ಬಯಲ ಬೆಂಗಾವಲಿನಲ್ಲಿ ಕೆಟ್ಟು ನಿಂತಿರುವ ಎರಡು ಬಸ್‌ಗಳನ್ನೆ ವೇದಿಕೆಯಾಗಿಸಿಕೊಂಡು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ವಿರುದ್ಧ ಆದೇ ನೆಲದಲ್ಲಿ ನಿಂತು ಲೇವಡಿ ಮಾಡುತ್ತಾನೆ. ಯುದ್ಧ, ಜಾಗತೀಕರಣ, ಉದಾರೀಕರಣಗಳ ಬಗ್ಗೆ ವ್ಯಂಗ್ಯವಾಗಿ ಹಾಡು ಹೇಳುತ್ತಾನೆ. ಅಮೆರಿಕದ ಅಧ್ಯಕ್ಷನನ್ನು ಬಹಿರಂಗವಾಗಿ ತನ್ನ ನಾಟಕದ ಸಂಭಾಷಣೆಗಳಿಂದ ಹೀಗಳೆಯುತ್ತಾನೆ. ಹೀಗೆ ೩೦ ವರ್ಷಗಳಿಂದ ತನ್ನ ಕಾಯಕವನ್ನು ನೆಚ್ಚಿಕೊಂಡು ಬಂದಿದ್ದಾನೆ. ಇಂದಿಗೂ ರಟ್ಟೆ ಮುರಿದು ದುಡಿಯುತ್ತಾ ತನ್ನ ಹೊಲದಲ್ಲಿ ಬೆಳೆದ ಗೋಧಿಯಿಂದಲೇ ಬ್ರೆಡ್ ಮಾಡಿ ತಿಂದು ಬದುಕುತ್ತಾನೆ. ಬ್ರೆಡ್‌ವೊಂದೇ ಆತನ ನಿತ್ಯ ಆಹಾರ.
ಆತನ ಹೆಸರು ಪೀಟರ್ ಶೋಮನ್.
***
ಅದು ಎರಡನೇ ಮಹಾಯುದ್ಧದ ಕಾಲ. ಮಿತ್ರ ರಾಷ್ಟ್ರಗಳು ಜರ್ಮನಿಯ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿದ್ದವು. ಜರ್ಮನಿ ಸೈನಿಕರ ಶವಗಳ ಮೇಲೆ ಅವರ ಅಟ್ಟಹಾಸ ಮುಗಿಲು ಮುಟ್ಟಿತ್ತು. ಕಂಡಲೆಲ್ಲಾ ಹೆಣಗಳ ರಾಶಿ. ಆದರೆ, ಅದೊಂದು ಕುಟುಂಬ ಮಾತ್ರ ಬದುಕುಳಿದಿತ್ತು. ಏಕೆಂದರೆ ಆ ಕುಟುಂಬ ಯುದ್ಧದ ಸಮಯದಲ್ಲಿ ಎರಡೂ ಕಡೆಯವರಿಗೆ ಬ್ರೆಡ್ ಸರಬರಾಜು ಮಾಡುತ್ತಿತ್ತು. ಅನ್ನಕೊಟ್ಟವರನ್ನು ಕೊಲ್ಲಬಾರದೆಂಬ ನ್ಶೆತಿಕತೆಯಲ್ಲಿ ಅವರ ಕುಟುಂಬ ಸೇಫ್.
ಆದರೆ, ಆ ಕುಟುಂಬದ ಯಜಮಾನನಿಗೆ ಎಂದಾದರೂ ಒಮ್ಮೆ ಮಿತ್ರ ಪಕ್ಷಗಳ ಗುಂಡಿನ ದಾಳಿಗೆ ತುತ್ತಾಗುವುದು ಖಂಡಿತ ಎಂದು ಬಲವಾಗಿ ಅನಿಸತೊಡಗಿತು. ಸರಿ ವಯಸ್ಸಾದ ಈ ದೇಹ ಪ್ರಾಣ ತೆತ್ತರು ಸರಿ, ತನ್ನ ಮೊಮ್ಮಕ್ಕಳು ಬದುಕುಳಿಯಲಿ ಎಂಬ ಆಸೆಯಿಂದ ಒಂದು ದಿನ ಅವರನ್ನು ಕರೆದು ತನ್ನಲ್ಲಿ ಕೊಡಲು ಏನೂ ಇಲ್ಲ. ಆದರೆ, ನನ್ನ ಬಳಿ ಇರುವುದು ಬ್ರೆಡ್ ಮಾಡಲು ಬಳಸುವ ಈಸ್ಟ್‌ವೊಂದೆ. ಇದು ಇದ್ದರೆ ನೀವು ಬದುಕಬಹುದು ಎಂದು ಹೇಳಿ ಒಂದಿಷ್ಟು ಈಸ್ಟ್(ಬ್ರೆಡ್ ತಯಾರಿಕೆ ಬಳಸುವ ಉಳಿ ಬಂದಿರುವ ವಸ್ತು) ನೀಡಿದ.
