Thursday, February 12, 2009

ನಂಗೂ ಮೊದಲು ನಿಂಗೂ ಮೊದಲು ಈ ಪ್ರೀತಿ-ಪ್ರೇಮ!

ಈ ಪ್ರೀತಿ ಹೇಗೆ ಹುಟ್ಟತ್ತೆ? ಈ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಮೊದಲೇ ಈಗಿನ ಮೊಬೈಲ್ ಪ್ರೀತಿ ತನ್ನ ನವಿರತೆಯನ್ನು ಕಳೆದುಕೊಂಡಿದೆ. ಪ್ರೀತಿ ಮಾಡುವವರನ್ನು ಮದುವೆ ಮಾಡಿಸುತ್ತೇವೆ ಎನ್ನುವ ಶ್ರೀರಾಮನ ಭಕ್ತರಿಗೂ, ಅವರಿಗೆ ಸೆಡ್ಡು ಹೊಡೆದು ಪಿಂಕ್ ಚೆಡ್ಡಿ ಹಂಚುವ ಪ್ರೇಮಿಪರರಿಗೂ ಈ ಪ್ರಶ್ನೆ ಕೇಳಿ ನೋಡಿ..ಊಹ್ಹೂಂ ಉತ್ತರವೇ ಇಲ್ಲ.

ಅದು ೧೯೮೫ರ ದಿನಗಳು, ಈಗಿನಂತೆ ಕೈಗೆ ಕಾಲಿಗೆ ಮೊಬೈಲ್ ಸಿಗುತ್ತಿರಲಿಲ್ಲ. ಪ್ರೀತಿ ನಿವೇದನೆಗೆ ಪತ್ರವೊಂದೇ ಬಾಕಿ. ಅದು ಪ್ರೇಮಿಗಳ ಪಾಲಿಗೆ ದಿನನಿತ್ಯ ಪಠಿಸುವ ಬೈಬಲ್ ಇದ್ದಂತೆ. ಅಂತಹ ಸಂದರ್ಭದಲ್ಲಿಯೂ ಈ ಪ್ರೀತಿ ಪ್ರೇಮ ಯಾವುದೇ ಸದ್ದುಗದ್ದಲವಿಲ್ಲದೆ ಜಾರಿಯಲ್ಲಿತ್ತು. ಆಗಲೂ ಅಪ್ಪಟ ಪ್ರೇಮಿಗಳಿದ್ದರು. ಆದರೆ, ಅದಕ್ಕೊಂದು ಲಕ್ಷ್ಮಣ ರೇಖೆಯಿತ್ತು. ಅದನ್ನೇ ಪ್ರೇಮಿಗಳು ಬದುಕಿನ ಸಂಯಮ ಎಂದುಕೊಂಡಿದ್ದರು. ನಿಜವಾದ ಅರ್ಥದಲ್ಲಿ ಅದು ಪ್ರೇಮದ, ಪ್ರೀತಿಯ ಹೊಳಪು.




ಆಗ ಮೈಸೂರಿನ ಗಂಗೋತ್ರಿಗೆ ಓದಲೆಂದು ಬಂದ ಮಾತೂ ಬಾರದ, ಕಿವಿಯೂ ಕೇಳದ ಹುಡುಗನೊಬ್ಬ ಅಚನಾಕ್ ಆಗಿ ಕಾಲಿಲ್ಲದ ಹುಡುಗಿಯನ್ನು ಭೇಟಿಯಾಗುತ್ತಾನೆ. ಇಬ್ಬರದೂ ಅಪ್ಪಟ ಸ್ನೇಹ. ಅದಕ್ಕೆ ಕೊಂಡಿ ಅವರಿಬ್ಬರು ಮಲೆನಾಡಿನವರು ಎಂಬ ಒಂದು ಕಾರಣ.

