Saturday, September 12, 2009

ಹೇಗೆ ಬದುಕಬೇಕು?

ನನ್ನ ಹಿಂದಿನ ಲೇಖನಕ್ಕೆ ಗೆಳೆಯರು ಸ್ಪಂದಿಸಿದ್ದಾರೆ. ಮೊದಲಿಗೆ ಅವರಿಗೆಲ್ಲರಿಗೂ ನನ್ನ ವಂದನೆಗಳು. ಬರಹಗಳೆಂದರೆ ಟೀಕೆ ಮತ್ತು ಮೆಚ್ಚುಗೆಯ ಮಿಶ್ರಣವಿದ್ದಾಗಲೇ ಅದಕ್ಕೆ ನಿಜವಾದ ಅರ್ಥ ಸಿಗುವುದು ಎಂದು ನನ್ನ ತಿಳವಳಿಕೆ. ಬಹುಶಃ ಎಲ್ಲರದು ಕೂಡ. ಅದಕ್ಕಾಗಿ " ಪತ್ರಿಕೆಗಳು ಬರುತ್ತವೇ ಸುಮ್ಮನಿರು" ಲೇಖನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಿತರಿಗೂ ನನ್ನ ಧನ್ಯವಾದ ಹೇಳುತ್ತೇನೆ.
ಲೇಖನ ಓದಿದ ಕೆಲ ಗೆಳೆಯರು ಬ್ಲಾಗ್ ಅಪಡೇಟ್ ಮಾಡುವಂತೆ, ಏನಾದರೂ ಬರೆಯುವಂತೆ ಒತ್ತಾಯ ಮಾಡುತ್ತಲೇ ಬಂದರು. ಈ ನಡುವೆ ನನ್ನ ಪತ್ರಿಕೆಯ ಕೆಲಸದ ನಡುವೆ ಒತ್ತಡದಲ್ಲಿದ್ದರಿಂದ ಬಹಳಷ್ಟು ಬಾರಿ ಬರೆಯಬೇಕು ಎಂದುಕೊಂಡು ಆಗದೇ ಕೈ ಚೆಲ್ಲುತ್ತಿದ್ದೇ. ಆದರೆ, ಕೆಲವು ನೋವುಗಳನ್ನು ಬರೆಯಬೇಕಾಗಿ ಬಂತು. ನಾನು ಗೌರವಿಸಲ್ಪಡುವ ಹಾಗೂ ಅದರಲ್ಲಿನ ಮೌಲ್ಯಗಳನ್ನು ಬೆಂಬಲಿಸುವ ವಾರಪತ್ರಿಕೆಯೊಂದು ನನ್ನ ಹಾಗೂ ನನ್ನ ಸ್ನೇಹಿತರ ಕುರಿತು ಒಂದಿಷ್ಟು ನೋವು ತರುವ ವರದಿಯೊಂದನ್ನು ಪ್ರಕಟಿಸಿದೆ. ಬಹುಶಃ ಸ್ಥಳೀಯವಾಗಿ ನಾವು ಗೆಳೆಯರ ಬಳಗ ಕನ್ನಡ ಸಂಜೆ ದಿನಪತ್ರಿಕೆಯೊಂದನ್ನು ಹೊರತರುತ್ತಿರುವ ಬಗ್ಗೆ "ಇಷ್ಟವಿಲ್ಲದ" ಗುಂಪು ಇದಕ್ಕೆ ಅತಿರಂಜಿತ ಪುರಾವೆಗಳನ್ನು ಅವರಿಗೆ ನೀಡಿರುವ ಸಾಧ್ಯತೆಗಳಿವೆ.
