಶಿ. ಆದರೆ, ಅದೊಂದು ಕುಟುಂಬ ಮಾತ್ರ ಬದುಕುಳಿದಿತ್ತು. ಏಕೆಂದರೆ ಆ ಕುಟುಂಬ ಯುದ್ಧದ ಸಮಯದಲ್ಲಿ ಎರಡೂ ಕಡೆಯವರಿಗೆ ಬ್ರೆಡ್ ಸರಬರಾಜು ಮಾಡುತ್ತಿತ್ತು. ಅನ್ನಕೊಟ್ಟವರನ್ನು ಕೊಲ್ಲಬಾರದೆಂಬ ನ್ಶೆತಿಕತೆಯಲ್ಲಿ ಅವರ ಕುಟುಂಬ ಸೇಫ್.

ಆದರೆ, ಆ ಕುಟುಂಬದ ಯಜಮಾನನಿಗೆ ಎಂದಾದರೂ ಒಮ್ಮೆ ಮಿತ್ರ ಪಕ್ಷಗಳ ಗುಂಡಿನ ದಾಳಿಗೆ ತುತ್ತಾಗುವುದು ಖಂಡಿತ ಎಂದು ಬಲವಾಗಿ ಅನಿಸತೊಡಗಿತು. ಸರಿ ವಯಸ್ಸಾದ ಈ ದೇಹ ಪ್ರಾಣ ತೆತ್ತರು ಸರಿ, ತನ್ನ ಮೊಮ್ಮಕ್ಕಳು ಬದುಕುಳಿಯಲಿ ಎಂಬ ಆಸೆಯಿಂದ ಒಂದು ದಿನ ಅವರನ್ನು ಕರೆದು ತನ್ನಲ್ಲಿ ಕೊಡಲು ಏನೂ ಇಲ್ಲ. ಆದರೆ, ನನ್ನ ಬಳಿ ಇರುವುದು ಬ್ರೆಡ್ ಮಾಡಲು ಬಳಸುವ ಈಸ್ಟ್‌ವೊಂದೆ. ಇದು ಇದ್ದರೆ ನೀವು ಬದುಕಬಹುದು ಎಂದು ಹೇಳಿ ಒಂದಿಷ್ಟು ಈಸ್ಟ್(ಬ್ರೆಡ್ ತಯಾರಿಕೆ ಬಳಸುವ ಉಳಿ ಬಂದಿರುವ ವಸ್ತು) ನೀಡಿದ.

ಅಲ್ಲಿಂದ ಅವರೆಲ್ಲಾ ಅಮೆರಿಕದ ಕಡೆಗೆ ವಲಸೆ ಹೊರಟರು. ನಗರ,ಪಟ್ಟಣಗಳನ್ನು ದಾಟುತ್ತಾ ಬಂದು ನಿಂತದ್ದು ಅಮೆರಿಕದಲ್ಲಿನ ಅಷ್ಟೇನು ಶ್ರೀಮಂತವಲ್ಲದ, ಆದರೆ, ಫಲವತ್ತಾದ ರಾಜ್ಯ ವಾರ್‍ಮೌಂಟ್ ಎಂಬಲ್ಲಿಗೆ.

***

ಆ ಮೊಮ್ಮಕ್ಕಳಲ್ಲಿ ಈ ಪೀಟರ್ ಶೋಮನ್ ಒಬ್ಬ. ಸುಮಾರು ೭೦ ವರ್ಷಗಳ ಹಿಂದೆ ತನ್ನ ತಾತ ನೀಡಿದ ಈಸ್ಟ್‌ನಿಂದಲೇ ಈತ ಬ್ರೆಡ್ ತಯಾರಿಸುತ್ತಾ ಅದನ್ನು ತಿನ್ನುತ್ತಲೇ ಬದುಕು ಸಾಗಿಸಿದ್ದಾನೆ. ಅಮೆರಿಕ ಅಷ್ಟೇ ಅಲ್ಲ ವಿಶ್ವದ ಬಹುಭಾಗದಲ್ಲಿ ಪೀಟರ್ ಪ್ರೀತಿಯಿಂದ ಪೀಟರ್ ಅಜ್ಜ ಎಂದೇ ಕರೆಯಲ್ಪಡುತ್ತಾನೆ. ಆತನನ್ನು ನೋಡಲೆಂದೇ ಸಾವಿರಾರು ಮೈಲಿಗಳಿಂದ ಹಣ ಖರ್ಚು ಮಾಡಿಕೊಂಡು ಆತನಿರುವ ವಾರ್‍ಮೌಂಟ್ ರಾಜ್ಯದ ಗ್ಲೋವರ್ ಎಂಬ ಸ್ಥಳಕ್ಕೆ ನಿತ್ಯ ಜನರು ಬಂದು ಹೋಗುತ್ತಾರೆ.

ರಜಾದಿನಗಳಲ್ಲಿ ಪೀಟರ್ ಅಜ್ಜನ ಜಾತ್ರೆ ನಡೆಯುತ್ತದೆ!

***

೧೯೩೪ ರಲ್ಲಿ ಜರ್ಮನಿಯ ಸಿಸೇಲ್ ಎಂಬಲ್ಲಿ ಹುಟ್ಟಿದ ಈ ಪೀಟರ್ ಶೋಮನ್ ಮೂಲತಃ ನೃತ್ಯ ಮತ್ತು ಶಿಲ್ಪಕಲಾವಿದ. ಖ್ಯಾತ ನಾಟಕಕಾರ ಬ್ರೆಕ್ಟ್‌ನ ತಳಿ. ಎರಡನೇ ಮಹಾಯುದ್ಧದ ಅನಂತರ ೧೯೬೦ ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ತನ್ನ ಪತ್ನಿ ಎಲಿಕಾಳೊಂದಿಗೆ ವಲಸೆ ಬಂದ ಆತ ಅಲ್ಲಿ ಬ್ರೆಡ್ ಅಂಡ್ ಪುಪೆಟ್ ಥಿಯೇಟರ್ ಕಟ್ಟಿದ. ಆದರೆ, ಅದ್ಯಾಕೋ ನ್ರ್ಯೂಯಾರ್ಕ್ ನಗರದಲ್ಲಿ ಇರಲು ಆತನಿಗೆ ಸಾಧ್ಯವಾಗಲಿಲ್ಲ. ಅಲ್ಲಿಂದ ನೇರವಾಗಿ ಬಂದದ್ದು ವಾರ್‍ಮಂಟ್ ರಾಜ್ಯದ ಗ್ಲೋವರ್ ಎಂಬಲ್ಲಿಗೆ. ತನ್ನ ಹೆಂಡತಿಯ ಕಡೆಯಿಂದ ಬಂದ ಅಲ್ಪ ಜಮೀನಿನಲ್ಲಿಯೇ ತನ್ನ ನಿತ್ಯ ಜೀವನಕ್ಕೆ ಬೇಕಾದ ಆಹಾರ ಬೆಳೆಯಲು ಆರಂಭಿಸಿದ. ಬೆಳೆದ ಗೋಧಿಯಲ್ಲಿಯೇ ತನ್ನ ತಾತ ಕೊಟ್ಟ ಈಸ್ಟ್‌ನಿಂದ ಬ್ರೆಡ್ ತಯಾರಿಸಿ ಬದುಕುವುದನ್ನು ರೂಢಿಮಾಡಿಕೊಂಡ. ಆನಂತರ ನಿಧಾನವಾಗಿ ತನ್ನ ರಂಗಭೂಮಿ ತಂಡವನ್ನು ಸಜ್ಜುಗೊಳಿಸಿಕೊಂಡು ಸಣ್ಣ ಪ್ರಹಸನಗಳಿಂದ ಕೂಡಿದ ನಾಟಕಗಳನ್ನು ಮಾಡಲು ಆರಂಭಿಸಿದ. ವಿಶ್ವವನ್ನು ತನ್ನ ಜಾಗತೀಕರಣದಿಂದಲೇ ನಾಶ ಮಾಡಲು ಹೊರಟ ಅಮೆರಿಕದ ಬಗ್ಗೆ ಪೀಟರ್‌ಗೆ ಎಲ್ಲಿಲ್ಲದ ಅಸಹನೆ. ಅದನ್ನು ನಾಟಕ ಮತ್ತು ಪುಪೆಟ್(ಗೊಂಬೆಗಳು) ಪ್ರದರ್ಶನದಲ್ಲಿ ವ್ಯಕ್ತ ಮಾಡತೊಡಗಿದ. ನಿಧಾನವಾಗಿ ಅದು ಜನಪ್ರಿಯವಾಗತೊಡಗಿತು. ಸುಮಾರು ೩೦ ವರ್ಷಗಳ ಕಾಲ ಸರಕಾರದ ವಿರುದ್ಧ ಮೌನವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾನೆ. ಹಾಗಂತ ಎಲ್ಲಿಯೂ ಬ್ಯಾನರ್ ಕಟ್ಟಿ ಪ್ರತಿಭಟನೆಗೆ ಇಳಿಯುವುದಿಲ್ಲ. ತನ್ನ ಪ್ರಹಸನಗಳ ಮೂಲಕವೇ ವಿಶ್ವದ ನಾಶಕ್ಕೆ ಕಾರಣಗಳನ್ನು ಹೇಳುತ್ತಾ ಹೋಗುತ್ತಾನೆ.

***

ಈ ಪೀಟರ್ ಶೋಮನ್ ಯಾರು? ಹೇಗೆ?

ಇಲ್ಲ ಆತ ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗವುದಕ್ಕೆ ಸಾಧ್ಯವೇ ಇಲ್ಲ ಹೀಗೆಂದು ನಮ್ಮ ಪಾಪಾ ಪಾಂಡು ಖ್ಯಾತಿಯ ನಟ ಜಹಂಗೀರ್ ಹೇಳುತ್ತಾರೆ.