ಸರಿ, ಎರಡು ವರ್ಷಗಳ ಓದಿನ ಅನಂತರ ಇಬ್ಬರು ತಮ್ಮ ತಮ್ಮ ಹಾಡುಪಾಡು ನೋಡಿಕೊಳ್ಳಲು ಹೊರಟರು. ಬಹುಶಃ ಅವರಿಬ್ಬರ ಸ್ನೇಹ ಗಂಗೋತ್ರಿಯ ಲೈಬ್ರರಿಯನ್ನು ದಾಟಿ ಆಚೆ ಇಣುಕಿರಲಿಲ್ಲ. ಆತನಿಗೆ ತನ್ನದು ಎಂದು ಹೇಳಿಕೊಳ್ಳುವ ಭಾವನೆಗಳು ಇದ್ದರೂ ಅದನ್ನು ಮಾತಿನಲ್ಲಿ ವ್ಯಕ್ತಪಡಿಸಲಾರ. ಆಕೆಗೆ ಅದು ಅರ್ಥವಾದರೂ, ಅದೆಲ್ಲಾ ಸಾಧ್ಯವೇ ಎಂಬ ದಿಗಿಲು.

ಒಂದೆರಡು ವರ್ಷಗಳು ಕಳೆದಿರಬೇಕು. ಈತ ಸ್ನೇಹಿತನಿಗಾಗಿ ಹೆಣ್ಣು ನೋಡಲು ಹೊರಟ. ಗೊತ್ತಿಲ್ಲದೆ ಆಕೆಯ ಮನೆಗೇ ಹೋಗಬೇಕೆ? ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮ. ಆಕಸ್ಮಿಕವಾಗಿ ಒಂದೆಡೆ ನೋಡಿದಾಗ ಇಬ್ಬರಿಗೂ ಆಶ್ಚರ್ಯ. ಸರಿ ಹುಡುಗಿಯ ನೋಡುವ ಶಾಸ್ತ್ರ ಆರಂಭವಾಯಿತು. ಹುಡುಗಿ ಬಂದಳು. ಒಂದು ಕಾಲು ಊನು. ನೋಡಲು ಸುಂದರವಾಗಿದ್ದರೂ ಸ್ವಾಧೀನವಾಗಿಲ್ಲದ ಕಾಲು. ಹುಡುಗನಿಗೆ ಬಳುಕುವ ಕನ್ಯೆ ಬೇಕು. ಕಾಲಿನ ಕುಂಟನ್ನು ನೋಡುತ್ತಲೇ ಆತನ ಮುಖ ಸಣ್ಣದಾಯಿತು.

ಆದಾಗಿ ಐದಾರು ತಿಂಗಳು ಕಳೆದಿರಬೇಕು. ಆ ಹುಡುಗಿಗೆ ಯಾವುದೇ ಹುಡುಗ ನಿಶ್ಚಯವಾಗಲಿಲ್ಲ ಎಂಬ ಸುದ್ದಿ ಈತನ ಕಿವಿಗೆ ಬಿತ್ತು. ಸ್ನೇಹಿತನೂ ಆಕೆಯನ್ನು ತಿರಸ್ಕರಿಸದ ಸುದ್ದಿಯೂ ಗೊತ್ತಾಗಿತ್ತು. ಆದೇನು ನಿಶ್ಚಯಿಸಿಕೊಂಡನೋ ಏನೋ..ಆಕೆಗೆ ಒಂದು ಪತ್ರ ಬರೆದ. ಅದರ ಸಾರಂಶ ಸರಳ.

ಬದುಕು ನಾವುಂದುಕೊಂಡಂತೆ ನಿರ್ಧಾರವಾಗದಿದ್ದರೂ, ಅದನ್ನು ನಾವು ಇನ್ನೂ ಸುಂದರಗೊಳಿಸಬಹುದು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಮನಸ್ಸಿನಲ್ಲಿ ನನ್ನ ಕಿವಿಡುತನ ಮತ್ತು ಮೂಗ ಎಂಬ ಕುರಿತು ಯಾವುದೇ ಕೆಟ್ಟ ಭಾವನೆ ಇಲ್ಲದಿದ್ದರೆ, ನಾನು ನಿಮ್ಮೊಂದಿಗೆ ಸುಖವಾಗಿ ಬದುಕಬಲ್ಲೆ ಎಂಬ ವಿಶ್ವಾಸವಿದ್ದರೆ, ನಿಮ್ಮನ್ನು ವಿವಾಹವಾಗಲು ನಾನು ಸಿದ್ಧನಿದ್ದೆನೆ. ಖಂಡಿತ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ಪತ್ರದಲ್ಲಿ ಯಾವುದೇ ಉದ್ವೇಗ, ಆದರ್ಶ, ಆಕರ್ಷಣೆ ಇತ್ಯಾದಿಗಳಿರಲಿಲ್ಲ. ಅಥವಾ ಕುಂಟು ಹುಡುಗಿಗೆ ನಾನು ಬಾಳು ನೀಡುತ್ತೇನೆ ಎಂಬ ಒಣ ಅಹಂಭಾವದ ಪ್ರದರ್ಶನವೂ ಇರಲಿಲ್ಲ.