ಆ ಪತ್ರಿಕೆಯಲ್ಲಿ ವರದಿ ಬಂದಿರುವ ಬಗ್ಗೆ ಸ್ನೇಹಿತರೊಬ್ಬರು ನನಗೆ ಹೇಳಿದಾಗ ನಾನು ನಂಬಲೇ ಇಲ್ಲ. ಕೊನೆಗೆ ಪತ್ರಿಕೆ ಓದಿ ಬೇಸರವಾಯಿತು. ಅದರಲ್ಲಿ ನಮ್ಮ ಬಗ್ಗೆ ಬಳಸಿರುವ ಪದಗಳನ್ನು ಕಂಡು ಆಶ್ಚರ್ಯವಾಯಿತು. ನಿಜವಾಗಲೂ ಆ ಪತ್ರಿಕೆಯ ಸಂಪಾದಕರು ಅದನ್ನು ಪರಿಶೀಲಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಅದಕ್ಕಾಗಿ ಈ ಲೇಖನದ ಮೂಲಕ ಸ್ಪಷ್ಟನೆಯನ್ನು ಕೊಡುತ್ತಿಲ್ಲ. ಪತ್ರಿಕೆ ಆರಂಭಕ್ಕೆ ಕೆಲವರು ಪರೋಕ್ಷವಾಗಿ ತಡೆಯೊಡ್ಡಲು ಯತ್ನಿಸುವುದು ನನಗೆ ಹಾಸ್ಯಸ್ಪದವಾಗಿ ಕಾಣುತ್ತಿದೆ. ಆರೋಗ್ಯಕರ ಪೈಪೋಟಿಯ ಬಗ್ಗೆ ಮಾತನಾಡುವ ನಾವು , ಕೆಲವೊಂದು ವಿಷಯದಲ್ಲಿ ಅದೆಷ್ಟು ಕುಬ್ಜರಾಗುತ್ತೇವೆ ಎನ್ನವುದುಕ್ಕೆ ನಮ್ಮ ತಂಡದ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡುತ್ತಿರುವ ಪ್ರಯತ್ನಗಳು ಸಾಕ್ಷಿಯಾಗುತ್ತಿವೆ.
ಕೆಳವರ್ಗದ ಜನ ಸ್ವತಂತ್ರ್ಯವಾಗಿ ಕನಸು ಕಾಣುವ ಹಾಗೂ ಅದನ್ನು ನನಸಾಗಿಸಿಕೊಳ್ಳುವ ಯಾವುದೇ ಯತ್ನವನ್ನು ಕೆಲವರು ಸಹಿಸುವುದಿಲ್ಲ ಎನ್ನುವುದು ನನಗೆ ಕಳೆದ ೧೫ ದಿನಗಳಲ್ಲಿ ಸಂಪೂರ್ಣವಾಗಿ ಅರ್ಥವಾಯಿತು. ಅದಕ್ಕೆ ನಮ್ಮನ್ನು ಬೇರೆ ತಂತ್ರದ ಮೂಲಕ ವಾರಪತ್ರಿಕೆಯಲ್ಲಿ ಅಪ್ರಾಮಾಣಿಕ ಪತ್ರಕರ್ತರು ಎನ್ನವ ರೀತಿಯಲ್ಲಿ ಬಿಂಬಿಸಿ ಅದಕ್ಕೆ ಇಲ್ಲದ ಪುರಾವೆಗಳನ್ನು ನೀಡಿ ಸಮರ್ಥನೆಯ ವರದಿಯೊಂದನ್ನು ಪ್ರಕಟಿಸಿ ಖುಷಿಪಡುತ್ತಿರುವ ಮೈಸೂರಿನ ಕೆಲ ಸ್ನೇಹಿತರ ! "ಕೆಲಸ" ಕಂಡು ಬೇಸರವಾಗುತ್ತದೆ ಹಾಗೂ ಕೆಳವರ್ಗದ ಕೆಲ ಸ್ನೇಹಿತರ ಕೈಯಲ್ಲಿಯೇ ಅಂತಹ ಕುಕೃತ್ಯ ಕೆಲಸವನ್ನು ಮಾಡುತ್ತಿರುವುದನ್ನು ಕಂಡು ನನಗೆ ನೋವಾಗುತ್ತದೆ. ಹೇಗೆಂದರೆ ನಮ್ಮಿಂದಲ್ಲೇ ನಮ್ಮನ್ನು ಹೊಡೆದು ಹಾಕುವ ಬ್ರಿಟಿಷರ ಮಹಾತಂತ್ರದ ಮೂಲಕ!?
ಹಾಗಾದರೇ ಹೇಗೆ ಬದುಕಬೇಕು?