ಜಹಂಗೀರ್ ನೀನಾಸಂನಲ್ಲಿ ರಂಗಭೂಮಿ ತರಬೇತಿಯಲ್ಲಿರುವಾಗ ಅಲ್ಲಿಗೆ ಪೀಟರ್ ಶೋಮನ್ ಬಂದಿದ್ದ. ಜಹಂಗೀರ್‌ನನ್ನು ತನ್ನ ಥೀಯೆಟರ್‌ನಲ್ಲಿ ಅಭಿನಯಿಸುವುದಕ್ಕಾಗಿ ಎರಡು ತಿಂಗಳು ಅಮೆರಿಕಕ್ಕೆ ಕರೆಸಿಕೊಂಡ. ಹಾಗೆಂದು ಆತನೇನು ಶ್ರೀಮಂತ ಕಲಾವಿದನಲ್ಲ. ತನ್ನ ರಂಗ ತಂಡದಲ್ಲಿರುವ ಎಂಟತ್ತು ಮಂದಿಗೆ ಸಂಬಳ ಕೊಡುವುದಕ್ಕಾಗಿ ಮತ್ತೊಂದು ಮನೆಯ ಬಣ್ಣ ಹೊಡೆಯಬೇಕಾದ ಸ್ಥಿತಿ. ಇಲ್ಲವೇ ಆ ಊರಿನಲ್ಲಿ ಮನೆ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ. ಅಂತಹ ಸ್ಥಿತಿಯಲ್ಲಿಯೇ ಆತ ವಿಶ್ವದ ಗಮನ ಸೆಳೆಯುವುದು ಸಾಧ್ಯ ಎನ್ನುವುದಾದರೆ, ಅವನೊಳಗಿನ ಕಲಾವಿದ ಎಷ್ಟು ಎತ್ತರದಲ್ಲಿ ಇರಬೇಕು? ಆತನ ಬಳಿ ಇದ್ದು ಬಂದದ್ದು ನನ್ನ ಜೀವನದ ಅತ್ಯಂತ ಸುದೈವಗಳಲ್ಲಿ ಒಂದು ಎಂದು ಜಹಂಗೀರ್ ಹೇಳುತ್ತಾರೆ.

ಕಳೆದ ೩೦ ವರ್ಷಗಳಿಂದಲೂ ಪೀಟರ್ ಯಾರಿಂದಲೂ ನಯಾಪೈಸೆ ಸಹಾಯ ಬೇಡಿಲ್ಲ. ಬೇಸಿಗೆಯ ಸಮಯದಲ್ಲಿ ತನ್ನ ರಂಗ ತಂಡ ನಾಟಕ ಪ್ರದರ್ಶನ ಮಾಡಿದ ಅನಂತರ ತನ್ನ ಹೊಲದ ಗೋಧಿಯಿಂದಲೇ ಮಾಡಿದ ಬ್ರೆಡ್ ಅನ್ನು ನಾಟಕ ನೋಡಲು ಬಂದ ಪ್ರೇಕ್ಷಕರಿಗೆಲ್ಲಾ ಹಂಚುತ್ತಾನೆ. ಅದನ್ನೇ ಅಲ್ಲಿದ್ದವರು ನಮ್ಮ ತಿರುಪತಿ ಲಾಡು ಎಂಬರ್ಥದ ಭಕ್ತಿಭಾವದಲ್ಲಿ ಸ್ವೀಕರಿಸುತ್ತಾರೆ. ಅನಂತರ ತನ್ನ ಟೊಪ್ಪಿ ಹಿಡಿದು ತಂಡದ ಎಲ್ಲರ ಹೊಟ್ಟೆಗಾಗಿ ಅಲ್ಲೆ ಚಂದಾ ಎತ್ತುತ್ತಾನೆ. ಅದರಲ್ಲಿ ಬಂದ ದುಡ್ಡಿನಲ್ಲಿಯೇ ಅವತ್ತಿನ ಊಟ ಮತ್ತು ಇತರೆ ಖರ್ಚು. ಇದು ನಿರಂತರವಾಗಿ ೩೦ ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇನ್ನೂ ವಿಶೇಷವೆಂದರೆ ಯಾರಾದರೂ ದಾನಿಗಳು ಬಂದು ಆತನ ನಾಟಕ ಶಾಲೆಗೆ ಒಂದೊತ್ತಿನ ಊಟ ಹಾಕಿಸಬಹುದು. ಹಾಗೆಂದು ಯಾರ ಮುಂದೆಯೂ ಕೈ ಒಡ್ಡುವುದಿಲ್ಲ. ಬಂದರೆ ಒಳ್ಳೆಯದು, ಇಲ್ಲದಿದ್ದರೆ ಬ್ರೆಡ್ ಇದ್ದೇ ಇದೆ.

***

ಹೋಗಲಿ ಆತನಿಗೊಂದು ಸುಸಜ್ಜಿತ ರಂಗ ಮಂದಿರವಾದರೂ ಇದೆಯೇ ಎಂದರೆ ಅದೂ ಇಲ್ಲ. ಆತ ನಮ್ಮ ಕರ್ನಾಟಕದ ಮರಗಾಲು ಮಾದರಿಯ ಜಾನಪದ ಕಲೆಗಳನ್ನು ಪ್ರದರ್ಶನ ಮಾಡುತ್ತಾನೆ. ಸುಮಾರು ೪೦ ಅಡಿ ಎತ್ತರದ ಮರಗಾಲು ಹಾಕಿಕೊಂಡು ಆತನೇ ವೇದಿಕೆಯಲ್ಲಿ ಬಂದು ಪ್ರಹಸನ ನೀಡುತ್ತಾನೆ. ಆತನಿರುವ ಸ್ಥಳದಲ್ಲಿ ವಿಸ್ತಾರವಾದ ಹುಲ್ಲುಗಾವಲಿದೆ. ಅದರ ಮೇಲೆಯೇ ಆತನ ನಿತ್ಯ ನಾಟಕ ಪ್ರದರ್ಶನ. ಒಂದು ಪ್ರದರ್ಶನಕ್ಕೆ ಸುಮಾರು ೧೦ ಸಾವಿರ ಮಂದಿ ಸೇರುತ್ತಾರೆ. ಬಂದವರೆಲ್ಲಾ ಅಲ್ಲೆ ನಾಲ್ಕೈದು ದಿನ ತಂಗುತ್ತಾರೆ. ಪೀಟರ್ ಅವರ ಬಳಿ ವಿಶ್ವದ ವಿರೋಧಾಭಾಸಗಳ ಕುರಿತು ಚರ್ಚೆ ನಡೆಸುತ್ತಾನೆ. ಹೀಗೆ ಸಾಗುತ್ತಲೇ ಇದೆ ಅವನ ದಿನಚರಿ.

ಅಚ್ಚರಿಯೆಂದರೆ ಅವನ ಬಳಿ ಕಲಿಯಲೆಂದೇ ವಿಶ್ವದ ನಾನಾಭಾಗಗಳಿಂದ ಜನರು ಬಂದು ಹೋಗುತ್ತಾರೆ. ಯಾರಿಗೂ ಬರಬೇಡಿ ಎನ್ನವುದಿಲ್ಲ. ಬಂದವರಿಗೆ ಸುಸಜ್ಜಿತ ವ್ಯವಸ್ಥೆಯು ಆತನಲ್ಲಿ ಇಲ್ಲ. ಆತನ ಥೀಯೆಟರ್ ಬಳಿ ಕೆಟ್ಟು ನಿಂತಿರುವ ಬಸ್ ಹಾಗೂ ಕಾರುಗಳೇ ವಾಸದ ಮನೆಗಳು. ಬಂದವರು ತಮ್ಮಲ್ಲಿ ಇದ್ದದ್ದನ್ನು ಹಂಚಿ ತಿನ್ನಬೇಕು. ಅಲ್ಲೆ ಕೆಲದಿನಗಳು ಇರುವುದಾದರೆ, ರಂಗತಂಡದ ಎಲ್ಲ ಕೆಲಸಗಳನ್ನು ನಿಭಾಯಿಸುವ ಮನಸ್ಥಿತಿ ಹೊಂದಿರಬೇಕು. ಆತ ಏನನ್ನೂ ಕಲಿಸುವುದಿಲ್ಲ. ಎಲ್ಲರೊಳಗೆ ಒಂದಾಗಿ ಅವರೇ ಕಲಿತು ಹೋಗಬೇಕು. ಪ್ರದರ್ಶನದಲ್ಲಿಯೇ ಅವರ ನಿಜವಾದ ಕಲಾವಿದನ ಶೈಲಿಯನ್ನು ಹೊರಹಾಕಲೆಂದೇ ಪೀಟರ್ ವಿಶೇಷ ಶೈಲಿಗಳನ್ನು ಬಳಸುತ್ತಾನೆ. ಬಡತನ ಎನ್ನುವುದು ಆತನನ್ನು ಎಂದಿಗೂ ಕಾಡಿಲ್ಲ. ನಿತ್ಯ ಗೆಲ್ಲುವ ತಂತ್ರಕ್ಕಾಗಿ ಹೋರಾಟ ನಡೆಸುತ್ತಾನೆ. ಗೊಂಬೆ ಪ್ರದರ್ಶನ ನೋಡಲು ಬರುವ ಪ್ರೇಕ್ಷಕರಿಗೆ ತನ್ನ ನಿಜವಾದ ಸಂದೇಶ ಮುಟ್ಟಿಸಲು ಇನ್ನಿಲ್ಲದ ಆದ್ಯತೆ ಕೊಡುತ್ತಾನೆ. ಅದು ತಲುಪಿದರೆ,ಆದೇ ಸಮಾಧಾನ.

