Monday, November 14, 2011

ಬ್ಯಾಂಕ್‌ಗಳ ಮಡಿವಂತಿಕೆ ಎಂಬ ಸೋಗಲಾಡಿತನ..!

ಗ್ರಾಹಕನಿಗೆ ನೀಡುವ ಸೇವೆಯ ಬಗ್ಗೆ ಇದುವರೆಗೆ ಪಾಠ ಕಲಿಯದ ರಾಷ್ಟ್ರೀಕೃತ ಬ್ಯಾಂಕ್‌ಗಳು ಮಧ್ಯಮ ಹಾಗೂ ಕೆಳ ವರ್ಗದ ಗ್ರಾಹಕರು ಮೂರನೇ ದರ್ಜೆಯ ಜನ ಎಂಬ ಮನೋಭಾವವನ್ನು ಕೈ ಬಿಡದಿದ್ದರೆ. ಬಹುಶಃ ಮುಂದಿನ ದಿನಗಳಲ್ಲಿ ಈ ವರ್ಗದ ಜನರೇ ಆ ಬ್ಯಾಂಕಗಳಿಗೆ ಬಹುದೊಡ್ಡ ಪಾಠ ಕಲಿಸುತ್ತಾರೆ ಎಂಬುದರಲ್ಲಿ ಯಾವುದೇ ಅತಿಶೋಯೋಕ್ತಿ ಇಲ್ಲ.
ಏಕೆಂದರೆ ಈ ದೇಶದ ಅರ್ಥಿಕ ವ್ಯವಸ್ಥೆಯ ದೊಡ್ಡ ಅಂಗವಾದ ಈ ವರ್ಗಗಳಿಗೆ ಇನ್ನೂ ಬ್ಯಾಂಕ್ ವ್ಯವಸ್ಥೆ ಎನ್ನುವುದು ಅರ್ಥವಾಗದ ಗಣಿತವಾಗಿಯೇ ಉಳಿದಿದೆ. ಅಂತಹದ್ದರಲ್ಲಿಯೇ ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿ ವರ್ತನೆ ಮಾಡುವ ಬದಲು ಬ್ಯಾಂಕ್‌ಗೆ ಬರುವ ಗ್ರಾಹಕ ಹಾಕಿರುವ ಉಡುಪನ್ನು ನೋಡಿ ಸೌಜನ್ಯ ತೋರಿಸಬೇಕೋ ಬೇಡವೋ ಎಂಬ ಮನೋಭಾವ ಖಂಡಿತವಾಗಿ ಬದಲಾಗಬೇಕಾಗಿದೆ. ಬದಲಾಗದಿದ್ದರೆ ಜನರೇ ಅದನ್ನು ಬದಲಾಯಿಸುತ್ತಾರೆ !.
೨೦೦೯ ರಲ್ಲಿ ಬ್ಯಾಂಕ್‌ಗಳ ಗ್ರಾಹಕ ಸೇವೆ ಹೇಗಿರಬೇಕು ಎಂದು ಏಷ್ಯಾ-ಫೆಸಿಫಿಕ್ ಜರನಲ್ ಫಾರ್ ಸೋಷಿಯಲ್ ಸೈನ್ಸ್ ಅರ್ಥಶಾಸ್ತ್ರಜ್ಞ ಆರ್.ಕೆ.ಉಪ್ಪಲ್ ಅವರ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ಗಳು ಗ್ರಾಹಕರಿಗೆ ಸಂತೃಪ್ತಿ ಸೇವೆ ನೀಡುವುದರಲ್ಲಿ ಸಾಕಷ್ಟು ಹಿಂದುಳಿದಿವೆ ಎಂಬ ಅಂಶ ಗೋಚರವಾಯಿತು. ಈ ಬ್ಯಾಂಕ್‌ಗಳ ಸಿಬ್ಬಂದಿಯ ವರ್ತನೆ ಮತ್ತು ಧೋರಣೆಯಿಂದಾಗಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಣೆ ಮಾಡಲು ಸಾಕಷ್ಟು ತೊಡಕು ಉಂಟಾಗಿದೆ ಎಂಬುದು ತಿಳಿದು ಬಂತು. ಆಶ್ಚರ್ಯವೆಂದರೆ ಭಾರತೀಯ ಖಾಸಗಿ ಬ್ಯಾಂಕ್‌ಗಳು ತನ್ನ ಅಂಗಳಕ್ಕೆ ಕಾಲಿಡುವ ಪ್ರತಿಯೊಬ್ಬ ಗ್ರಾಹಕನೂ ತಮ್ಮ ಸೇವೆಗೆ ಅರ್ಹ ಮತ್ತು ಆತನಿಗೆ ಉತ್ತಮ ಸೇವೆ ನೀಡುವುದು ತಮ್ಮ ಆದ್ಯ ಕರ್ತವ್ಯಗಳಲ್ಲಿ ಮೊದಲನೆಯದು ಎಂಬ ನೀತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಅಂಶ ಪತ್ತೆಯಾಯಿತು.
ಈ ಹಿನ್ನಲೆಯಲ್ಲಿ ಆರ್.ಕೆ.ಉಪ್ಪಲ್ ಅವರು ಸಮೀಕ್ಷೆಯಲ್ಲಿ ಕಂಡು ಬಂದ ಅಂಶಗಳ ಆಧಾರವಾಗಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳು ಬದಲಾಗುತ್ತಿರುವ ಕಾಲಮಾನಕ್ಕೆ ಹೇಗೆ ಗ್ರಾಹಕರೊಂದಿಗೆ ವರ್ತನೆ ಮಾಡಬೇಕು ಎಂಬ ವರದಿಯೊಂದನ್ನು ನೀಡಿದರು. ಆದರೆ, ಅವರು ವರದಿಯಲ್ಲಿ ಕಾಣಿಸಿದ ಸುಧಾರಣೆಯ ಒಂದಂಶವನ್ನು ಈ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಳವಡಿಸಿಕೊಂಡಂತೆ ಕಾಣುತ್ತಿಲ್ಲ. ಕಾರಣ ದೇಶದಲ್ಲಿ ೫ ಲಕ್ಷ ಗ್ರಾಮಗಳಲ್ಲಿ ಬ್ಯಾಂಕ್ ವ್ಯವಸ್ಥೆ ತಲುಪಲು ಸಾಧ್ಯವಾಗಿರವುದು ಶೇ.೪೧ ರಷ್ಟು ಮಾತ್ರ. ಅಂದರೆ ಇನ್ನೂ ಶೇ.೫೯ ಗ್ರಾಮಗಳಲ್ಲಿ ಅದು ಲಭ್ಯವಿಲ್ಲ.
ಗ್ರಾಮೀಣ ಪ್ರದೇಶಕ್ಕೆ ತಲುಪುವುದು ಸಾಧ್ಯವಾಗುತ್ತಿಲ್ಲ ಎಂಬುದು ಒತ್ತಟ್ಟಿಗಿರಲಿ, ನಗರ ಪ್ರದೇಶದಲ್ಲಿರುವ ಎಷ್ಟೋ ಮಧ್ಯಮ ಹಾಗೂ ಕೆಳ ವರ್ಗದ ಜನರು ಇದುವರೆಗೆ ಬ್ಯಾಂಕ್ ವ್ಯವಸ್ಥೆಗೆ ಸೇರ್ಪಡೆಯಾಗದೆ ಉಳಿದಿದ್ದಾರೆ. ಕಾರಣ ಬ್ಯಾಂಕ್ ಸಿಬ್ಬಂದಿಗಳು ಅಂತಹ ಜನರೊಂದಿಗೆ ವರ್ತಿಸುವ ರೀತಿ. ಬ್ಯಾಂಕ್‌ಗೆ ಹೊಸದಾಗಿ ಗ್ರಾಹಕನಾಗಲು ಬರುವ ವ್ಯಕ್ತಿಗೆ ಆ ವ್ಯವಸ್ಥೆಯ ಅಂಶಗಳನ್ನು ತಿಳಿ ಹೇಳುವ ಯಾವ ಸೌಜನ್ಯವನ್ನು ನಮ್ಮ ರಾಷ್ಟ್ರೀಕೃತ ಬ್ಯಾಂಕಗಳು ಹೊಂದಿಲ್ಲ. ಗ್ರಾಹಕನೊಬ್ಬ ಹೊಸದಾಗಿ ತನ್ನ ಅಕೌಂಟ್ ತೆರೆಯಲು ಬ್ಯಾಂಕ್‌ಗೆ ಹೋದರೆ, ಆತ ಸುಸ್ತಿದಾರನೋ ಎಂಬಂತೆ ಅಸಡ್ಡೆಯಿಂದ ಉತ್ತರ ನೀಡಲಾರಂಭಿಸುತ್ತಾರೆ. ನೀವೆಲ್ಲಾ ಪಾಮರರು ನಿಮಗೆಲ್ಲಿ ಅರ್ಥವಾದೀತು ಈ ವ್ಯವಸ್ಥೆ ಎಂಬ ಮನಸ್ಥಿತಿಯಲ್ಲಿ ಅವರೊಂದಿಗೆ ವ್ಯವಹರಿಸುತ್ತಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ನಿಮ್ಮಿಂದ ಈ ಬ್ಯಾಂಕ್‌ನಲ್ಲಿ ಸುಸ್ಥಿರ ವಹಿವಾಟು ನಡೆಸಲು ಸಾಧ್ಯವಿಲ್ಲ ಬಿಡಿ. ನಿಮ್ಮ ಆದಾಯದಲ್ಲಿ ಉಳಿಸುವುದುಂಟೆ ಎಂಬರ್ಥದ ವ್ಯಂಗ್ಯ ಮಿಶ್ರಿತ ಮಾತುಗಳನ್ನು ಆಡುತ್ತಾರೆ.
ಅಂದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯಕ್ತಿ ಗೌರವಕ್ಕೆ ಬೆಲೆಯಿಲ್ಲ. ಏಕೆಂದರೆ ನಿತ್ಯವೂ ಹಣವೆಂಬ ಮಾಯಾ ಲೋಕದಲ್ಲಿಯೇ ಅವರು ಮುಳುಗೇಳುವುದರಿಂದ ಅವರು ಮಧ್ಯಮ ಹಾಗೂ ಕೆಳ ವರ್ಗದ ಜನರನ್ನು ಬ್ಯಾಂಕ್ ವ್ಯವಸ್ಥೆಯ ಬಗ್ಗೆ ತಿಳಿಯದ ಅನಕ್ಷರಸ್ಥರು ಎಂದೇ ಭಾವಿಸಿ ಬಿಡುತ್ತಾರೆ. ಇದು ಒಂದು ವಿಚಿತ್ರವೇ ಸರಿ. ನಮ್ಮ ಹಣವನ್ನು ಆ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯಲ್ಲಿಟ್ಟು ಅದನ್ನು ಹಿಂಪಡೆಯಲು ಅವರ ಬಳಿ ದಮಯ್ಯ ಎನ್ನುವ ಪರಿಸ್ಥಿತಿ. ಅಂದರೆ ಗ್ರಾಹಕನೊಬ್ಬ ತನ್ನ ಉಳಿತಾಯ ಖಾತೆಯಲ್ಲಿರುವ ಹಣ ಪಡೆಯಲು ಸಿಬ್ಬಂದಿ ಮೂಗಿನ ನೇರಕ್ಕೆ ಆಡುವ ಮಾತುಗಳನ್ನು ಕೇಳಿಕೊಂಡು ಸಹಿಸಿಕೊಳ್ಳಬೇಕು. ಇದು ಯಾವ ಸಾಮಾಜಿಕ ನ್ಯಾಯ. ಗ್ರಾಹಕರು ಬ್ಯಾಂಕ್ ಆಸ್ತಿ ಎಂಬುದನ್ನು ಮರೆತಂತೆ ಧಿಮಾಕಿನಿಂದಲೇ ವರ್ತನೆ ಮಾಡುವ ಸಿಬ್ಬಂದಿಗೆ ತಾವೂ ಆ ವರ್ಗದ ಜನರ ಮಧ್ಯದಲ್ಲಿಯೇ ಬದುಕುತ್ತಿದ್ದೇವೆ ಎಂಬುದನ್ನು ಏಕೆ ಮರೆತು ಬಿಡುತ್ತಾರೆ?
ಎಲ್ಲದಕ್ಕಿಂತ ಒಂದಿಷ್ಟು ಅಕ್ಷರಸ್ಥರು ಈ ಲೇಖನದ ಆಶಯವನ್ನು ಬೇರೆ ದೃಷ್ಟಿಕೋನದಿಂದಲೇ ನೋಡುತ್ತಾರೆ. ಏಕೆಂದರೆ ಮಧ್ಯಮ ವರ್ಗದ ಕೆಲವರು ಸುರಕ್ಷಿತ ವಲಯದಲ್ಲಿ ಬದುಕುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಅದರಲ್ಲಿ ಜಾಗತೀಕರಣದ ಅನಂತರ ಆರಂಭವಾದ ಮಾಹಿತಿ ತಂತ್ರಜ್ಞಾನದ ಫಲಾನುಭವಿಗಳು. ಅವರೆಲ್ಲಾ ಬ್ಯಾಂಕ್ ವ್ಯವಸ್ಥೆಯ ಆಚೆ ಹಣಕಾಸು ವಹಿವಾಟು ನೋಡಲು ಸಾಧ್ಯವಿಲ್ಲ. ಅಲ್ಲದೆ, ಅವರು ಕೆಲಸ ಮಾಡುವ ಸಂಸ್ಥೆಗಳು ಬ್ಯಾಂಕ್‌ಗಳ ನೆರವಿನ ಅಡಿಯಲ್ಲಿಯೇ ಇರುತ್ತದೆ. ಇವರೆಲ್ಲಾ ಬ್ಯಾಂಕ್ ವ್ಯವಸ್ಥೆ ಎಷ್ಟೆಲ್ಲಾ ಸುಧಾರಣೆಯಾಗಿದೆ ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ೨೦೧೧ ರಲ್ಲೂ ಭಾರತದಲ್ಲಿ ನಗರದ ಪ್ರದೇಶದ ಶೇ ೨೨ ರಷ್ಟು ಕೊಳಚೆ ನಿವಾಸಿಗಳು ಬ್ಯಾಂಕ್ ಮೆಟ್ಟಿಲು ಹತ್ತಿಲ್ಲ ಎಂಬ ಸ್ವಯಂ ಸೇವಾ ಸಂಸ್ಥೆಯೊಂದರ ಸಮೀಕ್ಷೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ಅಘಾತ ತರುವ ಸಂಗತಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ವೇಳೆ ಅವರು ಬ್ಯಾಂಕ್ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಜನರ ಬಳಿ ತೆರಳಿ ಕೆಲಸ ಮಾಡುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡುತ್ತಿದ್ದರು. ಸರಕಾರದ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೆ ತರುವಲ್ಲಿ ಬ್ಯಾಂಕ್ ಸಹಕಾರವೂ ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಒಮ್ಮೆಯೂ ಬ್ಯಾಂಕ್‌ಗಳು ಅಂತ ವಿಶಾಲ ಮನೋಸ್ಥಿತಿಯಿಂದ ವರ್ತನೆ ಮಾಡಲಿಲ್ಲ. ಅಷ್ಟೇ ಏಕೆ, ಪಿ.