ಮತ್ತದೇ ಬಂಡವಾಳಶಾಹಿಗಳ ಅಡಿಯಲ್ಲಿ, ಜಾತಿಯ ಕಾರಣದಿಂದ ಅವರ ಮುಂದೆ ಮೈ ಬಗ್ಗಿಸುತ್ತಾ, ಅವರ ಹೇಳಿದ್ದೇ ಸತ್ಯ ಎನ್ನವಂತೆ ತಲೆದೂಗುತ್ತಾ, ಈ ಕೆಳವರ್ಗದ ಜನರಿಗೆ ನಮ್ಮನ್ನು ಬಿಟ್ಟು ಸ್ವತಂತ್ರವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಚುಚ್ಚುವ ಅವರ ಮಾತುಗಳನ್ನು ಮರುಮಾತನಾಡದೇ ಕೇಳಿಸಿಕೊಳ್ಳುತ್ತಾ...!?
ನಾನು ನನಗೆ ಪ್ರಾಮಾಣಿಕನಾಗಿದ್ದಾರೆ ಸಾಕು ಎಂದುಕೊಂಡಿದ್ದೇನೆ. ಇತರರ ಎದುರಿಗೆ ಪ್ರಾಮಾಣಿಕನಂತೆ ವೇಷ ತೊಟ್ಟು ನನ್ನೊಳಗೆ ಇತರರನ್ನು ತುಳಿಯುವ ಅಥವಾ ಅವರ ವಿರುದ್ಧ ಪಿತೂರಿ ಮಾಡುವ ಕುಕೃತ್ಯ ಅಪ್ರಾಮಾಣಿಕ ಮನಸ್ಸು ನನ್ನದಾಗುವುದು ಬೇಡ ಎಂದು ನನ್ನ ಬಯಕೆ. ಅದು ಬಹಳ ದಿನಗಳ ಕಾಲ ಉಳಿಯುವುದೂ ಇಲ್ಲ. ಮೊನ್ನೆ ಬ್ಲಾಗ್‌ಗಳಲ್ಲಿ ಅನಾಮಿಕರು ಚಿತ್ರವಿಚಿತ್ರ ರೀತಿಯಲ್ಲಿ ಟೀಕೆಗಳನ್ನು ಸುರಿಸುವುದು,ಅನಾರೋಗ್ಯಕರವಾಗಿ ಇನ್ನೊಬ್ಬರ ಕಾಲೆಳೆಯುವುದನ್ನು ಮಾಡುತ್ತಿರುವುದು ಸುದ್ದಿಯಾಗುತ್ತಿದೆ. ಅದರೆ, ಬಹಿರಂಗವಾಗಿಯೇ ಪತ್ರಕರ್ತರು,ತಮ್ಮ ಕೆಲವರನ್ನು ತುಳಿಯಲು ಇನ್ನಿಲ್ಲದಂತೆ ಹರಸಾಹಸ ಮಾಡುವುದು, ಅದಕ್ಕೆ ಮೌಲ್ಯಗಳ ಬಗ್ಗೆ ಮಾತನಾಡುವವರು ಜಾತಿ ಕಾರಣಗಳಿಂದ ತಲೆಯಾಡಿಸುವುದು ಕಂಡು ನನಗೆ ಅಸಹ್ಯವಾಗುತ್ತಿದೆ.
ಕೆಳವರ್ಗದ ಪತ್ರಕರ್ತರು ನೈತಿಕವಾಗಿರಬೇಕು, ಪ್ರಾಮಾಣಿಕರಾಗಿರಬೇಕು..ಹೀಗೆಲ್ಲಾ ಬಯಸುವ ಒಂದು ವರ್ಗದ ಸ್ನೇಹಿತರು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಪಡಿಸಲು ಯತ್ನಿಸುತ್ತಲೇ ಇರುತ್ತಾರೆ. ನನಗೆ ಇನ್ನೂ ಅರ್ಥವಾಗದ ಸಂಗತಿ ಎಂದರೆ ಪ್ರಾಮಾಣಿಕ ಎನ್ನುವುದಕ್ಕೆ ಯಾವುದಾದರೂ ಅಳತೆಗೋಲು ಇದೆಯೇ? ಪ್ರಾಮಾಣಿಕ ಎನ್ನವುದು ಮನುಷ್ಯತ್ವಕ್ಕೆ ಸಂಬಂಧಿಸಿದ್ದಾ ? ಅಥವಾ ಮನುಷ್ಯನ ವೇಷದ ಮೇಲ್ನೋಟಕ್ಕೆ ಸಂಬಂಧಪಟ್ಟಿದ್ದಾ?.
ಪತ್ರಕರ್ತನ ವೃತ್ತಿಗೂ ಹಾಗೂ ಜೀವನಕ್ಕೂ ಬೇರೆ ಬೇರೆ ಆಯಾಮಗಳು ಇವೆ. ವೃತ್ತಿ ಮಾಡುತ್ತಿರುವ ಪತ್ರಕರ್ತರ ಜೀವನದಲ್ಲಿ ಒಂದೂ ತಪ್ಪು ಮಾಡದಂತೆ ನಡೆಯಬೇಕು ಎನ್ನುವುದು ಎಷ್ಟು ಸರಿ?. ಈ ಸಮಯದಲ್ಲಿ ಹಿರಿಯರೊಬ್ಬರು ಹೇಳಿದ ಒಂದು ಮಾತನ್ನು ನೆನೆಸಿಕೊಳ್ಳಬೇಕಾಗುತ್ತದೆ. "ಮನುಷ್ಯನನ್ನು ಅವನ ದೌರ್ಬಲ್ಯಗಳ ಸಹಿತ ಪ್ರೀತಿಸು, ಆಗ ನೀನು ನಿಜವಾಗಲೂ ಮನುಷ್ಯನಾಗುತ್ತೀಯಾ" ಎಂಬುದು.
ಆ ವಾರಪತ್ರಿಕೆಯಲ್ಲಿ ಬಂದಿರುವುದರ ಬಗ್ಗೆ ಹಲವು ಸ್ನೇಹಿತರು ತಮ್ಮ ಹಲವು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನೊಬ್ಬನ್ನು ಗುರಿಯಾಗಿಸಿಕೊಳ್ಳುವುದೇ ಪತ್ರಿಕೋದ್ಯಮ ಎಂಬುದನ್ನು ನನಗೆ ಬರೆಯುವುದನ್ನು ಕಲಿಸಿದ ಹಿರಿಯರು ಹೇಳಿಕೊಟ್ಟಿಲ್ಲ. ಅದಕ್ಕೆ ನಾನು ಋಣಿ. ಒಂದು ವ್ಯವಸ್ಥೆಯನ್ನು ಹಾಗೂ ಆ ವ್ಯವಸ್ಥೆಯಿಂದ ನಿಜವಾಗಲೂ ಶೋಷಣೆ ನಡೆಯುತ್ತಿದೆಯೇ ಎಂಬುದನ್ನು ವರದಿ ಮಾಡಲು ಕಲಿ ಎಂದು ಹೇಳಿಕೊಟ್ಟರು. ಅದನ್ನು ನಾನು ನನ್ನ ಮಿತಿಯಲ್ಲಿ ಪಾಲಿಸಿದ್ದೇನೆ.ಇದನ್ನು ನನ್ನ ಕಿರಿಯರಿಗೆ ಹೇಳಿಕೊಡುತ್ತಿದ್ದೇನೆ.
ಆ ವರದಿಯನ್ನು ಓದಿದ ಹಾಗೂ ಪತ್ರಿಕೆಯ ಬಗ್ಗೆ ಅನಾರೋಗ್ಯಕರವಾಗಿ ಸುದ್ದಿ ಹರಡುತ್ತಿರುವುದನ್ನು ಕೇಳಿದ ನನ್ನ ಆತ್ಮೀಯರು ಆದ ಹಿರಿಯರೊಬ್ಬರು " ನಿಮ್ಮ ಬದ್ಧತೆಯಿಂದ ಹೊರಬರುವ ಪತ್ರಿಕೆ ಮಾತ್ರ ಈ ಎಲ್ಲ ಟೀಕೆಗಳಿಗೆ ಉತ್ತರ ನೀಡಬಲ್ಲದು" ಎಂದು ಹೇಳಿದರು. ಅದು ನನಗೆ ಸತ್ಯವೆನಿಸುತ್ತದೆ.

4 comments:

ಶ್ರೀನಿವಾಸಗೌಡ said...

ಪ್ರಿಯ ಹೆಗ್ಗೆರೆ, ನಿಮ್ಮ ಹಿಂದಿನ ಲೇಖನ ಮತ್ತು ಈಗಿನ ಲೇಖನ ಎರಡನ್ನೂ ಓದಿದೆ, ಆದರೆ ನಿಮ್ಮ ಹೊಸ ಪತ್ರಿಕೆ, ಮತ್ತು ಅದರ ಬಗ್ಗೆ ಬರೆದಿರುವ ಪತ್ರಿಕೆಯ ಲೇಖನ ಓದಿಲ್ಲ.ದೂರದ ಊರಲ್ಲಿ ಕುಳಿತು ನಾನ್ನ ಗ್ರಹಿಕೆ ಹೇಳುವುದಾದರೆ. ನೀವು ಪ್ರೀಮಾಣಿಕರಾಗಿದ್ದರೆ ಯಾರಿಗೂ ಹೆದರುವ ಪ್ರಶ್ನೆ ಉದ್ಬವಿಸುವುದಿಲ್ಲ. ನಿಮ್ಮ ಬಗ್ಗೆ ಬರೆದ ಸಂಪಾದಕರಿಗೆ ನಿಮ್ಮ ಆಕ್ಷೇಪ ಏನಂತ ತಿಳಿಸಿ. ನಿಮ್ಮ ಪ್ರಯತ್ನ ಮುಂದುವರೆಸಿ.

ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಾಗ ಕಳೆದುಹೋದ ದಿನಗಳು ಸಿಲ್ಲಿ ಯಾಗಿ ಮಾರ್ಪಡುತ್ತವೆ.

Unknown said...

ಹೆಗ್ಗೆರೆಯವರೇ ಕೆಲಸವಷ್ಟೇ ಮುಖ್ಯ ಗಾಂಧೀಜಿಯ ಜಾತಿ ನಮಗೆ ತಿಳಿದಿಲ್ಲ ಆದರೆ ಅವರ ಕೆಲಸ ನಮಗೆ ಸ್ಫೂರ್ತಿ.ನಿಮ್ಮಿಂದಲೂ ಅಂತ ಕೆಲಸವಾಗಲಿ,ಬೇರೆಯವರ ಸಣ್ಣತನದ ಕೆಲಸಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಇರಲಿ.

ಗೋವಿಂದ್ರಾಜ್ said...

ಮನದ ಮಾತಂತೆ ನಡೆಯದಿದ್ದರೆ ಮೆಚ್ಚನಾ ಪರಮಾತ್ಮನು! ನಿನ್ದಕರಿರುಥ್ತಾರೆ ಜಗದೊಳಗೆ. ಒದೆಯಿರಿ ಮುಂದೆ ನಡೆಯಿರಿ. ಜಯ ನಿಮ್ಮದಾಗಲಿ

Anonymous said...

There is a very high level (low level ?)of Caste ism in Mysore and mysore media in particular. The staff of one of the tv office in Mysore had refused to co operate with its reporter because of his colour of skin..