***

ಮನುಷ್ಯ ಬದುಕುವುದಕ್ಕಾಗಿ ಒಂದು ತುಂಡು ಬ್ರೆಡ್ ತಿಂದರೆ ಸಾಕು. ಅದಕ್ಕಾಗಿ ಇನ್ನೊಬ್ಬರ ಮೇಲೆ ಅಕ್ರಮಣವೆಸಗಿ ಅದನ್ನು ರಕ್ತಸಹಿತ ಬಂಡವಾಳವಾಗಿಸಿಕೊಂಡು ಬದುಕಬೇಕೆಂಬ ಅನಿವಾರ್ಯ ಯಾಕೆ? ಇದು ರಾಕ್ಷಸೀ ಗುಣವಲ್ಲವೇ ?

ಇದು ಪೀಟರ್ ಶೋಮನ್ ಖಚಿತ ಅಭಿಪ್ರಾಯ. ಇಡೀ ಜೀವನದಲ್ಲಿಯೇ ಆತ ಹಣಕ್ಕೆ, ಲಾಭಕ್ಕೆ ನಾಟಕಗಳನ್ನು ಮಾಡಲೇ ಇಲ್ಲ. ದಿನವೂ ಸರಕಾರದ ವಿರುದ್ಧ ಮುಗಿಬೀಳುವ ಪೀಟರ್‌ಗೆ ಪ್ರಶಸ್ತಿಗೆ ಕೈಚಾಚುವವನಲ್ಲ. ಒಮ್ಮೆ ಅಮೆರಿಕದ ಅಧ್ಯಕ್ಷನನ್ನು ಹೊಗಳಿದರೆ ಸಾಕು. ಅವು ಮಳೆಯಂತೆ ಆತನ ಉಡಿಗೆ ಬೀಳುತ್ತವೆ. ಅದಾವುದು ಅವನಿಗೆ ಬೇಡವಾಗಿದೆ. ಅದರಿಂದ ಸಾಧಿಸಬೇಕಾದ್ದದ್ದು ಏನೂ ಇಲ್ಲ ಎಂಬ ಅರ್ಥದಲ್ಲಿಯೇ ಆತ ದಿನದೂಡುತ್ತಾನೆ. ತನ್ನ ರಂಗ ತಂಡದ ಜೀವನಕ್ಕೆ ತೊಂದರೆಯಾದರೆ, ನ್ರ್ಯೂಯಾರ್ಕ್ ನಗರದಲ್ಲಿ ಚಿತ್ರಗಳ ಪ್ರದರ್ಶನ ನಡೆಸಿ ಚಂದಾ ಎತ್ತಿ ಅವರಿಗೆಲ್ಲಾ ಸಂಬಳ ಕೊಡುತ್ತಾನೆ. ಹಾಗೆಂದು ನಮ್ಮಂತೆ ಸರಕಾರದ ಅನುದಾನ ಮರ್ಜಿಗೆ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಸಮಾಜವಾದಿ ತತ್ವಗಳನ್ನು ಅಕ್ಷರಶಃ ಪಾಲಿಸುವ ಪೀಟರ್ ಸಮಾಜವಾದಿಯಲ, ಬದಲಿಗೆ ಸಮೂಹಮುಖಿ. ಮನುಷ್ಯ ಯುದ್ಧದಂತಹ ಅನಿಷ್ಠಗಳನ್ನು ತಂದಿಟ್ಟುಕೊಳ್ಳಲು ಅವನಲ್ಲಿನ ಆಸೆ, ವ್ಯಾಮೋಹವೇ ಕಾರಣ ಎಂದು ಬಲವಾಗಿ ನಂಬಿದ್ದಾನೆ. ನಮಗೆ ಗಂಜಿ ಹೇಗೆ ಬದುಕುವ ಅನಿವಾರ್ಯ ಬಳಕೆಯಾಗುವ ಆಹಾರವೋ ಹಾಗೆ ಪಾಶ್ಚಿಮಾತ್ಯರಿಗೆ ಬ್ರೆಡ್. ಅಂತಹ ಬ್ರೆಡ್ ಜನಸಾಮಾನ್ಯರನ್ನು ಪ್ರತಿನಿಧಿಸುತ್ತದೆ. ಅದು ಸಮಾಜದೊಳಗೆ ಅತ್ಯಂತ ಶ್ರೇಷ್ಠ ಆಹಾರ ಎಂದು ಪೀಟರ್ ಹೇಳುತ್ತಾನೆ. ಅದಕ್ಕಾಗಿಯೇ ಆತನ ರಂಗತಂಡಕ್ಕೆ ಆ ಹೆಸರು ಇಟ್ಟಿದ್ದಾನೆ.

***

ಕಲಾವಿದನಾದವನೂ ಶ್ರೀಮಂತನಾಗಬೇಕು ಎಂಬ ಭ್ರಮೆಯಲ್ಲಿ ಬದುಕುವ ನಾವುಗಳು ಪೀಟರ್‌ನಿಂದ ಕಲಿಯುವುದು ತುಂಬಾ ಇದೆ. ಒಂದಿಷ್ಟು ಸಿನಿಮಾ ಮಾಡಿದರೆ, ಲಕ್ಷಗಟ್ಟಲೆ ಬೆಲೆಬಾಳುವ ಕಾರು, ಕೋಟಿ ರೂ. ಬೆಲೆ ಬಾಳುವ ಬಂಗಲೆಯಲ್ಲಿ ಐಷಾರಾಮಿ ಬದುಕುವ ನಡೆಸುತ್ತ ತಮ್ಮನ್ನು ತಾವು ಜನಸಾಮಾನ್ಯರಿಗಿಂತ ತೀರಾ ಭಿನ್ನರು ಎಂದು ತೋರಿಸಿಕೊಳ್ಳುವ ನಮ್ಮ ಚಿತ್ರನಟರಿಗೆ ಪೀಟರ್ ಅನುಕರಣೀಯ ವ್ಯಕ್ತಿಯಾಗುತ್ತಾರೆ. ನೂರಾರು ಕಲಾವಿದರು ಪೀಟರ್‌ನನ್ನು ಒಮ್ಮೆ ಭೇಟಿಯಾದರೆ ಸಾಕು ಎಂದು ಹಾತೊರೆಯುತ್ತಾರೆ. ಅಂತಹ ಅಸಾಮಾನ್ಯ ಪ್ರಭೆ ಬೆಳೆಸಿಕೊಳ್ಳಲು ಹಣದಿಂದ ಸಾಧ್ಯವಿಲ್ಲ ಎಂಬುದು ಆತ ಜಗತ್ತಿಗೆ ತೋರಿಸಿಕೊಟ್ಟ ಮಾದರಿ.

ಹ್ಯಾಟ್ಸ್ ಆಫ್ ಟು ಯು ಪೀಟರ್ ಅಜ್ಜ.

Thursday, February 12, 2009

ನಂಗೂ ಮೊದಲು ನಿಂಗೂ ಮೊದಲು ಈ ಪ್ರೀತಿ-ಪ್ರೇಮ!

ಈ ಪ್ರೀತಿ ಹೇಗೆ ಹುಟ್ಟತ್ತೆ? ಈ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಮೊದಲೇ ಈಗಿನ ಮೊಬೈಲ್ ಪ್ರೀತಿ ತನ್ನ ನವಿರತೆಯನ್ನು ಕಳೆದುಕೊಂಡಿದೆ. ಪ್ರೀತಿ ಮಾಡುವವರನ್ನು ಮದುವೆ ಮಾಡಿಸುತ್ತೇವೆ ಎನ್ನುವ ಶ್ರೀರಾಮನ ಭಕ್ತರಿಗೂ, ಅವರಿಗೆ ಸೆಡ್ಡು ಹೊಡೆದು ಪಿಂಕ್ ಚೆಡ್ಡಿ ಹಂಚುವ ಪ್ರೇಮಿಪರರಿಗೂ ಈ ಪ್ರಶ್ನೆ ಕೇಳಿ ನೋಡಿ..ಊಹ್ಹೂಂ ಉತ್ತರವೇ ಇಲ್ಲ.

ಅದು ೧೯೮೫ರ ದಿನಗಳು, ಈಗಿನಂತೆ ಕೈಗೆ ಕಾಲಿಗೆ ಮೊಬೈಲ್ ಸಿಗುತ್ತಿರಲಿಲ್ಲ. ಪ್ರೀತಿ ನಿವೇದನೆಗೆ ಪತ್ರವೊಂದೇ ಬಾಕಿ. ಅದು ಪ್ರೇಮಿಗಳ ಪಾಲಿಗೆ ದಿನನಿತ್ಯ ಪಠಿಸುವ ಬೈಬಲ್ ಇದ್ದಂತೆ. ಅಂತಹ ಸಂದರ್ಭದಲ್ಲಿಯೂ ಈ ಪ್ರೀತಿ ಪ್ರೇಮ ಯಾವುದೇ ಸದ್ದುಗದ್ದಲವಿಲ್ಲದೆ ಜಾರಿಯಲ್ಲಿತ್ತು. ಆಗಲೂ ಅಪ್ಪಟ ಪ್ರೇಮಿಗಳಿದ್ದರು. ಆದರೆ, ಅದಕ್ಕೊಂದು ಲಕ್ಷ್ಮಣ ರೇಖೆಯಿತ್ತು. ಅದನ್ನೇ ಪ್ರೇಮಿಗಳು ಬದುಕಿನ ಸಂಯಮ ಎಂದುಕೊಂಡಿದ್ದರು. ನಿಜವಾದ ಅರ್ಥದಲ್ಲಿ ಅದು ಪ್ರೇಮದ, ಪ್ರೀತಿಯ ಹೊಳಪು.
ಆಗ ಮೈಸೂರಿನ ಗಂಗೋತ್ರಿಗೆ ಓದಲೆಂದು ಬಂದ ಮಾತೂ ಬಾರದ, ಕಿವಿಯೂ ಕೇಳದ ಹುಡುಗನೊಬ್ಬ ಅಚನಾಕ್ ಆಗಿ ಕಾಲಿಲ್ಲದ ಹುಡುಗಿಯನ್ನು ಭೇಟಿಯಾಗುತ್ತಾನೆ. ಇಬ್ಬರದೂ ಅಪ್ಪಟ ಸ್ನೇಹ. ಅದಕ್ಕೆ ಕೊಂಡಿ ಅವರಿಬ್ಬರು ಮಲೆನಾಡಿನವರು ಎಂಬ ಒಂದು ಕಾರಣ.