ಸಾಯಿನಾಥ್ ಅವರು ವಿದರ್ಭ ರೈತರ ಆತ್ಮಹತ್ಯೆ ಕುರಿತು ಸರಣಿ ಲೇಖನದಲ್ಲಿ ಪ್ರಸ್ತಾಪ ಮಾಡಿದಂತೆ ಬ್ಯಾಂಕ್ ಸಿಬ್ಬಂದಿಗಳ ವರ್ತನೆ ರೈತರ ಮೇಲೆ ಹೆಚ್ಚು ಮಾನಸಿಕ ಪರಿಣಾಮ ಉಂಟು ಮಾಡಿತು ಎಂಬ ಅಂಶವನ್ನು ನಾವು ಮರೆಯುವಂತಿಲ್ಲ.
೨೦೦೩ ರಲ್ಲಿ ಓವರ್‌ಸೀಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಗುಪ್ತ ಅವರ ನೇತ್ವತ್ವೃದಲ್ಲಿ ನೇಮಕವಾಗಿದ್ದ ಸಮಿತಿ ೨೦೨೦ರ ವೇಳೆಗೆ ಬ್ಯಾಂಕ್ ವ್ಯವಸ್ಥೆಯ ಮುನ್ನೋಟ ಎಂಬ ವರದಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಅವರು ಪ್ರಮುಖವಾಗಿ ಪ್ರಸ್ತಾಪ ಮಾಡಿರುವ ಅಂಶ. ಭಾರತದಂತಹ ಹಳ್ಳಿಗಳ ದೇಶದಲ್ಲಿ ಜನರನ್ನು ಬ್ಯಾಂಕ್ ವ್ಯವಸ್ಥೆಯೊಳಗೆ ತರಲು ಗ್ರಾಹಕ ಸ್ನೇಹಿ ಮಂತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬುದು.
ಇಷ್ಟೇಲ್ಲಾ ಯಾಕೆ, ಚಿತ್ರದುರ್ಗ ಜಿಲ್ಲೆಯ ಅನೇಕ ಹೋಬಳಿ ಕೇಂದ್ರದಲ್ಲಿ ಇರುವುದು ಒಂದೇ ಬ್ಯಾಂಕ್ ಶಾಖೆ. ಅಲ್ಲಿರುವ ಎಟಿಎಂ ಕೇಂದ್ರ ಯಾವಾಗಲೂ ರಿಪೇರಿಯಲ್ಲಿರುತ್ತದೆ. ಹಾಗಾದರೆ, ಗ್ರಾಮೀಣ ಜನರು ಇಂತಹ ಸೇವೆಯಿಂದ ವಂಚಿತರಾಗಬೇಕಾ? ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ ಎಂಬುದು ಬ್ಯಾಂಕ್ ಆಡಳಿತಕ್ಕೂ ಗೊತ್ತಿದೆ. ಅದಕ್ಕಾಗಿ ಕಾಟಾಚಾರದ ವ್ಯವಸ್ಥೆಯನ್ನು ಕಡ್ಡಾಯ ಮಾಡುವ ಪ್ರಯತ್ನ ಮಾಡುತ್ತಲೇ ಇವೆ. ಉತ್ತರ ಕರ್ನಾಟಕದ ಬಹುತೇಕ ಹೋಬಳಿ ಕೇಂದ್ರದಲ್ಲಿ ಎಟಿಎಂ ವ್ಯವಸ್ಥೆಯೂ ಇಲ್ಲ ಎಂಬುದು ೨೧ ನೇ ಶತಮಾನದ ಆಚ್ಚರಿಯೂ ಹೌದು. ನಗರ ಪ್ರದೇಶದಲ್ಲೂ ಕೆಳವರ್ಗದವರಿಗೆ ತಲುಪದ ಬ್ಯಾಂಕ್, ಕೊನೆ ಪಕ್ಷ ಭಾರತದ ನಾಡಿಯಾದ ಗ್ರಾಮೀಣ ಭಾರತದಲ್ಲೂ ತನ್ನ ಸೇವೆಯನ್ನು ಸಮರ್ಥವಾಗಿ ನೀಡಲು ಮುಂದಾಗುವುದಿಲ್ಲ ಎನ್ನುವುದು ಬೇಸರದ ಸಂಗತಿ.
ಸರಕಾರದ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವ ವಿಚಾರದಲ್ಲಂತೂ ಬ್ಯಾಂಕ್‌ಗಳು ಅನುಸರಿಸುವ ಕ್ರಮಗಳು ಎಂತಹವರಿಗೆ ರೊಚ್ಚು ತರಿಸುತ್ತವೆ. ಹಾಗೆಂದು ಬ್ಯಾಂಕ್‌ಗಳು ತಮ್ಮ ನೀತಿನಿಯಮ ಹೊರತುಪಡಿಸಿ ಸಾಲ ನೀಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀತಿ ನಿಯಮದ ನಡುವೆಯೆಯೂ ಸರಕಾರದ ಯೋಜನೆ ಒಬ್ಬ ನಿಜವಾದ ಫಲಾನುಭವಿಗೆ ತಲುಪಬೇಕು ಎಂಬ ಆಶಯ ಇರಬೇಕಾಗುತ್ತದೆ. ಜತೆಗೆ ಅಂತಹ ಫಲಾನುಭವಿಯನ್ನು ಬ್ಯಾಂಕ್ ವ್ಯವಸ್ಥೆಯ ಅನುಸರಣೆಗೆ ಒಳಪಡಿಸುವಂತಹ ಜಾಗೃತಿ ಮೂಡಿಸುವುದು ಆ ಸಿಬ್ಬಂದಿಯ ಕರ್ತವ್ಯವಾಗಿರುತ್ತದೆ. ಹಾಗೆಯೇ ಜನರಲ್ಲಿ ಅರ್ಥಿಕ ಉಳಿತಾಯ ಮತ್ತು ಸಾಲ ಸೌಲಭ್ಯದ ಬಳಕೆಯ ಕುರಿತು ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ. ಆದರೆ, ಅದಾವುದನ್ನೂ ಮಾಡದ ಬ್ಯಾಂಕ್ ಆಡಳಿತ ಸಮಾಜದ ಇತರ ಕ್ಷೇತ್ರಗಳಿಂದ ದೂರವೇ ಉಳಿದು ಅರ್ಥ ವ್ಯವಸ್ಥೆಯೆಂಬುದು ಭಾರತದ ರಕ್ಷಣಾ ವ್ಯವಸ್ಥೆಗಿಂತಲೂ ಕಠಿಣ ಎಂಬಂತೆ ವರ್ತನೆ ಮಾಡುವುದು ಎಷ್ಟು ಸರಿ?
ಇದರ ನಡುವೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಈ ಮಡಿವಂತಿಕೆಯನ್ನು ಸಮರ್ಥವಾಗಿ ಸದುಪಯೋಗ ಮಾಡಿಕೊಂಡು ಸೌಜನ್ಯದಿಂದ ವರ್ತನೆ ಮಾಡುವ ಮುಖವಾಡ ಹಾಕಿಕೊಂಡು ಬಂದ ಭಾರತದ ಖಾಸಗಿ ಬ್ಯಾಂಕ್‌ಗಳು ಬಲಿತ ಮೇಲೆ ಬಲವಂತವಾಗಿ ತನ್ನ ಗ್ರಾಹಕರ ಮೇಲೆ ಗದಾಪ್ರಹಾರ ಆರಂಭ ಮಾಡಿದವು. ಆರಂಭದಲ್ಲಿ ಗ್ರಾಹಕ ದೇವರು ಎಂದೆಳೇತ್ತಾ ಅವನ ಜೇಬಿಗೆ ಸದಾ ಕತ್ತರಿ ಪ್ರಯೋಗದಲ್ಲಿ ನಿರತವಾಗಿರುವ ಈ ಬ್ಯಾಂಕ್‌ಗಳ ಉದ್ಯಮಿ ಮನಸ್ಥಿತಿ ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಕಂಗೆಡಿಸಿದೆ. ಇದಕ್ಕೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್ ವರ್ತನೆ ಹಾಗೂ ಸರಕಾರದ ಆಲೋಚನೆಗಳೇ ನೇರ ಕಾರಣ.
ಭಾರತೀಯ ರಿಸರ್ವ್ ಬ್ಯಾಂಕ್ ಗರ್ವನರ್ ಡಾ.ಡಿ.ಸುಬ್ಬರಾವ್ ಮೊನ್ನೆ ಹೇಳಿದ ಮಾತು ಇಲ್ಲಿ ಪ್ರಸ್ತಾಪಿಸಬೇಕು. “ಬ್ಯಾಂಕಿಂಗ್ ಕ್ಷೇತ್ರ ತನ್ನೆಲ್ಲಾ ಜಡತ್ವಗಳನ್ನು ಕಳಚಿಕೊಂಡು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ತನ್ನ ಸೇವೆಯನ್ನು ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಈಗ ಇದೆ. ಇಲ್ಲದಿದ್ದರೆ, ನಮ್ಮ ನಡುವೆ ಇರುವ ಸಾಮಾಜಿಕ ಅರ್ಥ ವ್ಯವಸ್ಥೆ ಕುಸಿದು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅವರು ಹೇಳಿರುವುದರ ಹಿಂದೆ ಅನೇಕ ಅರ್ಥಗಳಿವೆ.
ದೇಶದಲ್ಲಿ ಶೇ.೭೨ ರಷ್ಟು ಅರ್ಥಿಕ ವಹಿವಾಟು ನಡೆಸುವ ಕೃಷಿ ಸಂಬಂಧಿತ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದರ ಭಾಗವಾಗಿ ಉಳಿದಿರುವ ಜನರ ನಡುವೆ ರಾಷ್ಟ್ರೀಕೃತ ಬ್ಯಾಂಕ್ ಬೆಳೆಯಬೇಕಾಗಿದೆ. ಇದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಲೋಚನೆಯೂ ಆಗಿತ್ತು. ಆದ್ದರಿಂದಲೇ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲು ಮುಂದಾಗಿದ್ದು.
ಬ್ಯಾಂಕ್‌ನಲ್ಲಿ ತನ್ನ ಉಳಿತಾಯ ಖಾತೆಯನ್ನು ತೆರೆಯಲು ಬರುವ ಗ್ರಾಹಕನಿಗೆ ನಾವು ಸದಾ ಸಹಾಯ ನೀಡುವ ಮನಸ್ಥಿತಿಯಲ್ಲಿರಬೇಕು ಎಂಬ ಆಲೊಚನೆ ಬ್ಯಾಂಕ್ ಸಿಬ್ಬಂದಿಗೆ ಎಲ್ಲಿಯವರೆಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಈ ಬ್ಯಾಂಕ್‌ಗಳು ಸಮಾಜದ ಶೇ ೫೯ ರಷ್ಟು ಮಧ್ಯಮ ಹಾಗೂ ಕೆಳ ವರ್ಗದ ಮಂದಿಗೆ ಅರ್ಥವಾಗದ ವ್ಯವಸ್ಥೆಗಳಾಗಿಯೇ ಉಳಿದು ಬಿಡುತ್ತವೆ.