ಅಲ್ಲಿಂದ ಅವರೆಲ್ಲಾ ಅಮೆರಿಕದ ಕಡೆಗೆ ವಲಸೆ ಹೊರಟರು. ನಗರ,ಪಟ್ಟಣಗಳನ್ನು ದಾಟುತ್ತಾ ಬಂದು ನಿಂತದ್ದು ಅಮೆರಿಕದಲ್ಲಿನ ಅಷ್ಟೇನು ಶ್ರೀಮಂತವಲ್ಲದ, ಆದರೆ, ಫಲವತ್ತಾದ ರಾಜ್ಯ ವಾರ್‍ಮೌಂಟ್ ಎಂಬಲ್ಲಿಗೆ.
***
ಆ ಮೊಮ್ಮಕ್ಕಳಲ್ಲಿ ಈ ಪೀಟರ್ ಶೋಮನ್ ಒಬ್ಬ. ಸುಮಾರು ೭೦ ವರ್ಷಗಳ ಹಿಂದೆ ತನ್ನ ತಾತ ನೀಡಿದ ಈಸ್ಟ್‌ನಿಂದಲೇ ಈತ ಬ್ರೆಡ್ ತಯಾರಿಸುತ್ತಾ ಅದನ್ನು ತಿನ್ನುತ್ತಲೇ ಬದುಕು ಸಾಗಿಸಿದ್ದಾನೆ. ಅಮೆರಿಕ ಅಷ್ಟೇ ಅಲ್ಲ ವಿಶ್ವದ ಬಹುಭಾಗದಲ್ಲಿ ಪೀಟರ್ ಪ್ರೀತಿಯಿಂದ ಪೀಟರ್ ಅಜ್ಜ ಎಂದೇ ಕರೆಯಲ್ಪಡುತ್ತಾನೆ. ಆತನನ್ನು ನೋಡಲೆಂದೇ ಸಾವಿರಾರು ಮೈಲಿಗಳಿಂದ ಹಣ ಖರ್ಚು ಮಾಡಿಕೊಂಡು ಆತನಿರುವ ವಾರ್‍ಮೌಂಟ್ ರಾಜ್ಯದ ಗ್ಲೋವರ್ ಎಂಬ ಸ್ಥಳಕ್ಕೆ ನಿತ್ಯ ಜನರು ಬಂದು ಹೋಗುತ್ತಾರೆ.
ರಜಾದಿನಗಳಲ್ಲಿ ಪೀಟರ್ ಅಜ್ಜನ ಜಾತ್ರೆ ನಡೆಯುತ್ತದೆ!