ಸರಿ, ಎರಡು ವರ್ಷಗಳ ಓದಿನ ಅನಂತರ ಇಬ್ಬರು ತಮ್ಮ ತಮ್ಮ ಹಾಡುಪಾಡು ನೋಡಿಕೊಳ್ಳಲು ಹೊರಟರು. ಬಹುಶಃ ಅವರಿಬ್ಬರ ಸ್ನೇಹ ಗಂಗೋತ್ರಿಯ ಲೈಬ್ರರಿಯನ್ನು ದಾಟಿ ಆಚೆ ಇಣುಕಿರಲಿಲ್ಲ. ಆತನಿಗೆ ತನ್ನದು ಎಂದು ಹೇಳಿಕೊಳ್ಳುವ ಭಾವನೆಗಳು ಇದ್ದರೂ ಅದನ್ನು ಮಾತಿನಲ್ಲಿ ವ್ಯಕ್ತಪಡಿಸಲಾರ. ಆಕೆಗೆ ಅದು ಅರ್ಥವಾದರೂ, ಅದೆಲ್ಲಾ ಸಾಧ್ಯವೇ ಎಂಬ ದಿಗಿಲು.

ಒಂದೆರಡು ವರ್ಷಗಳು ಕಳೆದಿರಬೇಕು. ಈತ ಸ್ನೇಹಿತನಿಗಾಗಿ ಹೆಣ್ಣು ನೋಡಲು ಹೊರಟ. ಗೊತ್ತಿಲ್ಲದೆ ಆಕೆಯ ಮನೆಗೇ ಹೋಗಬೇಕೆ? ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮ. ಆಕಸ್ಮಿಕವಾಗಿ ಒಂದೆಡೆ ನೋಡಿದಾಗ ಇಬ್ಬರಿಗೂ ಆಶ್ಚರ್ಯ. ಸರಿ ಹುಡುಗಿಯ ನೋಡುವ ಶಾಸ್ತ್ರ ಆರಂಭವಾಯಿತು. ಹುಡುಗಿ ಬಂದಳು. ಒಂದು ಕಾಲು ಊನು. ನೋಡಲು ಸುಂದರವಾಗಿದ್ದರೂ ಸ್ವಾಧೀನವಾಗಿಲ್ಲದ ಕಾಲು. ಹುಡುಗನಿಗೆ ಬಳುಕುವ ಕನ್ಯೆ ಬೇಕು. ಕಾಲಿನ ಕುಂಟನ್ನು ನೋಡುತ್ತಲೇ ಆತನ ಮುಖ ಸಣ್ಣದಾಯಿತು.

ಆದಾಗಿ ಐದಾರು ತಿಂಗಳು ಕಳೆದಿರಬೇಕು. ಆ ಹುಡುಗಿಗೆ ಯಾವುದೇ ಹುಡುಗ ನಿಶ್ಚಯವಾಗಲಿಲ್ಲ ಎಂಬ ಸುದ್ದಿ ಈತನ ಕಿವಿಗೆ ಬಿತ್ತು. ಸ್ನೇಹಿತನೂ ಆಕೆಯನ್ನು ತಿರಸ್ಕರಿಸದ ಸುದ್ದಿಯೂ ಗೊತ್ತಾಗಿತ್ತು. ಆದೇನು ನಿಶ್ಚಯಿಸಿಕೊಂಡನೋ ಏನೋ..ಆಕೆಗೆ ಒಂದು ಪತ್ರ ಬರೆದ. ಅದರ ಸಾರಂಶ ಸರಳ.

ಬದುಕು ನಾವುಂದುಕೊಂಡಂತೆ ನಿರ್ಧಾರವಾಗದಿದ್ದರೂ, ಅದನ್ನು ನಾವು ಇನ್ನೂ ಸುಂದರಗೊಳಿಸಬಹುದು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಮನಸ್ಸಿನಲ್ಲಿ ನನ್ನ ಕಿವಿಡುತನ ಮತ್ತು ಮೂಗ ಎಂಬ ಕುರಿತು ಯಾವುದೇ ಕೆಟ್ಟ ಭಾವನೆ ಇಲ್ಲದಿದ್ದರೆ, ನಾನು ನಿಮ್ಮೊಂದಿಗೆ ಸುಖವಾಗಿ ಬದುಕಬಲ್ಲೆ ಎಂಬ ವಿಶ್ವಾಸವಿದ್ದರೆ, ನಿಮ್ಮನ್ನು ವಿವಾಹವಾಗಲು ನಾನು ಸಿದ್ಧನಿದ್ದೆನೆ. ಖಂಡಿತ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ಪತ್ರದಲ್ಲಿ ಯಾವುದೇ ಉದ್ವೇಗ, ಆದರ್ಶ, ಆಕರ್ಷಣೆ ಇತ್ಯಾದಿಗಳಿರಲಿಲ್ಲ. ಅಥವಾ ಕುಂಟು ಹುಡುಗಿಗೆ ನಾನು ಬಾಳು ನೀಡುತ್ತೇನೆ ಎಂಬ ಒಣ ಅಹಂಭಾವದ ಪ್ರದರ್ಶನವೂ ಇರಲಿಲ್ಲ.

***

ಕೆಲ ದಿನಗಳ ಕಾಲ ಆಕೆಯಿಂದ ಉತ್ತರವಿಲ್ಲ. ಈತನಿಗೆ ತಾನು ಆಕೆಗೆ ಇಷ್ಟವಾಗಲಿಲ್ಲವೇನೋ ಎಂಬ ಕಾರಣಕ್ಕಾಗಿ ಸುಮ್ಮನಾದ. ಬದುಕಿಗೊಂದು ದಾರಿ ಹುಡುಕುವ ಅವಸರದಲ್ಲಿ ಮೈಸೂರಿಗೆ ಬಂದ. ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ತನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂಬ ಕಾರಣಕ್ಕೆ ಅದರ ಪ್ರಸ್ತಾಪವನ್ನೆ ಮರೆತುಬಿಟ್ಟ.

ಆಶ್ಚರ್ಯ! ಒಂದು ದಿನ ಆಕೆಯಿಂದ ಪತ್ರ.

ನಾನು ನಿಮ್ಮ ಬದುಕಿನಲ್ಲಿ ಜೊತೆಯಾಗಲು ಇಚ್ಚಿಸುತ್ತಿದ್ದೇನೆ. ನಾಳೆಯೇ ಮೈಸೂರಿಗೆ ಬರುತ್ತೇನೆ ಒಂದೇ ಸಾಲಿನ ಉತ್ತರ. ಮನತುಂಬಿ ಹೋದ. ಪತ್ರ ಬಂದ ಬೆಳಗ್ಗೆ ಆಕೆ ತನ್ನ ಸೂಟ್‌ಕೇಸ್‌ನೊಂದಿಗೆ ಮೈಸೂರಿನ ಆತನ ರೂಮಿನ ಮುಂದೆ ಹಾಜರ್. ಸರಿ ಎರಡು ದಿನದೊಳಗೆ ಸರಳ ವಿವಾಹ. ಇದ್ದ ಸಣ್ಣ ರೂಮಿನಲ್ಲಿಯೇ ಸಂಸಾರ ಆರಂಭ.

ಈತನಿಗೆ ಪರಿಪೂರ್ಣ ಕಿವಿಡುತನ, ಆಕೆಗೆ ಕಾಲಿನ ವಿಕಲತೆ. ಇವರಿಬ್ಬರು ಏನನ್ನು ಸಾಧಿಸಿಯಾರು? ಮುಂದೊಂದು ದಿನ ಈ ನಿರ್ಧಾರಕ್ಕೆ ಪ್ರಶ್ಚಾತ್ತಾಪ ಪಡುತ್ತಾರೆ ಎಂಬುದು ಇಬ್ಬರ ಮನೆಯವರ ಲೆಕ್ಕಾಚಾರ. ಜಾತಿ, ಕುಲ, ಎಲ್ಲ ಬೇರೆ ಬೇರೆಯಾದರೂ, ಇಬ್ಬರ ಮನಸ್ಸು ಒಂದಾಗಿತ್ತು.

ಇದೀಗ ಬೆಳೆದು ನಿಂತ ಇಬ್ಬರು ಮುದ್ದಾದ ಮಕ್ಕಳು, ಬದುಕಿನಲ್ಲಿ ಇದುವರೆಗೆ ಒಮ್ಮೆಯೂ ಒಬ್ಬರಿಗೆ ಒಬ್ಬರು ಹೊರೆ ಎಂದು ಭಾವಿಸಿಕೊಂಡೇ ಇಲ್ಲ. ಪ್ರೀತಿ ಪ್ರೇಮ ಎಂಬುದನ್ನು ಆಕರ್ಷಣೆಗೆ ಸೀಮಿತ ಮಾಡಿಕೊಳ್ಳಲಿಲ್ಲ.