***

ಕೆಲ ದಿನಗಳ ಕಾಲ ಆಕೆಯಿಂದ ಉತ್ತರವಿಲ್ಲ. ಈತನಿಗೆ ತಾನು ಆಕೆಗೆ ಇಷ್ಟವಾಗಲಿಲ್ಲವೇನೋ ಎಂಬ ಕಾರಣಕ್ಕಾಗಿ ಸುಮ್ಮನಾದ. ಬದುಕಿಗೊಂದು ದಾರಿ ಹುಡುಕುವ ಅವಸರದಲ್ಲಿ ಮೈಸೂರಿಗೆ ಬಂದ. ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ತನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂಬ ಕಾರಣಕ್ಕೆ ಅದರ ಪ್ರಸ್ತಾಪವನ್ನೆ ಮರೆತುಬಿಟ್ಟ.

ಆಶ್ಚರ್ಯ! ಒಂದು ದಿನ ಆಕೆಯಿಂದ ಪತ್ರ.

ನಾನು ನಿಮ್ಮ ಬದುಕಿನಲ್ಲಿ ಜೊತೆಯಾಗಲು ಇಚ್ಚಿಸುತ್ತಿದ್ದೇನೆ. ನಾಳೆಯೇ ಮೈಸೂರಿಗೆ ಬರುತ್ತೇನೆ ಒಂದೇ ಸಾಲಿನ ಉತ್ತರ. ಮನತುಂಬಿ ಹೋದ. ಪತ್ರ ಬಂದ ಬೆಳಗ್ಗೆ ಆಕೆ ತನ್ನ ಸೂಟ್‌ಕೇಸ್‌ನೊಂದಿಗೆ ಮೈಸೂರಿನ ಆತನ ರೂಮಿನ ಮುಂದೆ ಹಾಜರ್. ಸರಿ ಎರಡು ದಿನದೊಳಗೆ ಸರಳ ವಿವಾಹ. ಇದ್ದ ಸಣ್ಣ ರೂಮಿನಲ್ಲಿಯೇ ಸಂಸಾರ ಆರಂಭ.

ಈತನಿಗೆ ಪರಿಪೂರ್ಣ ಕಿವಿಡುತನ, ಆಕೆಗೆ ಕಾಲಿನ ವಿಕಲತೆ. ಇವರಿಬ್ಬರು ಏನನ್ನು ಸಾಧಿಸಿಯಾರು? ಮುಂದೊಂದು ದಿನ ಈ ನಿರ್ಧಾರಕ್ಕೆ ಪ್ರಶ್ಚಾತ್ತಾಪ ಪಡುತ್ತಾರೆ ಎಂಬುದು ಇಬ್ಬರ ಮನೆಯವರ ಲೆಕ್ಕಾಚಾರ. ಜಾತಿ, ಕುಲ, ಎಲ್ಲ ಬೇರೆ ಬೇರೆಯಾದರೂ, ಇಬ್ಬರ ಮನಸ್ಸು ಒಂದಾಗಿತ್ತು.

ಇದೀಗ ಬೆಳೆದು ನಿಂತ ಇಬ್ಬರು ಮುದ್ದಾದ ಮಕ್ಕಳು, ಬದುಕಿನಲ್ಲಿ ಇದುವರೆಗೆ ಒಮ್ಮೆಯೂ ಒಬ್ಬರಿಗೆ ಒಬ್ಬರು ಹೊರೆ ಎಂದು ಭಾವಿಸಿಕೊಂಡೇ ಇಲ್ಲ. ಪ್ರೀತಿ ಪ್ರೇಮ ಎಂಬುದನ್ನು ಆಕರ್ಷಣೆಗೆ ಸೀಮಿತ ಮಾಡಿಕೊಳ್ಳಲಿಲ್ಲ.