***
೧೯೩೪ ರಲ್ಲಿ ಜರ್ಮನಿಯ ಸಿಸೇಲ್ ಎಂಬಲ್ಲಿ ಹುಟ್ಟಿದ ಈ ಪೀಟರ್ ಶೋಮನ್ ಮೂಲತಃ ನೃತ್ಯ ಮತ್ತು ಶಿಲ್ಪಕಲಾವಿದ. ಖ್ಯಾತ ನಾಟಕಕಾರ ಬ್ರೆಕ್ಟ್‌ನ ತಳಿ. ಎರಡನೇ ಮಹಾಯುದ್ಧದ ಅನಂತರ ೧೯೬೦ ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ತನ್ನ ಪತ್ನಿ ಎಲಿಕಾಳೊಂದಿಗೆ ವಲಸೆ ಬಂದ ಆತ ಅಲ್ಲಿ ಬ್ರೆಡ್ ಅಂಡ್ ಪುಪೆಟ್ ಥಿಯೇಟರ್ ಕಟ್ಟಿದ. ಆದರೆ, ಅದ್ಯಾಕೋ ನ್ರ್ಯೂಯಾರ್ಕ್ ನಗರದಲ್ಲಿ ಇರಲು ಆತನಿಗೆ ಸಾಧ್ಯವಾಗಲಿಲ್ಲ. ಅಲ್ಲಿಂದ ನೇರವಾಗಿ ಬಂದದ್ದು ವಾರ್‍ಮಂಟ್ ರಾಜ್ಯದ ಗ್ಲೋವರ್ ಎಂಬಲ್ಲಿಗೆ. ತನ್ನ ಹೆಂಡತಿಯ ಕಡೆಯಿಂದ ಬಂದ ಅಲ್ಪ ಜಮೀನಿನಲ್ಲಿಯೇ ತನ್ನ ನಿತ್ಯ ಜೀವನಕ್ಕೆ ಬೇಕಾದ ಆಹಾರ ಬೆಳೆಯಲು ಆರಂಭಿಸಿದ. ಬೆಳೆದ ಗೋಧಿಯಲ್ಲಿಯೇ ತನ್ನ ತಾತ ಕೊಟ್ಟ ಈಸ್ಟ್‌ನಿಂದ ಬ್ರೆಡ್ ತಯಾರಿಸಿ ಬದುಕುವುದನ್ನು ರೂಢಿಮಾಡಿಕೊಂಡ. ಆನಂತರ ನಿಧಾನವಾಗಿ ತನ್ನ ರಂಗಭೂಮಿ ತಂಡವನ್ನು ಸಜ್ಜುಗೊಳಿಸಿಕೊಂಡು ಸಣ್ಣ ಪ್ರಹಸನಗಳಿಂದ ಕೂಡಿದ ನಾಟಕಗಳನ್ನು ಮಾಡಲು ಆರಂಭಿಸಿದ. ವಿಶ್ವವನ್ನು ತನ್ನ ಜಾಗತೀಕರಣದಿಂದಲೇ ನಾಶ ಮಾಡಲು ಹೊರಟ ಅಮೆರಿಕದ ಬಗ್ಗೆ ಪೀಟರ್‌ಗೆ ಎಲ್ಲಿಲ್ಲದ ಅಸಹನೆ. ಅದನ್ನು ನಾಟಕ ಮತ್ತು ಪುಪೆಟ್(ಗೊಂಬೆಗಳು) ಪ್ರದರ್ಶನದಲ್ಲಿ ವ್ಯಕ್ತ ಮಾಡತೊಡಗಿದ. ನಿಧಾನವಾಗಿ ಅದು ಜನಪ್ರಿಯವಾಗತೊಡಗಿತು. ಸುಮಾರು ೩೦ ವರ್ಷಗಳ ಕಾಲ ಸರಕಾರದ ವಿರುದ್ಧ ಮೌನವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾನೆ. ಹಾಗಂತ ಎಲ್ಲಿಯೂ ಬ್ಯಾನರ್ ಕಟ್ಟಿ ಪ್ರತಿಭಟನೆಗೆ ಇಳಿಯುವುದಿಲ್ಲ. ತನ್ನ ಪ್ರಹಸನಗಳ ಮೂಲಕವೇ ವಿಶ್ವದ ನಾಶಕ್ಕೆ ಕಾರಣಗಳನ್ನು ಹೇಳುತ್ತಾ ಹೋಗುತ್ತಾನೆ.
***
ಈ ಪೀಟರ್ ಶೋಮನ್ ಯಾರು? ಹೇಗೆ?
ಇಲ್ಲ ಆತ ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗವುದಕ್ಕೆ ಸಾಧ್ಯವೇ ಇಲ್ಲ ಹೀಗೆಂದು ನಮ್ಮ ಪಾಪಾ ಪಾಂಡು ಖ್ಯಾತಿಯ ನಟ ಜಹಂಗೀರ್ ಹೇಳುತ್ತಾರೆ.