Saturday, November 5, 2011

ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ

ಅದು ೧೯೯೪-೯೫ ರ ಸಮಯ ಪಿಯುಸಿ ಓದುತ್ತಿದ್ದ ದಿನಗಳು. ರಸ್ತೆಯೂ ಇಲ್ಲದ ಕುಗ್ರಾಮವಾಗಿದ್ದ ನನ್ನೂರಿನಲ್ಲಿ ಕೃಷಿಯ ಬೆನ್ನೆಲಬು ಮುರಿದು ಬಡತನ ಹೊದ್ದು ಮಲಗಿತ್ತು. ಗುಡಿಸಲಿನಂತಹ ಮನೆಗಳು, ಗಾರೆ ಕಾಣದ ನೆಲಗಳು, ಗುಂಡಿಯಲ್ಲಿನ ರಸ್ತೆಗಳು, ದೀಪವಿಲ್ಲದ ರಾತ್ರಿಗಳು.. ಇವೆಲ್ಲವೂ ಸಾಮಾನ್ಯ ಎನ್ನುವಂತೆಯೇ ಇತ್ತು. ಆಗ ಊರಿನಲ್ಲಿ ೩೦೦ ಮನೆಗಳಿಗೆ ೭ ಮಂದಿ ಪದವೀಧರರು, ೧ ಸ್ನಾತಕೋತ್ತರ ಪದವೀಧರ, ಒಬ್ಬ ವೈದ್ಯ ಶಿಕ್ಷಣ ಪಡೆದಿದ್ದಾರೆ ಎಂಬುದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚುಗಾರಿಕೆಯಾಗಿ ಎದೆಯುಬ್ಬಿಸಿ ನಡೆಯುತ್ತಿದ್ದ ಕಾಲ. ಅದು ಒಂಥಾರ ‘ಸಾಲ’ದ ದಿನಗಳು. ಹಾಸಿಗೆ ಇದ್ದಷ್ಟೂ ಕಾಲು ಚಾಚು ಎಂಬ ಗಾದೆ ಮಾತಿಗೂ ನಿಲುಕದಷ್ಟು ಅರ್ಥಿಕ ಬಡತನ ಕಿತ್ತು ತಿನ್ನುತ್ತಿತ್ತು. ನನ್ನೂರಿನಲ್ಲಿ ಹತ್ತಿ ಮತ್ತು ಮೆಕ್ಕೆಜೋಳವೇ ಪ್ರಮುಖ ಬೆಳೆ. ಒಂದು ವರ್ಷ ಹತ್ತಿಗೆ ಬಂಪರ್ ಬಹುಮಾನದಂತೆ ಬೆಲೆ ಬಂದರೆ, ಮರುವರ್ಷ, ಅದು ಮಕಾಡೆ ಮಲಗಿ ಕಣ್ಬಿಟ್ಟ ದೇವರು ಕಿತ್ತುಕೊಂಡ ಎನ್ನುವ ಸ್ಥಿತಿ. ಇನ್ನು ಹತ್ತಿ ಸಹವಾಸವೇ ಬೇಡ ಎಂದು ಮೆಕ್ಕೆಜೋಳಕ್ಕೆ ಮೊರೆಹೋದವರೆಲ್ಲಾ, ಅದಕ್ಕೆ ಗೊಬ್ಬರ ಹಾಕಿಯೇ ಸುಸ್ತಾಗಿ ಬಂದಷ್ಟು ಬೆಲೆಗೆ ಕೊಟ್ಟು ಗೊಬ್ಬರದ ಸಾಲ ತೀರಿಸಲಾಗದೆ, ಬೆಳೆ ಕೊಂಡ ದಲ್ಲಾಳಿ ಬಳಿಯೇ ನೂರಿನ್ನೂರು ಸಾಲ ಪಡೆದು ಊರಿಗೆ ಹೆಜ್ಜೆ ಹಾಕುವಾಗಲೆಲ್ಲಾ ನಮ್ಮ ಹಣೆಬರಹವನ್ನು ಆ ದೇವರು ಹೀಗೆ ಎಂದು ಬರೆದಾಗ ತಪ್ಪಿಸಲು ನಾವ್ಯಾರೂ ಎಂದು ವೇದಾಂತಿಗಳಂತೆ ಮಾತನಾಡುತ್ತಾ ಎದೆಭಾರವನ್ನು ಕಾಲಿಗೆ ಇಳಿಸಿ ಮುಗ್ಗುಮ್ಮಾಗಿ ಬಿಡುತ್ತಿದ್ದರು. ಆ ದಿನಗಳಲ್ಲಿ ಫೋನ್, ಟಿ.ವಿ ಎನ್ನುವುದು ಒಂದಿಬ್ಬರ ಮನೆಯಲ್ಲಿ ಇದ್ದರೆ ಹೆಚ್ಚು. ಅವರೆಲ್ಲಾ ೨೫ ಎಕರೆ ಜಮೀನು ಹೊಂದಿ, ಒಂದಿಷ್ಟು ಕೊಳವೆ ಬಾವಿ ಹಾಕಿಸಿ ನೀರು ಕಂಡವರು. ತರಕಾರಿ ಬೆಳೆದು ದಿನವೂ ಹಣ ನೋಡುತ್ತಿದ್ದವರು. ಹಾಗಾಗಿ ಊರಿನಲ್ಲಿ ಅವರ ಮಾತುಗಳಿಗೆ ಒಂದಷ್ಟು ’ತೂಕ’ ಮತ್ತು ಪ್ರತಿಷ್ಠೆಯ ’ಅಳತೆ’ ಸಿಕ್ಕಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಊರಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ-೪ ಯಲ್ಲಿ ಹಾದು ಹೋಗುವ ವಾಹನಗಳ ವೇಗಕ್ಕೂ ಊರು ಬೆಳೆಯಲಿಲ್ಲ. ಸದ್ದು ಕೇಳದಂತೆ ರಾತ್ರಿ ಎಣ್ಣೆ ದೀಪದಲ್ಲಿ ಜನ ಕರಗಿ ಹೋಗುತ್ತಿದ್ದರು ಎಂಬುದಷ್ಟೇ ನೆನಪು.
೧೦ ವರ್ಷ ಕಳೆದಿರಬೇಕು.
೨೦೦೬ರ ಹೊತ್ತಿಗೆ ಎರಡು ಪಥ ಇದ್ದ ರಾಷ್ಟ್ರೀಯ ಹೆದ್ದಾರಿ ನೀರು ಹಾದಿ ಬಿಟ್ಟ ಹಾಗೆ ನಾಲ್ಕು ಪಥವಾಗಿ ಬದಲಾವಣೆಯಾಯಿತು. ಅದು ಊರಿನ ದಿಕ್ಕು ಬದಲಾಯಿಸಿತೋ ಅಥವಾ ಜನರ ಹಣೆಬರಹ ಬದಲಾಯಿತೋ ಊರು ನಿಧಾನವಾಗಿ ಬೆಳೆಯಲಾರಂಭಿಸಿತು. ೩೦೦ ಇದ್ದ ಮನೆಗಳು ೫೦೦ ಆದವು, ಅವಿಭಕ್ತ ಕುಟುಂಬಗಳೆಲ್ಲವೂ ವಿಭಕ್ತ ಕುಟುಂಬಳಾಗಿ ಒಡೆದು ಚೂರಾದವೂ, ದೊಡ್ಡ ಮನೆ ಎಂದು ಕಂಬಗಳನ್ನು ನೋಡಿ ಮೂಗಿಗೆ ಬೆರಳುಡುತ್ತಿದ್ದ ಮನೆಯ ನಡುವೆ ಗೋಡೆಗಳೆದ್ದವು..ಹೀಗೆ, ಯಾವ ಊರಿನಲ್ಲಿ ಮೆಕ್ಕೆ ಜೋಳ ಬೆಳೆದು ಸಾಲ ಮಾಡಿ ಮನೆಗೆ ಬರುತ್ತಿದ್ದ ಜನ ಅದಕ್ಕೆ ಪರ್ಯಾಯಾವಾಗಿ ಮುಂದೇನು ಎಂಬ ಹುಡುಕಾಟ ಆರಂಭಿಸಿದರು. ಯಾವ ಕೆಲಸ ನಾವು ಮಾಡಬಾರದು ಎಂದು ಪ್ರತಿಷ್ಠೆ ಮಾಡುತ್ತಾ ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮಾತಿಗೆ ಜೋತು ಬಿದ್ದು ಊರ ಮುಂದಿನ ಕಟ್ಟೆಯಲ್ಲಿಯೇ ಕಾಲ ಕಳೆದು ಎಲ್ಲದಕ್ಕೂ ‘ಸಾಲ’ದವರು ಎಂದು ಕರೆಸಿಕೊಳ್ಳುತ್ತಿದ್ದವರೆಲ್ಲಾ ನಿಧಾನವಾಗಿ ಯಾವ ಕೆಲಸವಾದರೇನು, ದುಡ್ಡು ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದರು...
ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧.
ಊರಲ್ಲಿ ಮನೆಗೊಬ್ಬರು ಪದವೀಧರರು, ಅದರಲ್ಲೂ ಬಹುತೇಕ ಮಂದಿ ನಗರವಾಸಿಗಳು, ಊರನ್ನು ಬಿಟ್ಟು ವರ್ಷಗಳೇ ಕಳೆಯುತ್ತಾ ಬಂದಿದೆ. ಊರಿನ ರಸ್ತೆ ಟಾರು ಕಂಡಿದೆ..ಶಾಲೆಗೆ ಬಣ್ಣ ಬಂದಿದೆ..ಮನೆಮನೆಯ ನೆತ್ತಿಯಲ್ಲಿ ಡಿಶ್ ಆಕಾಶ ನೋಡುತ್ತಾ ಸಿಕ್ಕರೆ ಬಿಟ್ಟಾನೇ ಎಂಬಂತೆ ಗಾಳಿಯಲ್ಲಿ ಹರಿದಾಡುವ ಸಿಗ್ನಲ್‌ಗಳನ್ನು ಹೆಕ್ಕುತ್ತಾ ಮೂರ್ಖರ ಪೆಟ್ಟಿಗೆಗೆ ಬಣ್ಣಬಣ್ಣದ ಕನಸು ರವಾನೆ ಮಾಡುತ್ತಿದೆ. ರಾತ್ರಿ ಏಳಕ್ಕೆ ಊರಿಗೆ ಊರೆ ಸದ್ದಡಗಿ ಸದ್ದಿಲ್ಲದಂತಾಗುತ್ತಿದ್ದ ದಿನಗಳು ಮರೆತೆ ಹೋಯಿತೇನೋ ಎಂಬಂತೆ ಧಾರವಾಹಿಗಳ ಕಣ್ಣೀರಿನ ಕಥೆಗಳನ್ನು ಬಿಟ್ಟ ಕಣ್ಣ ಬಿಟ್ಟಂತೆ ನೋಡುತ್ತಾ ಹತ್ತಾಯಿತೋ, ಹನ್ನೊಂದೋ ಎಂಬಂತೆ ಜನರು ದಿಂಬಿಗೆ ತಲೆಕೊಟ್ಟು ಗಂಭೀರವಧನರಾಗಿಯೇ ಇರುತ್ತಾರೆ...
ಇದಿಷ್ಟು ವಿವರವನ್ನು ಇಲ್ಯಾಕೆ ಹೇಳಬೇಕಾಯಿತು ಎಂದರೆ ಚಿತ್ರದುರ್ಗದಂತಹ ಬರದ ನಾಡಿನಲ್ಲಿ ನೀರಿಗೆ ಎಂತಹ ತತ್ವಾರ ಎಂದು ಅಲ್ಲಿಯೇ ಹುಟ್ಟಿ ಬೆಳೆದವರಿಗೆಲ್ಲರಿಗೂ ಗೊತ್ತು. ಕಲ್ಲು ಗುದ್ದಿ ನೀರು ತೆಗೆಯಬೇಕಾದ ಜಿಲ್ಲೆಯ ಗ್ರಾಮವೊಂದು ಜಾಗತೀಕರಣದ ಬೇರುಗಳಿಗೆ ನೆಲವಾಗುತ್ತಾ.. ಅದು ಸತ್ಯ ಎಂದು ಒಪ್ಪಿಕೊಳ್ಳುತ್ತಾ. ದಿನವೂ ಸತ್ತು ಹುಟ್ಟುವ ಕನಸುಗಳನ್ನೇ ಅಬ್ಬಾ ಎಂದು ಚಪ್ಪರಿಸುವ ಈಗಿನ ವಾಸ್ತವಕ್ಕೂ ಅಂದಿನ ನಡುವೆ ಎಷ್ಟು ವ್ಯತ್ಯಾಸಗಳಿವೆ ಎಂಬ ಜಿಜ್ಞಾಸೆ.
ಹೌದು ಕೇವಲ ಐದಾರು ವರ್ಷಗಳದಲ್ಲಿ ಇಷ್ಟು ಬದಲಾವಣೆಯಾಗಲು ಕಾರಣ ಎಂಬುದನ್ನು ಹುಡುಕಲು ಅದು ನಿಗೂಢವೂ ಅಲ್ಲ, ಚಿಂತನೆಯ ವಿಚಾರವೂ ಅಲ್ಲ. ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಒಂದಿಷ್ಟು ಅರಿವು ಮತ್ತು ಬದುಕುವ ಅನಿವಾರ್ಯತೆಗಳ ಜಾಗವನ್ನು ಸೃಷ್ಟಿ ಮಾಡಿರುವುದಂತೂ ಸತ್ಯ.
ಯಾವ ಜನ ಮೆಕ್ಕಜೋಳ ಬೆಳೆದು ಸಾಲ ಮಾಡಿ ಹೈರಾಣವಸ್ಥೆಯಲ್ಲಿ ಇರುತ್ತಿದ್ದರೋ ಅವರೆಲ್ಲಾ ಈಗ ಮೆಕ್ಕೆಜೋಳ ಬಿಟ್ಟು ಅಡಕೆ ಬೆಳೆಯಲು ಮುಂದಾಗಿದ್ದಾರೆ. ನೀರಿಗೆ ಪರದಾಡುತ್ತಿದ್ದ ಒಣಭೂಮಿಗಳಲ್ಲಿ ಕೊಳವೆ ಬಾವಿಗಳು ಬಾಯಿತೆರದುಕೊಂಡಿದೆ. ಒಂದಿಂಚು ನೀರು ಬಿದ್ದರೆ ಸಾಕು ಅಡಕೆ ಬೆಳೆದು ನೆಮ್ಮದಿ ಬಾಳು ಸಾಧ್ಯ ಎಂಬ ಕನಸಿನ ಗೋಪುರವನ್ನು ಮನೆಮನೆಯಲ್ಲೂ ಕಟ್ಟಿಕೊಂಡಿದ್ದಾರೆ.