ಆಶ್ಚರ್ಯವೆಂದರೆ, ದೊಡ್ಡ ಮಗಳು ಪೋಲಿಯೋ ಪೀಡಿತ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾಳೆ. ಅವರದೂ ಪ್ರೇಮ ವಿವಾಹ. ಅದು ಧರ್ಮ,ಧರ್ಮಗಳ ಅಂತರದಲ್ಲಿ. ಇಡೀ ಕುಟುಂಬವೇ ಸುಖಿ.

***

ಮೇಲಿನ ಘಟನೆಯನ್ನು ಪ್ರಸ್ತಾಪ ಮಾಡಿದ ಉದ್ದೇಶವಿಷ್ಟೇ. ಪ್ರೀತಿ ಎಂಬುದು ಎಲ್ಲಿ, ಹೇಗೆ, ಯಾವ ಕಾರಣಕ್ಕಾಗಿ ಹುಟ್ಟುತ್ತದೆ ಎಂಬುದು ಬಗೆಹರಿಯದ ಪ್ರಶ್ನೆ. ಆದರೆ, ಅದೊಂದು ಅಮೂರ್ತ ಭಾವ ಎನ್ನುವುದು ಸತ್ಯ. ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಮಾತಿನಂತೆ ಪ್ರೀತಿ ಎಂಬುದು ಜಾತಿ, ಧರ್ಮ, ಕುಲ, ಸಮುದಾಯ, ಸಮಾಜ, ರಾಜ್ಯ ಅಥವಾ ದೇಶ-ದೇಶಗಳನ್ನು ಮೀರಿದ್ದು.

ಫೆ.೧೪ ರಂದೆ ತನಗೆ ಪ್ರೀತಿ ಹುಟ್ಟುತ್ತದೆ, ಅವತ್ತಿನ ದಿನವೇ ತನ್ನ ಪ್ರೀತಿ ತೋಡಿಕೊಂಡರೆ ಆದಕ್ಕೊಂದು ಅರ್ಥ ಎನ್ನುವ ಮೂರ್ಖ ಕಾರಣಗಳು ಮತ್ತು ಜಾಗತೀಕರಣದ ಕೆಲವು ಸತ್ಯಗಳನ್ನು ನಾವುಗಳು ಅರಗಿಸಿಕೊಳ್ಳಲೇ ಬೇಕಾಗಿದೆ.

ಯಾವುದೇ ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಯಾಗದ ಕಾಲದಲ್ಲೂ ಈ ಪ್ರೀತಿ-ಪ್ರೇಮ ಎಂಬ ವಿಚಾರ ಜೀವಂತವಾಗಿ ಈ ಸಮುದಾಯದ ಸ್ವಾಸ್ಥವನ್ನು ಕಾಪಾಡುತ್ತಲೇ ಬಂದಿದೆ. ಆದರೆ, ಅದನ್ನು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳುವ ಮತ್ತು ಆ ಮತ್ತಿನಲ್ಲೇ ಅದನ್ನು ಆಚರಿಸಲು ಹೊರಡುವ ಮನಸುಗಳಿಗೆ ಮೇಲಿನ ಉದಾಹರಣೆ ಸರಿಯಾದ ಪಾಠ ಎನ್ನುವುದು ನನ್ನ ಅನಿಸಿಕೆ.

***

ಪ್ರೀತಿ ಎನ್ನುವುದು ಎರಡು ಮನಸುಗಳಿಗೆ ಸಂಬಂಧಿಸಿದ ವಿಚಾರ. ಅದೊಂದು ತೀರಾ ಖಾಸಗಿ ಮತ್ತು ವೈಯಕ್ತಿಕ ಎಂಬುದು ನಮ್ಮ ಶ್ರೀರಾಮನ ಭಕ್ತರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಜಾಣ ಪೆದ್ದರಂತೆ ಆಡುವುದು ಅವರಿಗೆ ಆಗಿರುವ ತರಬೇತಿಯ ಸಾರಂಶ. ಆದರೆ, ವ್ಯಾಲೆಂಟೇನ್ಸ್ ಡೇ ಎನ್ನವುದನ್ನು ಇನ್ನಷ್ಟು ರೋಚಕವಾಗಿ ಮಾಡಲು ಹೊರಟ ಶ್ರೀರಾಮನ ಭಕ್ತರು ಮತ್ತು ಜಾಗತೀಕರಣದ ಮೂಸುದಾರರು, ಅದನ್ನು ಇಂದಿನ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿರುವುದು ಮಾತ್ರ ಅತ್ಯಂತ ಕ್ಷುಲ್ಲಕವಾಗಿ ಕಾಣುತ್ತಿದೆ.