ಜಹಂಗೀರ್ ನೀನಾಸಂನಲ್ಲಿ ರಂಗಭೂಮಿ ತರಬೇತಿಯಲ್ಲಿರುವಾಗ ಅಲ್ಲಿಗೆ ಪೀಟರ್ ಶೋಮನ್ ಬಂದಿದ್ದ. ಜಹಂಗೀರ್‌ನನ್ನು ತನ್ನ ಥೀಯೆಟರ್‌ನಲ್ಲಿ ಅಭಿನಯಿಸುವುದಕ್ಕಾಗಿ ಎರಡು ತಿಂಗಳು ಅಮೆರಿಕಕ್ಕೆ ಕರೆಸಿಕೊಂಡ. ಹಾಗೆಂದು ಆತನೇನು ಶ್ರೀಮಂತ ಕಲಾವಿದನಲ್ಲ. ತನ್ನ ರಂಗ ತಂಡದಲ್ಲಿರುವ ಎಂಟತ್ತು ಮಂದಿಗೆ ಸಂಬಳ ಕೊಡುವುದಕ್ಕಾಗಿ ಮತ್ತೊಂದು ಮನೆಯ ಬಣ್ಣ ಹೊಡೆಯಬೇಕಾದ ಸ್ಥಿತಿ. ಇಲ್ಲವೇ ಆ ಊರಿನಲ್ಲಿ ಮನೆ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ. ಅಂತಹ ಸ್ಥಿತಿಯಲ್ಲಿಯೇ ಆತ ವಿಶ್ವದ ಗಮನ ಸೆಳೆಯುವುದು ಸಾಧ್ಯ ಎನ್ನುವುದಾದರೆ, ಅವನೊಳಗಿನ ಕಲಾವಿದ ಎಷ್ಟು ಎತ್ತರದಲ್ಲಿ ಇರಬೇಕು? ಆತನ ಬಳಿ ಇದ್ದು ಬಂದದ್ದು ನನ್ನ ಜೀವನದ ಅತ್ಯಂತ ಸುದೈವಗಳಲ್ಲಿ ಒಂದು ಎಂದು ಜಹಂಗೀರ್ ಹೇಳುತ್ತಾರೆ.
ಕಳೆದ ೩೦ ವರ್ಷಗಳಿಂದಲೂ ಪೀಟರ್ ಯಾರಿಂದಲೂ ನಯಾಪೈಸೆ ಸಹಾಯ ಬೇಡಿಲ್ಲ. ಬೇಸಿಗೆಯ ಸಮಯದಲ್ಲಿ ತನ್ನ ರಂಗ ತಂಡ ನಾಟಕ ಪ್ರದರ್ಶನ ಮಾಡಿದ ಅನಂತರ ತನ್ನ ಹೊಲದ ಗೋಧಿಯಿಂದಲೇ ಮಾಡಿದ ಬ್ರೆಡ್ ಅನ್ನು ನಾಟಕ ನೋಡಲು ಬಂದ ಪ್ರೇಕ್ಷಕರಿಗೆಲ್ಲಾ ಹಂಚುತ್ತಾನೆ. ಅದನ್ನೇ ಅಲ್ಲಿದ್ದವರು ನಮ್ಮ ತಿರುಪತಿ ಲಾಡು ಎಂಬರ್ಥದ ಭಕ್ತಿಭಾವದಲ್ಲಿ ಸ್ವೀಕರಿಸುತ್ತಾರೆ. ಅನಂತರ ತನ್ನ ಟೊಪ್ಪಿ ಹಿಡಿದು ತಂಡದ ಎಲ್ಲರ ಹೊಟ್ಟೆಗಾಗಿ ಅಲ್ಲೆ ಚಂದಾ ಎತ್ತುತ್ತಾನೆ. ಅದರಲ್ಲಿ ಬಂದ ದುಡ್ಡಿನಲ್ಲಿಯೇ ಅವತ್ತಿನ ಊಟ ಮತ್ತು ಇತರೆ ಖರ್ಚು. ಇದು ನಿರಂತರವಾಗಿ ೩೦ ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇನ್ನೂ ವಿಶೇಷವೆಂದರೆ ಯಾರಾದರೂ ದಾನಿಗಳು ಬಂದು ಆತನ ನಾಟಕ ಶಾಲೆಗೆ ಒಂದೊತ್ತಿನ ಊಟ ಹಾಕಿಸಬಹುದು. ಹಾಗೆಂದು ಯಾರ ಮುಂದೆಯೂ ಕೈ ಒಡ್ಡುವುದಿಲ್ಲ. ಬಂದರೆ ಒಳ್ಳೆಯದು, ಇಲ್ಲದಿದ್ದರೆ ಬ್ರೆಡ್ ಇದ್ದೇ ಇದೆ.