ಮೊನ್ನೆ ಊರಿಗೆ ಹೋದಾಗ ಇಡೀ ಊರಿನ ಒಟ್ಟು ಸಾಂಸ್ಥಿಕ ಬದಲಾವಣೆ ನನ್ನ ಅರಿವಿಗೆ ಬಂತು. ಬದಲಾವಣೆಯೇ ಜಗದ ನಿಯಮವಾಗಿರುವಾಗ ನನ್ನೂರಿನ ಬದಲಾವಣೆಯೇನು ದೊಡ್ಡ ವಿಚಾರವಾಗಿರಲಿಲ್ಲ. ಆದರೆ, ಬದಲಾಗುವ ವೇಗ ಮಾತ್ರ ಆಚ್ಚರಿ ಹುಟ್ಟಿಸುವಂತಿತ್ತು.
ಊರಿನ ಮನೆಗಳಲ್ಲಿ ಮಾತ್ರ ಗೋಡೆಗಳೆದ್ದಿರುವುದಲ್ಲ, ಜತೆಗೆ ಜಮೀನು ಹಂಚಿ ಹೋಗಿರುವುದು ಗಮನಕ್ಕೆ ಬಂತು. ಸಿಕ್ಕ ತುಂಡು ಭೂಮಿಗಳನ್ನೆ ಹಸನು ಮಾಡಿಕೊಂಡು ವಾಣಿಜ್ಯ ಬೆಳೆ ಅಡಕೆ ಮರ ತಲೆ ಎತ್ತಿವೆ. ಹಸಿರು ಕಂಗೊಳಿಸುತ್ತದೆ. ಸಣ್ಣ ರೈತರ ಮನಸ್ಥಿತಿಯ ಬಗ್ಗೆ ಆಚ್ಚರಿಯಾಯಿತು. ಏಕೆಂದರೆ ಇಡೀ ಚಿತ್ರದುರ್ಗದಲ್ಲಿ ಭೀಮಸಮುದ್ರ ಮಾತ್ರ ಅಡಕೆ ಬೆಳೆಗೆ ಹೇಳಿ ಮಾಡಿಸಿದ ಜಾಗ ಎಂದೇ ಪ್ರತೀತಿ. ಆದರೆ, ನನ್ನೂರಿನ ಭರಮಸಾಗರ ಹೋಬಳಿಯಲ್ಲಿ ಬರುವ ೨೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆಬಾವಿಯ ಸಹಾಯದಿಂದ ಅಡಕೆ ಬೆಳೆಯಲು ರೈತರು ಮುಂದಾಗಿದ್ದಾರೆ ಎಂಬುದು ಕೃಷಿ ವ್ಯವಸ್ಥೆಯ ಮಗ್ಗಲು ಬದಲಾವಣೆ ಎಂದು ನನಗೆ ಅನಿಸಿತು.
ಈಗ ಗ್ರಾಮದ ಸುಮಾರು ೫೦೦ ಎಕರೆ ಜಮೀನಿನಲ್ಲಿ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಮನೆಮನೆಯಲ್ಲೂ ಮಣ್ಣಿನ ನೆಲ ಹೋಗಿ ದುಬಾರಿ ಟೈಲ್ಸ್ ಬಂದು ಕೂತಿವೆ, ಹೆಂಚು ಕಳೆದು ಆರ್‌ಸಿಸಿ ತಾರಸಿ ಮನೆಗಳು ಎದ್ದು ನಿಂತಿದೆ. ಐದು ವರ್ಷಗಳಲ್ಲಿ ಅಡಕೆಯ ಹಣ ಕೈಗೆ ಬರುತ್ತಲೇ ರೈತರು ಬದುಕು ಬದಲಾಗುತ್ತಾ ಹೋಗಿದೆ. ಅದಿಷ್ಟೇ ಆಗಿದ್ದರೆ ಅದೊಂದು ನೆಮ್ಮದಿಯ ಸಂಗತಿ. ಹತ್ತಾರು ವರ್ಷಗಳ ಕಾಲ ಸಾಲ ಮಾಡಿ ಅದನ್ನು ತೀರಿಸಲಾಗದೆ ಕಣ್ಣೀರಿಟ್ಟ ರೈತ ಈಗ ಲಾಭದಲ್ಲಿದ್ದಾನೆ ಎಂಬ ಸಮಾಧಾನದಲ್ಲಾದರೂ ಇರಬಹುದಿತ್ತು. ಆದರೆ, ಬಂದ ಹಣ ನೆಮ್ಮದಿ ತರಲಿಲ್ಲ. ದುಬಾರಿ ಜೀವನ ಶೈಲಿ ಹಾಸು ಹೊಕ್ಕಿದೆ. ಬಸ್ ಬಾರದ ಊರಿಗೆ ೨ ಕೀ.ಮಿ. ನಡದೆ ಹೋಗುತ್ತಿದ್ದ ಜನರು ಈಗ ಬೈಕ್ ಬಿಟ್ಟು ಕೆಳಗಿಳಿಯದ ಸ್ಥಿತಿಗೆ ಬಂದಿದ್ದಾರೆ.
ಇದರ ಜತೆಗೆ ಊರ ಸುತ್ತಮುತ್ತ ಕೋಳಿ ಫಾರಂಗಳು ತಲೆಯೆತ್ತಿವೆ. ಇವು ಊರಿನಲ್ಲಿ ಪಿಯುಸಿವರೆಗೆ ಓದಿ ಮುಂದೆ ಆಗುವುದಿಲ್ಲ ಎಂದು ಕೈ ಚೆಲ್ಲಿದ ಐವತ್ತಕ್ಕೂ ಹೆಚ್ಚು ಯುವಕರಿಗೆ ಕೆಲಸ ಕೊಟ್ಟಿವೆ. ಕೈ ತುಂಬ ಸಂಬಳದಿಂದ ಮನೆಗೆ ಎರಡೆರಡು ಮೊಬೈಲುಗಳು ರಿಂಗಣಿಸುತ್ತಿವೆ. ಅದು ಇಲ್ಲದೆ ಮನೆಯಲ್ಲಿ ಏನೋ ಭಣ ಭಣ... ಎಂಬಂತೆ ಜನರು ವರ್ತಿಸುತ್ತಿದ್ದಾರೆ. ಸುಖ ದುಃಖ ತೋಡಿಕೊಳ್ಳಲಾದರೂ ನೀರಿಗೆ ಬಂದಾಗ, ದೇವಸ್ಥಾನಕ್ಕೆ ಬಂದಾಗ ಮಾತನಾಡಿಕೊಳ್ಳುತ್ತಿದ್ದ ಜನ ಸಂಜೆಯಾದರೆ, ಧಾರವಾಹಿಗಳೇ ಸರ್ವಸ್ವ ಎಂಬಂತೆ ಅತ್ತ ಮುಖ ಮಾಡಿದ್ದಾರೆ...
ಹೀಗೆ ಐದೇ ವರ್ಷದಲ್ಲಿ ಊರಿಗೆ ಊರೇ ಜಗತ್ತಿನ ವರ್ತಮಾನದೆಡೆಗೆ ಮುಖ ಮಾಡಿ ನಿಂತಿದೆ. ಕೂಲಿಯಾಳು ಸಿಗುವುದಿಲ್ಲ ಎಂಬ ಕಾರಣಕ್ಕೇನೋ ದಿನಕ್ಕೆ ೬೦ ರೂಪಾಯಿ ಕೊಡಲು ಕಷ್ಟ ಎನ್ನುತ್ತಿದ್ದ ಗುತ್ತಿಗೆದಾರರು ೫೦೦ ರೂಪಾಯಿ ಕೊಡಲು ಸಿದ್ಧವಾಗಿದ್ದಾರೆ. ಒಟ್ಟಿನಲ್ಲಿ ಇಡೀ ಊರು ಮುಂದೆ ದಕ್ಕದೋ ಎಂಬಂತೆ ಹಣದ ಹಿಂದೆ ಬಿದ್ದಿದೆ.
ಇಂತಹ ಬದಲಾವಣೆ ನನ್ನೂರಿನ ಜನರಿಗೆ ಸಾಮಾನ್ಯ ಎನಿಸುವಷ್ಟು ಸರಾಗವಾಗಿ ಬಿಟ್ಟಿದೆ. ಆದರೆ, ಅದರ ಮುಂದಿನ ಸತ್ಯಗಳನ್ನು ಮಾತ್ರ ಅವರಿಗೆ ಬಣ್ಣದ ಕನಸುಗಳಲ್ಲಿ ಕಾಣದೆ ಹೋಗಿದ್ದಾರೆ ಎಂಬುದಂತೂ ಸತ್ಯ. ಒಂದು ಕಾಲದಲ್ಲಿ ಇಡೀ ಊರಿಗೆ ಊರೇ ಹತ್ತಿ ಬೆಳೆಯಲು ಹೋಗಿ ಕೈ ಸುಟ್ಟುಕೊಂಡ ಅನಂತರ ಯಾರೋ ಒಬ್ಬರು ಮೆಕ್ಕೆ ಜೋಳ ಹಾಕಿದರೆಂದು ಅದನ್ನು ಎಲ್ಲರು ಬೆಳೆಯಲು ಹೋಗಿ ಲಾಭದ ಬದಲು ಸಾಲ ಮಾಡಿಕೊಂಡರು. ಈಗ ಆ ಸ್ಥಾನವನ್ನು ಅಡಕೆ ತುಂಬಿದೆ. ಊರಿಗೆ ಹತ್ತಿಪ್ಪತ್ತು ಮನೆಗಳು ಅಡಕೆ ತೋಟ ಹೊಂದಿದ್ದರೇನೋ ಸರಿ. ಆದರೆ, ಪ್ರತಿ ಮನೆಯಲ್ಲೂ ಅಡಕೆ ತೋಟ ಮಾಡಿ ಬೆಲೆ ಕಡಿಮೆಯಾದರೆ ಯಾರು ಹೊಣೆ. ಆಗ ಬರುವ ಕಷ್ಟಗಳನ್ನು ಎದುರಿಸುವವರು ಯಾರು? ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ.
ಇನ್ನೊಂದು ಅಂಶವೆಂದರೆ ಸಾಮಾಜಿಕವಾಗಿ ಇಡೀ ಊರು ವಿಘಟನೆಯಾಗುತ್ತಿದೆ. ಬಹುಶಃ ಇಂದಿನ ಸಾಮಾಜಿಕ ಸಂಪ್ರದಾಯದ ಪದರಗಳು ಉಳಿದುಕೊಂಡಿರುವುದೇ ಗ್ರಾಮಗಳಲ್ಲಿ. ಅಂತಹ ಗ್ರಾಮಗಳೇ ನಗರೀಕರಣದ ಪ್ರಭಾವದಿಂದ ಅವುಗಳನ್ನು ಮರೆತು ಬಿಟ್ಟರೆ ಗತಿಯೇನು ಎಂಬ ಆತಂಕ ಕಾಡದೆ ಇರದು. ವರ್ಷದಲ್ಲಿ ಹತ್ತಿಪ್ಪತ್ತು ಹಬ್ಬಗಳನ್ನು ಮಾಡಿ ನೆಂಟರಿಷ್ಟರನ್ನು ಕರೆದುಕಳಿಸಿ ಸಂಬಂಧಗಳನ್ನು ಬಡತನದಲ್ಲೂ ಗಟ್ಟಿಯಾಗಿಸಿಕೊಳ್ಳುತ್ತಿದ್ದ ಆ ದಿನಗಳಿಗೂ, ಸಂಜೆ ಬಂದು ಹಬ್ಬ ಮಾಡಿ ಬೆಳಗ್ಗೆ ಹೊತ್ತುಟ್ಟುವ ಮುನ್ನವೆ ನಗರದೆಡೆಗೆ ಮುಖ ಮಾಡುವ ಈಗಿನ ಗ್ರಾಮದ ಜನರೆಲ್ಲಿ ಎಂಬ ಜಿಜ್ಞಾಸೆ ಮೂಡುತ್ತದೆ.
ಹಾಗೆಂದು ಗ್ರಾಮೀಣ ಜನರ ಬದುಕು ಬದಲಾಗಲೇಬಾರದು ಎಂದಿಲ್ಲ. ಆದರೆ, ಬದಲಾಗುವ ಜೀವನ ಶೈಲಿಯಲ್ಲಿ ಸೊಗಡಿಲ್ಲದ ಅಧುನಿಕತೆ ಅವಶ್ಯವಿದೆಯೇ ಎಂಬುದು ಯೋಚಿಸಬೇಕಾದ ಅಂಶ. ಕೃಷಿ ವ್ಯವಸ್ಥೆಯೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಬೆಳೆಯ ಪರ್ಯಾಯಾ ಹುಡುಕಿಕೊಳ್ಳುವುದು ತಪ್ಪಲ್ಲ. ಆದರೆ, ಅದರ ನೆರಳಲ್ಲಿಯೇ ಇರುವ ಸಾಂಸ್ಥಿಕ ವ್ಯವಸ್ಥೆಯನ್ನು ಚೂರು ಮಾಡಿಕೊಳ್ಳುವುದು ನಮ್ಮ ಸಂಸ್ಕೃತಿಗೆ ನಾವೇ ಕೊಡಲಿ ಪೆಟ್ಟು ಹಾಕಿಕೊಂಡಂತೆ...
ಊರಿನ ಈ ಬದಲಾವಣೆ ನೋಡಿ ಒಂದೆಡೆ ದಿಗ್ಬ್ರಮೆ ಮತ್ತೊಂದೆಡೆ ಆತಂಕದಲ್ಲಿದ್ದ ನಾನು ಊರ ಮುಂದಲ ಹೊಂಡದ ಕಟ್ಟೆಯ ಮೇಲೆ ಕುಳಿತಿದ್ದ ಹೀರಿಕರೊಬ್ಬರನ್ನು "ಏನಜಾ ಈಗ ಭಜನೆ ಕಾರ್ಯಕ್ರಮ ನಡೆಲ್ವೇನೂ? ಎಂದು ಕೇಳಿದೆ.. ಆ ಹೀರಿಕರು ನನ್ನ ಗುರುತು ಸಿಗದೆ ಹೋದವರಂತೆ " ಎಲ್ಲಪ್ಪಾ ಹನುಮಂತ ದೇವರಿಗೊಂದು ಕಡ್ಡಿ ಹಚ್ಚಿದ್ರೆ ಸಾಕು ಅನ್ನಂಗಾಗೇದಾ ಇನ್ನು ಭಜನೆ ಮಾಡಾಕೆ ನಮ್ಮ ಜನಕ್ಕೆ ಟೈಮ್ ಎಲ್ಲೈತಿ" ಎಂದು ಉತ್ತರಿಸಿದರು.
ಮತ್ತೇನೂ ಪ್ರಶ್ನೆ ಕೇಳಬಾರದೆನಿಸಿತು. ನನ್ನೂರು ಓಡುತ್ತಿರುವ ಜಗತ್ತಿನ ಹಿಂದೆ ಬಿದ್ದು ಬಾರಿ ದಿನಗಳೇ ಆದವು ಎಂಬುದು ಆ ಹೀರಿಕರ ಮಾತಿನಲ್ಲೇ ಗೊತ್ತಾಗುತ್ತಿತ್ತು..
ಏನ್ ಮಾಡೋದು? ಕಾಲೈ ತಸಮೈ ನಮಃ

Wednesday, March 9, 2011

ಉಳಿದ ಕನಸು

ನಾನೆ ಅಂದು ಬಿಟ್ಟೆ
ನಿನ್ನ ಎದೆಯೊಳಗೆ ಎಂತಹ ಕಸಿವಿಸಿ?
ಹೇಳಲಾಗದಿದ್ದರೆ ಬಿಡು
ಮುಂದೊಂದು ದಿನ ಹುಣ್ಣಿಮೆಯ ರಾತ್ರಿ
ನಿನ್ನದೇ ಕಥೆ ಕೇಳುತೇನೆ
ಆಗ ತಂಗಾಳಿಯೂ ನನ್ನ ಜೊತೆಗಿರುತ್ತದೆ...

ಆದರೆ,
ಎದ್ದು ಹೋಗುವ ಮುನ್ನ
ತಿರುಗಿ ನೋಡಿ ಏನಾದರೂ ಹೇಳುತ್ತೀಯಾ
ಎಂದು ಕಾದ್ದದ್ದೆ ಬಂತು
ಹದಿನಾರು ವರ್ಷ ಮತ್ತೆ
ಚಂದ್ರ ನನ್ನ ಪಾಲಿನ ಹುಣ್ಣಿಮೆ ತರಲಿಲ್ಲ

ಗೊತ್ತಾ..!?
ನನ್ನೊಳಗೆ ಬದುಕಿನ ಅವಸರವಿತ್ತು
ಅಥವಾ ಗೊತ್ತಿತ್ತು
ನೀನು,ನಾನು..ನಮ್ಮ ಗೂಡು..ನಮ್ಮ ಪಾಡು
ಎಲ್ಲವೂ ಹೇಳಬೇಕೆಂದು ಕಾದುಕುಂತೆ
ನಿನು ಮಾತ್ರ ಅಂದಿನಿಂದ ಆ ಹಾದಿಯಲ್ಲಿಯೇ ಬರಲಿಲ್ಲ

ಹೌದಲ್ಲ..
ಹಾದಿ ಗೊತ್ತಿದ್ದರೂ ಕಾಯುವ ನಾನು ಗೊತ್ತಿರಬೇಕಲ್ಲ
ಎಷ್ಟೇ ಆಗಲಿ ಆ ಹಾದಿ ನನ್ನದಲ್ಲವೇ?
ಅದಕ್ಕೆ ನೀನು ಬರಲಿಲ್ಲ..

ಬರದೇ ಹೋದರೆ ಬೇಡ
ಎಲ್ಲಿದ್ದೀಯಾ? ಹೇಗಿದ್ದೀಯಾ?
ಯಾರನ್ನು ಕೇಳುವುದು?
ವಿಳಾಸವೇ ಇಲ್ಲದ ನಿನ್ನದೇ ಜಗತ್ತು
ನಿನ್ನ ಮಡಿಲೊಳಗೆ ಬೆಚ್ಚಗಿತ್ತು
ನಮ್ಮೂರಲ್ಲಿ ಆಗ ಬಿರುಬಿಸಿಲು
ಬೆವರೆಲ್ಲಾ ಕಣ್ಣೀರಿನ ಜೊತೆ ಬೆರೆತು ಹೋಗಿತ್ತು...

ಅಂದು
ನಾನು ನನ್ನ ಗೂಡಿನಲ್ಲಿದ್ದೆ
ನಮ್ಮ ಗೂಡಿನ ಕನಸು ಹಾಗೆ ಉಳಿದು ಹೋಗಿತ್ತು
ಅವರೆಲ್ಲಾ ನಮ್ಮಿಬ್ಬರ ಬದುಕಿಗೆ
ಕುಲಾವಿ ಹೊಲಸಿ ಊರಿನ ತುಂಬಾ ಬಣ್ಣ ಬಣ್ಣದ
ರೆಕ್ಕೆ ಕಟ್ಟಿ ಹಾರಿ ಬಿಟ್ಟರು...

ಆದರೆ,
ಹಾರಿ ಬಿಡುವ ಮುನ್ನವೇ
ಅದರ ದಾರ ಹರಿದು ಹೋಗಿತ್ತು ಎನ್ನಲು
ನಾನು ಬಾಯಿ ಕಳೆದುಕೊಂಡಿದ್ದೆ, ಏಕೆ ಗೊತ್ತಾ?
ಎಂದಾದರೂ ನನ್ನ ಬದುಕು ನನಗೆ ಸಿಗಬಹುದೆಂದು...!

ಉಳಿದು ಹೋದ ಒಂದು ಕನಸು
ನನಸಾಗಬಹುದೆಂದು..!?

Wednesday, April 28, 2010

ಸೋಲಿನ ನಂತರವೂ...

ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು.
ನನಗಾಗ ತಲೆಗೆ ಬಂದದ್ದು, ಮನುಷ್ಯನಿಗೆ ಯಾವಾಗಲೂ ಇಲ್ಲವೂಗಳ ಬೇತಾಳದ ತರಹ ಬದುಕುತ್ತಲೇ ತನ್ನ ಜೀವನದ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿರುತ್ತಾನೆ ಎಂಬುದು. ಇದು ಎಷ್ಟು ನಿಜವೋ ಗೊತ್ತಿಲ್ಲ. ಅದರೆ, ಮನುಷ್ಯನ ನಸೀಬು ಖೋತಾ ಆದಾಗ ಆತ ಏನೆ ಯಶಸ್ಸುಗಳ ಮೆಟ್ಟಿಲೇರಿದ್ದರೂ ಅದು ಅವನ ಬದುಕಿನ ಖೋತಾ ಖಾತೆಯೆ ಎಂಬುದು ಸುಳ್ಳಲ್ಲ.
ಈ ಮಾತನ್ನು ನಾನು ಕೇವಲ ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ. ಸೋಲಿನ ನಂತರವೂ ನಾನು ಬದುಕಿದ್ದೇನೆ. ಮತ್ತೆ ಮತ್ತೆ ಸೋಲುತ್ತಿದ್ದೇನೆ. ಬಹುಶಃ ಗೆಲವು ಬಾರದೆ ಬದುಕು ಮುಗಿದು ಹೋಗಬಹುದು ಎಂಬ ಆತಂಕ ದಿನವೂ ನನ್ನನ್ನು ಕಾಡುತ್ತದೆ. ಸೋಲಿನ ಸಂಕಟಗಳ ತಲೆಬಿಸಿಯಲ್ಲಿ ಗೆಲವು ಹೇಗಿರುತ್ತದೆ ಎಂಬ ಕಲ್ಪನೆಯೇ ನನ್ನಿಂದ ಮರೆಯಾಗಿ ಹೋಗಿದೆ.
ನಾನು ಪತ್ರಕರ್ತನಾಗಿ ವೃತ್ತಿ ಆರಂಭಿಸಿದಾಗ ಆಗಿನ್ನು ಕಾಲೇಜು ಕಲಿಯುತ್ತಿದ್ದಾತ. ಆತ್ಮಹತ್ಯೆಯಂತಹ ಸುದ್ದಿಗಳನ್ನು ಬರೆಯುವಾಗ ಮನುಷ್ಯನಿಗೆ ಬದುಕುವುದಕ್ಕಾಗಿ ಎಷ್ಟೊಂದು ಅವಕಾಶಗಳಿದ್ದಾಗಲೂ ಇವರು ಆತ್ಮಹತ್ಯೆ ಮಾಡಿಕೊಳ್ಳುವುದೇಕೆ? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದಿರುವ ಸುಂದರ ಬದುಕನ್ನು ಕಟ್ಟಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಕೈಲಾಗದವರು ಎಂದು ಭಾವಿಸುತ್ತಿದ್ದೆ.
ಮನಸ್ಸು ಮಾಗುತ್ತಾ..ಬದುಕು ಜಟಿಲವಾಗುತ್ತಾ(ಕೆಲವೊಮ್ಮೆ ಸ್ವಯಂಕೃತ ಅಪರಾಧದಿಂದ) ಬಂದಂತೆ ನನ್ನ ವೃತ್ತಿ ಜೀವನದಲ್ಲಿ ಅಂತಹ ಆತ್ಮಹತ್ಯೆ ಪ್ರಕರಣಗಳಿಗೆ ನನಗೆ ಗೊತ್ತಿಲ್ಲದಂತೆ ಹೊಸ ವಾಖ್ಯಾನ ನೀಡತೊಡಗಿದೆ.ವ್ಯಕ್ತಿಯೊಬ್ಬನ ಹತಾಶ ಸ್ಥಿತಿಯಲ್ಲಿ ಎಲ್ಲಿಯೂ ಆಸರೆ ದೊರೆಯದೆ ಹೋದಾಗ ಆತನ ಮನಸ್ಸು ಅನುಸರಿಸುವ ಕೊನೆಯ ಮಾರ್ಗ ಶಾಂತಿ ಅರ್ಥಾತ್ ಆತ್ಮಹತ್ಯೆ ಇರಬೇಕು ಎನಿಸಿತೊಡಗಿತು. ಏಕೆಂದರೆ ಅಂತಹ ಹತಾಶ ಸ್ಥಿತಿಗೆ ಹಲವು ಬಾರಿ ತಲುಪಿ ಈಗಲೂ ಬದುಕಿದ್ದೇನೆ ಎಂಬುದು ನನ್ನ ಇವತ್ತಿನ ಸಾಧನೆ.
ಇಷ್ಟು ದಿನಗಳ ಕಾಲವೂ ನಾನು ತಪ್ಪೆ ಮಾಡಿಲ್ಲವೆಂದಲ್ಲ. ಆದರೆ, ಆದೆಲ್ಲವೂ ನನ್ನದೇ ತಪ್ಪುಗಳಾಗಿರಬಹುದು. ಆದರೆ, ಅಂತಹ ಸಂದರ್ಭಗಳಿಗೆ ಯಾರನ್ನು ಹೊಣೆ ಮಾಡುವುದು. ಜೀವನದಲ್ಲಿ ಗೆಲುವ ಪಡೆಯುದಕ್ಕಾಗಿ ಹೋರಾಟ ಮಾಡುವುದು ಒಂದು ಸವಾಲು ಎಂಬುದು ಸರಿ. ಆದರೆ, ಕೊನೆಯವರೆಗೆ ಗೆಲವು ಅದೃಷ್ಟದ ಹಿಂದೆ ಅಲೆಯುತ್ತಿದೆ ಎಂಬರ್ಥದ ಸನ್ನಿವೇಶಗಳು ಎದುರಾದಾಗ ಎಂತವನೇ ಸರಿ ಹಣೆಬರಹ ಎಂಬ ಗೋಜಲು ಸಂತೆಯೊಳಗೆ ನಿರರ್ಥಕ ಭಾವುಕನಾಗುತ್ತಾನೆ. ಎಲ್ಲಿಯೂ ತನಗಿನ್ನು ಅಥವಾ ತನ್ನ ಸವಾಲುಗಳಿಗೆ ಪರಿಹಾರ ಸಿಗುವುದೇ ಇಲ್ಲ ಎಂಬಂತಹ ಪರಿಸ್ಥಿತಿ ಸೃಷ್ಟಿಯಾದಾಗ ಆತನಿಗೆ ಇಡೀ ಪ್ರಪಂಚವೆ ಶೂನ್ಯವಾಗಿ ಕಾಣತೊಡಗುತ್ತದೆ. ಇಂದು ಗೆಲವು ಎನ್ನುವುದು ಹಣದ ಅಳೆತಗೋಲಲ್ಲಿ ಅಳೆದು ಸುರಿಯುವ ಸಮಾಜದ ನಡುವೆ ಕೊಳ್ಳುವುದಕ್ಕಾಗಿ ಬದುಕು ಎಂಬ ವಾತವರಣವನ್ನು ನಿರ್ಮಾಣ ಮಾಡಿದೆ. ಮುಂದೆಯು ಅದರ ಪಾತ್ರ ಹಾಗೂ ಗಾತ್ರ ವಿಸ್ತಾರವಾಗತೊಡಗಿದಾಗ ಸಣ್ಣ ಗೆಲುವಿಗಾಗಿ ಹಪಾಹಪಿಸುವ ನನ್ನಂತಹ ಸೀಮಿತ ಪಾತ್ರದ ಮೀನುಗಳು ದೊಡ್ಡ ತಿಮ್ಮಿಂಗಿಲ ಆಹಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಉಳ್ಳವರು ಮತ್ತು ಇಲ್ಲದವರ ನಡುವೆ ನಾವು ಮಧ್ಯಂತರಿಗಳಾಗಿ ಜೀವನವನ್ನು ಸೋಲಿನ ಹುಟ್ಟಿನಲ್ಲಿಯೇ ಮುಗಿಸಿಬಿಡುವ ಆತಂಕದಲ್ಲಿರುತ್ತೇವೆ. ನನ್ನ ಸೋಲಿನ ಸರಣಿ ಎಲ್ಲೇ ಮೀರಿ ಬದುಕುವ ಬಗ್ಗೆ ಜಿಗುಪ್ಸೆ ಬರಿಸಿದೆ. ’ಉಸಿರುಕಟ್ಟಿಸುವ ವಾತವರಣ’ ಎಂದೆಲ್ಲಾ ಪದಗಳನ್ನು ಸುದ್ದಿ ಬರೆಯುವಲ್ಲಿ ಉಪಯೋಗಿಸುವಾಗ ಅದೊಂದು ಯಾಂತ್ರಿಕವಾದ ಪದ ಎನ್ನದೇ ನನ್ನದೇ ಬುದಕಿನ ಪದಗಳಾಗಿ ರೂಪಾಂತರವಾಗುತ್ತದೆ.
ದೇವರು, ಭವಿಷ್ಯ, ಜೋತಿಷ್ಯ ಎಂಬ ಶುಷ್ಕ ಭ್ರಮೆಗಳನ್ನು ದೂರವಿಟ್ಟ ಮನುಷ್ಯನು ಇಂತಹ ಸಂದರ್ಭದಲ್ಲಿ ತನಗೆ ಗೊತ್ತಿಲ್ಲದ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಅವುಗಳ ಮೊರೆ ಹೋಗುತ್ತಾನೆ. ಬಹುಶಃ ಕೆಲವರಿಗೆ ಇದೆಲ್ಲವೂ ತಮಾಷೆಯಾಗಿಯೂ,ಮೂರ್ಖತನದ ಕೆಲಸದಂತೆಯೂ ಕಾಣಬಹುದು. ಆದರೆ, ತನಗಿನ್ನೂ ಇಲ್ಲಿ ಬದುಕುವ ಸ್ಥಿತಿಗೆ ಯಾವುದೇ ಆಧಾರವೇ ಇಲ್ಲ ಎಂದು ನಿರ್ಧಾರ ಮಾಡಿದ ವ್ಯಕ್ತಿಯ ಕೊನೆಯ ಆಯ್ಕೆ ಆದೇ ಆಗಿರುತ್ತದೆ. ಅದರಲ್ಲಿ ಆತನಿಗೆ ಯಾವುದೇ ಸಿದ್ಧಾಂತದ ಹೊರತಾದ ನೆಮ್ಮದಿ ಅಥವಾ ಗೆಲವಿನ ಬದುಕನ್ನು ಕಟ್ಟಿಕೊಳ್ಳುವ ಆತುರವಿರುತ್ತದೆ.
ಇದೆಲ್ಲಾವೂ ನನ್ನದೇ ವೈಯಕ್ತಿಕ ಅಭಿಪ್ರಾಯವೂ ಹೌದು. ಸೋಲು, ಸಾಲ, ಜಗಳ, ದ್ರೋಹ,ಕಾಲೆಳೆಯುವ ಎಲ್ಲ ಜಂಜಾಟದ ಜನರ ನಡುವೆ ಹಾದು ಬಂದಿದ್ದೇನೆ. ಸೋತ ವ್ಯಕ್ತಿಯನ್ನು ಸಾಂತ್ವನಗೊಳಿಸುವ ಬದಲು ಆತನನ್ನು ತಮ್ಮ ತಮಾಷೆಗಾಗಿ ಬಳಸಿಕೊಳ್ಳುವ ಜನರ ಹತ್ತಿರವೂ ಬದುಕಿದ್ದೇನೆ. ಕೊನೆಯದಾಗಿ ಬೆಟ್ಟದಷ್ಟು ಸೋಲುಗಳ ನಡುವೆಯೂ ಪುಟ್ಟಪುಟ್ಟ ನಮ್ಮ ಹೆಣ್ಣು ಮಕ್ಕಳ ನಗುವನ್ನು ನೋಡಿ ದಿನವೂ ಗೆಲ್ಲಲು ಎದ್ದು ಹೋರಡುತ್ತೇನೆ.ಅವರಿಗಾಗಿ ನಾನು ಏನಾದರೂ, ಹೇಗಾದರೂ, ಬದುಕಿನ ನೊಗವನ್ನು ಮುನ್ನೆಡಸಬೇಕೆಂದು ಯೋಚಿಸುತ್ತೇನೆ. ಮತ್ತೆ ಸೋಲು ಕೊನೆಯ ಸಾಲಿನಲ್ಲಿ ನನ್ನ ಬರುವಿಕೆಗಾಗಿ ಕಾದು ನಿಂತಿರುತ್ತದೆ. ನನ್ನ ಮಕ್ಕಳ ನಗುವಿನ ಭರವಸೆ ಆ ಸೋಲಿನ ಕಠೋರತೆಯ ಮುಂದೆ ಪೇವಲವಾಗಿ ಕಾಣುತ್ತದೆ.
ಮುಂದೆ ಯಾವುದೇ ತಿರುವಿನಲ್ಲಿ ಗೆಲವು ದಕ್ಕದೇ ಹೋದರೆ ಏನು ಮಾಡುವುದು..? ಗೊತ್ತಿಲ್ಲ....

Saturday, September 12, 2009

ಹೇಗೆ ಬದುಕಬೇಕು?

ನನ್ನ ಹಿಂದಿನ ಲೇಖನಕ್ಕೆ ಗೆಳೆಯರು ಸ್ಪಂದಿಸಿದ್ದಾರೆ. ಮೊದಲಿಗೆ ಅವರಿಗೆಲ್ಲರಿಗೂ ನನ್ನ ವಂದನೆಗಳು. ಬರಹಗಳೆಂದರೆ ಟೀಕೆ ಮತ್ತು ಮೆಚ್ಚುಗೆಯ ಮಿಶ್ರಣವಿದ್ದಾಗಲೇ ಅದಕ್ಕೆ ನಿಜವಾದ ಅರ್ಥ ಸಿಗುವುದು ಎಂದು ನನ್ನ ತಿಳವಳಿಕೆ. ಬಹುಶಃ ಎಲ್ಲರದು ಕೂಡ. ಅದಕ್ಕಾಗಿ " ಪತ್ರಿಕೆಗಳು ಬರುತ್ತವೇ ಸುಮ್ಮನಿರು" ಲೇಖನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಿತರಿಗೂ ನನ್ನ ಧನ್ಯವಾದ ಹೇಳುತ್ತೇನೆ.
ಲೇಖನ ಓದಿದ ಕೆಲ ಗೆಳೆಯರು ಬ್ಲಾಗ್ ಅಪಡೇಟ್ ಮಾಡುವಂತೆ, ಏನಾದರೂ ಬರೆಯುವಂತೆ ಒತ್ತಾಯ ಮಾಡುತ್ತಲೇ ಬಂದರು. ಈ ನಡುವೆ ನನ್ನ ಪತ್ರಿಕೆಯ ಕೆಲಸದ ನಡುವೆ ಒತ್ತಡದಲ್ಲಿದ್ದರಿಂದ ಬಹಳಷ್ಟು ಬಾರಿ ಬರೆಯಬೇಕು ಎಂದುಕೊಂಡು ಆಗದೇ ಕೈ ಚೆಲ್ಲುತ್ತಿದ್ದೇ. ಆದರೆ, ಕೆಲವು ನೋವುಗಳನ್ನು ಬರೆಯಬೇಕಾಗಿ ಬಂತು. ನಾನು ಗೌರವಿಸಲ್ಪಡುವ ಹಾಗೂ ಅದರಲ್ಲಿನ ಮೌಲ್ಯಗಳನ್ನು ಬೆಂಬಲಿಸುವ ವಾರಪತ್ರಿಕೆಯೊಂದು ನನ್ನ ಹಾಗೂ ನನ್ನ ಸ್ನೇಹಿತರ ಕುರಿತು ಒಂದಿಷ್ಟು ನೋವು ತರುವ ವರದಿಯೊಂದನ್ನು ಪ್ರಕಟಿಸಿದೆ. ಬಹುಶಃ ಸ್ಥಳೀಯವಾಗಿ ನಾವು ಗೆಳೆಯರ ಬಳಗ ಕನ್ನಡ ಸಂಜೆ ದಿನಪತ್ರಿಕೆಯೊಂದನ್ನು ಹೊರತರುತ್ತಿರುವ ಬಗ್ಗೆ "ಇಷ್ಟವಿಲ್ಲದ" ಗುಂಪು ಇದಕ್ಕೆ ಅತಿರಂಜಿತ ಪುರಾವೆಗಳನ್ನು ಅವರಿಗೆ ನೀಡಿರುವ ಸಾಧ್ಯತೆಗಳಿವೆ.
ಆ ಪತ್ರಿಕೆಯಲ್ಲಿ ವರದಿ ಬಂದಿರುವ ಬಗ್ಗೆ ಸ್ನೇಹಿತರೊಬ್ಬರು ನನಗೆ ಹೇಳಿದಾಗ ನಾನು ನಂಬಲೇ ಇಲ್ಲ. ಕೊನೆಗೆ ಪತ್ರಿಕೆ ಓದಿ ಬೇಸರವಾಯಿತು. ಅದರಲ್ಲಿ ನಮ್ಮ ಬಗ್ಗೆ ಬಳಸಿರುವ ಪದಗಳನ್ನು ಕಂಡು ಆಶ್ಚರ್ಯವಾಯಿತು. ನಿಜವಾಗಲೂ ಆ ಪತ್ರಿಕೆಯ ಸಂಪಾದಕರು ಅದನ್ನು ಪರಿಶೀಲಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಅದಕ್ಕಾಗಿ ಈ ಲೇಖನದ ಮೂಲಕ ಸ್ಪಷ್ಟನೆಯನ್ನು ಕೊಡುತ್ತಿಲ್ಲ. ಪತ್ರಿಕೆ ಆರಂಭಕ್ಕೆ ಕೆಲವರು ಪರೋಕ್ಷವಾಗಿ ತಡೆಯೊಡ್ಡಲು ಯತ್ನಿಸುವುದು ನನಗೆ ಹಾಸ್ಯಸ್ಪದವಾಗಿ ಕಾಣುತ್ತಿದೆ. ಆರೋಗ್ಯಕರ ಪೈಪೋಟಿಯ ಬಗ್ಗೆ ಮಾತನಾಡುವ ನಾವು , ಕೆಲವೊಂದು ವಿಷಯದಲ್ಲಿ ಅದೆಷ್ಟು ಕುಬ್ಜರಾಗುತ್ತೇವೆ ಎನ್ನವುದುಕ್ಕೆ ನಮ್ಮ ತಂಡದ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡುತ್ತಿರುವ ಪ್ರಯತ್ನಗಳು ಸಾಕ್ಷಿಯಾಗುತ್ತಿವೆ.
ಕೆಳವರ್ಗದ ಜನ ಸ್ವತಂತ್ರ್ಯವಾಗಿ ಕನಸು ಕಾಣುವ ಹಾಗೂ ಅದನ್ನು ನನಸಾಗಿಸಿಕೊಳ್ಳುವ ಯಾವುದೇ ಯತ್ನವನ್ನು ಕೆಲವರು ಸಹಿಸುವುದಿಲ್ಲ ಎನ್ನುವುದು ನನಗೆ ಕಳೆದ ೧೫ ದಿನಗಳಲ್ಲಿ ಸಂಪೂರ್ಣವಾಗಿ ಅರ್ಥವಾಯಿತು. ಅದಕ್ಕೆ ನಮ್ಮನ್ನು ಬೇರೆ ತಂತ್ರದ ಮೂಲಕ ವಾರಪತ್ರಿಕೆಯಲ್ಲಿ ಅಪ್ರಾಮಾಣಿಕ ಪತ್ರಕರ್ತರು ಎನ್ನವ ರೀತಿಯಲ್ಲಿ ಬಿಂಬಿಸಿ ಅದಕ್ಕೆ ಇಲ್ಲದ ಪುರಾವೆಗಳನ್ನು ನೀಡಿ ಸಮರ್ಥನೆಯ ವರದಿಯೊಂದನ್ನು ಪ್ರಕಟಿಸಿ ಖುಷಿಪಡುತ್ತಿರುವ ಮೈಸೂರಿನ ಕೆಲ ಸ್ನೇಹಿತರ ! "ಕೆಲಸ" ಕಂಡು ಬೇಸರವಾಗುತ್ತದೆ ಹಾಗೂ ಕೆಳವರ್ಗದ ಕೆಲ ಸ್ನೇಹಿತರ ಕೈಯಲ್ಲಿಯೇ ಅಂತಹ ಕುಕೃತ್ಯ ಕೆಲಸವನ್ನು ಮಾಡುತ್ತಿರುವುದನ್ನು ಕಂಡು ನನಗೆ ನೋವಾಗುತ್ತದೆ. ಹೇಗೆಂದರೆ ನಮ್ಮಿಂದಲ್ಲೇ ನಮ್ಮನ್ನು ಹೊಡೆದು ಹಾಕುವ ಬ್ರಿಟಿಷರ ಮಹಾತಂತ್ರದ ಮೂಲಕ!?
ಹಾಗಾದರೇ ಹೇಗೆ ಬದುಕಬೇಕು?
ಮತ್ತದೇ ಬಂಡವಾಳಶಾಹಿಗಳ ಅಡಿಯಲ್ಲಿ, ಜಾತಿಯ ಕಾರಣದಿಂದ ಅವರ ಮುಂದೆ ಮೈ ಬಗ್ಗಿಸುತ್ತಾ, ಅವರ ಹೇಳಿದ್ದೇ ಸತ್ಯ ಎನ್ನವಂತೆ ತಲೆದೂಗುತ್ತಾ, ಈ ಕೆಳವರ್ಗದ ಜನರಿಗೆ ನಮ್ಮನ್ನು ಬಿಟ್ಟು ಸ್ವತಂತ್ರವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಚುಚ್ಚುವ ಅವರ ಮಾತುಗಳನ್ನು ಮರುಮಾತನಾಡದೇ ಕೇಳಿಸಿಕೊಳ್ಳುತ್ತಾ...!?
ನಾನು ನನಗೆ ಪ್ರಾಮಾಣಿಕನಾಗಿದ್ದಾರೆ ಸಾಕು ಎಂದುಕೊಂಡಿದ್ದೇನೆ. ಇತರರ ಎದುರಿಗೆ ಪ್ರಾಮಾಣಿಕನಂತೆ ವೇಷ ತೊಟ್ಟು ನನ್ನೊಳಗೆ ಇತರರನ್ನು ತುಳಿಯುವ ಅಥವಾ ಅವರ ವಿರುದ್ಧ ಪಿತೂರಿ ಮಾಡುವ ಕುಕೃತ್ಯ ಅಪ್ರಾಮಾಣಿಕ ಮನಸ್ಸು ನನ್ನದಾಗುವುದು ಬೇಡ ಎಂದು ನನ್ನ ಬಯಕೆ. ಅದು ಬಹಳ ದಿನಗಳ ಕಾಲ ಉಳಿಯುವುದೂ ಇಲ್ಲ. ಮೊನ್ನೆ ಬ್ಲಾಗ್‌ಗಳಲ್ಲಿ ಅನಾಮಿಕರು ಚಿತ್ರವಿಚಿತ್ರ ರೀತಿಯಲ್ಲಿ ಟೀಕೆಗಳನ್ನು ಸುರಿಸುವುದು,ಅನಾರೋಗ್ಯಕರವಾಗಿ ಇನ್ನೊಬ್ಬರ ಕಾಲೆಳೆಯುವುದನ್ನು ಮಾಡುತ್ತಿರುವುದು ಸುದ್ದಿಯಾಗುತ್ತಿದೆ. ಅದರೆ, ಬಹಿರಂಗವಾಗಿಯೇ ಪತ್ರಕರ್ತರು,ತಮ್ಮ ಕೆಲವರನ್ನು ತುಳಿಯಲು ಇನ್ನಿಲ್ಲದಂತೆ ಹರಸಾಹಸ ಮಾಡುವುದು, ಅದಕ್ಕೆ ಮೌಲ್ಯಗಳ ಬಗ್ಗೆ ಮಾತನಾಡುವವರು ಜಾತಿ ಕಾರಣಗಳಿಂದ ತಲೆಯಾಡಿಸುವುದು ಕಂಡು ನನಗೆ ಅಸಹ್ಯವಾಗುತ್ತಿದೆ.
ಕೆಳವರ್ಗದ ಪತ್ರಕರ್ತರು ನೈತಿಕವಾಗಿರಬೇಕು, ಪ್ರಾಮಾಣಿಕರಾಗಿರಬೇಕು..ಹೀಗೆಲ್ಲಾ ಬಯಸುವ ಒಂದು ವರ್ಗದ ಸ್ನೇಹಿತರು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಪಡಿಸಲು ಯತ್ನಿಸುತ್ತಲೇ ಇರುತ್ತಾರೆ. ನನಗೆ ಇನ್ನೂ ಅರ್ಥವಾಗದ ಸಂಗತಿ ಎಂದರೆ ಪ್ರಾಮಾಣಿಕ ಎನ್ನುವುದಕ್ಕೆ ಯಾವುದಾದರೂ ಅಳತೆಗೋಲು ಇದೆಯೇ? ಪ್ರಾಮಾಣಿಕ ಎನ್ನವುದು ಮನುಷ್ಯತ್ವಕ್ಕೆ ಸಂಬಂಧಿಸಿದ್ದಾ ? ಅಥವಾ ಮನುಷ್ಯನ ವೇಷದ ಮೇಲ್ನೋಟಕ್ಕೆ ಸಂಬಂಧಪಟ್ಟಿದ್ದಾ?.
ಪತ್ರಕರ್ತನ ವೃತ್ತಿಗೂ ಹಾಗೂ ಜೀವನಕ್ಕೂ ಬೇರೆ ಬೇರೆ ಆಯಾಮಗಳು ಇವೆ. ವೃತ್ತಿ ಮಾಡುತ್ತಿರುವ ಪತ್ರಕರ್ತರ ಜೀವನದಲ್ಲಿ ಒಂದೂ ತಪ್ಪು ಮಾಡದಂತೆ ನಡೆಯಬೇಕು ಎನ್ನುವುದು ಎಷ್ಟು ಸರಿ?. ಈ ಸಮಯದಲ್ಲಿ ಹಿರಿಯರೊಬ್ಬರು ಹೇಳಿದ ಒಂದು ಮಾತನ್ನು ನೆನೆಸಿಕೊಳ್ಳಬೇಕಾಗುತ್ತದೆ. "ಮನುಷ್ಯನನ್ನು ಅವನ ದೌರ್ಬಲ್ಯಗಳ ಸಹಿತ ಪ್ರೀತಿಸು, ಆಗ ನೀನು ನಿಜವಾಗಲೂ ಮನುಷ್ಯನಾಗುತ್ತೀಯಾ" ಎಂಬುದು.
ಆ ವಾರಪತ್ರಿಕೆಯಲ್ಲಿ ಬಂದಿರುವುದರ ಬಗ್ಗೆ ಹಲವು ಸ್ನೇಹಿತರು ತಮ್ಮ ಹಲವು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನೊಬ್ಬನ್ನು ಗುರಿಯಾಗಿಸಿಕೊಳ್ಳುವುದೇ ಪತ್ರಿಕೋದ್ಯಮ ಎಂಬುದನ್ನು ನನಗೆ ಬರೆಯುವುದನ್ನು ಕಲಿಸಿದ ಹಿರಿಯರು ಹೇಳಿಕೊಟ್ಟಿಲ್ಲ. ಅದಕ್ಕೆ ನಾನು ಋಣಿ. ಒಂದು ವ್ಯವಸ್ಥೆಯನ್ನು ಹಾಗೂ ಆ ವ್ಯವಸ್ಥೆಯಿಂದ ನಿಜವಾಗಲೂ ಶೋಷಣೆ ನಡೆಯುತ್ತಿದೆಯೇ ಎಂಬುದನ್ನು ವರದಿ ಮಾಡಲು ಕಲಿ ಎಂದು ಹೇಳಿಕೊಟ್ಟರು. ಅದನ್ನು ನಾನು ನನ್ನ ಮಿತಿಯಲ್ಲಿ ಪಾಲಿಸಿದ್ದೇನೆ.ಇದನ್ನು ನನ್ನ ಕಿರಿಯರಿಗೆ ಹೇಳಿಕೊಡುತ್ತಿದ್ದೇನೆ.
ಆ ವರದಿಯನ್ನು ಓದಿದ ಹಾಗೂ ಪತ್ರಿಕೆಯ ಬಗ್ಗೆ ಅನಾರೋಗ್ಯಕರವಾಗಿ ಸುದ್ದಿ ಹರಡುತ್ತಿರುವುದನ್ನು ಕೇಳಿದ ನನ್ನ ಆತ್ಮೀಯರು ಆದ ಹಿರಿಯರೊಬ್ಬರು " ನಿಮ್ಮ ಬದ್ಧತೆಯಿಂದ ಹೊರಬರುವ ಪತ್ರಿಕೆ ಮಾತ್ರ ಈ ಎಲ್ಲ ಟೀಕೆಗಳಿಗೆ ಉತ್ತರ ನೀಡಬಲ್ಲದು" ಎಂದು ಹೇಳಿದರು. ಅದು ನನಗೆ ಸತ್ಯವೆನಿಸುತ್ತದೆ.

Thursday, August 13, 2009

ಪತ್ರಿಕೆಗಳು ಬರುತ್ತವೇ ಸುಮ್ಮನಿರು..!

ಹೇಳಿ ಕೇಳಿ ಕಳೆದ ೧೪ ವರ್ಷಗಳಿಂದ ಪತ್ರಿಕೆಯಲ್ಲಿ ಉಸಿರಾಗಿ ದುಡಿದ ನನಗೆ(ಹಾಗೆ ಅಂದುಕೊಳ್ಳುತ್ತೇನೆ) ತಕ್ಷಣ ಕಾರಣಾತಂರದಿಂದ ಇದ್ದ ಪತ್ರಿಕೆಯೊಂದನ್ನು ಬಿಟ್ಟು ಮೂರು ತಿಂಗಳು ಮನೆಯಲ್ಲಿ ಕುಂತರೆ ಹೆಂಗಾಗಬೇಡ..!?
ಇದು ನನ್ನ ವಿಷಯವಲ್ಲ..ಬಹುತೇಕ ಪತ್ರಕರ್ತರ ಕುಟುಂಬಗಳು ಕೆಲಸವಿಲ್ಲದ ಆ ತಲ್ಲಣಗಳನ್ನು ಅನುಭವಿಸಿಯೇ ಇರುತ್ತಾರೆ. ಹಾಗಾಗಿ ಕೆಲಸದಲ್ಲಿದ್ದ ಪತ್ರಿಕೆಯೊಂದನ್ನು ಬಿಟ್ಟು ಬಂದ ತಕ್ಷಣ ಒಂದಿಬ್ಬರು ಆತ್ಮಿಯರು ಪತ್ರಿಕೆಯೊಂದನ್ನು ಮಾಡುವ ಬಗ್ಗೆಯು ಯೋಚಿಸಿದರೂ,ಅದು ಬೇಡ ಎಂದು ಹೇಳಿ ನಾನೇ ಸುಮ್ಮನಾಗಿ ಬಿಟ್ಟೆ.
ಸಾಮಾಜಿಕ ನ್ಯಾಯದ ಬಗ್ಗೆ ಪುಟಗಟ್ಟಲೇ ವರದಿ ಮಾಡುವ ನಮ್ಮ ಪತ್ರಕರ್ತರಿಗೆ ಅದೇಷ್ಟು ಜಾತಿ ಅಭಿಮಾನವಿದೆ ಎಂದು ನಿಮಗೆ ತಿಳಿದರೆ ವಾಕರಿಕೆಯಾಗದಿರದು. ನೈತಿಕತೆ, ಪ್ರಾಮಾಣಿಕತೆ ಹಾಗೂ ಜಾತಿ ಹೆಸರಿನಲ್ಲಿ ಅದೆಷ್ಟೋ ಪತ್ರಕರ್ತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿದ ಕೀರ್ತಿ ನಮ್ಮೂರಿನ ಕೆಲ ಪತ್ರಕರ್ತರಿಗೆ ಸಲ್ಲಬೇಕು. ಹಾಗಾಗಿ ಯಾರ ಬಳಿಯೂ ಕೆಲಸ ಕೇಳುವ ಅಥವಾ ಅದನ್ನು ದಕ್ಕಿಸಿಕೊಳ್ಳುವ ಹೊಸ ಪ್ರಯತ್ನಗಳಿಗೆ ನಾನು ಕೈ ಹಾಕಲೇ ಇಲ್ಲ. ಮೂರು ತಿಂಗಳ ತಲ್ಲಣಗಳನ್ನು ಈ ಹಿಂದೆ ಹಲವು ಬಾರಿ ಅನುಭವಿಸಿದ್ದರಿಂದ ಅದು ಹೊಸ ಅನುಭವ ಎನಿಸಲೇ ಇಲ್ಲ.
ಆದರೆ, ಕೆಲ ಸ್ನೇಹಿತರು ಮಾತ್ರ ದಿನಕ್ಕೊಂದು ಸಲಹೆ, ಸಾಂತ್ವನ ನೀಡುತ್ತಲೇ ಇದ್ದರು. ಕೆಲವರು ಆತ್ಮೀಯತೆಯಿಂದಲೇ ಬೇರೆ ಪತ್ರಿಕೆಗಳಿಗೆ ಸೇರಿಕೊಳ್ಳುವ ಅದಕ್ಕೆ ಬೆಂಬಲ ನೀಡುವ ಮಾತನಾಡಿದರು. ಆದರೆ, ಅದನ್ನು ಕೆಲವರು ಹಾಳುಗೆಡವಲು ನಿಲ್ಲುತ್ತಾರೆ ಎಂಬ ವಿಷಯ ಗೊತ್ತಾದ ತಕ್ಷಣ ನಾನು ಸುಮ್ಮನಾಗಿಬಿಟ್ಟೆ.
ಕಳೆದ ಒಂದು ವಾರದ ಹಿಂದೆ ಕನ್ನಡಪ್ರಭದ ಸಂಪಾದಕ ರಂಗನಾಥ ಅವರು ಪತ್ರಿಕೆ ಬಿಟ್ಟು ಸುವರ್ಣ ಟಿ.ವಿ ಸೇರಿರುವ ವಿಚಾರ ಹಾಗೆಯೇ ಅವರ ಸಮೂಹದಿಂದಲೇ ಸುವರ್ಣ ಕರ್ನಾಟಕ ಎಂಬ ಪತ್ರಿಕೆ ಬರುತ್ತದೆ ಎಂಬ ಸುದ್ದಿ ತಿಳಿದ ಸ್ನೇಹಿತರು ನನಗೆ ಮತ್ತಷ್ಟು ಸಲಹೆ ನೀಡಲು ಮುಂದಾದರು.
ಏಷಿಯನೆಟ್ ಸಮೂಹ, ವಿಜಯಸಂಕೇಶ್ವರ ಹಾಗೂ ರೆಡ್ಡಿ ಸಮೂಹದಿಂದ ಮೂರು ಪತ್ರಿಕೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ನೀನೇನು ಹೆದರಬೇಡ ಎಂದು. ನಿಜವಾಗಿಯು ಅದು ಸಂತೋಷದ ವಿಚಾರವೇ. ಆದರೆ, ಜಾತಿ ಮತ್ತು ಪ್ರಾಮಾಣಿಕರು ಎಂಬ ಸೋಗಿನ ಹೆಸರಿನಲ್ಲಿ ಮೂರು ಪತ್ರಿಕೆಗಳಲ್ಲಿ ಹೊಸ ಹೊಸ ಗುಂಪು ಹುಟ್ಟಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಯಾರು ಸಂಪಾದಕರಾಗುತ್ತಾರೋ ಅವರು ತಮ್ಮ ಜಾತಿಯ ಬಗ್ಗೆ ಒಲವು ಇಟ್ಟುಕೊಳ್ಳವುದಿಲ್ಲ ಎಂಬುದು ಸುಳ್ಳು ಮಾತು. ಬಹುಶಃ ಸುವರ್ಣ ಟಿ.ವಿಯಿಂದ ಹೊರಬಂದಿರುವ ಶಶಿಧರ ಭಟ್ಟರು ಹಿರಿಯ ಪತ್ರಕರ್ತರಾಗಿದ್ದರೂ ಇಂತಹ ತಪ್ಪನ್ನು ಮಾಡಿದ್ದಾರೆ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ. ತಮ್ಮವರಿಗೆ ಅವರು ಮೊದಲ ಆದ್ಯತೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಈಗ ಪ್ರಾರಂಭವಾಗಲಿರುವ ಪತ್ರಿಕೆಗಳಿಗೆ ಯಾರು ಸಂಪಾದಕರಾಗುತ್ತಾರೆ ಎಂಬುದೇ ಕುತೂಹಲದ ವಿಷಯ. ಸಂಪಾದಕರು ನಿರ್ಧಾರವಾದ ನಂತರವಷ್ಟೇ ಅಲ್ಲಿನ ಸಿಬ್ಬಂದಿಯ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಬಿಡಬಹುದು. ಅದನ್ನು ಆಡಳಿತ ಮಂಡಳಿ ನಿರ್ವಹಿಸದೆ ಸಂಪಾದಕರ ತೀರ್ಮಾನಕ್ಕೆ ಬಿಡುವ ಸಾಧ್ಯತೆ ಹೆಚ್ಚಿರುವುದರಿಂದ ಜಾತಿವಾರು ಪತ್ರಕರ್ತರ ಹುಡುಕಾಟ ನಡದೇ ತೀರುತ್ತದೆ.
ಹಾಗಾಗಿ ಜಿಲ್ಲಾವಾರು ಆಯ್ಕೆಯಲ್ಲೂ ಜಾತಿ ಪ್ರಮುಖ ಪಾತ್ರ ವಹಿಸುವುದರಿಂದ ಅದರ ಬಗ್ಗೆ ಒಲವು ಇಟ್ಟುಕೊಳ್ಳುವುದು ಬೇಡ ಎನಿಸಿತು. ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪತ್ರಿಕೆಗಳ ಆಗಮನ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಆಶಿಸೋಣ.
ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ದಲಿತನೊಬ್ಬ ರಾಜ್ಯ ಮಟ್ಟದ ದಿನಪತ್ರಿಕೆಯೊಂದಕ್ಕೆ ಸಂಪಾದಕನಾಗುವ ಆರ್ಹತೆ ಇನ್ನು ಪಡೆದುಕೊಂಡಿಲ್ಲ ಎನ್ನುವುದು ನೋವು ತರುತ್ತದೆ. ಹಾಗೆ ಲೆಕ್ಕ ಹಾಕಿ ನೋಡಿದರೆ, ಈಗ ಇರುವ ಎಲ್ಲ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಒಂದೇ ಜಾತಿಗೆ ಸೇರಿದವರು. ಈ ನಾಡಿನ ಬಹುಸಂಖ್ಯಾತರಾಗಿರುವ ದಲಿತರಲ್ಲಿ ಒಬ್ಬ ಪತ್ರಕರ್ತ ಸಂಪಾದಕನಾಗುವ ಅರ್ಹತೆ ಪಡೆದಿಲ್ಲವೇ?. ಇದಕ್ಕೆ ಮತ್ತೆ ಪತ್ರಿಕೋದ್ಯಮದ ಜಾತಿ ಲೆಕ್ಕಚಾರ ಅಡ್ಡಗಾಲಾಗುತ್ತದೆ. ಅವರ ಪ್ರಾಮಾಣಿಕತೆಯ ಹೆಸರಿನಲ್ಲಿ ಜಾತಿ ಸೋಗು ಹಾಕಿಕೊಂಡ ಕುಂಟು ನೆಪಗಳು ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ಕಿವಿಕಚ್ಚುತ್ತವೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ.
ಹ್ಹಾ ಮರೆತಿದ್ದೇ...ಒಂದಿಷ್ಟು ಸ್ನೇಹಿತರು ಸೇರಿಕೊಂಡು ೫ಪಿಎಂ ಎಂಬ ಸಂಜೆ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ. ತೀರಾ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಸುದ್ದಿ ವೈವಿದ್ಯತೆಯಲ್ಲಿ ಒಬ್ಬ ಓದುಗನನ್ನು ಸೆಳೆಯಬಹುದು ಎಂಬ ಸಂಗತಿ ನಮಗೆ ಅರಿವಾಗಿದೆ. ಅದಕ್ಕಾಗಿ ತಯಾರಿ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ೨೫ ಕ್ಕೆ ಪತ್ರಿಕೆ ಮೊದಲ ಸಂಚಿಕೆ ನಿಮ್ಮ ಕೈಯಲ್ಲಿರುತ್ತದೆ.

Friday, August 7, 2009

ಸ್ವಗತ..

ಹುಟ್ಟಿನಿಂದ ಮಂತ್ರದಲ್ಲೆ
ಬೆಳೆದ
ಮಿರುಗುವ
ನನ್ನ ಮೈಗೆ
ಅವನೊಬ್ಬ ಬೇಕಾಗಿದ್ದ..
ಅವನೊಬ್ಬನೇ ಬೇಕಾಗಿದ್ದ..!
ಅವನದೋ
ಮತ್ತೆ ಮತ್ತೆ ಕಾಡುವ
ಮಣ್ಣಿನ ವಾಸನೆ..!
ಊರು ಹೊಡೆದ ಮಂತ್ರಗಳು
ನನ್ನೊಳಗಿನ ಹೆಣ್ತನಕ್ಕೆ
ಜೀವಕೊಡಲಾರವು ಅನ್ನಿಸಿದಾಗಲೆಲ್ಲಾ
ಅವನ ಕಣ್ಣು ನನ್ನ ಕನಸಾಗುತ್ತಿತ್ತು.
ಅವನೊಳಗಿನ ಬೆವರು
ನನ್ನ ಮೈಯೊಳಕ್ಕೆ ಇಳಿದರೆ..
ನಾನು ನಿಜವಾಗಿಯೂ
ಹೆಣ್ಣಾಗುತ್ತಿದ್ದೆ...
ಅಮ್ಮನ ಒಡಲಿನಿಂದ ಬಂದ
ಉಷಾಳಂತೆ..!

ನಾನು ತಪ್ಪೇ ಮಾಡಲಿಲ್ಲ..!?
ಮನುಷ್ಯರಾಗಲೂ ಬಿಡದ
ನಮ್ಮೊಳಗಿನ
ಮಂತ್ರ, ತಂತ್ರ,
ವೇದ, ಪುರಾಣಗಳಿಗೆ
ಲಜ್ಜೆಗಳಿರಲಿಲ್ಲ..ಅದು ಗೊತ್ತೂ ಇರಲಿಲ್ಲ..
ಅಮ್ಮನ ಮೌನ
ಅಪ್ಪನ ಮಂತ್ರದೊಳಗೆ
ಕಳೆದು ಹೋಗುತ್ತಲೇ
ನಾನು ರುದ್ರನ ಕಸುವಿಗೆ
ಕೂಸಾಗಿದ್ದೆ..
ಅವನ ಹಟ್ಟಿಯೊಳಗೆ
ನಾನು ಮತ್ತೆ ಮತ್ತೆ ಹೆಣ್ಣಾಗಿದ್ದೆ..!

ಅವನು ಶರಣನಾದ
ನನ್ನ ರುದ್ರನಾಗಲಿಲ್ಲ..
ಕಸುವಿಗೆ ಕುಲಾವಿ ಹೊಲೆಸಲು
ಹಾತೊರೆದ
ನಮ್ಮ ಪ್ರೇಮದಾಚೆ
ಬಸವಣ್ಣನ ಶರಣತನ
ಅಪ್ಪನ ಮಂತ್ರಗಳು
ನನ್ನ ರುದ್ರನನ್ನು ಕೊಂದು ಹಾಕಿದವು..
ಮತ್ತೆ ನಾನೀಗ
ಬ್ರಾಹ್ಮಣರ ವಿಧುವೆ...
ಅಲ್ಲಲ್ಲ
ಅವರ ತಂತ್ರಗಳಿಗೆ
ತಲೆ ಕೊಟ್ಟ
ರುದ್ರನ ಪತ್ನಿ...!