ಆಶ್ಚರ್ಯವೆಂದರೆ, ದೊಡ್ಡ ಮಗಳು ಪೋಲಿಯೋ ಪೀಡಿತ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾಳೆ. ಅವರದೂ ಪ್ರೇಮ ವಿವಾಹ. ಅದು ಧರ್ಮ,ಧರ್ಮಗಳ ಅಂತರದಲ್ಲಿ. ಇಡೀ ಕುಟುಂಬವೇ ಸುಖಿ.

***

ಮೇಲಿನ ಘಟನೆಯನ್ನು ಪ್ರಸ್ತಾಪ ಮಾಡಿದ ಉದ್ದೇಶವಿಷ್ಟೇ. ಪ್ರೀತಿ ಎಂಬುದು ಎಲ್ಲಿ, ಹೇಗೆ, ಯಾವ ಕಾರಣಕ್ಕಾಗಿ ಹುಟ್ಟುತ್ತದೆ ಎಂಬುದು ಬಗೆಹರಿಯದ ಪ್ರಶ್ನೆ. ಆದರೆ, ಅದೊಂದು ಅಮೂರ್ತ ಭಾವ ಎನ್ನುವುದು ಸತ್ಯ. ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಮಾತಿನಂತೆ ಪ್ರೀತಿ ಎಂಬುದು ಜಾತಿ, ಧರ್ಮ, ಕುಲ, ಸಮುದಾಯ, ಸಮಾಜ, ರಾಜ್ಯ ಅಥವಾ ದೇಶ-ದೇಶಗಳನ್ನು ಮೀರಿದ್ದು.

ಫೆ.೧೪ ರಂದೆ ತನಗೆ ಪ್ರೀತಿ ಹುಟ್ಟುತ್ತದೆ, ಅವತ್ತಿನ ದಿನವೇ ತನ್ನ ಪ್ರೀತಿ ತೋಡಿಕೊಂಡರೆ ಆದಕ್ಕೊಂದು ಅರ್ಥ ಎನ್ನುವ ಮೂರ್ಖ ಕಾರಣಗಳು ಮತ್ತು ಜಾಗತೀಕರಣದ ಕೆಲವು ಸತ್ಯಗಳನ್ನು ನಾವುಗಳು ಅರಗಿಸಿಕೊಳ್ಳಲೇ ಬೇಕಾಗಿದೆ.

ಯಾವುದೇ ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಯಾಗದ ಕಾಲದಲ್ಲೂ ಈ ಪ್ರೀತಿ-ಪ್ರೇಮ ಎಂಬ ವಿಚಾರ ಜೀವಂತವಾಗಿ ಈ ಸಮುದಾಯದ ಸ್ವಾಸ್ಥವನ್ನು ಕಾಪಾಡುತ್ತಲೇ ಬಂದಿದೆ. ಆದರೆ, ಅದನ್ನು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳುವ ಮತ್ತು ಆ ಮತ್ತಿನಲ್ಲೇ ಅದನ್ನು ಆಚರಿಸಲು ಹೊರಡುವ ಮನಸುಗಳಿಗೆ ಮೇಲಿನ ಉದಾಹರಣೆ ಸರಿಯಾದ ಪಾಠ ಎನ್ನುವುದು ನನ್ನ ಅನಿಸಿಕೆ.

***

ಪ್ರೀತಿ ಎನ್ನುವುದು ಎರಡು ಮನಸುಗಳಿಗೆ ಸಂಬಂಧಿಸಿದ ವಿಚಾರ. ಅದೊಂದು ತೀರಾ ಖಾಸಗಿ ಮತ್ತು ವೈಯಕ್ತಿಕ ಎಂಬುದು ನಮ್ಮ ಶ್ರೀರಾಮನ ಭಕ್ತರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಜಾಣ ಪೆದ್ದರಂತೆ ಆಡುವುದು ಅವರಿಗೆ ಆಗಿರುವ ತರಬೇತಿಯ ಸಾರಂಶ. ಆದರೆ, ವ್ಯಾಲೆಂಟೇನ್ಸ್ ಡೇ ಎನ್ನವುದನ್ನು ಇನ್ನಷ್ಟು ರೋಚಕವಾಗಿ ಮಾಡಲು ಹೊರಟ ಶ್ರೀರಾಮನ ಭಕ್ತರು ಮತ್ತು ಜಾಗತೀಕರಣದ ಮೂಸುದಾರರು, ಅದನ್ನು ಇಂದಿನ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿರುವುದು ಮಾತ್ರ ಅತ್ಯಂತ ಕ್ಷುಲ್ಲಕವಾಗಿ ಕಾಣುತ್ತಿದೆ.

ಪ್ರೀತಿ ಮಾಡುವವರನ್ನು ವಿರೋಧಿಸುವ ಮನೆಯವರಿಗೆ ಬುದ್ಧಿ ಹೇಳಿ, ಅವರಿಗೆ ಜಾತಿ ವಿನಾಶದ ಕಲ್ಪನೆಯ ಬಗ್ಗೆ ಗೌರವ ಹುಟ್ಟಿಸಬಹುದಾದ ಕೆಲಸವನ್ನು ಶ್ರೀರಾಮನ ಭಕ್ತರು ಮಾಡಿದ್ದರೆ ಅದು ನಿಜವಾಗಿಯೂ ಒಂದು ಸಂಘಟನೆ ಹಾಗೂ ಒಂದು ಶಕ್ತಿಯಾಗಿ ಇಡೀ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯು ಮಾದರಿ ಕಾರ್ಯ ಎಂದು ಬೆನ್ನುತಟ್ಟಬಹುದಿತ್ತು. ಅದರೆ, ಈಗ ಆಗುತ್ತಿರುವುದೇ ಬೇರೆ. ಪ್ರೀತಿಯನ್ನು ರಸ್ತೆಯಲ್ಲಿಟ್ಟು ಮಾರಾಟಕ್ಕೆ ಕುಳಿತ ಬಂಡವಾಳಶಾಹಿಗಳು ಇದೊಂದೆ ದಿನ ನಿಮ್ಮ ಅದ್ಬುತ ಪ್ರೀತಿ ಉಕ್ಕಿ ಹರಿಯುತ್ತದೆ ಎಂದು ಇನ್ನಿಲ್ಲದ ಬೊಗಳೆ ಬಿಡುತ್ತಾ ತಮ್ಮ ಸರಕು ಖಾಲಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದರೆ, ಇತ್ತ ಶ್ರೀ ರಾಮನ ಭಕ್ತರು ಈ ಸಮಾಜಕ್ಕೆ ಪ್ರೇಮಿಗಳೇ ನಿಜವಾದ ಭಯೋತ್ಪಾದಕರು ಎಂಬರ್ಥದಲ್ಲಿ ತಾಳಿ ಹಿಡಿದು ಮದುವೆ ಮಾಡಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದೇನು ಹುಚ್ಚರ ಸಂತೆಯೇ?

***

ಪ್ಯಾರ ಕಿಯಾ ತೋ ಡರ್‌ನಾ ಕ್ಯಾ..

ಪ್ರೇಮಿಗಳೇ, ನಿಜವಾಗಿ ನಾಳೆಯೊಂದೇ ದಿನ ಪ್ರೀತಿ ಹುಟ್ಟುವುದಿಲ್ಲ. ಅಥವಾ ಅದೊಂದು ಪವಿತ್ರ ದಿನವೂ ಅಲ್ಲ. ಪ್ರೇಮಿಗಳಿಗೆ ದಿನವೂ ಪವಿತ್ರ. ಆದರೆ, ನಿಮ್ಮೊಳಗೆ ಪ್ರೀತಿ ಮೊಳಕೆಯೊಡೆಯುವಾಗ ಅದಕ್ಕೆ ಯಾರಪ್ಪಣೆಯೂ ಬೇಡ. ನಾವು ಬೇಡವೆಂದರೂ, ಈ ಸಮಾಜ ಎದುರಾಗಿ ನಿಂತರೂ ನಿಮ್ಮೊಡನೆ ಗಟ್ಟಿಯಾಗಿ ನಿಲ್ಲುವುದು ಅದೊಂದೆ. ಅದಕ್ಕೊಂದು ದೀರ್ಘವಾದ ಆಯುಷ್ಯ ಇದೆ. ಅದು ನಿಮ್ಮ ಬದುಕಿನ ಕೊನೆಯವರೆಗೆ ನಡೆದು ಬರುತ್ತದೆ.

ಅಂತಹದೊಂದು ಪವಿತ್ರ ಬಂಧನಕ್ಕೆ ಒಳಗಾಗಿರುವ ನೀವು ಯಾರಿಗೂ ಹೆದರುವುದು ಅವಶ್ಯಕವಿಲ್ಲ. ಪ್ರೀತಿಸುವುದು ನಿಮ್ಮ ಹಕ್ಕು. ಅದನ್ನು ಇನ್ನೊಬ್ಬ ಕಸಿದುಕೊಳ್ಳಲಾಗದು.

***

ಈ ಪ್ರೀತಿ ಒಂಥರಾ ಕಚಗುಳಿ..

ಇಂತಹ ಪ್ರೀತಿಯ ಬಗ್ಗೆ ಅದೆಷ್ಟು ಕಾದಂಬರಿಗಳು, ಕಥೆಗಳು, ಕವನಗಳು ಬಂದು ಹೋಗಿದೆಯೋ ಗೊತ್ತಿಲ್ಲ. ಎಲ್ಲ ಪ್ರೀತಿಯು ಒಂದೇ. ಆದರೆ ಪ್ರೀತಿಯ ಕುರಿತು ಇದ್ದ ಸಾಫ್ಟ್ ಕಲ್ಪನೆಗಳೆಲ್ಲಾ ಇಂದು ಕರಗಿಹೋಗಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪ್ರೀತಿಸುವವರಲ್ಲೂ ಬದಲಾವಣೆಯಾಗಿದೆ. ಪ್ರೀತಿಯ ಭಾಷೆ ಬದಲಾಗುತ್ತಿದೆ. ಆದರೆ, ಹೃದಯ, ಮನಸು ಮಾತ್ರ ಒಂದೇ. ಎಲ್ಲ ಪ್ರೇಮಿಗಳಲ್ಲಿ ಆರಂಭದ ದಿಗಿಲು, ನಾಚಿಕೆ ಇದ್ದೇ ಇರುತ್ತದೆ. ಅದು ಬಿಟ್ಟೂಬಿಡದೆ ಕಾಡುತ್ತದೆ. ತಾವೇ ಜಗತ್ತಿನ ಅಮರ ಪ್ರೇಮಿಗಳು ಎಂಬರ್ಥದಲ್ಲಿಯೇ ಇರುತ್ತಾರೆ. ಆದರೆ, ತದನಂತರದ ಬೆಳವಣಿಗೆಯಲ್ಲಿ ಎಲ್ಲವೂ ಉಲ್ಟಾ ಪಲ್ಟ.

ಇವತ್ತು ಪ್ರೇಮಿಗಳು, ನಾಳೆ ನಾವ್ಯಾರೋ ಗೊತ್ತೇ ಇಲ್ಲ ಎಂದು ವರ್ತಿಸುವ ಪ್ರೇಮಿಗಳದ್ದು ನಿಜವಾದ ಪ್ರೀತಿಯಲ್ಲ. ಅದೊಂದು ಆ ಕ್ಷಣದ ಆಕರ್ಷಣೆ. ಪ್ರೀತಿ ಮನಸ್ಸಿಗೆ ಸಂಬಂಧಿಸಿದ್ದು. ಅದೊಂದು ಪರಿಶುದ್ಧವಾದ ಪರಿಧಿಯಲ್ಲಿ ತಿರುಗುತ್ತದೆ. ಅದನ್ನು ಕಾಪಾಡಿಕೊಳ್ಳುವುದಷ್ಟೆ ನಮ್ಮ ಕೆಲಸ. ಪ್ರೀತಿಯನ್ನು ವಿರೋಧಿಸುತ್ತಿರುವ ಶ್ರೀರಾಮಭಕ್ತರು ಒಮ್ಮೆ ಇತಿಹಾಸದ ಪ್ರೀತಿ ಪ್ರೇಮದ ಕಥೆಗಳನ್ನು ಓದಿಕೊಂಡರೇ ಒಳ್ಳೆಯದು.

***

Thursday, February 5, 2009

ಕಾಲ ಮತ್ತೊಮ್ಮೆ ನಮಗಾಗಿ ಬಂತು..


ಅಣ್ಣಾ ಒಂದು ನೂರು ರೂಪಾಯಿ ಸಾಲ ಬೇಕಾಗಿತ್ತುಅವನ ಧ್ವನಿ ತೀರಾ ಅಸಹಾಯಕ ಸ್ಥಿತಿಯಲ್ಲಿ ಇತ್ತು. ಸಾಲ ಕೇಳುತ್ತಿರುವುದು ತೀರಾ ಪರಿಚಯದ ಗೆಳಯನಿಗೆ. ಆದರೆ, ಸಂದರ್ಭ ಮಾತ್ರ ಕೆಟ್ಟದಾಗಿತ್ತು. ಅಷ್ಟಿಲ್ಲ ಇಷ್ಟಿದೆ ತಗೋ.. ಕೈಗೆ ಏನೋ ಆಗಿದೆ ಅನುಕಂಪದಿಂದಲೇ ಕೇಳಿದ ಗೆಳೆಯ. ದಯನೀಯ ಮನಸ್ಥಿತಿಯಲ್ಲಿದ್ದ ಈತ ಕೊಟ್ಟಿದ್ದನ್ನು ಹಿಡಿಮನಸ್ಸಿನೊಂದಿಗೆ ಜೇಬಿಗಿಳಿಸಿ ಹೌದು...ನಿನ್ನೆ ಬಿದ್ದಿದ್ದೆ ಎಂದೆ, ಉತ್ತರವೇ ನೀರಸ.

ಗೆಳೆಯನ ಕಚೇರಿಯ ಹೊರಗೆ ಇಟ್ಟಿದ್ದ ನೀರನ್ನು ಕುಡಿಯಬಹುದೇ ಎಂದರೆ, ನನ್ನನು ಕೇಳಬೇಕು ಎನ್ನುವ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದ ಸೆಕ್ಯುರಿಟಿಯವಾ..ನೀರು ಗಂಟಲಿಗೆ ಇಳಿಯುವ ಮುನ್ನವೇ ಹಣ ಕೊಟ್ಟು ಒಳ ಹೋದ ಗೆಳೆಯನೊಂದಿಗೆ ಕೆಲವರು ಜೋರಾಗಿ ನಕ್ಕು ಮಾತನಾಡುವುದು ಬೇಡವೆಂದರೂ ಈತನ ಕಿವಿಗೆ ಬಿತ್ತು.

ಆಗ್ಲೆ ಹೊಸ ನಾಟಕ ಮಾಡ್ಕೊಂಡು ಬಂದ ಹಣ ಕೇಳಿದ್ನಾ..? ಬಲೇ ಕಲಾವಿದ ಕಣಯ್ಯ ಅವ್ನು ಮತ್ತೆ ಜೋರಾಗಿ ನಕ್ಕರು.ವಿಚಿತ್ರವೆಂದರೆ ಆದೇ ಕಚೇರಿಯಲ್ಲಿ ನಗುವವರಿಗಿಂತಲೂ ಮೊದಲು ದುಡಿದು ಹೊರಬಂದವನು ಈತ. ಆಗ ಹೊಸದಾಗಿ ಬಂದು ಅಮಾಯಕರಂತೆ ನಿಂತು ನೋಡುತ್ತಿದ್ದ ಅವರಿಗೆಲ್ಲ ಟೀ ಕುಡಿಸಿ, ಇದೆಲ್ಲಾ ಬೆಟ್ಟವಲ್ಲ, ಮಂಜಿನಂತೆ ಕರಗಿ ಹೋಗುವ ಕರಗತ ವಿದ್ಯೆ ಎಂದು ಎಷ್ಟೋ ಸಂಜೆಗಳಲ್ಲಿ ಹೇಳಿಕೊಟ್ಟಿದ್ದಾತ.

ಮಾತುಗಳು ಹೃದಯಕ್ಕೆ ಚುಚ್ಚಿದಂತಾಯಿತು. ಗಂಟಲಿಗೆ ಇಳಿದ ನೀರು ಎದೆಯಾಳದೆಲ್ಲೆಲ್ಲೋ ಭಾರವಾದಂತೆ ದಡದಡನೇ ಅಲ್ಲಿಂದ ಆತ ಹೊರಬಿದ್ದ...

****

ಹಾಗಾದರೆ ಇಂತಹದೊಂದು ಸಂದರ್ಭಕ್ಕೆ ಯಾರನ್ನ ದೂಷಣೆ ಮಾಡುವುದು?,ಇದು ಆತನ ಸೋಲೋ ಅಥವಾ ಆತನ ಹಣೆಬರಹವೇ..?ಬೇಕಾದವರು ಬೇಕಾದ್ದಂಗೆ ಹೇಳಲಿ, ಆದರೆ, ಮೇಲಿನ ಘಟನೆಯ ರೀತಿಯಲ್ಲಿಯೇ ಬಹುತೇಕರು ಅವಮಾನಕರ ಪ್ರಸಂಗವನ್ನು ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸಿರುತ್ತಾರೆ. ಅದೊಂದು ಕಾಲಘಟ್ಟವೇ ಇರಬೇಕು.ಸೋತವರನ್ನು ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗೆಂದು ಸೋತವರೆಲ್ಲಾ ಸದಾ ಸೋತೇ ಇರುವುದಿಲ್ಲ. ಆದರೆ ಆ ಟೈಮ್ ಮನುಷ್ಯನನ್ನು ಎಂತ ದುಸ್ಥಿತಿಯಲ್ಲಿ ನೋಡುತ್ತದೆ ಎಂದರೆ, ಅಲ್ಲಿಯವರೆಗೆ ಆತನ ಪ್ರತಿಭೆ, ಯಶಸ್ಸು, ಒಳ್ಳೆಯತನ, ಧೈರ್ಯ, ಪ್ರಾಮಾಣಿಕತೆ ಎಲ್ಲವೂ ಒಂದೇ ಇಡೀ ಗಂಟಿಗೆ ಮಾರವಾಡಿಯ ಅಂಗಡಿಯಲ್ಲಿ ಅಡವಿಟ್ಟಂತೆ ಅವಿತುಕೊಂಡಿರುತ್ತವೆ. ಅವನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಆತ ಜೀವನದ ಬಹುತೇಕ ವರ್ಷಗಳೇ ಸಾಲಗಾರ ಎನಿಸಿಕೊಂಡು ಅವರಿವರಿಂದ ಬಂದ ಕಣ್ರಯ್ಯ ಎಂದು ಬೇಕಾರ್ ಎಂಬ ಪಟ್ಟವನ್ನು ಪಡೆದುಕೊಳ್ಳುವ ದುರಂತ ಪರ್ವ.

ಇಂತಹ ಬದುಕನ್ನು ಎದುರಿಸಿದ ಯಾರಿಗಾದರೂ ಒಮ್ಮೆ ಅಪ್ತವಾಗಿ ಅದರ ನೆನಪು ಮಾಡಿ ನೋಡಿ, ಒಂದು ಕ್ಷಣ ಅವಕ್ಕಾದವರಂತೆ ಬೆಚ್ಚಿ ಕುಳಿತು ಆನಂತರ ವಿಷಾದದ ನಗೆ ಅವರ ಮುಖದ ಮೇಲೆ ತೇಲಿ ಹೋಗುತ್ತದೆ., ಆದರೆ, ಅದನ್ನು ನಿಮ್ಮೊಂದಿಗೆ ತೀರಾ ಹಂಚಿಕೊಳ್ಳಲಾರರು. ಏಕೆಂದರೆ ಅದು ಅವರ ಪ್ರಕಟವಾಗದ ಬದುಕಿನ ಪುಟಗಳು. ಮತ್ತೊಮ್ಮೆ ನೆನಸಿಕೊಂಡರೆ ಎಲ್ಲಿ ಆತುಕೊಳ್ಳೋತ್ತದೆಯೋ ಎಂಬ ಅಂಜಿಕೆ.

***

ಎಂತಹ ಸೋಲಾದರೂ ಮನುಷ್ಯ ತಡೆದುಕೊಳ್ಳಬಲ್ಲ. ಆದರೆ, ತನ್ನ ಜೀವನಸ್ಥಿತಿಯಲ್ಲಿ ಆರಂಭವಾಗುವ ಸೋಲಿನ ಸರಮಾಲೆಗಳನ್ನು ಭರಿಸುವ ಶಕ್ತಿ ಮಾತ್ರ ಆತನಿಗೆ ಇರುವುದಿಲ್ಲ. ಒಮ್ಮೆ ನಸೀಬು ಕೆಟ್ಟರೆ, ಬಂಗ್ಲೆಯಲ್ಲಿ ಇದ್ದಾತ ಪುಟಪಾತ್ ಎನ್ನುವ ಮಾತನ್ನು ಆಗಾಗ ಕೇಳುತ್ತಲೇ ಇರುತ್ತೀರಿ. ಈ ಸೋಲು ಒಂದು ತರಹಾ ಹಾಗೆ. ಎ.ಸಿ.ರೂಮಗಳಲ್ಲಿ ಕೂತು ಹತ್ತಾರು ಮಂದಿಗೆ ಕೆಲಸ ಹಂಚುತ್ತಿದ್ದವ ಅಥವಾ ತನ್ನದೆ ಸ್ವಂತ ವ್ಯಾಪಾರದಲ್ಲಿ ನೆಮ್ಮದಿ ಕಂಡು ಒಂದಿಬ್ಬರು ಹುಡುಗರಿಗೆ ಮನತುಂಬವಷ್ಟು ಸಂಬಳ ಕೊಡುತ್ತಿದ್ದವ, ಬೀದಿ ಬಂದರೆ ಮುಗೀತು. ಅವನ ಅಲ್ಲಿಯವರೆಗಿನ ಶ್ರಮ,ಪ್ರತಿಭೆ,ಚಿಂತನಾ ಶಕ್ತಿ ಎಲ್ಲದಕ್ಕಿಂತ ದಿನವೂ ದಣಿವರಿಯದೆ ದುಡಿದು ನಾಳೀನ ಕನಸುಗಳ ಬುತ್ತಿ ಕಟ್ಟುವ ಪ್ರಕ್ರಿಯೆಗಳಿಗೆ ಶನಿ ಪ್ರವೇಶ ಎಂಬುದು ಖಾಯಂ. ಅಲ್ಲಿಂದ ಆತನ ಪ್ರತಿಭೆ ಬಡ್ಡಿಗೆ ಸಾಲ ನೀಡುವವನ ಮುಂದೆ ಮಕಾಡೆ ಮಲಗಿಕೊಂಡು ಬಿಟ್ಟಿರುತ್ತದೆ. ಸೋಲು ಆರಂಭವಾಗುವುದೇ ಅಲ್ಲಿಂದ, ಬಡ್ಡಿಗೆ ತಂದ ಸಾಲ ಮೊದಲು ಅವನ ವೃತ್ತಿ ಮತ್ತು ಪ್ರವ್ಲತ್ತಿಯನ್ನು ಮುಳುಗಿಸುತ್ತದೆ, ಆನಂತರ ನಿಧಾನವಾಗಿ ಮನೆಯಲ್ಲಿನ ನಂಬಿಕೆಯ ಗೋಡೆಗಳನ್ನು ಕೆಡವಲು ಆರಂಭಿಸುತ್ತದೆ. ಅಲ್ಲಿಗೆ ಆತ ಗಡ್ಡಧಾರಿ. ನಗುವುದನ್ನು ಮರೆತುಬಿಟ್ಟಿರುತ್ತಾನೆ. ಏಕೆಂದರೆ ಸಾಲ ಕೊಟ್ಟಾತನ ವಿಕಟನಗು ನಿದ್ದೆಯನ್ನೂ ಕದ್ದಿರುತ್ತದೆ.ಇನ್ನು ಮನೆಯವರು ಬಿಡಿ, ಸ್ವಂತ ಹೆಂಡತಿ ಆತನನ್ನು ಕಂಡರೆ ಉದಾಸೀನ ಮಾಡುಲು ಆರಂಭಿಸುತ್ತಾಳೆ. ಗೆಳೆಯರು ತಪ್ಪಿಸಿಕೊಂಡು ಓಡಾಡುತ್ತಾರೆ. ಇನ್ನೂ ಕೆಲವರು ಬಿಟ್ಟಿ ಸಲಹೆಗಳನ್ನು ಕೊಟ್ಟು ಅನುಕಂಪ ತೋರಿಸುತ್ತಲೇ ಎಲ್ಲರ ಮುಂದೆ ಕಾಲೇಳೆಯಲು ಆರಂಭಿಸುತ್ತಾರೆ. ಕೊಟ್ಟ ಸಾಲ ತೀರಿಸಲು ಇನ್ನೊಂದು ಸಾಲ..ಹೀಗೆ ಸಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡವನಿಗೆ ಈ ಹಿಂದೆ ಕೆಲಸಕೊಡಲು ತಾ ಮುಂದೆ ನಾ ಮುಂದು ಪೈಪೋಟಿ ನಡೆಸುತ್ತಿದ್ದ ಮಂದಿ ಈಗ ಎಲ್ಲರ ಮುಂದೆಯೇ ಅವನ ಪ್ರಾಮಾಣಿಕತೆ, ಪ್ರಯತ್ನಶೀಲತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.

ಇಲ್ಲದ ನೆವದೊಂದಿಗೆ ಎಲ್ಲಿ ಆತನ ದುರಾದೃಷ್ಟ ತಮ್ಮನ್ನೂ ನುಂಗಿಬಿಡುತ್ತದಯೋ ಎಂಬಂತೆ ಸಾಗಹಾಕುವುದನ್ನೆ ಕಾದು ನೋಡುತ್ತಾರೆ. ಅಲ್ಲಿಗೆ ಆತನ ಮಾನಸಿಕ ಧೈರ್ಯ ಫಿನಿಷ್. ಇದಕ್ಕೆ ಸಾಥ್ ಎಂಬಂತೆ ಮನೆಯಲ್ಲಿ ಹೆಂಡತಿಯೂ ಆದೇ ಸ್ಥಿತಿಯಲ್ಲಿ ಆತನನ್ನು ಪ್ರಶ್ನೆ ಮಾಡುತ್ತಾ ಹೋದರೆ, ಆತ ನಿಜವಾಗಿಯೂ ಬೇಕಾರ್.

****

ಇದು ಮುಗಿಯದ ಘಟ್ಟವಲ್ಲ. ಎಂದೋ ಒಂದು ದಿನ ಎಲ್ಲವೂ ಮುಗಿದು ನಿಧಾನವಾಗಿ ಆತ ಆ ಪರ್ವದಿಂದ ಹೊರಬರುತ್ತಾನೆ. ಮತ್ತೆ ಮುಕ್ಕಾಗದೆ ಉಳಿಸಿಕೊಂಡ ಕಲಿತ ವಿದ್ಯೆಯನ್ನು ಉಪಯೋಗಿಸಿಯೇ ಮೇಲೆರುತ್ತಾನೆ. ಆಗ ಸ್ನೇಹಿತರಲ್ಲಾ ಸಕ್ಕರೆಗೆ ಇರುವೆ ಮುಕ್ಕುವಂತೆ. ಆದರೆ, ಅಷ್ಟು ದಿನಗಳ ಕಾಲ ಅನುಭವಿಸಿದ ಯಾತನೆ ಮುಂದಿನ ಏಳು ಜನ್ಮಕ್ಕಾಗುವಷ್ಟು ಸಾಕಾಗಿರುತ್ತದೆ. ಕೆಲವರು ಅದನ್ನು ಎದುರಿಸಲಾಗದೆ ಸಾವಿನ ದಾರಿಯನ್ನೆ ಹಿಡಿದಿರುತ್ತಾರೆ. ಬಹಳಷ್ಟು ಮಂದಿ ಕಟ್ಟಿಕೊಂಡ ಬದುಕಿನ ಜಂಜಾಟ ಅನಾಥವಾಗುತ್ತದೆಯಲ್ಲಾ ಎಂಬ ಕಾರಣಕ್ಕೆ ಹೆಂಡತಿ,ಮಕ್ಕಳು,ಸಮಾಜ ಹೀಗೆ ನೂರಾರು ಜಟಿಲ ಸಂಬಂಧದೊಳಕ್ಕೆ ಬಂಧಿ. ಕಂಡರೆ ಕ್ಯಾಕರಿಸುವ ಸಂಬಂಧಿಕರನ್ನು ಸಹಿಸಿಕೊಂಡು ಸೋಲನ್ನು ಎದುರಿಸಲು ಹೊರಟವನಿಗೆ ಒಬ್ಬನೇ ಒಬ್ಬ ಸಾಂತ್ವನ ಅಥವಾ ಸಾಥ್ ಹೇಳುವುದಿಲ್ಲ. ಈಗಿನ ಕಾಲದಲ್ಲಿ ಹೇಳಲು ಸಾಧ್ಯವೇ ಇಲ್ಲ ಬಿಡಿ. ಬಿದ್ದಾತನ ಬಳಿ ದುಡಿಸಿಕೊಳ್ಳುವುದು ಹೇಗೆ ಎಂಬುದು ಕೆಲವರಿಗೆ ಕಲಿಸದೇ ಬಂದ ವಿದ್ಯೆ. ಇನ್ನೂ ಕೆಲವರು ನಾವು ಸೋಲುವುದೇ ಇಲ್ಲ ಎಂಬರ್ಥದಲ್ಲಿ ಹೀಗೆ ನೆಲ ಹಿಡಿದವರ ಜುಟ್ಟು ಹಿಡಿದು ಜಗ್ಗಾಡುವುದನ್ನು ಎದೆಯೊಳಗೆ ಇಟ್ಟುಕೊಂಡಿರುತ್ತಾರೆ. ಆದರೆ, ಈಗಿನ ವೇಗದ ಜಗತ್ತಿನಲ್ಲಿ ಯಾರೊಬ್ಬರು ಸೋತು ಕೂತವನಿಗೆ ಒಂದೊಳ್ಳೆ ಸಲಹೆ ನೀಡಿ ಜೊತೆಗೆ ಕರೆದು ಕೆಲಸ ಮಾಡುವ ಮನಸ್ಸು ಕಳೆದುಕೊಂಡಿರುವುದು ನೋಡಿದರೆ ವೇದನೆಯಾಗುತ್ತದೆ. ಸೋಲು ಎನ್ನುವುದು ಜಾಗತೀಕರಣದಿಂದಲೋ ಅಥವಾ ಬಡವರ ಮನೆಯ ಕೊಣೆಯಿಂದಲೂ ಹುಟ್ಟಿದ ಕೂಸಲ್ಲ. ಅದೊಂದು ಸಂದರ್ಭ. ಅದನ್ನೂ ಬಂಡವಾಳವಾಗಿಸಿಕೊಳ್ಳುವ ಈ ಸುಸಂಸ್ಕೃತ ಜಗತ್ತಿನ ಮುಖವಾಡಗಳ ತುಂಬಾ ಅಳಿಸಿಹೋಗುವ ಬಣ್ಣಗಳಿವೆ.

****

ಬಹಳ ವಿಚಿತ್ರವೆಂದರೆ ಹಾಗೆ ಒಮ್ಮೆ ಸೋತು ಗೆದ್ದವನು ಮತ್ತೆ ಸೋಲುವ ಪ್ರಸಂಗಗಳು ಅತಿ ವಿರಳ. ಅದೊಂದು ತರಹ ವರ್ಷವೀಡಿ ಸುಖವಾಗಿದ್ದು, ವಾರವೊಂದರ ಕಾಲ ಜ್ವರ ಪೀಡಿತರಾಗಿ ರಿಫ್ರೇಶ್ ಆದಂತೆ. ಸೋಲು ಆತನ್ನು ಗೆಲುವಿಗಾಗಿ ಅಷ್ಟೊಂದು ತಹತಹಿಸುವಂತೆ ಮಾಡಿರುತ್ತದೆ. ಆ ಸೋಲು ಎಂದೂ ಆರದ ಒಂದಿಷ್ಟು ಗಾಯಗಳನ್ನು ಶಾಶ್ವತವಾಗಿ ನಮ್ಮೊಂದಿಗೆ ಬಿಟ್ಟು ಹೋಗಿರುತ್ತದೆ.

***

ಹೀಗೆ ಆನಾಯಾಚಿತವಾಗಿ ಬರುವ ಸೋಲನ್ನು ಹೀಗೀಗೇ ಗೆಲ್ಲಬೇಕು ಎಂದು ಹೇಳಿಕೊಡಲು ಅಸಾಧ್ಯವೇ. ಆದರೆ, ಮನಿ ಮ್ಯಾನೇಜ್‌ಮೆಂಟ್(ಹಣಕಾಸು ನಿರ್ವಹಣೆ) ವಿಚಾರದಲ್ಲಿ ಮಾತ್ರ ಸೋಲನ್ನು ಒಂದಿಷ್ಟು ನಿರೋಧಿಸಬಹುದು. ಅದು ಈ ಸೋಲಿಗೆ ಇರುವ ಏಕೈಕ ಗುಳಿಗೆ. ಗಳಿಕೆಯಲ್ಲಿ ಕೂಡಿಡುವ ಕಾಗುಣಿತ ಗೊತ್ತಿದ್ದರೆ,ಅದು ಸುಲಭ. ಎಲ್ಲದಕ್ಕಿಂತ ಮುಖ್ಯವಾಗಿ ಹಣ ಕೊಟ್ಟರೆ ಇಂತಿಷ್ಟೆ ಸಮಯಕ್ಕೆ ಹಿಂತಿರುಗಿ ಕೊಡಬೇಕು ಎನ್ನುವ ಗೆಳೆಯರನ್ನು ಸಾಧ್ಯವಾದಷ್ಟು ದೂರವಿಡಿ. ಅದು ಅವರವರ ಹಣಕಾಸು ಶಿಸ್ತು ಇರಬಹುದು. ಒಂದು ಪಕ್ಷ ನಿಮಗೆ ಇಂತಹ ಸೋಲು ಬೆನ್ನತ್ತಿದರೆ, ನಿಮ್ಮ ಆ ಶಿಸ್ತಿನ ಗೆಳೆಯರೆಲ್ಲಾ ಕಂಡವರ ದುಡ್ಡಿನಲ್ಲಿ ಟೀ ಕುಡಿಯುತ್ತಾ ಸಂಜೆ ರಸಗಳಿಗೆ ಕಳೆಯಲು ನಿಮನ್ನು ಬೇಕಾರ್ ಮಾಡುತ್ತಾರೆ. ಹಣಕಾಸು ವಿಚಾರದಲ್ಲಿ ನಾವೇಷ್ಟು ಶಿಸ್ತು ಬದ್ಧರು ಎಂಬುದನ್ನು ಇನ್ನೊಬ್ಬರಿಗೆ ತೋರಿಸಿಕೊಳ್ಳುವ ಆತುರದಲ್ಲಿ ನಿಮ್ಮನ್ನು ಹಾಗೂ ಮನುಷ್ಯತ್ವವನ್ನು ಹಣದ ಅಳತೆಯಂತೆ ತಕ್ಕಡಿಯಲ್ಲಿ ತೂಕಕ್ಕಿಟ್ಟು ಪಕಪಕನೆ ನಗುತ್ತಾ ಕಾಲೆಳೇಯುತ್ತಾರೆ.

****

ಎಲ್ಲದಕ್ಕಿಂತ ನೀವು ನಿಮ್ಮೊಳಗೆ ಉಳಿದುಕೊಳ್ಳಲು ಯತ್ನಿಸಿ.ಇಂತಹ ಒಂದು ಸೋಲು ಜೀವನದ ಪಾಠ ಎಂದುಕೊಳ್ಳಿ, ಜೀವನದಲ್ಲಿ ಓದಿ ಮುಗಿಸಬೇಕಾದ ಎಷ್ಟೋ ಪಾಠಗಳು ಬಾಕಿ ಉಳಿದಿವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಯಾರೋ ನಾಲ್ವರು ನಿಮಗೆ ಮಾಡಿದ ಅವಮಾನ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಅಥವಾ ಮಾಡಿದ ಸಾಲ, ತೀರಿಸಲು ಅಸಾಧ್ಯವಾದ ಋಣವೂ ಅಲ್ಲ. ಅದೊಂದು ಲೆಕ್ಕಾಚಾರ. ಆದರೆ, ಸೋಲು,ಗೆಲವು, ಸುಖ,ದುಃಖ, ಕಳೆಯುವುದು,ಗಳಿಸುವುದು ಈ ಎಲ್ಲ ಕಾಗುಣಿತಕ್ಕಿಂತ ನಿಮ್ಮ ಜೀವ ದೊಡ್ಡದು ಎಂಬುದು ಮಾತ್ರ ಸದಾ ನೆನಪಿರಲಿ.ನೀವಿದ್ದರೇ ಇಂತಹ ಮತ್ತೊಂದು ಲೋಕ ಸೃಷ್ಟಿ ಮಾಡಲೂಬಹುದು ಎಂಬ ಅರಿವೂ ನಿಮ್ಮಲ್ಲಿ ಇರಲಿ.

ಸೋಲು ಮತ್ತು ಸಾಲಗಳ ಬಗ್ಗೆ ಮಾತುಕತೆ ಆರಂಭ ಮಾಡಿದ್ದು ಬೇಸರವಾದರೆ ಕ್ಷಮೆ ಇರಲಿ.ಆದರೆ, ಬದುಕಿನ ಪ್ರಮುಖ ಘಟ್ಟದಲ್ಲಿ ಹಾದು ಬಂದಿರುವ ಎಲ್ಲರು ಅದರಿಂದ ಹೊರತಾಗಿಯೂ ಹೊಸ ಬದುಕು ಆರಂಭಿಸಿರುತ್ತಾರೆ. ಅದು ಅವರ ಗೆಲವಿನ ಹೊಸ ಮೆಟ್ಟಿಲು..ಇದು ನನ್ನ ನಿಮ್ಮ ಮಾತುಕತೆಯ ಹೊಸಕಟ್ಟೆಯಾಗಲಿ ಎಂದುಕೊಳ್ಳೊಣ್ಣ..

ಕಾಲ ಮತ್ತೊಮ್ಮೆ ನಮಗಾಗಿ ಬಂತು..