***
ಹೋಗಲಿ ಆತನಿಗೊಂದು ಸುಸಜ್ಜಿತ ರಂಗ ಮಂದಿರವಾದರೂ ಇದೆಯೇ ಎಂದರೆ ಅದೂ ಇಲ್ಲ. ಆತ ನಮ್ಮ ಕರ್ನಾಟಕದ ಮರಗಾಲು ಮಾದರಿಯ ಜಾನಪದ ಕಲೆಗಳನ್ನು ಪ್ರದರ್ಶನ ಮಾಡುತ್ತಾನೆ. ಸುಮಾರು ೪೦ ಅಡಿ ಎತ್ತರದ ಮರಗಾಲು ಹಾಕಿಕೊಂಡು ಆತನೇ ವೇದಿಕೆಯಲ್ಲಿ ಬಂದು ಪ್ರಹಸನ ನೀಡುತ್ತಾನೆ. ಆತನಿರುವ ಸ್ಥಳದಲ್ಲಿ ವಿಸ್ತಾರವಾದ ಹುಲ್ಲುಗಾವಲಿದೆ. ಅದರ ಮೇಲೆಯೇ ಆತನ ನಿತ್ಯ ನಾಟಕ ಪ್ರದರ್ಶನ. ಒಂದು ಪ್ರದರ್ಶನಕ್ಕೆ ಸುಮಾರು ೧೦ ಸಾವಿರ ಮಂದಿ ಸೇರುತ್ತಾರೆ. ಬಂದವರೆಲ್ಲಾ ಅಲ್ಲೆ ನಾಲ್ಕೈದು ದಿನ ತಂಗುತ್ತಾರೆ. ಪೀಟರ್ ಅವರ ಬಳಿ ವಿಶ್ವದ ವಿರೋಧಾಭಾಸಗಳ ಕುರಿತು ಚರ್ಚೆ ನಡೆಸುತ್ತಾನೆ. ಹೀಗೆ ಸಾಗುತ್ತಲೇ ಇದೆ ಅವನ ದಿನಚರಿ.
ಅಚ್ಚರಿಯೆಂದರೆ ಅವನ ಬಳಿ ಕಲಿಯಲೆಂದೇ ವಿಶ್ವದ ನಾನಾಭಾಗಗಳಿಂದ ಜನರು ಬಂದು ಹೋಗುತ್ತಾರೆ. ಯಾರಿಗೂ ಬರಬೇಡಿ ಎನ್ನವುದಿಲ್ಲ. ಬಂದವರಿಗೆ ಸುಸಜ್ಜಿತ ವ್ಯವಸ್ಥೆಯು ಆತನಲ್ಲಿ ಇಲ್ಲ. ಆತನ ಥೀಯೆಟರ್ ಬಳಿ ಕೆಟ್ಟು ನಿಂತಿರುವ ಬಸ್ ಹಾಗೂ ಕಾರುಗಳೇ ವಾಸದ ಮನೆಗಳು. ಬಂದವರು ತಮ್ಮಲ್ಲಿ ಇದ್ದದ್ದನ್ನು ಹಂಚಿ ತಿನ್ನಬೇಕು. ಅಲ್ಲೆ ಕೆಲದಿನಗಳು ಇರುವುದಾದರೆ, ರಂಗತಂಡದ ಎಲ್ಲ ಕೆಲಸಗಳನ್ನು ನಿಭಾಯಿಸುವ ಮನಸ್ಥಿತಿ ಹೊಂದಿರಬೇಕು. ಆತ ಏನನ್ನೂ ಕಲಿಸುವುದಿಲ್ಲ. ಎಲ್ಲರೊಳಗೆ ಒಂದಾಗಿ ಅವರೇ ಕಲಿತು ಹೋಗಬೇಕು. ಪ್ರದರ್ಶನದಲ್ಲಿಯೇ ಅವರ ನಿಜವಾದ ಕಲಾವಿದನ ಶೈಲಿಯನ್ನು ಹೊರಹಾಕಲೆಂದೇ ಪೀಟರ್ ವಿಶೇಷ ಶೈಲಿಗಳನ್ನು ಬಳಸುತ್ತಾನೆ. ಬಡತನ ಎನ್ನುವುದು ಆತನನ್ನು ಎಂದಿಗೂ ಕಾಡಿಲ್ಲ. ನಿತ್ಯ ಗೆಲ್ಲುವ ತಂತ್ರಕ್ಕಾಗಿ ಹೋರಾಟ ನಡೆಸುತ್ತಾನೆ. ಗೊಂಬೆ ಪ್ರದರ್ಶನ ನೋಡಲು ಬರುವ ಪ್ರೇಕ್ಷಕರಿಗೆ ತನ್ನ ನಿಜವಾದ ಸಂದೇಶ ಮುಟ್ಟಿಸಲು ಇನ್ನಿಲ್ಲದ ಆದ್ಯತೆ ಕೊಡುತ್ತಾನೆ. ಅದು ತಲುಪಿದರೆ,ಆದೇ ಸಮಾಧಾನ.
***
ಮನುಷ್ಯ ಬದುಕುವುದಕ್ಕಾಗಿ ಒಂದು ತುಂಡು ಬ್ರೆಡ್ ತಿಂದರೆ ಸಾಕು. ಅದಕ್ಕಾಗಿ ಇನ್ನೊಬ್ಬರ ಮೇಲೆ ಅಕ್ರಮಣವೆಸಗಿ ಅದನ್ನು ರಕ್ತಸಹಿತ ಬಂಡವಾಳವಾಗಿಸಿಕೊಂಡು ಬದುಕಬೇಕೆಂಬ ಅನಿವಾರ್ಯ ಯಾಕೆ? ಇದು ರಾಕ್ಷಸೀ ಗುಣವಲ್ಲವೇ ?
ಇದು ಪೀಟರ್ ಶೋಮನ್ ಖಚಿತ ಅಭಿಪ್ರಾಯ. ಇಡೀ ಜೀವನದಲ್ಲಿಯೇ ಆತ ಹಣಕ್ಕೆ, ಲಾಭಕ್ಕೆ ನಾಟಕಗಳನ್ನು ಮಾಡಲೇ ಇಲ್ಲ. ದಿನವೂ ಸರಕಾರದ ವಿರುದ್ಧ ಮುಗಿಬೀಳುವ ಪೀಟರ್‌ಗೆ ಪ್ರಶಸ್ತಿಗೆ ಕೈಚಾಚುವವನಲ್ಲ. ಒಮ್ಮೆ ಅಮೆರಿಕದ ಅಧ್ಯಕ್ಷನನ್ನು ಹೊಗಳಿದರೆ ಸಾಕು. ಅವು ಮಳೆಯಂತೆ ಆತನ ಉಡಿಗೆ ಬೀಳುತ್ತವೆ. ಅದಾವುದು ಅವನಿಗೆ ಬೇಡವಾಗಿದೆ. ಅದರಿಂದ ಸಾಧಿಸಬೇಕಾದ್ದದ್ದು ಏನೂ ಇಲ್ಲ ಎಂಬ ಅರ್ಥದಲ್ಲಿಯೇ ಆತ ದಿನದೂಡುತ್ತಾನೆ. ತನ್ನ ರಂಗ ತಂಡದ ಜೀವನಕ್ಕೆ ತೊಂದರೆಯಾದರೆ, ನ್ರ್ಯೂಯಾರ್ಕ್ ನಗರದಲ್ಲಿ ಚಿತ್ರಗಳ ಪ್ರದರ್ಶನ ನಡೆಸಿ ಚಂದಾ ಎತ್ತಿ ಅವರಿಗೆಲ್ಲಾ ಸಂಬಳ ಕೊಡುತ್ತಾನೆ. ಹಾಗೆಂದು ನಮ್ಮಂತೆ ಸರಕಾರದ ಅನುದಾನ ಮರ್ಜಿಗೆ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಸಮಾಜವಾದಿ ತತ್ವಗಳನ್ನು ಅಕ್ಷರಶಃ ಪಾಲಿಸುವ ಪೀಟರ್ ಸಮಾಜವಾದಿಯಲ, ಬದಲಿಗೆ ಸಮೂಹಮುಖಿ. ಮನುಷ್ಯ ಯುದ್ಧದಂತಹ ಅನಿಷ್ಠಗಳನ್ನು ತಂದಿಟ್ಟುಕೊಳ್ಳಲು ಅವನಲ್ಲಿನ ಆಸೆ, ವ್ಯಾಮೋಹವೇ ಕಾರಣ ಎಂದು ಬಲವಾಗಿ ನಂಬಿದ್ದಾನೆ. ನಮಗೆ ಗಂಜಿ ಹೇಗೆ ಬದುಕುವ ಅನಿವಾರ್ಯ ಬಳಕೆಯಾಗುವ ಆಹಾರವೋ ಹಾಗೆ ಪಾಶ್ಚಿಮಾತ್ಯರಿಗೆ ಬ್ರೆಡ್. ಅಂತಹ ಬ್ರೆಡ್ ಜನಸಾಮಾನ್ಯರನ್ನು ಪ್ರತಿನಿಧಿಸುತ್ತದೆ. ಅದು ಸಮಾಜದೊಳಗೆ ಅತ್ಯಂತ ಶ್ರೇಷ್ಠ ಆಹಾರ ಎಂದು ಪೀಟರ್ ಹೇಳುತ್ತಾನೆ. ಅದಕ್ಕಾಗಿಯೇ ಆತನ ರಂಗತಂಡಕ್ಕೆ ಆ ಹೆಸರು ಇಟ್ಟಿದ್ದಾನೆ.
***
ಕಲಾವಿದನಾದವನೂ ಶ್ರೀಮಂತನಾಗಬೇಕು ಎಂಬ ಭ್ರಮೆಯಲ್ಲಿ ಬದುಕುವ ನಾವುಗಳು ಪೀಟರ್‌ನಿಂದ ಕಲಿಯುವುದು ತುಂಬಾ ಇದೆ. ಒಂದಿಷ್ಟು ಸಿನಿಮಾ ಮಾಡಿದರೆ, ಲಕ್ಷಗಟ್ಟಲೆ ಬೆಲೆಬಾಳುವ ಕಾರು, ಕೋಟಿ ರೂ. ಬೆಲೆ ಬಾಳುವ ಬಂಗಲೆಯಲ್ಲಿ ಐಷಾರಾಮಿ ಬದುಕುವ ನಡೆಸುತ್ತ ತಮ್ಮನ್ನು ತಾವು ಜನಸಾಮಾನ್ಯರಿಗಿಂತ ತೀರಾ ಭಿನ್ನರು ಎಂದು ತೋರಿಸಿಕೊಳ್ಳುವ ನಮ್ಮ ಚಿತ್ರನಟರಿಗೆ ಪೀಟರ್ ಅನುಕರಣೀಯ ವ್ಯಕ್ತಿಯಾಗುತ್ತಾರೆ. ನೂರಾರು ಕಲಾವಿದರು ಪೀಟರ್‌ನನ್ನು ಒಮ್ಮೆ ಭೇಟಿಯಾದರೆ ಸಾಕು ಎಂದು ಹಾತೊರೆಯುತ್ತಾರೆ. ಅಂತಹ ಅಸಾಮಾನ್ಯ ಪ್ರಭೆ ಬೆಳೆಸಿಕೊಳ್ಳಲು ಹಣದಿಂದ ಸಾಧ್ಯವಿಲ್ಲ ಎಂಬುದು ಆತ ಜಗತ್ತಿಗೆ ತೋರಿಸಿಕೊಟ್ಟ ಮಾದರಿ.
ಹ್ಯಾಟ್ಸ್ ಆಫ್ ಟು ಯು ಪೀಟರ್ ಅಜ್ಜ.
1 comment:
rangakarmi peter shoman kurithu illi dakalisidakke thamage dhanyavadagalu.
idi lekhana peter nataka nodidastu anubhava needithu.
sarala badukina, adbhuta klavidana sadanegalannu gamanisi ascharya ayithu.
bada kalavidarannu thulidu beleva mandige peter saralate, alochane ondu patadante endu na bavisihe.
srimanthike amalalli mereva sakalavallaba kalavidarige peter antaha kalavidaru savira-savira adarsavadaga kalavidara naduvina asamanate nivarane sadyavadethu allave? nimma mundina barahada nireeksheyalli khadiruve....
-ibbani
Post a Comment