ಪ್ರೀತಿ ಮಾಡುವವರನ್ನು ವಿರೋಧಿಸುವ ಮನೆಯವರಿಗೆ ಬುದ್ಧಿ ಹೇಳಿ, ಅವರಿಗೆ ಜಾತಿ ವಿನಾಶದ ಕಲ್ಪನೆಯ ಬಗ್ಗೆ ಗೌರವ ಹುಟ್ಟಿಸಬಹುದಾದ ಕೆಲಸವನ್ನು ಶ್ರೀರಾಮನ ಭಕ್ತರು ಮಾಡಿದ್ದರೆ ಅದು ನಿಜವಾಗಿಯೂ ಒಂದು ಸಂಘಟನೆ ಹಾಗೂ ಒಂದು ಶಕ್ತಿಯಾಗಿ ಇಡೀ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯು ಮಾದರಿ ಕಾರ್ಯ ಎಂದು ಬೆನ್ನುತಟ್ಟಬಹುದಿತ್ತು. ಅದರೆ, ಈಗ ಆಗುತ್ತಿರುವುದೇ ಬೇರೆ. ಪ್ರೀತಿಯನ್ನು ರಸ್ತೆಯಲ್ಲಿಟ್ಟು ಮಾರಾಟಕ್ಕೆ ಕುಳಿತ ಬಂಡವಾಳಶಾಹಿಗಳು ಇದೊಂದೆ ದಿನ ನಿಮ್ಮ ಅದ್ಬುತ ಪ್ರೀತಿ ಉಕ್ಕಿ ಹರಿಯುತ್ತದೆ ಎಂದು ಇನ್ನಿಲ್ಲದ ಬೊಗಳೆ ಬಿಡುತ್ತಾ ತಮ್ಮ ಸರಕು ಖಾಲಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದರೆ, ಇತ್ತ ಶ್ರೀ ರಾಮನ ಭಕ್ತರು ಈ ಸಮಾಜಕ್ಕೆ ಪ್ರೇಮಿಗಳೇ ನಿಜವಾದ ಭಯೋತ್ಪಾದಕರು ಎಂಬರ್ಥದಲ್ಲಿ ತಾಳಿ ಹಿಡಿದು ಮದುವೆ ಮಾಡಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದೇನು ಹುಚ್ಚರ ಸಂತೆಯೇ?

***

ಪ್ಯಾರ ಕಿಯಾ ತೋ ಡರ್‌ನಾ ಕ್ಯಾ..

ಪ್ರೇಮಿಗಳೇ, ನಿಜವಾಗಿ ನಾಳೆಯೊಂದೇ ದಿನ ಪ್ರೀತಿ ಹುಟ್ಟುವುದಿಲ್ಲ. ಅಥವಾ ಅದೊಂದು ಪವಿತ್ರ ದಿನವೂ ಅಲ್ಲ. ಪ್ರೇಮಿಗಳಿಗೆ ದಿನವೂ ಪವಿತ್ರ. ಆದರೆ, ನಿಮ್ಮೊಳಗೆ ಪ್ರೀತಿ ಮೊಳಕೆಯೊಡೆಯುವಾಗ ಅದಕ್ಕೆ ಯಾರಪ್ಪಣೆಯೂ ಬೇಡ. ನಾವು ಬೇಡವೆಂದರೂ, ಈ ಸಮಾಜ ಎದುರಾಗಿ ನಿಂತರೂ ನಿಮ್ಮೊಡನೆ ಗಟ್ಟಿಯಾಗಿ ನಿಲ್ಲುವುದು ಅದೊಂದೆ. ಅದಕ್ಕೊಂದು ದೀರ್ಘವಾದ ಆಯುಷ್ಯ ಇದೆ. ಅದು ನಿಮ್ಮ ಬದುಕಿನ ಕೊನೆಯವರೆಗೆ ನಡೆದು ಬರುತ್ತದೆ.

ಅಂತಹದೊಂದು ಪವಿತ್ರ ಬಂಧನಕ್ಕೆ ಒಳಗಾಗಿರುವ ನೀವು ಯಾರಿಗೂ ಹೆದರುವುದು ಅವಶ್ಯಕವಿಲ್ಲ. ಪ್ರೀತಿಸುವುದು ನಿಮ್ಮ ಹಕ್ಕು. ಅದನ್ನು ಇನ್ನೊಬ್ಬ ಕಸಿದುಕೊಳ್ಳಲಾಗದು.

***

ಈ ಪ್ರೀತಿ ಒಂಥರಾ ಕಚಗುಳಿ..

ಇಂತಹ ಪ್ರೀತಿಯ ಬಗ್ಗೆ ಅದೆಷ್ಟು ಕಾದಂಬರಿಗಳು, ಕಥೆಗಳು, ಕವನಗಳು ಬಂದು ಹೋಗಿದೆಯೋ ಗೊತ್ತಿಲ್ಲ. ಎಲ್ಲ ಪ್ರೀತಿಯು ಒಂದೇ. ಆದರೆ ಪ್ರೀತಿಯ ಕುರಿತು ಇದ್ದ ಸಾಫ್ಟ್ ಕಲ್ಪನೆಗಳೆಲ್ಲಾ ಇಂದು ಕರಗಿಹೋಗಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪ್ರೀತಿಸುವವರಲ್ಲೂ ಬದಲಾವಣೆಯಾಗಿದೆ. ಪ್ರೀತಿಯ ಭಾಷೆ ಬದಲಾಗುತ್ತಿದೆ. ಆದರೆ, ಹೃದಯ, ಮನಸು ಮಾತ್ರ ಒಂದೇ. ಎಲ್ಲ ಪ್ರೇಮಿಗಳಲ್ಲಿ ಆರಂಭದ ದಿಗಿಲು, ನಾಚಿಕೆ ಇದ್ದೇ ಇರುತ್ತದೆ. ಅದು ಬಿಟ್ಟೂಬಿಡದೆ ಕಾಡುತ್ತದೆ. ತಾವೇ ಜಗತ್ತಿನ ಅಮರ ಪ್ರೇಮಿಗಳು ಎಂಬರ್ಥದಲ್ಲಿಯೇ ಇರುತ್ತಾರೆ. ಆದರೆ, ತದನಂತರದ ಬೆಳವಣಿಗೆಯಲ್ಲಿ ಎಲ್ಲವೂ ಉಲ್ಟಾ ಪಲ್ಟ.

ಇವತ್ತು ಪ್ರೇಮಿಗಳು, ನಾಳೆ ನಾವ್ಯಾರೋ ಗೊತ್ತೇ ಇಲ್ಲ ಎಂದು ವರ್ತಿಸುವ ಪ್ರೇಮಿಗಳದ್ದು ನಿಜವಾದ ಪ್ರೀತಿಯಲ್ಲ. ಅದೊಂದು ಆ ಕ್ಷಣದ ಆಕರ್ಷಣೆ. ಪ್ರೀತಿ ಮನಸ್ಸಿಗೆ ಸಂಬಂಧಿಸಿದ್ದು. ಅದೊಂದು ಪರಿಶುದ್ಧವಾದ ಪರಿಧಿಯಲ್ಲಿ ತಿರುಗುತ್ತದೆ. ಅದನ್ನು ಕಾಪಾಡಿಕೊಳ್ಳುವುದಷ್ಟೆ ನಮ್ಮ ಕೆಲಸ. ಪ್ರೀತಿಯನ್ನು ವಿರೋಧಿಸುತ್ತಿರುವ ಶ್ರೀರಾಮಭಕ್ತರು ಒಮ್ಮೆ ಇತಿಹಾಸದ ಪ್ರೀತಿ ಪ್ರೇಮದ ಕಥೆಗಳನ್ನು ಓದಿಕೊಂಡರೇ ಒಳ್ಳೆಯದು.

***

No comments: