Saturday, September 12, 2009

ಹೇಗೆ ಬದುಕಬೇಕು?

ನನ್ನ ಹಿಂದಿನ ಲೇಖನಕ್ಕೆ ಗೆಳೆಯರು ಸ್ಪಂದಿಸಿದ್ದಾರೆ. ಮೊದಲಿಗೆ ಅವರಿಗೆಲ್ಲರಿಗೂ ನನ್ನ ವಂದನೆಗಳು. ಬರಹಗಳೆಂದರೆ ಟೀಕೆ ಮತ್ತು ಮೆಚ್ಚುಗೆಯ ಮಿಶ್ರಣವಿದ್ದಾಗಲೇ ಅದಕ್ಕೆ ನಿಜವಾದ ಅರ್ಥ ಸಿಗುವುದು ಎಂದು ನನ್ನ ತಿಳವಳಿಕೆ. ಬಹುಶಃ ಎಲ್ಲರದು ಕೂಡ. ಅದಕ್ಕಾಗಿ " ಪತ್ರಿಕೆಗಳು ಬರುತ್ತವೇ ಸುಮ್ಮನಿರು" ಲೇಖನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಿತರಿಗೂ ನನ್ನ ಧನ್ಯವಾದ ಹೇಳುತ್ತೇನೆ.
ಲೇಖನ ಓದಿದ ಕೆಲ ಗೆಳೆಯರು ಬ್ಲಾಗ್ ಅಪಡೇಟ್ ಮಾಡುವಂತೆ, ಏನಾದರೂ ಬರೆಯುವಂತೆ ಒತ್ತಾಯ ಮಾಡುತ್ತಲೇ ಬಂದರು. ಈ ನಡುವೆ ನನ್ನ ಪತ್ರಿಕೆಯ ಕೆಲಸದ ನಡುವೆ ಒತ್ತಡದಲ್ಲಿದ್ದರಿಂದ ಬಹಳಷ್ಟು ಬಾರಿ ಬರೆಯಬೇಕು ಎಂದುಕೊಂಡು ಆಗದೇ ಕೈ ಚೆಲ್ಲುತ್ತಿದ್ದೇ. ಆದರೆ, ಕೆಲವು ನೋವುಗಳನ್ನು ಬರೆಯಬೇಕಾಗಿ ಬಂತು. ನಾನು ಗೌರವಿಸಲ್ಪಡುವ ಹಾಗೂ ಅದರಲ್ಲಿನ ಮೌಲ್ಯಗಳನ್ನು ಬೆಂಬಲಿಸುವ ವಾರಪತ್ರಿಕೆಯೊಂದು ನನ್ನ ಹಾಗೂ ನನ್ನ ಸ್ನೇಹಿತರ ಕುರಿತು ಒಂದಿಷ್ಟು ನೋವು ತರುವ ವರದಿಯೊಂದನ್ನು ಪ್ರಕಟಿಸಿದೆ. ಬಹುಶಃ ಸ್ಥಳೀಯವಾಗಿ ನಾವು ಗೆಳೆಯರ ಬಳಗ ಕನ್ನಡ ಸಂಜೆ ದಿನಪತ್ರಿಕೆಯೊಂದನ್ನು ಹೊರತರುತ್ತಿರುವ ಬಗ್ಗೆ "ಇಷ್ಟವಿಲ್ಲದ" ಗುಂಪು ಇದಕ್ಕೆ ಅತಿರಂಜಿತ ಪುರಾವೆಗಳನ್ನು ಅವರಿಗೆ ನೀಡಿರುವ ಸಾಧ್ಯತೆಗಳಿವೆ.
ಆ ಪತ್ರಿಕೆಯಲ್ಲಿ ವರದಿ ಬಂದಿರುವ ಬಗ್ಗೆ ಸ್ನೇಹಿತರೊಬ್ಬರು ನನಗೆ ಹೇಳಿದಾಗ ನಾನು ನಂಬಲೇ ಇಲ್ಲ. ಕೊನೆಗೆ ಪತ್ರಿಕೆ ಓದಿ ಬೇಸರವಾಯಿತು. ಅದರಲ್ಲಿ ನಮ್ಮ ಬಗ್ಗೆ ಬಳಸಿರುವ ಪದಗಳನ್ನು ಕಂಡು ಆಶ್ಚರ್ಯವಾಯಿತು. ನಿಜವಾಗಲೂ ಆ ಪತ್ರಿಕೆಯ ಸಂಪಾದಕರು ಅದನ್ನು ಪರಿಶೀಲಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಅದಕ್ಕಾಗಿ ಈ ಲೇಖನದ ಮೂಲಕ ಸ್ಪಷ್ಟನೆಯನ್ನು ಕೊಡುತ್ತಿಲ್ಲ. ಪತ್ರಿಕೆ ಆರಂಭಕ್ಕೆ ಕೆಲವರು ಪರೋಕ್ಷವಾಗಿ ತಡೆಯೊಡ್ಡಲು ಯತ್ನಿಸುವುದು ನನಗೆ ಹಾಸ್ಯಸ್ಪದವಾಗಿ ಕಾಣುತ್ತಿದೆ. ಆರೋಗ್ಯಕರ ಪೈಪೋಟಿಯ ಬಗ್ಗೆ ಮಾತನಾಡುವ ನಾವು , ಕೆಲವೊಂದು ವಿಷಯದಲ್ಲಿ ಅದೆಷ್ಟು ಕುಬ್ಜರಾಗುತ್ತೇವೆ ಎನ್ನವುದುಕ್ಕೆ ನಮ್ಮ ತಂಡದ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡುತ್ತಿರುವ ಪ್ರಯತ್ನಗಳು ಸಾಕ್ಷಿಯಾಗುತ್ತಿವೆ.
ಕೆಳವರ್ಗದ ಜನ ಸ್ವತಂತ್ರ್ಯವಾಗಿ ಕನಸು ಕಾಣುವ ಹಾಗೂ ಅದನ್ನು ನನಸಾಗಿಸಿಕೊಳ್ಳುವ ಯಾವುದೇ ಯತ್ನವನ್ನು ಕೆಲವರು ಸಹಿಸುವುದಿಲ್ಲ ಎನ್ನುವುದು ನನಗೆ ಕಳೆದ ೧೫ ದಿನಗಳಲ್ಲಿ ಸಂಪೂರ್ಣವಾಗಿ ಅರ್ಥವಾಯಿತು. ಅದಕ್ಕೆ ನಮ್ಮನ್ನು ಬೇರೆ ತಂತ್ರದ ಮೂಲಕ ವಾರಪತ್ರಿಕೆಯಲ್ಲಿ ಅಪ್ರಾಮಾಣಿಕ ಪತ್ರಕರ್ತರು ಎನ್ನವ ರೀತಿಯಲ್ಲಿ ಬಿಂಬಿಸಿ ಅದಕ್ಕೆ ಇಲ್ಲದ ಪುರಾವೆಗಳನ್ನು ನೀಡಿ ಸಮರ್ಥನೆಯ ವರದಿಯೊಂದನ್ನು ಪ್ರಕಟಿಸಿ ಖುಷಿಪಡುತ್ತಿರುವ ಮೈಸೂರಿನ ಕೆಲ ಸ್ನೇಹಿತರ ! "ಕೆಲಸ" ಕಂಡು ಬೇಸರವಾಗುತ್ತದೆ ಹಾಗೂ ಕೆಳವರ್ಗದ ಕೆಲ ಸ್ನೇಹಿತರ ಕೈಯಲ್ಲಿಯೇ ಅಂತಹ ಕುಕೃತ್ಯ ಕೆಲಸವನ್ನು ಮಾಡುತ್ತಿರುವುದನ್ನು ಕಂಡು ನನಗೆ ನೋವಾಗುತ್ತದೆ. ಹೇಗೆಂದರೆ ನಮ್ಮಿಂದಲ್ಲೇ ನಮ್ಮನ್ನು ಹೊಡೆದು ಹಾಕುವ ಬ್ರಿಟಿಷರ ಮಹಾತಂತ್ರದ ಮೂಲಕ!?
ಹಾಗಾದರೇ ಹೇಗೆ ಬದುಕಬೇಕು?
ಮತ್ತದೇ ಬಂಡವಾಳಶಾಹಿಗಳ ಅಡಿಯಲ್ಲಿ, ಜಾತಿಯ ಕಾರಣದಿಂದ ಅವರ ಮುಂದೆ ಮೈ ಬಗ್ಗಿಸುತ್ತಾ, ಅವರ ಹೇಳಿದ್ದೇ ಸತ್ಯ ಎನ್ನವಂತೆ ತಲೆದೂಗುತ್ತಾ, ಈ ಕೆಳವರ್ಗದ ಜನರಿಗೆ ನಮ್ಮನ್ನು ಬಿಟ್ಟು ಸ್ವತಂತ್ರವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಚುಚ್ಚುವ ಅವರ ಮಾತುಗಳನ್ನು ಮರುಮಾತನಾಡದೇ ಕೇಳಿಸಿಕೊಳ್ಳುತ್ತಾ...!?
ನಾನು ನನಗೆ ಪ್ರಾಮಾಣಿಕನಾಗಿದ್ದಾರೆ ಸಾಕು ಎಂದುಕೊಂಡಿದ್ದೇನೆ. ಇತರರ ಎದುರಿಗೆ ಪ್ರಾಮಾಣಿಕನಂತೆ ವೇಷ ತೊಟ್ಟು ನನ್ನೊಳಗೆ ಇತರರನ್ನು ತುಳಿಯುವ ಅಥವಾ ಅವರ ವಿರುದ್ಧ ಪಿತೂರಿ ಮಾಡುವ ಕುಕೃತ್ಯ ಅಪ್ರಾಮಾಣಿಕ ಮನಸ್ಸು ನನ್ನದಾಗುವುದು ಬೇಡ ಎಂದು ನನ್ನ ಬಯಕೆ. ಅದು ಬಹಳ ದಿನಗಳ ಕಾಲ ಉಳಿಯುವುದೂ ಇಲ್ಲ. ಮೊನ್ನೆ ಬ್ಲಾಗ್‌ಗಳಲ್ಲಿ ಅನಾಮಿಕರು ಚಿತ್ರವಿಚಿತ್ರ ರೀತಿಯಲ್ಲಿ ಟೀಕೆಗಳನ್ನು ಸುರಿಸುವುದು,ಅನಾರೋಗ್ಯಕರವಾಗಿ ಇನ್ನೊಬ್ಬರ ಕಾಲೆಳೆಯುವುದನ್ನು ಮಾಡುತ್ತಿರುವುದು ಸುದ್ದಿಯಾಗುತ್ತಿದೆ. ಅದರೆ, ಬಹಿರಂಗವಾಗಿಯೇ ಪತ್ರಕರ್ತರು,ತಮ್ಮ ಕೆಲವರನ್ನು ತುಳಿಯಲು ಇನ್ನಿಲ್ಲದಂತೆ ಹರಸಾಹಸ ಮಾಡುವುದು, ಅದಕ್ಕೆ ಮೌಲ್ಯಗಳ ಬಗ್ಗೆ ಮಾತನಾಡುವವರು ಜಾತಿ ಕಾರಣಗಳಿಂದ ತಲೆಯಾಡಿಸುವುದು ಕಂಡು ನನಗೆ ಅಸಹ್ಯವಾಗುತ್ತಿದೆ.
ಕೆಳವರ್ಗದ ಪತ್ರಕರ್ತರು ನೈತಿಕವಾಗಿರಬೇಕು, ಪ್ರಾಮಾಣಿಕರಾಗಿರಬೇಕು..ಹೀಗೆಲ್ಲಾ ಬಯಸುವ ಒಂದು ವರ್ಗದ ಸ್ನೇಹಿತರು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಪಡಿಸಲು ಯತ್ನಿಸುತ್ತಲೇ ಇರುತ್ತಾರೆ. ನನಗೆ ಇನ್ನೂ ಅರ್ಥವಾಗದ ಸಂಗತಿ ಎಂದರೆ ಪ್ರಾಮಾಣಿಕ ಎನ್ನುವುದಕ್ಕೆ ಯಾವುದಾದರೂ ಅಳತೆಗೋಲು ಇದೆಯೇ? ಪ್ರಾಮಾಣಿಕ ಎನ್ನವುದು ಮನುಷ್ಯತ್ವಕ್ಕೆ ಸಂಬಂಧಿಸಿದ್ದಾ ? ಅಥವಾ ಮನುಷ್ಯನ ವೇಷದ ಮೇಲ್ನೋಟಕ್ಕೆ ಸಂಬಂಧಪಟ್ಟಿದ್ದಾ?.
ಪತ್ರಕರ್ತನ ವೃತ್ತಿಗೂ ಹಾಗೂ ಜೀವನಕ್ಕೂ ಬೇರೆ ಬೇರೆ ಆಯಾಮಗಳು ಇವೆ. ವೃತ್ತಿ ಮಾಡುತ್ತಿರುವ ಪತ್ರಕರ್ತರ ಜೀವನದಲ್ಲಿ ಒಂದೂ ತಪ್ಪು ಮಾಡದಂತೆ ನಡೆಯಬೇಕು ಎನ್ನುವುದು ಎಷ್ಟು ಸರಿ?. ಈ ಸಮಯದಲ್ಲಿ ಹಿರಿಯರೊಬ್ಬರು ಹೇಳಿದ ಒಂದು ಮಾತನ್ನು ನೆನೆಸಿಕೊಳ್ಳಬೇಕಾಗುತ್ತದೆ. "ಮನುಷ್ಯನನ್ನು ಅವನ ದೌರ್ಬಲ್ಯಗಳ ಸಹಿತ ಪ್ರೀತಿಸು, ಆಗ ನೀನು ನಿಜವಾಗಲೂ ಮನುಷ್ಯನಾಗುತ್ತೀಯಾ" ಎಂಬುದು.
ಆ ವಾರಪತ್ರಿಕೆಯಲ್ಲಿ ಬಂದಿರುವುದರ ಬಗ್ಗೆ ಹಲವು ಸ್ನೇಹಿತರು ತಮ್ಮ ಹಲವು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನೊಬ್ಬನ್ನು ಗುರಿಯಾಗಿಸಿಕೊಳ್ಳುವುದೇ ಪತ್ರಿಕೋದ್ಯಮ ಎಂಬುದನ್ನು ನನಗೆ ಬರೆಯುವುದನ್ನು ಕಲಿಸಿದ ಹಿರಿಯರು ಹೇಳಿಕೊಟ್ಟಿಲ್ಲ. ಅದಕ್ಕೆ ನಾನು ಋಣಿ. ಒಂದು ವ್ಯವಸ್ಥೆಯನ್ನು ಹಾಗೂ ಆ ವ್ಯವಸ್ಥೆಯಿಂದ ನಿಜವಾಗಲೂ ಶೋಷಣೆ ನಡೆಯುತ್ತಿದೆಯೇ ಎಂಬುದನ್ನು ವರದಿ ಮಾಡಲು ಕಲಿ ಎಂದು ಹೇಳಿಕೊಟ್ಟರು. ಅದನ್ನು ನಾನು ನನ್ನ ಮಿತಿಯಲ್ಲಿ ಪಾಲಿಸಿದ್ದೇನೆ.ಇದನ್ನು ನನ್ನ ಕಿರಿಯರಿಗೆ ಹೇಳಿಕೊಡುತ್ತಿದ್ದೇನೆ.
ಆ ವರದಿಯನ್ನು ಓದಿದ ಹಾಗೂ ಪತ್ರಿಕೆಯ ಬಗ್ಗೆ ಅನಾರೋಗ್ಯಕರವಾಗಿ ಸುದ್ದಿ ಹರಡುತ್ತಿರುವುದನ್ನು ಕೇಳಿದ ನನ್ನ ಆತ್ಮೀಯರು ಆದ ಹಿರಿಯರೊಬ್ಬರು " ನಿಮ್ಮ ಬದ್ಧತೆಯಿಂದ ಹೊರಬರುವ ಪತ್ರಿಕೆ ಮಾತ್ರ ಈ ಎಲ್ಲ ಟೀಕೆಗಳಿಗೆ ಉತ್ತರ ನೀಡಬಲ್ಲದು" ಎಂದು ಹೇಳಿದರು. ಅದು ನನಗೆ ಸತ್ಯವೆನಿಸುತ್ತದೆ.

Thursday, August 13, 2009

ಪತ್ರಿಕೆಗಳು ಬರುತ್ತವೇ ಸುಮ್ಮನಿರು..!

ಹೇಳಿ ಕೇಳಿ ಕಳೆದ ೧೪ ವರ್ಷಗಳಿಂದ ಪತ್ರಿಕೆಯಲ್ಲಿ ಉಸಿರಾಗಿ ದುಡಿದ ನನಗೆ(ಹಾಗೆ ಅಂದುಕೊಳ್ಳುತ್ತೇನೆ) ತಕ್ಷಣ ಕಾರಣಾತಂರದಿಂದ ಇದ್ದ ಪತ್ರಿಕೆಯೊಂದನ್ನು ಬಿಟ್ಟು ಮೂರು ತಿಂಗಳು ಮನೆಯಲ್ಲಿ ಕುಂತರೆ ಹೆಂಗಾಗಬೇಡ..!?
ಇದು ನನ್ನ ವಿಷಯವಲ್ಲ..ಬಹುತೇಕ ಪತ್ರಕರ್ತರ ಕುಟುಂಬಗಳು ಕೆಲಸವಿಲ್ಲದ ಆ ತಲ್ಲಣಗಳನ್ನು ಅನುಭವಿಸಿಯೇ ಇರುತ್ತಾರೆ. ಹಾಗಾಗಿ ಕೆಲಸದಲ್ಲಿದ್ದ ಪತ್ರಿಕೆಯೊಂದನ್ನು ಬಿಟ್ಟು ಬಂದ ತಕ್ಷಣ ಒಂದಿಬ್ಬರು ಆತ್ಮಿಯರು ಪತ್ರಿಕೆಯೊಂದನ್ನು ಮಾಡುವ ಬಗ್ಗೆಯು ಯೋಚಿಸಿದರೂ,ಅದು ಬೇಡ ಎಂದು ಹೇಳಿ ನಾನೇ ಸುಮ್ಮನಾಗಿ ಬಿಟ್ಟೆ.
ಸಾಮಾಜಿಕ ನ್ಯಾಯದ ಬಗ್ಗೆ ಪುಟಗಟ್ಟಲೇ ವರದಿ ಮಾಡುವ ನಮ್ಮ ಪತ್ರಕರ್ತರಿಗೆ ಅದೇಷ್ಟು ಜಾತಿ ಅಭಿಮಾನವಿದೆ ಎಂದು ನಿಮಗೆ ತಿಳಿದರೆ ವಾಕರಿಕೆಯಾಗದಿರದು. ನೈತಿಕತೆ, ಪ್ರಾಮಾಣಿಕತೆ ಹಾಗೂ ಜಾತಿ ಹೆಸರಿನಲ್ಲಿ ಅದೆಷ್ಟೋ ಪತ್ರಕರ್ತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿದ ಕೀರ್ತಿ ನಮ್ಮೂರಿನ ಕೆಲ ಪತ್ರಕರ್ತರಿಗೆ ಸಲ್ಲಬೇಕು. ಹಾಗಾಗಿ ಯಾರ ಬಳಿಯೂ ಕೆಲಸ ಕೇಳುವ ಅಥವಾ ಅದನ್ನು ದಕ್ಕಿಸಿಕೊಳ್ಳುವ ಹೊಸ ಪ್ರಯತ್ನಗಳಿಗೆ ನಾನು ಕೈ ಹಾಕಲೇ ಇಲ್ಲ. ಮೂರು ತಿಂಗಳ ತಲ್ಲಣಗಳನ್ನು ಈ ಹಿಂದೆ ಹಲವು ಬಾರಿ ಅನುಭವಿಸಿದ್ದರಿಂದ ಅದು ಹೊಸ ಅನುಭವ ಎನಿಸಲೇ ಇಲ್ಲ.
ಆದರೆ, ಕೆಲ ಸ್ನೇಹಿತರು ಮಾತ್ರ ದಿನಕ್ಕೊಂದು ಸಲಹೆ, ಸಾಂತ್ವನ ನೀಡುತ್ತಲೇ ಇದ್ದರು. ಕೆಲವರು ಆತ್ಮೀಯತೆಯಿಂದಲೇ ಬೇರೆ ಪತ್ರಿಕೆಗಳಿಗೆ ಸೇರಿಕೊಳ್ಳುವ ಅದಕ್ಕೆ ಬೆಂಬಲ ನೀಡುವ ಮಾತನಾಡಿದರು. ಆದರೆ, ಅದನ್ನು ಕೆಲವರು ಹಾಳುಗೆಡವಲು ನಿಲ್ಲುತ್ತಾರೆ ಎಂಬ ವಿಷಯ ಗೊತ್ತಾದ ತಕ್ಷಣ ನಾನು ಸುಮ್ಮನಾಗಿಬಿಟ್ಟೆ.
ಕಳೆದ ಒಂದು ವಾರದ ಹಿಂದೆ ಕನ್ನಡಪ್ರಭದ ಸಂಪಾದಕ ರಂಗನಾಥ ಅವರು ಪತ್ರಿಕೆ ಬಿಟ್ಟು ಸುವರ್ಣ ಟಿ.ವಿ ಸೇರಿರುವ ವಿಚಾರ ಹಾಗೆಯೇ ಅವರ ಸಮೂಹದಿಂದಲೇ ಸುವರ್ಣ ಕರ್ನಾಟಕ ಎಂಬ ಪತ್ರಿಕೆ ಬರುತ್ತದೆ ಎಂಬ ಸುದ್ದಿ ತಿಳಿದ ಸ್ನೇಹಿತರು ನನಗೆ ಮತ್ತಷ್ಟು ಸಲಹೆ ನೀಡಲು ಮುಂದಾದರು.
ಏಷಿಯನೆಟ್ ಸಮೂಹ, ವಿಜಯಸಂಕೇಶ್ವರ ಹಾಗೂ ರೆಡ್ಡಿ ಸಮೂಹದಿಂದ ಮೂರು ಪತ್ರಿಕೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ನೀನೇನು ಹೆದರಬೇಡ ಎಂದು. ನಿಜವಾಗಿಯು ಅದು ಸಂತೋಷದ ವಿಚಾರವೇ. ಆದರೆ, ಜಾತಿ ಮತ್ತು ಪ್ರಾಮಾಣಿಕರು ಎಂಬ ಸೋಗಿನ ಹೆಸರಿನಲ್ಲಿ ಮೂರು ಪತ್ರಿಕೆಗಳಲ್ಲಿ ಹೊಸ ಹೊಸ ಗುಂಪು ಹುಟ್ಟಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಯಾರು ಸಂಪಾದಕರಾಗುತ್ತಾರೋ ಅವರು ತಮ್ಮ ಜಾತಿಯ ಬಗ್ಗೆ ಒಲವು ಇಟ್ಟುಕೊಳ್ಳವುದಿಲ್ಲ ಎಂಬುದು ಸುಳ್ಳು ಮಾತು. ಬಹುಶಃ ಸುವರ್ಣ ಟಿ.ವಿಯಿಂದ ಹೊರಬಂದಿರುವ ಶಶಿಧರ ಭಟ್ಟರು ಹಿರಿಯ ಪತ್ರಕರ್ತರಾಗಿದ್ದರೂ ಇಂತಹ ತಪ್ಪನ್ನು ಮಾಡಿದ್ದಾರೆ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ. ತಮ್ಮವರಿಗೆ ಅವರು ಮೊದಲ ಆದ್ಯತೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಈಗ ಪ್ರಾರಂಭವಾಗಲಿರುವ ಪತ್ರಿಕೆಗಳಿಗೆ ಯಾರು ಸಂಪಾದಕರಾಗುತ್ತಾರೆ ಎಂಬುದೇ ಕುತೂಹಲದ ವಿಷಯ. ಸಂಪಾದಕರು ನಿರ್ಧಾರವಾದ ನಂತರವಷ್ಟೇ ಅಲ್ಲಿನ ಸಿಬ್ಬಂದಿಯ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಬಿಡಬಹುದು. ಅದನ್ನು ಆಡಳಿತ ಮಂಡಳಿ ನಿರ್ವಹಿಸದೆ ಸಂಪಾದಕರ ತೀರ್ಮಾನಕ್ಕೆ ಬಿಡುವ ಸಾಧ್ಯತೆ ಹೆಚ್ಚಿರುವುದರಿಂದ ಜಾತಿವಾರು ಪತ್ರಕರ್ತರ ಹುಡುಕಾಟ ನಡದೇ ತೀರುತ್ತದೆ.
ಹಾಗಾಗಿ ಜಿಲ್ಲಾವಾರು ಆಯ್ಕೆಯಲ್ಲೂ ಜಾತಿ ಪ್ರಮುಖ ಪಾತ್ರ ವಹಿಸುವುದರಿಂದ ಅದರ ಬಗ್ಗೆ ಒಲವು ಇಟ್ಟುಕೊಳ್ಳುವುದು ಬೇಡ ಎನಿಸಿತು. ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪತ್ರಿಕೆಗಳ ಆಗಮನ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಆಶಿಸೋಣ.
ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ದಲಿತನೊಬ್ಬ ರಾಜ್ಯ ಮಟ್ಟದ ದಿನಪತ್ರಿಕೆಯೊಂದಕ್ಕೆ ಸಂಪಾದಕನಾಗುವ ಆರ್ಹತೆ ಇನ್ನು ಪಡೆದುಕೊಂಡಿಲ್ಲ ಎನ್ನುವುದು ನೋವು ತರುತ್ತದೆ. ಹಾಗೆ ಲೆಕ್ಕ ಹಾಕಿ ನೋಡಿದರೆ, ಈಗ ಇರುವ ಎಲ್ಲ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಒಂದೇ ಜಾತಿಗೆ ಸೇರಿದವರು. ಈ ನಾಡಿನ ಬಹುಸಂಖ್ಯಾತರಾಗಿರುವ ದಲಿತರಲ್ಲಿ ಒಬ್ಬ ಪತ್ರಕರ್ತ ಸಂಪಾದಕನಾಗುವ ಅರ್ಹತೆ ಪಡೆದಿಲ್ಲವೇ?. ಇದಕ್ಕೆ ಮತ್ತೆ ಪತ್ರಿಕೋದ್ಯಮದ ಜಾತಿ ಲೆಕ್ಕಚಾರ ಅಡ್ಡಗಾಲಾಗುತ್ತದೆ. ಅವರ ಪ್ರಾಮಾಣಿಕತೆಯ ಹೆಸರಿನಲ್ಲಿ ಜಾತಿ ಸೋಗು ಹಾಕಿಕೊಂಡ ಕುಂಟು ನೆಪಗಳು ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ಕಿವಿಕಚ್ಚುತ್ತವೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ.
ಹ್ಹಾ ಮರೆತಿದ್ದೇ...ಒಂದಿಷ್ಟು ಸ್ನೇಹಿತರು ಸೇರಿಕೊಂಡು ೫ಪಿಎಂ ಎಂಬ ಸಂಜೆ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ. ತೀರಾ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಸುದ್ದಿ ವೈವಿದ್ಯತೆಯಲ್ಲಿ ಒಬ್ಬ ಓದುಗನನ್ನು ಸೆಳೆಯಬಹುದು ಎಂಬ ಸಂಗತಿ ನಮಗೆ ಅರಿವಾಗಿದೆ. ಅದಕ್ಕಾಗಿ ತಯಾರಿ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ೨೫ ಕ್ಕೆ ಪತ್ರಿಕೆ ಮೊದಲ ಸಂಚಿಕೆ ನಿಮ್ಮ ಕೈಯಲ್ಲಿರುತ್ತದೆ.

Friday, August 7, 2009

ಸ್ವಗತ..

ಹುಟ್ಟಿನಿಂದ ಮಂತ್ರದಲ್ಲೆ
ಬೆಳೆದ
ಮಿರುಗುವ
ನನ್ನ ಮೈಗೆ
ಅವನೊಬ್ಬ ಬೇಕಾಗಿದ್ದ..
ಅವನೊಬ್ಬನೇ ಬೇಕಾಗಿದ್ದ..!
ಅವನದೋ
ಮತ್ತೆ ಮತ್ತೆ ಕಾಡುವ
ಮಣ್ಣಿನ ವಾಸನೆ..!
ಊರು ಹೊಡೆದ ಮಂತ್ರಗಳು
ನನ್ನೊಳಗಿನ ಹೆಣ್ತನಕ್ಕೆ
ಜೀವಕೊಡಲಾರವು ಅನ್ನಿಸಿದಾಗಲೆಲ್ಲಾ
ಅವನ ಕಣ್ಣು ನನ್ನ ಕನಸಾಗುತ್ತಿತ್ತು.
ಅವನೊಳಗಿನ ಬೆವರು
ನನ್ನ ಮೈಯೊಳಕ್ಕೆ ಇಳಿದರೆ..
ನಾನು ನಿಜವಾಗಿಯೂ
ಹೆಣ್ಣಾಗುತ್ತಿದ್ದೆ...
ಅಮ್ಮನ ಒಡಲಿನಿಂದ ಬಂದ
ಉಷಾಳಂತೆ..!

ನಾನು ತಪ್ಪೇ ಮಾಡಲಿಲ್ಲ..!?
ಮನುಷ್ಯರಾಗಲೂ ಬಿಡದ
ನಮ್ಮೊಳಗಿನ
ಮಂತ್ರ, ತಂತ್ರ,
ವೇದ, ಪುರಾಣಗಳಿಗೆ
ಲಜ್ಜೆಗಳಿರಲಿಲ್ಲ..ಅದು ಗೊತ್ತೂ ಇರಲಿಲ್ಲ..
ಅಮ್ಮನ ಮೌನ
ಅಪ್ಪನ ಮಂತ್ರದೊಳಗೆ
ಕಳೆದು ಹೋಗುತ್ತಲೇ
ನಾನು ರುದ್ರನ ಕಸುವಿಗೆ
ಕೂಸಾಗಿದ್ದೆ..
ಅವನ ಹಟ್ಟಿಯೊಳಗೆ
ನಾನು ಮತ್ತೆ ಮತ್ತೆ ಹೆಣ್ಣಾಗಿದ್ದೆ..!

ಅವನು ಶರಣನಾದ
ನನ್ನ ರುದ್ರನಾಗಲಿಲ್ಲ..
ಕಸುವಿಗೆ ಕುಲಾವಿ ಹೊಲೆಸಲು
ಹಾತೊರೆದ
ನಮ್ಮ ಪ್ರೇಮದಾಚೆ
ಬಸವಣ್ಣನ ಶರಣತನ
ಅಪ್ಪನ ಮಂತ್ರಗಳು
ನನ್ನ ರುದ್ರನನ್ನು ಕೊಂದು ಹಾಕಿದವು..
ಮತ್ತೆ ನಾನೀಗ
ಬ್ರಾಹ್ಮಣರ ವಿಧುವೆ...
ಅಲ್ಲಲ್ಲ
ಅವರ ತಂತ್ರಗಳಿಗೆ
ತಲೆ ಕೊಟ್ಟ
ರುದ್ರನ ಪತ್ನಿ...!

Thursday, August 6, 2009

ಪತ್ರಕರ್ತರು ಹಾಗೂ ಸಂಕ್ರಾಂತಿ


"ಧರ್ಮ,ಧರ್ಮ..! ಅದಕ್ಕೆ ಯಾವಾಗಲೂ ಯಾವುದಾದರೂ ಒಂದು ಕಂಳಕ ಇದ್ದೇ ಇರುತ್ತದೆ. ಮನುಷ್ಯರಿಗೇನಾಗಿದೆ ಹೇಳಿ?"
-ಬಿಜ್ಜಳ
ಇಂತಹ ಮಾತೊಂದು ಪಿ.ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಬರುತ್ತದೆ. ವಾಸ್ತವದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಇಂತಹ ಮನೋಭಾವದಿಂದ ಅವರು ಆರಿಸಿದ ಪ್ರಜೆಗಳ ಬಗ್ಗೆ ಈ ಮಟ್ಟಿನ ಕಾಳಜಿ ವಹಿಸಿದ್ದು ಕಾಣೆ.
ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಬೇಕಾಗಿ ಬಂದದ್ದೆ ವಿಶೇಷ ಪ್ರಸಂಗ. ಮೈಸೂರು ಜಿಲ್ಲಾ ಪತ್ರಕರ್ತರು ಒಂದು ಹೊಸ ಸಾಹಸಕ್ಕಾಗಿ ಮುನ್ನಡಿಯಿಟ್ಟಿದ್ದಾರೆ. ಸಂಘದ ಸದಸ್ಯರೆಲ್ಲಾ ಪತ್ರಿಕಾ ದಿನಾಚರಣೆಯ ಅಂಗವಾಗಿ ಲಂಕೇಶರ "ಸಂಕ್ರಾಂತಿ" ನಾಟಕವನ್ನು ನಟ, ರಂಗ ನಿರ್ದೇಶಕ ಮಂಡ್ಯ ರಮೇಶ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ತಿಂಗಳ ರಂಗತರಬೇತಿ ಶಿಬಿರದಲ್ಲಿ ಸತತವಾಗಿ ಭಾಗವಹಿಸುವ ಮೂಲಕ ನಾಟಕ ತಾಲೀಮು ನಡೆಸಿ ತಮ್ಮ ಹೊಸ ಪ್ರಯತ್ನಕ್ಕೆ ಅಣಿಯಾಗಿದ್ದಾರೆ.
ಇಷ್ಟೇ ಆಗಿದ್ದರೇ ಇಲ್ಲಿ ಇದನ್ನು ಹೇಳಬೇಕಾಗಿದ್ದಿಲ್ಲ. ಆದರೆ, ಮೂರು ದಶಕಗಳ ನಂತರವೂ ಲಂಕೇಶ ಅವರು ಬರೆದ ಸಂಕ್ರಾಂತಿ ಅದೆಷ್ಟು ಪ್ರಸ್ತುತವಾಗಿದೆ ಎಂಬುದರ ಬಗ್ಗೆ ನನಗೆ ಕೊರೆಯುತ್ತಿರುವ ಅಭಿಪ್ರಾಯಗಳು.
೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ಕ್ರಾಂತಿ ಹೇಗೆ ಜಾತಿ ಪರದೆಯನ್ನು ಮೀರುವ ಯತ್ನ ಮಾಡುತ್ತದೆ ಹಾಗೆಯೇ ಅದಕ್ಕೆ ಬಲಿಷ್ಠ ಜನಾಂಗಗಳು ಹೇಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಚಿತ್ರಣದ ಸುತ್ತ ತೆರೆದುಕೊಳ್ಳುವ ನಾಟಕ ನಿಜವಾಗಿಯೂ ನಮ್ಮನ್ನು ಚಿಂತನೆ ಹಚ್ಚಬಲ್ಲದು ಎನಿಸುತ್ತದೆ. ಇಡೀ ನಾಟಕವನ್ನು ಅವರಿಸಿಕೊಳ್ಳುವ ಬಸವಣ್ಣ ಹಾಗೂ ಅದನ್ನು ನುಂಗುವ ಬಿಜ್ಜಳರ ಪಾತ್ರಗಳು ವಿಶೇಷವೆನಿಸುತ್ತದೆ. ಬಹಳ ವರ್ಷಗಳ ಅನಂತರ ಸಂಕ್ರಾಂತಿ ನಾಟಕವನ್ನು ಮತ್ತೆ ಓದಿದಾದಗ ಕಾಳಜಿಯುಳ್ಳ ಮನುಷ್ಯನೊಬ್ಬನಿಗೆ ಅನಿಸುವುದು ಬಿಜ್ಜಳನ ಒಂದು ಮುಖದ ಅಧಿಕಾರಸ್ಥರು ಇಲ್ಲೆ ಇದ್ದಾರಲ್ಲ ಎಂದು. ವೈದಿಕರನ್ನು ಹಾಗೂ ದಲಿತರನ್ನು (ಶರಣರನ್ನು) ಎದುರು ಹಾಕಿಕೊಳ್ಳದೇ ಅತ್ಯಂತ ಜಾಣ ರಾಜನೀತಿಯಿಂದ ಬಸವಣ್ಣನವರ ಕ್ರಾಂತಿಯ ಬಗ್ಗೆ ವ್ಯಂಗ್ಯವಾಡುತ್ತಲೇ ತನ್ನ ಅಧಿಕಾರವನ್ನು ಚಲಾಯಿಸುವ ಬಿಜ್ಜಳ ಒಮ್ಮೊಮ್ಮೆ ಬಸವಣ್ಣನವರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಂತೆ ಕಾಣುತ್ತಾನೆ.
ನಾಟಕ ಆರಂಭವಾಗುವುದೇ ಹೊಲೆಯರ ಹಟ್ಟಿಯಿಂದ ಮತ್ತು ಕೊನೆಯಾಗುವುದು ಹೊಲೆಯರ ಹಟ್ಟಿಯಲ್ಲಿ. ಆದರೆ, ಇವೆರಡರ ನಡುವೆ ಬರುವ ರುದ್ರ ಮತ್ತು ಉಷಾ ಎಂಬ ಪಾತ್ರಗಳು ಇಡೀ ಸಂಕ್ರಾಂತಿಯ ಮುನ್ನೆಡಸಲು ದಾರಗಳಾಗುತ್ತವೆ. ಬ್ರಾಹ್ಮಣರ ಹುಡುಗಿ ಉಷಾಳನ್ನು ಪ್ರೀತಿಸುವ ದಲಿತ ರುದ್ರ ಮತ್ತು ಅವರ ಪ್ರೇಮ ೧೨ ನೇ ಶತಮಾನದಲ್ಲಿ ಇನ್ನೆಂತಹ ಜಾತಿಯ ನೆಲೆಗಟ್ಟನ್ನು ಹಾಗೂ ಅಂತರವನ್ನು ಹುಟ್ಟುಹಾಕಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ. ಉಷಾಳ ಮೂಲಕ ಬಾಹ್ಮಣರ ಬಂಡವಾಳವಿಲ್ಲದ ಬಡಾಯಿಗಿಂತ ಬಲಿಷ್ಟವಾದ ದಲಿತ ರುದ್ರನ ಮನೆಯಂಗಳ ಆಕೆಗೆ ಹೆಚ್ಚು ಆಪ್ತ ಎನ್ನುವಂತೆ ಕಾಣುವುದು ಮನುಷ್ಯ ಸಹಜ ಕ್ರಿಯೆ ಎನಿಸುತ್ತದೆ. ಏಕೆಂದರೆ ವೇದ ಪುರಾಣಗಳಿಗಿಂತ ವಾಸ್ತವದ ಬದುಕು ಹೆಚ್ಚು ಅರ್ಥ ಪೂರ್ಣ ಎನ್ನುವ ಆಕೆಯ ವಾದ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಅಧಿಕಾರಸ್ಥರ ಜಾಣ ನೀತಿಗಳು ಎಂತಹ ಪ್ರೀತಿ, ಪ್ರೇಮವನ್ನು ಬಲಿಕೊಡುವುದು ಎನ್ನುವುದಕ್ಕೆ ರುದ್ರನ ತಲೆದಂಡ ಸಾಕ್ಷಿಯಾಗುತ್ತದೆ. ಅವನು ಕೇವಲ ಹೊಲೆಯ ಎಂಬ ಕಾರಣಕ್ಕಾಗಿಯಲ್ಲದಿದ್ದರೂ ಅದು ನಿಜವಾದ ಶರಣ ಕ್ರಾಂತಿಯನ್ನು ಬಲಿಕೊಡಲು ಬ್ರಾಹ್ಮಣರು ಬಿಜ್ಜಳನ ಮೇಲೆ ಹೇರಿದ ತಂತ್ರವಾಗಿರಬಹುದು, ಅಥವಾ ಅತ್ಯಂತ ವೇಗವಾಗಿ ಜನಪ್ರಿಯನಾಗುತ್ತಿರುವ ಬಸವಣ್ಣನವರ ಬಗ್ಗೆ ಬಿಜ್ಜಳ ರಾಜನಿಗೆ ಇದ್ದ ಅಧಿಕಾರದ ಭಯ ಕಾರಣವಾಗಬಹುದು.
ಸಂಕ್ರಾಂತಿಯಲ್ಲಿ ಕಾಣುವ ಬಿಜ್ಜಳನ ರಾಜನೀತಿಯ ತಂತ್ರಗಳನ್ನು ಇಂದಿನ ರಾಜಕಾರಣಿಗಳು ಮುಂದುವರಿಸುತ್ತಿದ್ದಾರೆ ಎನ್ನುವುದು ಸರ್ವಿವಿಧಿತ.
ಶರಣ ಎನ್ನುವುದು ಎಲ್ಲ ಜಾತಿಗಳನ್ನು ಒಳಗೊಂಡ ಒಂದು ಸಾಂಸ್ಕೃತಿಕ ಪರಂಪರೆ ಎಂಬುದನ್ನು ನಾಟಕ ಧ್ವನಿಸುತ್ತದೆಯಾದರೂ, ಅದನ್ನು ಇಂದಿನವರು ಜಾತಿಯನ್ನಾಗಿಸಿರುವುದು ವಿಚಿತ್ರವೆನಿಸುತ್ತದೆ.
ಸಂಕ್ರಾಂತಿ ನಾಟಕ ಮಾಡಲು ಹೊರಾಟಾಗ ನಮ್ಮ ಪರಿಸರದಲ್ಲಿಯೇ ಇರುವ ಕೆಲವರು ನಾಟಕವನ್ನು ಔಟ್‌ಡೇಟೆಡ್ ಎಂದು ಜರಿದದ್ದು ಉಂಟು. ಆದರೆ, ನಾಟಕದಲ್ಲಿ ಧ್ವನಿಸುವ ಜಾತಿಯ ಅಡ್ಡ ಮಾತುಗಳು, ಬಿಜ್ಜಳನ ರಾಜನೀತಿಯ ತಂತ್ರಗಳು, ರುದ್ರನಂತವರ ತಲೆದಂಡಗಳು ಇಂದಿಗೂ ನಡೆಯುತ್ತಿವೆ. ಬಲಿಷ್ಠ ಕೋಮುಗಳ ಒತ್ತಡಕ್ಕೆ ಸರಕಾರ ಶೋಷಿತರ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಲೇ ಇದೆ. ಅದು ಔಟ್‌ಡೇಟೆಡ್ ಹೇಗಾದಿತು. ಅಂದು ಬಿಜ್ಜಳ ಹಾಗೂ ಬಸವಣ್ಣ ಅಪ್ತರಾಗಿದ್ದರೂ, ಬಿಜ್ಜಳ ಮೇಲೆ ಬಸವಣ್ಣನವರಿಗಿಂತ ಪ್ರಭಾವ ಬೀರುವಷ್ಟು ವೈದಿಕ ಸಮುದಾಯ ಅವರ ಸುತ್ತ ಇತ್ತು. ಅಂತಹ ವ್ಯವಸ್ಥೆ ಇಂದಿನ ಸರಕಾರದ ಮುಖ್ಯಮಂತ್ರಿಯ ಸುತ್ತಲೂ ಇದೆ. ಅವರ ಜಾತಿಯ ಮಂದಿ ಮಾಗಧರೇ ಅಲ್ಲಿ ತುಂಬಿ ತುಳಿಕಿದ್ದಾರೆ. ದುರಂತವೆಂದರೆ " ಅವನಾರವ ಅವನಾರವ ಎನಬೇಡ, ಅವ ನಮ್ಮವ ಅವ ನಮ್ಮನ ಎನ್ನಿರಯ್ಯ " ಎಂದು ಹೇಳಿ ಶರಣ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರಕಾರ ಬಿಜ್ಜಳನಂತೆ ರುದ್ರರನ್ನು ಬಲಿಕೊಡುತ್ತಲೇ ಇದೆ. ಇದು ವಿಪರ್ಯಾಸ.
"ಇಂದು ಹೋದಿತು ಕತ್ತಲು ನಾಳೆ ಬೆಳಕು ಹರಿದು ಎಲ್ಲಾ ಬೆಳ್ಳಾಂಬೆಳಗಾಗಿ ಎಲ್ಲ ನೋಡೆವು ಅಂತ ಕಾಯ್ತ ಇದೀವಿ" ಎಂದು ರುದ್ರ ಉಷಾಳಿಗೆ ಹೇಳುತ್ತಾನೆ. ದಲಿತರಿಗೆ ಅಂತಹ ಕ್ಷಣವಿನ್ನೂ ಪೂರ್ತಿಯಾಗಿ ಬಂದಿಲ್ಲ ಎನ್ನುವುದು ಸತ್ಯ ದಲಿತರನ್ನು ಶರಣರನ್ನಾಗಿಸಿ ಅವರ ಬದಕಿನ ಪರಂಪರೆಗೆ ಹೊಸ ಅರ್ಥಕೊಡಲು ಹೊರಟ ಬಸವಣ್ಣ, ಬಿಜ್ಜಳ ರಾಜನೀತಿಯಲ್ಲಿ ಸಿಲುಕಿ ರುದ್ರನ ತಲೆದಂಡವಾಗುವಾಗ ಮೌನವಾಗುತ್ತಾನೆ. ಇದು ಬಸವಣ್ಣನವರ ಅಸಹಾಯಕತೆಯೇ ಎಂಬ ಅನುಮಾನ ಮೂಡುತ್ತದೆ.
ಸದಾ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಯಾಂತ್ರಿಕವಾಗಿ ಬಿಡುವ ಪತ್ರಕರ್ತರನ್ನು ಇಂತಹ ಹೊಸ ಪ್ರಯತ್ನಕ್ಕೆ ಅಣಿಮಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿನವೂ ಬಿಜ್ಜಳರಂತಹ ರಾಜಕಾರಣಿಗಳ ತಂತ್ರಗಳ ಬಗ್ಗೆ ಪುಟಗಟ್ಟಲೇ ಸುದ್ದಿ ಬರೆಯುವ ಪತ್ರಕರ್ತರಿಗೆ ಸಂಕ್ರಾಂತಿ ನಾಟಕ ಬಸವಣ್ಣನ ಕ್ರಾಂತಿ ಹಾಗೂ ರುದ್ರನ ತಲೆದಂಡದಂತಹ ಮಾನವೀಯ ಪ್ರಕರಣಗಳು ಆ ತಂತ್ರದಲ್ಲಿ ಹೇಗೆ ಬಲಿಯಾಗುತ್ತವೆ ಎನ್ನುವ ಹೊಸ ಪಾಠವನ್ನು ಹೇಳಿಕೊಟ್ಟಿದೆ ಎನ್ನುವುದರಲ್ಲಿ ಅತಿಶೋಕ್ತಿಯಿಲ್ಲ.

Monday, June 22, 2009

ಮಳೆಯಲಿ


ಛೇ
ಮಳೆ ಬರುತ್ತಿದೆ
ನೆಂದ ನಾನು ನಿಮಗೆ
ಈಗೇಕೆ ನೆನಪಾದೆ.
ಅವನು ಕಾಯುತ್ತಿದ್ದಾನೆಂದು
ಅವಸರವಾಗಿ ಹಾಗೆ ಬಂದೆ
ಮೊದಲ ಮಳೆ
ಮೈಯಲ್ಲ ಒದ್ದೆ.

ಹೀಗೆಲ್ಲಾ ಫೋಟೊ ತೆಗೆಯಬೇಡಿ
ಒದ್ದೆಯ ಮುಖದಲ್ಲಿ
ನಾನು ಮುದ್ದೆಯಾಗಿದ್ದೇನೆ
ಬಿದ್ದ ಮಳೆಯಹನಿಯು
ಒರೆಸಿಲ್ಲ.
ನಾಳೆ ಬಂದರೆ ಆಗದೆ..
ಕೂದಲೆಲ್ಲಾ ನೋಡಿ
ಹರಡಿ ಆಕಾಶ ನೋಡುತ್ತಿದೆ..
ಅಲ್ಲಿಗೆ ತಲುಪಲು ಇನ್ನೆಷ್ಟು ಹೊತ್ತು ಬೇಕೋ..?
ಅವನು ಮಳೆಯಲಿ ನೆನೆದು ನೆನೆಯುತ್ತಿರುತ್ತಾನೆ
ನಾನು ಮಳೆಯಲ್ಲಿ ನೆಂದಿರಬಹುದೆಂದು
ಈಗ ಹೋಗಲೇ...!!

Tuesday, June 9, 2009

ಕೂಗಿ ಹೇಳು..!

ನಾನು ಬರೆಯುವ ಕವನ
ಹೇಂಗಿರಬೇಕು..?
ಕೊನೆಯ ಕೇರಿ ಹುಡುಗನ ಪ್ರಶ್ನೆ.

ಮೂರ್ಖ,
ಜನಿವಾರವಿದ್ದರೇ
ಸಾಕು ಕವನ ಏಕೆ ಬರೆಯುತ್ತೀಯಾ !
ನೀನು ಬರೆದಿದ್ದೇಲ್ಲಾ ಕವನವೇ..!?
ನೀನು ಮಾತನಾಡಿದ್ದೆಲ್ಲಾ ಸಿದ್ದಾಂತವೇ..!
ನಿನ್ನ ಹೆಸರಿನ ಮುಂದೆ
ಮೇಲ್ಜಾತಿಯ
ನಾಮ ಸೂಚಕ ಒಂದಿದ್ದರೇ ಸಾಕು
ನಿನಗೆ ಹೋದಡೆಯಲ್ಲಾ ಕೆಂಪುಹಾಸು
ಇವ ನಮ್ಮವ ಇವ ನಮ್ಮವ
ಎಂದೆಲ್ಲಾ ಬಿಗಿದಪ್ಪುತ್ತದೆ
ನಿಮ್ಮ ಜನರನ್ನೇ ತುಳಿದ ಅವರ ಗುಂಪು..!

ಕೇಳೋ ಹುಡುಗ
ನಿಮ್ಮ ತಲೆಮಾರು ಹೊಸೆದ
ಹಾಡುಗಳನ್ನೆ ನಮ್ಮವೆಂದು
ಹಾಡಿ ಬೀಗಿದ ಮಂದಿ ಅವರು,
ಲಜ್ಜೆ ಬಿಟ್ಟು, ಜಾತಿ ಇಟ್ಟುಕೊಂಡು
ಜನಿವಾರಕಷ್ಟೇ ಜಾಗವಿಲ್ಲಿ
ಎಂದು ಹೇಳುತ್ತಲೇ
ದುಡಿಯುವ ನಿಮ್ಮ ಮಂದಿಗೊಂದು
ಕೇರಿ ಮಾಡಿದರು.
ಮೈಕೈ ನೋಯಿಸಿಕೊಳ್ಳದೆ
ಮಡಿ ಎಂದು
ಕಪ್ಪು ಜನರ ಕೆಂಪು ರಕ್ತ
ಗಟಗಟನೆ ಕುಡಿದು
ತಪ್ಪೆಲ್ಲಾ ನಿಮ್ಮ ಮೂತಿಗೆ ಒರೆಸಿದರು.

ಈಗೇನು ಮಾಡುತ್ತಿದ್ದಾರೆ..!
ಕಂಡಲ್ಲಿ..ಸಿಕ್ಕಲ್ಲಿ..ಬರೆದಲ್ಲಿ..ಬೆಳೆದಲ್ಲಿ
ನಿಮ್ಮನ್ನು ತುಳಿಯುವ ಸಂಗತಿ ಜಾರಿಯಲ್ಲಿದೆ!?

ಈಗಲಾರದೂ ಗಟ್ಟಿಯಾಗಿ
ಓದಿ ಹೇಳು
ನೀವು ಕದ್ದ, ಕಸಿದುಕೊಂಡ
ಹಾಡುಗಳೆಲ್ಲಾ ನಮ್ಮವೆಂದು
ನಮ್ಮ ಬೆವರಿನ ನಂತರ ಹುಟ್ಟಿದ
ಅಂತಃಕರಣದ ರಾಗಗಳೆಂದು..
ನಮಗೆ ನಾವೇ
ಕವಿಗಳೇಂದು..!?

-ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು.

Friday, June 5, 2009

ಮಾಯಾ

ಕವಿತೆ ಬರೆಯುವುದು ಬಿಟ್ಟು
ಬೇರೆನೂ ಗೊತ್ತಿಲ್ಲದ
ಹೆಡ್ಡೂ ಕಣೋ..ನೀನು..
ಹೀಗೆ..
ಒಮ್ಮೆ ಕಣ್ಣರಳಿಸಿ
ನಕ್ಕು ಹೋದವಳ
ವಿಳಾಸ ಗೊತ್ತಿಲ್ಲ
ಅವಳು ಗೊತ್ತಿದ್ದರೇ ಹುಡುಕಿ ಕೊಡಿ..!

ನನ್ನೂರಿನ ಬರದ ಬಾಯರಿಕೆಗೆ
ಬೆನ್ನ ತಿರುಗಿಸಿ
ಬೆಂದಕಾಳೂರಿಗೆ ಹೋದವಳು
ಆದೇನು ಮಾಯೆಯೂ
ಅಲ್ಲಿಂದಲೂ ಅವಳು
"ಮಾಯಾ’
ಅವಳ ಹೆಸರೇ ಹಾಗೆ...!

ಅವರು ಬಿಟ್ಟು ಹೋದ ಭಾಷೆಗೆ
ಇವಳು ಅಧಿಕೃತ ಹಕ್ಕುದಾರಳಂತೆ
ನನ್ನೂರಿನ ಹೈಕಳು ಕಂಗಾಲು
ಪುರದ ಬಾಗಿಲ್ಲಲೇ
ಅವಳದೇ ಚರ್ಚೆ..?!
ಪಕ್ಕದಲ್ಲೆ ಇರುವ
ಸಿಂಗಾಪುರದಲ್ಲಿ ಅವಳದೇ ಧ್ಯಾನ
ಎಲ್ಲಿರಬಹುದೋ.? ಹೇಂಗಿರಬಹುದೋ..?

ಫರಂಗಿಯವರನ್ನು ಮದುವೆಯಾದರೇ?
ಅವರಮ್ಮನ ಚಿಂತೆ.
ವಯಸ್ಸು ಚಿಕ್ಕದು, ತುಂಬಿದ ಮೈಕಟ್ಟು
ನೀಳ ಕಣ್ಣು, ಗುಂಗರ ಕೂದಲು
ಬಾಯಿತುಂಬಿ ಮಾತನಾಡುವ ಬುದ್ದಿವಂತೆ
ಈ ನಮ್ಮೂರಿನ "ಮಾಯಾಂಗನೆ’
ಕಾಣೆಯಾಗಿದ್ದಾಳೆ..
ಸಿಕ್ಕಿದರೇ ಹುಡುಕಿಕೊಡಿ...!
ಪೇಪರ್‌ನಲ್ಲಿ ಬಂದ ಸಣ್ಣ ಸುದ್ದಿಯೇ
ನಮ್ಮೂರಿಗೆ ಈಗ ಹೈಲೈಟು...
ವಿಳಾಸ ಗೊತ್ತಿಲ್ಲ
ಅವಳು ಗೊತ್ತಿದ್ದರೇ ಹುಡುಕಿ ಕೊಡಿ..!

-ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು

Saturday, May 30, 2009

ಕಿಚ್ಚು

ಹತ್ತಿ ಉರಿಯುವ ಎದೆಯೊಳಗೆ
ಒಂದೇ ಹೊತ್ತಿಗೆ
ತಣ್ಣಾಗಾಗಲು
ನಿನ್ನ ಒಂದು ಲೋಟ್ ನೀರು ಸಾಲುವುದಿಲ್ಲ...

ನೆತ್ತರ ಒರೆಸಿದರೂ
ನನ್ನ ಮೈ ಬಣ್ಣ
ನೀನು ನಿಂತ
ಮಣ್ಣಿನ ವಾಸನೆಯದು ಎಂದು
ತಿಳಿಯದೆ ಮೂಗು ಮುಚ್ಚಿಕೊಂಡ
ಆಪಾದ ಮಸ್ತಕ ನೋಟ
ನಿದ್ರೆಯಿಲ್ಲದ ರಾತ್ರಿಗಳಲ್ಲಿ
ನೆರಳಾಗಿ ಕಾಡುತ್ತಿದೆ.

ಈಗ ನೋಡು
ನನ್ನವರಲ್ಲಿಯೂ ಬೆಳ್ಳಗಿರುವವರಿದ್ದಾರೆ !!
ನಿನ್ನ ಮಾತಿಗೆ
ಕತ್ತ ಕಾಲ ಮೇಲಿಟ್ಟು
ಬಂದ ಕಣ್ಣೀರನ್ನು
ಕುಡಿದ ನೋವ ನುಂಗುತ್ತಿದ್ದ
ಮುತ್ತಜ್ಜ..ನನ್ನಜ್ಜ..ನಮ್ಮಪ್ಪ..
ಸವೆಸಿದ ಚರ್ಮದ ಚಪ್ಪಲಿಗಳು
ನನ್ನ ಗೋಡೆಯ ಕಾಪಾಟಿನಲ್ಲಿ
ದೊಡ್ಡದಾಗಿ ಹಾಕಿದ್ದೇನೆ..
ಏಕೆಂದರೆ
ಅವೆಲ್ಲವೂ ನಾವೇ ಹೊಲಿದು ಹಾಕಿಕೊಂಡಿದ್ದು..
ನಮ್ಮ ಸೃಷ್ಟಿಗಳು..
ನೀವು ಮನೆಗೆ ಬಂದಾಗ
ಅವನ್ನು ನೋಡಿ
ನಾವು ನಿಮಗಾಗಿ
ನಡೆದ ಹಾದಿಯ ಬಗ್ಗೆ ನಿಮಗೆ
ಮತ್ತೆ ಮತ್ತೆ ನೆನಪು ಬರಲೆಂದು..


ಮತ್ತೆ ಹೊತ್ತು ಹುಟ್ಟಲೇಬೇಕು..
ನಿಮ್ಮ ತಲೆಮಾರಿಗೆ
ಗೊತ್ತಿದೆ..
ಅದಕ್ಕೆ ನಾವೆಲ್ಲಾ ಒಂದೇ..
ಮನಕುಲವೇ ಒಂದೂ..
ಬಡಬಡಿಸುತ್ತಲೇ..
ಮರೆಯಲ್ಲಿ ನಮ್ಮನ್ನು ಇನ್ನೂ ಬಡಿಯಲು
ಹೊಂಚು ಹಾಕುತ್ತಲೇ ಇದ್ದಾರೆ ನಿಮ್ಮವರು..
ಕಾಲ ಹೀಗೆ ಇರುವುದಿಲ್ಲ..
ಜಾತಿಯೇ ಇಲ್ಲದ
ಜಗತ್ತಿನ ಅಡಿಯಾಳಾಗಲಿದ್ದೀರಿ
ಜೋಕೆ..!

Friday, March 13, 2009

ಪರ್ಲ್ ಎಂಬ ಪತ್ರಕರ್ತ


ನೀವು, ಪತ್ರಕರ್ತರಿಗೆ ಬೇರೆ ಕೆಲಸ ಇಲ್ಲವೇ? ಅಂಥ ವ್ಯಕ್ತಿಗಳನ್ನು ನೀವು ಸಂದರ್ಶನ ಮಾಡಬೇಕೆನ್ನುವ ಇರಾದೆ ಯಾತಕ್ಕೆ?
ಪಾಕಿಸ್ತಾನದ ಅಂತರಿಕ ಒಳಾಡಳಿತ ಸಚಿವ ಮುಖಗಂಟಿಕ್ಕಿ ಪ್ರಶ್ನೆ ಮಾಡುತ್ತಾನೆ.
ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದ ಆತನ ಪ್ರಶ್ನೆಗೆ ಆಕೆ ಗಂಡನನ್ನು ಕಳೆದುಕೊಂಡ ನೋವಿನಲ್ಲೂ ಉರಿದು ಬೀಳುತ್ತಾಳೆ.
ಹೌದು, ಪತ್ರಕರ್ತನೊಬ್ಬ ಈ ನಾಗರಿಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಸಲುವಾಗಿ ಅಂತಹ ಸಾಹಸಗಳಿಗೆ ತೊಡಗಿಸಿಕೊಳ್ಳಲೇ ಬೇಕಾಗುತ್ತದೆ. ಅದೇ ನಮ್ಮ ಕೆಲಸ
ಸ್ವಲ್ಪ ಕಟುವಾಗಿ ಹೇಳುತ್ತಾಳೆ.
ನೋಡಿ, ಇದು ಭಾರತದ ಕೆಲಸ. ನಿಮ್ಮ ಗಂಡ ಭಾರತದ ಗುಪ್ತಚರ ಪಡೆಗೆ ಪಾಕಿಸ್ತಾನದ ಕೆಲವು ಸಂಗತಿಗಳನ್ನು ರವಾನೆ ಮಾಡುತ್ತಿದ್ದಾನೆ ಎಂಬ ಅನುಮಾನವಿದೆ. ಅದನ್ನು ಮೊದಲು ಪರಿಹರಿಸಿಕೊಳ್ಳಬೇಕಾಗಿದೆ.
ಮಂತ್ರಿ ಟಿಪಿಕಲ್ ರಾಜಕಾರಣಿಯ ವರಸೆ ಪ್ರದರ್ಶಿಸುತ್ತಾನೆ. ಕೆಲಸವಿಲ್ಲದಿದ್ದರೂ, ಆಕೆಯೊಂದಿಗೆ ಮಾತನಾಡಲು ಸಮಯವಿಲ್ಲವೆಂದು ಎದ್ದು ಹೊರಡುತ್ತಾನೆ. ಒಳಗೊಳಗೆ ಅಮೆರಿಕನ್ನರಿನ್ನರಿಗೆ ನಾನು ತಕ್ಕ ಪಾಠ ಕಲಿಸುತ್ತೇನೆ ಎಂಬ ಖುಷಿಯಲ್ಲಿ.
ಎರಡೇ ನಿಮಿಷದಲ್ಲಿ ಮುಗಿದು ಹೋಗುವ ಈ ಸನ್ನಿವೇಶ ಪಾಕಿಸ್ತಾನದ ಆಡಳಿತದ ಬಗ್ಗೆ ಇರುವ ನಿಮ್ಮ ಅಭಿಪ್ರಾಯಗಳನ್ನು ದೃಢೀಕರಿಸಿ ಬಿಡುತ್ತದೆ.
ಅಂದ ಹಾಗೆ ಸರಿದ ಹೋದ ಫೆ.೨೨ ಕ್ಕೆ ಆಕೆಯ ಗಂಡ ಪಾಕಿಸ್ತಾನಿ ಮೂಲಭೂತವಾದಿಗಳ ಕೈಯಲ್ಲಿ ಹತನಾಗಿ ೬ ವರ್ಷಗಳು ಸಂದಿತು. ಏನೂ ಅರಿಯದೆ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಅತನ ಕುರಿತು ಆಕೆ ಬರೆದ ಪುಸ್ತಕ ಎ ಮೈಟಿ ಹಾರ್ಟ್ ಚಲನಚಿತ್ರವಾಗಿದೆ.
ಆತ ಅಮೆರಿಕದ ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಡೆನಿಯಲ್ ಪರ್ಲ್.
***
ರಿಚರ್ಡ್ ಗೇರ್ ಎಂಬ ಶೂ ಬಾಂಬರ್ ಹಾಗೂ ಆತನ ಸಂಪರ್ಕ ಹೊಂದಿದ ಶೇಖ್ ಮುಬಾರಕ್ ಅಲಿ ಗಿಲಾನಿ ಎಂಬ ಮೂಲಭೂತವಾದಿ ಗುಂಪಿನ ಮುಖಂಡನನ್ನು ಭೇಟಿ ಮಾಡಲು ಜ.೨೩ ೨೦೦೨ ರಂದು ಡೆನಿಯಲ್ ಪರ್ಲ್ ಹೊರಡುತ್ತಾನೆ. ಆತನಿಗೆ ಭೇಟಿ ಮಾಡಿಸುವುದಾಗಿ ಮಸೂದ್ ಎಂಬ ವ್ಯಕ್ತಿಯು ಮುಂದೆ ಬಂದಿರುತ್ತಾನೆ. ಪ್ರಜಾಪ್ರಭುತ್ವವೇ ಸತ್ತು ಹೋಗಿರುವ ಪಾಕಿಸ್ತಾನದಲ್ಲಿ ಪತ್ರಕರ್ತನೊಬ್ಬ ಮೂಲಭೂತವಾದಿಗಳ ಇನ್ನೊಂದು ವಾದನ್ನು ಜಗತ್ತಿಗೆ ತೆರದಿಡಲು ಮಾಡುವ ಪ್ರಯತ್ನ ಇದು ಎಂದು ಪರ್ಲ್ ನಂಬಿದ್ದ. ಅದಕ್ಕಾಗಿ ಏಳು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಸರಿಯಾದ ಸುಳಿವನ್ನು ನೀಡದೇ ಬೆಳಂಬೆಳ್ಳಗ್ಗೆ ಹೊರಟು ನಿಂತ. ಅಂದು ಸಂಜೆಯವರೆಗೆ ಪತ್ನಿಯ ಸೌಖ್ಯವನ್ನು ಮೊಬೈಲ್‌ನಲ್ಲಿ ವಿಚಾರಿಸುತ್ತಲೇ ಇರುತ್ತಾನೆ. ಆದರೆ, ಸಂಜೆ ಏಳು ಗಂಟೆಯಾದ ಮೇಲೆ ಅತನ ಮೊಬೈಲ್ ಸಂಪರ್ಕ ಕಳೆದುಕೊಳ್ಳುತ್ತದೆ.
ಗಂಡ ಮುಖ್ಯವಾದ ಕೆಲಸಕ್ಕೆ ಹೋಗಿದ್ದಾನೆ. ಬರುತ್ತಾನೆ ಎಂಬ ಆಶಾವಾದದಲ್ಲಿಯೇ ಆಕೆ ಆ ರಾತ್ರಿ ಕಳೆಯುತ್ತಾಳೆ. ಆದರೆ, ಬೆಳಗ್ಗೆಯ ಹೊತ್ತಿಗೆ ಆತ ಯಾವುದೋ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಆಕೆಗೆ ಬಲವಾಗಿ ಅನಿಸತೊಡಗುತ್ತದೆ. ತುಂಬು ಗರ್ಭಿಣಿಯ ಮೊಗದಲ್ಲಿ ನೂರಾರು ಯೋಚನೆಗಳು ಬಂದು ಹೋಗುತ್ತದೆ. ಎರಡನೇ ದಿನವೂ ಆತನ ಬರುವಿಕೆಗಾಗಿ ಕಾಯುತ್ತಾಳೆ. ಇನ್ನೂ ಕಾಯುವುದು ಸಾಧ್ಯವೇ ಇಲ್ಲ ಎಂದಾಗ ತನ್ನ ಗೆಳತಿಗೆ ಕಷ್ಟ ಹೇಳುತ್ತಾಳೆ. ಅಲ್ಲಿಂದ ಆಕೆಯ ೩೦ ದಿನಗಳ ನೋವಿನ ಸರಮಾಲೆ ಆರಂಭವಾಗುತ್ತದೆ. ಗೆಳತಿ ಅಮೆರಿಕ ದೂತವಾಸಕ್ಕೆ ವಿಷಯ ಮುಟ್ಟಿಸುತ್ತಾಳೆ. ಅಮೆರಿಕ ದೂತವಾಸ ಪಾಕಿಸ್ತಾನದ ಸಿಐಡಿಗೆ ವಿಚಾರ ಹೇಳುತ್ತದೆ. ಇಡೀ ತನಿಖಾ ತಂಡವೇ ಪರ್ಲ್ ಮನೆಯಲ್ಲಿ ಬೀಡು ಬಿಡುತ್ತದೆ. ಗಂಡ ಕಾಣೆಯಾಗಿರುವ ನೋವಿನ ನಡುವೆಯೂ ಪಾಕಿಸ್ತಾನಿ ಪೊಲೀಸರಿಗೆ ಸಹಕರಿಸುವುದು ಅವಳಿಗೆ ಅನಿವಾರ್ಯವಾಗುತ್ತದೆ. ಆ ಗರ್ಭಿಣಿ ಹೆಣ್ಣು ಮಗಳ ತಾಳ್ಮೆಯೇ ಮೂರ್ತಿವೆತ್ತಂತೆ ವರ್ತಿಸುತ್ತಾಳೆ.
***
ವಿಷಯ ಇನ್ನಷ್ಟು ಕಗ್ಗಂಟಾಗತೊಡಗುತ್ತದೆ. ಆತನಿಗೆ ಸಂದರ್ಶನ ಕೊಡಿಸುವುದಾಗಿ ಹೇಳಿದವರ್‍ಯಾರು ಎಂಬುದನ್ನು ಪತ್ತೆ ಹಚ್ಚಲು ಪಾಕಿಸ್ತಾನಿ ಪೊಲೀಸರು ಮುಂದಾಗುತ್ತಾರೆ. ಆದರೂ, ಎಫ್‌ಬಿಐ ಅಧಿಕಾರಿಗಳೊಂದಿಗೆ ಅವರು ಸಹಕರಿಸಲು ವಿಳಂಬ ಮಾಡತೊಡಗುತ್ತಾರೆ. ಇಡೀ ವ್ಯವಸ್ಥೆಯ ಬಗ್ಗೆ ಪರ್ಲ್ ಪತ್ನಿ ಮರೀನಾ ನಂಬಿಕೆ ಕಳೆದುಕೊಳ್ಳ ತೊಡಗುತ್ತಾಳೆ. ಆಕೆ ಗರ್ಭಿಣಿ, ಮಾನಸಿಕವಾಗಿ ಕುಗ್ಗಬಾರದು ಎಂಬ ಕಾರಣಕ್ಕಾಗಿ ಅಮೆರಿಕ ದೂತವಾಸದ ಅಧಿಕಾರಿಗಳು ಸಮಾಧಾನ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಒಮ್ಮೊಮ್ಮೆ ಆಕೆ ಬಿಕ್ಕಳಿಸುತ್ತಾಳೆ. ಆದರೆ, ಅವರೆದುರಿಗೆ ಧೈರ್ಯ ಕಳೆದುಕೊಳ್ಳದಂತೆ ವರ್ತಿಸುತ್ತಾಳೆ. ಅದೊಂದು ವಿಚಿತ್ರ ಸನ್ನಿವೇಶ. ಆ ಸಂದರ್ಭದಲ್ಲಿಯೆ ಅಂದರೆ ಜ.೨೭ ರಂದು ಈ-ಮೇಲ್‌ವೊಂದು ಪತ್ರಿಕಾ ಕಚೇರಿಗಳಿಗೆ ಹಾಗೂ ಆಕೆಗೆ ತಲುಪುತ್ತದೆ. ಪಾಕಿಸ್ತಾನಿ ಸ್ವಾಯತ್ತತಾ ರಾಷ್ಟ್ರೀಯ ಚಳವಳಿ ಸಂಘಟನೆಯ ಹೆಸರಿನಲ್ಲಿ ಪರ್ಲ್ ಅಮೆರಿದ ಗುಪ್ತಚರ ಸಂಸ್ಥೆ ಸಿಐಎ ಏಜೆಂಟ್ ಎಂದು ಅಪಾದಿಸಲಾಗಿರುತ್ತದೆ. ಹಾಗೆಯೇ ಆತನಿಗೆ ಕೈ ಕೊಳ ತೊಡಿಸಿರುವ ಕೆಲವು ಚಿತ್ರಗಳನ್ನು ಕಳುಹಿಸಿರುತ್ತಾರೆ. ಇದನ್ನು ಕಂಡ ಪರ್ಲ್ ಪತ್ನಿ ಮರೀನಾ ತನ್ನ ಗಂಡ ಇನ್ನೂ ಬದುಕಿರುವ ಬಗ್ಗೆ ನಂಬಿಕೆ ಹೊಂದುತ್ತಾಳೆ. ಆದರೆ, ಅದೇ ಈ ಮೇಲ್‌ನಲ್ಲಿ ಕ್ಯೂಬಾದಲ್ಲಿರುವ ಅಮೆರಿಕ ಸೇನಾ ನೆಲೆಯಲ್ಲಿ ಬಂಧಿಸಿಟ್ಟಿರುವ ಅಲ್ ಖೈದಾ ಹಾಗೂ ಇತರ ಸಂಘಟನೆಯ ಉಗ್ರರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತಾಕೀತು ಮಾಡಿರುವುದು ಪ್ರಮುಖ ಅಂಶವಾಗಿರುತ್ತದೆ. ಇಲ್ಲದಿದ್ದರೆ ಪರ್ಲ್‌ನನ್ನು ಕೊಲ್ಲುವುದಾಗಿಯೂ ಎಚ್ಚರಿಸಲಾಗಿರುತ್ತದೆ. ಇದು ಅಮೆರಿಕ ಹಾಗೂ ಪಾಕಿಸ್ತಾನ ಆಡಳಿತವನ್ನು ಇನ್ನಷ್ಟು ಮುಜುಗರಕ್ಕೆ ಈಡು ಮಾಡುತ್ತದೆ. ಅಲ್ಲಿಯವರೆಗೆ ಪರ್ಲ್ ಮನೆಯಲ್ಲಿ ಬೇಯುತ್ತಿದ್ದ ಬೇಗೆ ಇಡೀ ಜಗತ್ತಿಗೆ ಬಹಿರಂಗವಾಗುತ್ತದೆ. ಅಲ್ಲಿಂದ ಪೊಲೀಸರ ಬೇಟೆಯೂ ಬಿರುಸಾಗುತ್ತದೆ.
***
ಜನವರಿ ೨೭ ರ ಅನಂತರ ಸತತವಾಗಿ ಅಮೆರಿಕ ಹಾಗೂ ಪಾಕಿಸ್ತಾನ ಆಡಳಿತಗಳು ಪರ್ಲ್ ಪತ್ತೆಗಾಗಿ ಪ್ರಯತ್ನ ಆರಂಭಿಸುತ್ತಾರೆ. ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆಯ ಸಂಪಾದಕರೂ ಆತ ಸಿಐಎ ಏಜೆಂಟ್ ಅಲ್ಲ ಎಂಬುದನ್ನು ಪದೇ ಪದೇ ದೃಢೀಕರಿಸುತ್ತಾರೆ. ಇದ್ಯಾವುದಕ್ಕೂ ಉಗ್ರರು ಬಗ್ಗವುದಿಲ್ಲ. ಫೆ.೧ ರಂದು ಇನ್ನೊಂದು ಈ ಮೇಲ್ ಬರುತ್ತದೆ. ೨೪ ಗಂಟೆಯೊಳಗೆ ತಮ್ಮ ಬೇಡಿಕೆ ಈಡೇರಿಸಬೇಕು ಹಾಗೂ ೨ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನೀಡಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಆದರೆ, ಅದರ ಬಗ್ಗೆ ಚರ್ಚೆ ನಡೆಸಬೇಕು ಎನ್ನುವುದರೊಳಗೆ ಅಮೆರಿಕದ ಸಿಎನ್‌ಎನ್ ಹಾಗೂ ಫಾಕ್ಸ್ ಸುದ್ದಿ ಸಂಸ್ಥೆಗಳಿಗೆ ಮತ್ತೊಂದು ಮೇಲ್ ಬರುತ್ತದೆ. ಪರ್ಲ್‌ನನ್ನು ಕೊಲೆ ಮಾಡಲಾಗಿದೆ ಎಂಬುದು ಈ ಮೇಲ್‌ನ ತಿರುಳು. ಅಲ್ಲಿಂದ ಕಥೆ ಇನ್ನೊಂದು ತಿರುವು ಪಡೆದುಕೊಳ್ಳತ್ತದೆ. ಅಲ್ಲಿಯವರೆಗೆ ಪರ್ಲ್ ಪತ್ನಿ ಮರೀನಾ ತನ್ನ ಗಂಡನನ್ನು ಕೊಲೆ ಮಾಡಿರುವುದನ್ನು ನಂಬುವುದೇ ಇಲ್ಲ. ಆತನನ್ನು ಬಿಡುಗಡೆ ಮಾಡುವಂತೆ ಆಕೆ ಅಪಹರಣಕಾರರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಕೊನೆಗೂ ಅಪಹರಣದ ಮುಖ್ಯ ಸೂತ್ರಧಾರಿ ಅಹಮದ್ ಓಮರ್ ಸೀದ್ ಶೇಖ್‌ನನ್ನು ಫೆ.೧೨ ರಂದು ಬಂಧಿಸಿ, ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಪರ್ಲ್‌ನನ್ನು ಕರಾಚಿಯಲ್ಲಿಯೇ ಇಟ್ಟಿರುವ ಬಗ್ಗೆ ಆತ ಸುಳಿವು ನೀಡುತ್ತಾನೆ. ಫೆ.೧೪ ರಂದು ಆತನನ್ನು ಕೋರ್ಟ್‌ಗೆ ಹಾಜರು ಪಡಿಸಿದಾಗ ಪರ್ಲ್‌ನನ್ನು ಕೊಲೆ ಮಾಡಿರುವ ಬಗ್ಗೆ ಆತ ಹೇಳಿಕೆ ನೀಡುತ್ತಾನೆ. ಫೆ.೨೨ ರಂದು ಪರ್ಲ್‌ನನ್ನು ಉಗ್ರರು ಕೊಲೆ ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡ ಕ್ಯಾಸೆಟ್‌ವೊಂದು ಪಾಕಿಸ್ತಾನಿ ಪೊಲೀಸರ ಕೈಗೆ ಸೇರುತ್ತದೆ. ಅಲ್ಲಿಗೆ ಅಮೆರಿಕ ಪರ್ಲ್ ಸಾವಿನ ಬಗ್ಗೆ ಅಧಿಕೃತವಾದ ಘೋಷಣೆ ಮಾಡುತ್ತದೆ.
***
ಆತ ಮತ್ತು ನನ್ನ ಸಿದ್ದಾಂತಗಳು ಒಂದೇ ತೆರನಾಗಿದ್ದವು. ಅದಕ್ಕಾಗಿ ಪರಸ್ಪರ ಪ್ರೀತಿ ಮಾಡಿ ಮದುವೆಯಾದೆವು. ಜೊತೆಗೆ ನಮ್ಮ ಇಡೀ ಜೀವನವನ್ನು ವಿವಿಧ ನಾಗರಿಕತೆಗಳ ನಡುವಿನ ಕೊಂಡಿಯನ್ನು ಜೋಡಿಸುವುದಕ್ಕಾಗಿಯೇ ಮುಂದುವರೆಸಿದ್ದೆವು
ಹೀಗೆಂದು ಪರ್ಲ್ ಪತ್ನಿ ಮರೀನಾ ಆನಂತರ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಾಳೆ. ತುಂಬು ಗರ್ಭಿಣಿಯೊಬ್ಬಳು ಆ ಒಂದು ತಿಂಗಳು ತನ್ನ ಗಂಡನನ್ನು ಕಳೆದುಕೊಂಡು ಅನುಭವಿಸಿರಬಹುದಾದ ಸಂಕಟ, ನೋವು, ದುಖಃ ಬಹುಶಃ ಇವುಗಳನ್ನು ನಾವ್ಯಾರು ಅಂದಾಜು ಮಾಡಲು ಸಾಧ್ಯವೇ ಇಲ್ಲ. ಅಷ್ಟೂ ದಿನಗಳು ಆಕೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿರುತ್ತಾಳೆ. ಹುಟ್ಟಲಿರುವ ತನ್ನ ಮಗುವಿಗಾಗಿಯಾದರೂ, ಉಗ್ರರು ಪರ್ಲ್‌ನನ್ನು ಬಿಡುಗಡೆ ಮಾಡುತ್ತಾರೆ ಎಂಬ ಆಚಲವಾದ ನಂಬಿಕೆ ಇಟ್ಟುಕೊಂಡಿರುತ್ತಾಳೆ. ಆದರೆ, ಅದು ಕೊನೆಗೂ ಹುಸಿಯಾಗುತ್ತದೆ.
***
ಎ ಮೈಟಿ ಹಾರ್ಟ್ ಚಿತ್ರವನ್ನು ಮಿಖೆಲ್ ವಿಂಟರ್‌ಬಾಟಮ್ ಎಂಬಾತ ನಿರ್ದೇಶನ ಮಾಡಿದ್ದಾನೆ. ಆ ಚಿತ್ರದಲ್ಲಿ ಆಂಜಲಿನ ಜೋಲಿ ಪರ್ಲ್ ಹೆಂಡತಿ ಮರೀನಾಳ ಪಾತ್ರ ಮಾಡಿದ್ದಾಳೆ. ನಿಜವಾಗಿಯೂ ಆಕೆಯ ಅಭಿನಯ ಕೊನೆಗೂ ನಿಮಗೆ ಕಣ್ಣೀರು ತರಿಸುತ್ತದೆ. ಗಂಡನನ್ನು ಅಪಹರಣಕಾರರು ಒತ್ತೆ ಇಟ್ಟುಕೊಂಡಿದ್ದಾರೆ. ಆತ ಮತ್ತೆ ಬರುವ ಸಾಧ್ಯತೆಗಳೇ ಇಲ್ಲ ಎನ್ನುವುದು ಒಂದೊಂದು ದಿನವೂ ದೃಢವಾಗುತ್ತಿದ್ದರೂ, ಆ ಮನಸ್ಸಿನ ತುಮಲವನ್ನು ತೋರಿಸುತ್ತಲೇ ಆ ದಿನಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ನೋಡಿದರೆ ನಿಟ್ಟುಸಿರು ಬಿಡುವುದೊಂದೇ ಬಾಕಿ. ಇಡೀ ಚಿತ್ರದ ತಲ್ಲಣಗಳನ್ನು ನಿರ್ದೇಶಕ ಬಿಡುಸು ಬಿಡಸಾಗಿ ತೆರೆದಿಡುತ್ತಾ ಹೋಗುತ್ತಾನೆ. ನಿಜ ಘಟನೆಯೊಂದನ್ನು ಚಿತ್ರವಾಗಿಸುವುದು ಅತ್ಯಂತ ಸವಾಲಿನ ಸಂಗತಿ. ಏಕೆಂದರೆ ಅದರಲ್ಲಿ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಅದನ್ನು ಚಿತ್ರ ಮಾಡುವಾಗ ಎದುರಾಗುವ ಸನ್ನಿವೇಶಗಳ ಬಗ್ಗೆಯೂ ನಿರ್ದೇಶಕನಿಗೆ ಅರಿವಿರಬೇಕಾಗುತ್ತದೆ. ಅದನ್ನು ಮೀರಿ ಆತ ಒಳ್ಳೆಯ ಚಿತ್ರ ಮಾಡಿದ್ದಾನೆ. ಹಿಂದಿ ಚಿತ್ರ ತಾರೆ ಇರ್ಫಾನ್ ಖಾನ್ ಚಿತ್ರದಲ್ಲಿ ಪಾಕಿಸ್ತಾನಿ ಸಿಐಡಿ ಮುಖ್ಯಸ್ಥನ ಪಾತ್ರ ಮಾಡಿದ್ದಾನೆ. ಬಹುತೇಕ ಪಾಕಿಸ್ತಾನಿ ನಟರನ್ನೆ ಇದರಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಏಷ್ಯಾ ಉಪಖಂಡದಲ್ಲಿನ ಭಯೋತ್ಪಾದಕತೆಯ ಕರಾಳ ಮುಖಗಳನ್ನು ನಿರ್ದೇಶಕ ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗಲಾಗಿದೆ. ಡೇನಿಯಲ್ ಪರ್ಲ್ ಅಮೆರಿಕದ ಪತ್ರಕರ್ತ ಎಂಬ ಕಾರಣಕ್ಕಾಗಿ ಆತನನ್ನು ಹತ್ಯೆ ಮಾಡಲಾಯಿತೇ? ಎಂಬ ಸಂಗತಿ ಇನ್ನೂ ಜಟಿಲವಾಗಿದೆ.
***
ಪಾಕಿಸ್ತಾನದಲ್ಲಿ ಈಗ ಪ್ರಜಾಪ್ರಭುತ್ವಕ್ಕೆ ಇನ್ನೊಮ್ಮೆ ಕಂಟಕ ಬಂದಂತೆ ಕಾಣುತ್ತದೆ. ನಮ್ಮೆಲ್ಲಾ ವಾದಗಳನ್ನು ಬದಿಗಿಟ್ಟು ನೋಡುವುದಾದರೆ, ಅಲ್ಲಿರುವ ಎಲ್ಲರೂ ಉಗ್ರರಲ್ಲ. ಎಲ್ಲರೂ ಭಯೋತ್ಪಾದನೆಯನ್ನು ಒಪ್ಪಿಕೊಳ್ಳುವುದಿಲ್ಲ. ಬಹುತೇಕ ಮಂದಿ ಶಾಂತಿಯುತ ಬದುಕನ್ನು ಆರಿಸಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರೂ, ಅದು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೆಲವು ಪ್ರಾಂತ್ಯದಲ್ಲಿ ಉಗ್ರರು ತಮ್ಮ ಹಿಡಿತವನ್ನು ಬಿಗಿ ಮಾಡಿಕೊಳ್ಳುತ್ತಿದ್ದಾರೆ. ಮೂಲಭೂತವಾದ ಹಾಗೂ ಕೋಮುವಾದ ಒಂದೇ ನಾಣ್ಯದ ಎರಡು ಮುಖಗಳು. ಅವುಗಳನ್ನು ಬೆಳೆಸುವುದು ಮತ್ತು ಪೋಷಿಸುವುದು ಅತ್ಯಂತ ಘೋರವಾದ ಸಂಗತಿ ಎಂಬುದು ಆ ರಾಷ್ಟ್ರದ ಗಮನಕ್ಕೆ ಬರಲೇಬೇಕಾಗಿದೆ. ಈಗಾಗಲೇ ಪಾಕಿಸ್ತಾನ ಆಡಳಿತ ಭಯೋತ್ಪಾದನೆಯನ್ನು ದಮನ ಮಾಡುವ ಶಕ್ತಿಯನ್ನು ಕಳೆದುಕೊಂಡಿದೆ. ಮುಂದೆ ಪಾಕಿಸ್ತಾನ ಇನ್ನೊಂದು ತಾಲಿಬಾನ್ ನೆಲೆಯಾದರೆ ಆಶ್ಚರ್ಯ ಪಡುವಂತಿಲ್ಲ.
***
ನಿಸ್ಸಂಶಯವಾಗಿ ಪತ್ರಕರ್ತನ ಈ ಹತ್ಯೆ ಅತ್ಯಂತ ಅಮಾನುಷ. ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಭಯೋತ್ಪಾದನೆಗೆ ಪತ್ರಕರ್ತನೇ ಬಲಿಯಾಗಿದ್ದು ವಿಪರ್ಯಾಸ. ಎ ಮೈಟಿ ಹಾರ್ಟ್ ನಮ್ಮ ನಿಮ್ಮನ್ನು ಬದುಕಿನ ನಾಳೆಯ ಭವಿಷ್ಯದ ಪ್ರಶ್ನೆಗಾಗಿ ತಲ್ಲಣಗೊಳಿಸುತ್ತದೆ. ಆತ ನಿಜವಾಗಿಯೂ ಭಯೋತ್ಪಾದನೆ ಪ್ರತಿಪಾದಿಸುವ ಮೂಲಭೂತವಾದಿಗಳ ಅನಿವಾರ್ಯತೆಗಳೇನು ಎಂಬ ಬಗ್ಗೆ ಸುದ್ದಿ ಮಾಡಲು ಹೋದಾತ. ಆದರೆ, ಅದನ್ನೆ ಉಗ್ರರು ತಮ್ಮ ಇನ್ನೊಂದು ಕೆಲಸಕ್ಕೆ ಬಳಸಿಕೊಂಡರು. ಆ ಚಿತ್ರವನ್ನು ನೋಡಿದರೆ, ಬದುಕನ್ನೆ ಪಣವಾಗಿಟ್ಟು ಯಾವುದೋ ತನ್ನ ಸಿದ್ಧಾಂತಕ್ಕೆ ಜೀವ ತೆರುವ ಪತ್ರಕರ್ತನ ಜೀವನದ ಬಗ್ಗೆ ಆತಂಕ ಮೂಡುತ್ತದೆ.
***
ಅಂದ ಹಾಗೆ ಡೇನಿಯಲ್ ಹೆಸರಿನಲ್ಲಿ ಪ್ರತಿ ವರ್ಷ ಪತ್ರಿಕೋದ್ಯಮದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪರ್ಲ್ ಪ್ರಸಿದ್ಧ ವಾಯಲಿನ್ ವಾದಕನೂ ಆಗಿದ್ದ. ಅದಕ್ಕಾಗಿ ಆತನ ಹೆಸರಿನಲ್ಲಿ ಸಂಗೀತ ಮೇಳಗಳು ನಡೆಯುತ್ತವೆ. ಪರ್ಲ್ ಹೀಗೆ ಅಮರನಾಗಿದ್ದಾನೆ.

Thursday, March 5, 2009

ಮಠಗಳೇ, ಮಠಗಳಿಂದ, ಮಠಗಳಿಗಾಗಿ...

ನಮ್ಮ ಪವಿತ್ರ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸರಕಾರದ ಕರ್ತವ್ಯಗಳನ್ನು ಮಠ ಮಾನ್ಯಗಳ ಪದತಲದಲ್ಲಿ ಅಡವಿಟ್ಟು ಉದ್ದುದ್ದ ಮಲಗಿ ಪ್ರಜಾತಂತ್ರ ಎಂದರೆ, ಮಠಗಳಿಂದ, ಮಠಗಳಿಗಾಗಿ, ಮಠಗಳಿಗೋಸ್ಕರ ಎಂಬ ನೂತನ ಘೋಷಣೆ ಮಾಡುವುದನ್ನು ರಾಜ್ಯದ ಬಿಜೆಪಿ ಸರಕಾರ ಬಾಕಿ ಉಳಿಸಿಕೊಂಡಿದೆ.ಇನ್ನಾರು ತಿಂಗಳಲ್ಲಿ ಅದು ಆಗಬಹುದು ಯಾರಿಗೆ ಗೊತ್ತು?

ಈ ಕೆಳಗಿನ ಎರಡು ಘಟನೆಗಳನ್ನು ಓದಿ.

ನಿಮ್ಮ ೧೨ ವರ್ಷದ ಹುಡುಗನೊಬ್ಬ ತನ್ನದೇ ಊರಿನ ದಲಿತರ ಕೇರಿಯ ೬೦ ವರ್ಷದ ವ್ಯಕ್ತಿಯೊಬ್ಬನನ್ನು ಲೋ ಮಾರ, ಲೋ ಸಿದ್ಧ ಎಂದು ಏಕವಚನದಲ್ಲಿ ಅತ್ಯಂತ ವ್ಯಂಗ್ಯವಾಗಿ ಮಾತನಾಡಿಸುತ್ತಾನೆ. ಆದರೆ, ಆ ಹಿರಿಯ ವ್ಯಕ್ತಿಯನ್ನು ಹಾಗೆ ಏಕವಚನದಲ್ಲಿ ಸಂಬೋಧಿಸಬಾರದು ಎಂದು ನೀವು ಎಲ್ಲೂ ನಿಮ್ಮ ಮಕ್ಕಳಿಗೆ ಹೇಳಿ ಕೊಡಲಿಲ್ಲ. ಅದನ್ನೇ ಈ ನಾಡಿನ ಸವರ್ಣೀಯರು ಸಂಸ್ಕಾರವೆಂಬಂತೆ ನಡೆದುಕೊಂಡು ಬಂದರು. ನಿಮ್ಮ ಎದೆ ಮುಟ್ಟಿಕೊಂಡು ಹೇಳಿ, ಲೋ ಮಾರ, ಲೋ ಸಿದ್ಧ, ಲೋ ಕೆಂಚ ಎಂದು ಆ ದಲಿತ ವರ್ಗದ ಹಿರೀಕರನ್ನು ಕರೆವ ನಿಮ್ಮ ಮಕ್ಕಳಿಗೆ ಅದು ತಪ್ಪು ಎಂದು ಎಂದಾದರೂ ಹೇಳಿಕೊಟ್ಟಿದ್ದೀರಾ..? ಎಲ್ಲ ಜಾತಿಯವರನ್ನು ಒಳಗೊಂಡ ಅನುಭವ ಮಂಟಪ ಕಟ್ಟಿದ ಆ ಬಸವಣ್ಣ ಎದುರಿಗೆ ಬಂದವರು ಯಾರೇ ಆದರೂ, ಶರಣು ಎಂದರೆ, ಶರಣು ಶರಣಾರ್ಥಿ ಎಂದು ಎರಡು ಬಾರಿ ಹೇಳುತ್ತಿದ್ದರಂತೆ. ಅಂತಹ ಬಸವಣ್ಣನವರ ಲಿಂಗಾಯಿತ ಧರ್ಮವನ್ನು ನೀವು ಜಾತಿ ಎಂಬ ಪಟ್ಟ ಕಟ್ಟಿ ಕರ್ನಾಟಕದೊಳಕ್ಕೆ ಕಟ್ಟಿ ಹಾಕಿದಿರಿ. ಲಿಂಗಾಯಿತ ಅಥವಾ ವೀರಶೈವ ಎನ್ನುವುದನ್ನು ಎಂದೂ ಧರ್ಮವನ್ನಾಗಿಸಲು ನೀವು ಬಿಡಲೇ ಇಲ್ಲ. ಹಾಗೊಂದು ಪಕ್ಷ ಬಸವಣ್ಣನ ನಡೆಗಳು ನಿಮ್ಮ ಎದೆಯೊಳಗೆ ಮೂಡಿದ್ದರೇ ಅದು ಇವತ್ತು ವಿಶ್ವಧರ್ಮವಾಗಿರುತ್ತಿತ್ತು

೧೯೯೬ರಲ್ಲಿ ನಂಜನಗೂಡಿನ ಸಮಾರಂಭವೊಂದರಲ್ಲಿ ಸಂವೇದನಾಶೀಲ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದ ಮಾತುಗಳಿವು. ಬಹುಶಃ ಅವತ್ತಿನ ಸಮಾರಂಭದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಅದರಲ್ಲಿ ಸವರ್ಣೀಯರೇ ಹೆಚ್ಚಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಕರಾಳ ನೆನಪು ಎನಿಸಿದ ಬದನವಾಳು ಘಟನೆ ನಡೆದು ಮೂರು ವರ್ಷ ಕಳೆದಿತ್ತು. ಹಗೆಯ ಹಸಿ ಹಸಿ ವಾಸನೆ ಅಲ್ಲಲ್ಲಿ ಉಳಿದಿತ್ತು. ಅಂತಹ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಬಸವಣ್ಣನವರ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಲೇ ದಲಿತರನ್ನು ಕಡೆಗಣನೆಯಿಂದ ನೋಡುವವರ ಆತ್ಮಭಿಮಾನವನ್ನು ಪ್ರಶ್ನೆ ಮಾಡುತ್ತಾ ಹೋದರು. ಅದು ಇಂದಿಗೂ ನೆನಪಿನಲ್ಲಿ ಉಳಿಯುವ ಭಾಷಣ.

***

ಮೈಸೂರಿನ ಪ್ರಸಿದ್ಧ ಮಠವೊಂದಕ್ಕೆ ಹೋದಾಗ ಅಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಮಂದಿ ಸ್ವಾಮಿಗಳನ್ನು ನೋಡಲು ಕಾಯುತ್ತಿದ್ದಾರೆ. ಮಠದ ಸಹಾಯಕರು ಒಬ್ಬೊಬ್ಬರಂತೆ ಎಲ್ಲರನ್ನು ಒಳಬಿಡುತ್ತಿದ್ದಾರೆ. ಇದು ಮಧ್ಯಾಹ್ನ ಮೂರು ಗಂಟೆಯವರೆಗೆ ನಡೆಯುತ್ತಲೇ ಇತ್ತು. ಹಾಗೆ ಜನರು ಸ್ವಾಮಿಗಳನ್ನು ನೋಡಲು ಬರುತ್ತಲೇ ಇದ್ದರು. ಬಂದವರಲ್ಲಿ ಕೆಲವರು ಅವರ ಮಕ್ಕಳಿಗೆ ಮಠದ ಶಾಲೆಯಲ್ಲಿ ಸೀಟು ಕೊಡಿಸಲು, ಕೆಲಸ ಕೇಳಲು ಬಂದಿದ್ದರು. ಅವರವರ ಭಕುತಿಗೆ ತಕ್ಕಂತೆ ಸ್ವಾಮೀಜಿಗಳಿಂದ ಆಶೀರ್ವಾದವು ದೊರೆಯುತ್ತಿತ್ತು. ಇದನ್ನು ನೋಡಿದಾಗ, ಸರಕಾರದ ಆಡಳಿತ ಯಂತ್ರವೊಂದು ಮಾಡಬೇಕಾದ ಕೆಲಸವನ್ನು ಸ್ವಾಮೀಜಿಯವರ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸದೆ ಇರಲಾರದು. ಆದರೆ, ಅಲ್ಲಿ ಆಗಿರುವುದೇನು ಎಂಬುದನ್ನು ಹುಡುಕುತ್ತಾ ಹೋದರೆ, ಬಹುಶಃ ಅದು ಈ ನಾಡಿನ ಪ್ರಜಾತಂತ್ರ ವ್ಯವಸ್ಥೆಗೆ ಬಂದಿರುವ ಗಂಡಾಂತಾರ ಎನ್ನುವುದು ನೀವು ಸೂಕ್ಷ್ಮ ಮತಿಗಳಾಗಿದ್ದರೆ ತಿಳಿದು ಹೋಗುತ್ತದೆ.

***

ಮೇಲಿನ ಎರಡು ವಿಚಾರಗಳು ಬೇರೆ ಬೇರೆಯಾಗಿದ್ದರೂ, ಸಾರಾಂಶ ಒಂದೇ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಮತ್ತು ಬದುಕಲು ಆಹಾರ ನೀಡಬೇಕೆಂಬುದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆಶಯಗಳಲ್ಲಿ ಪ್ರಮುಖ. ಆದರೆ, ಶಿಕ್ಷಣ ಮತ್ತು ಆರೋಗ್ಯ ಮಠ ಮಾನ್ಯಗಳು ಮತ್ತು ಹಣವಂತರ ಕೈಗೆ ಸಿಲುಕಿ ಹೋಗಿದೆ. ಈ ನಾಡಿನ ದಲಿತನೊಬ್ಬ ಸುಲಭವಾಗಿ ಶಿಕ್ಷಣ ಪಡೆಯಲು ಇನ್ನೂ ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹದರಲ್ಲಿ ಎಲ್ಲ ಜಾತಿ ಜನಾಂಗದ ಪ್ರಜೆಗಳಿಂದ ಆರಿಸಿದ ಹೋದ ನೀವು ಸಮಾನತೆಯ ತತ್ವ ಬೋಧಿಸುವ ಸಂವಿಧಾನದ ನೀತಿ ನಿಯಮಾವಳಿಗಳನ್ನು ಹೇಗೆ ಪಾಲಿಸುತ್ತಿದ್ದೀರಿ? ಆಯವ್ಯಯದಲ್ಲಿ ಮಠ ಮಾನ್ಯಗಳೇ ತಮ್ಮ ಆಯ್ಕೆಗೆ ಕಾರಣ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಿಗೆ ಹಣವನ್ನು ಪುಕ್ಕಟ್ಟೆ ಹಂಚಿದ್ದಾರೆ. ಹಾಗಾದರೆ, ಮತದಾರ ಮಹಾಪ್ರಭು ಎಂಬ ಮಾತು ಈ ರಾಜಕಾರಣಿಗಳಿಗೆ ಇಷ್ಟು ಬೇಗ ಮರೆತು ಹೋಯಿತೇ? ಅಥವಾ ಮರೆಗುಳಿಗಳು ಮಾತ್ರ ರಾಜಕಾರಣಿಗಳಾಗಲು ಸಾಧ್ಯವೇ?

***

ಮಠಗಳ ಬಗ್ಗೆ ಹಿರಿಯ ಸಾಹಿತಿ ಡಾ.ಎಲ್.ಬಸವರಾಜು ಅವರು ಆಡಿದ ಮಾತುಗಳು ಎಷ್ಟು ಪ್ರಸ್ತುತವಾಗಿದೆ ಎಂಬುದು ಈ ಬಾರಿ ಆಯವ್ಯಯವನ್ನು ನೋಡಿದರೆ ತಿಳಿದು ಹೋಗುತ್ತದೆ. ಯಡಿಯೂರಪ್ಪ ಅದರಲ್ಲಿಯೂ ಜಾಣರು, ತಾವು ಯಾವ ಜಾತಿ ಜನಾಂಗವನ್ನು ಎದುರು ಹಾಕಿಕೊಳ್ಳದೆ ಎಲ್ಲರಿಗೂ ಹಣವನ್ನು ಕೋಟಿಗಳ ಲೆಕ್ಕದಲ್ಲಿ ಹಂಚಿದ್ದಾರೆ. ಮಠಗಳು ತೃಪ್ತಿಯಾದರೆ, ಇಡಿ ನಾಡಿನ ಜನತೆ ತೃಪ್ತರಾದಂತೆ ಎಂಬುದು ಅವರ ಸಾದಾ ಲೆಕ್ಕಾಚಾರ. ಆದರೆ, ಅವರಿಗೆ ತಿಳಿಯದೇ ಇರುವ ಒಂದು ಸತ್ಯವೆಂದರೆ ಹೀಗೆ ಹಣ ಪಡೆಯುವ ಮಠಗಳ್ಯಾವುವೂ ನಾಡಿನ ಜನತೆಗೆ ಪುಕ್ಕಟ್ಟೆಯಾಗಿ ಸೇವೆ ಮಾಡುವುದಿಲ್ಲ. ಅಥವಾ ಜನಸೇವೆ ಎಂಬುದನ್ನು ಎಂದೋ ಮರೆತು ಹೋಗಿವೆ. ಅಷ್ಟಕ್ಕೂ ಮಠಗಳ ಹಾಗೂ ಹಣವಂತರ ಸುರ್ಪದಿಯಲ್ಲಿಯೇ ಮೆಡಿಕಲ್ ಕಾಲೇಜುಗಳು, ಎಂಜನಿಯರಿಂಗ್ ಕಾಲೇಜುಗಳು ಇರಬೇಕು ಯಾಕೆ? ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಸರಕಾರದ ಕರ್ತವ್ಯಗಳಾದರೂ ಏನು? ಈ ಪ್ರಶ್ನೆ ಕೇಳುವ ಧ್ವನಿಯನ್ನು ನಮ್ಮ ನಾಡಿನ ಚಳವಳಿಗಳು ಕಳೆದುಕೊಂಡಿವೆ ಅಥವಾ ಚದುರಿ ಹೋಗಿವೆ..!

***

ಎಲ್ಲವನ್ನು ಸರಕಾರವೇ ಮಾಡಲು ಸಾಧ್ಯವಿಲ್ಲ, ಈ ಮಠ ಮಾನ್ಯಗಳು ಇರುವುದರಿಂದಲೇ ನಾವಿಷ್ಟು ಸುಭಿಕ್ಷವಾಗಿದ್ದೇವೆ. ಹೀಗೆಂದು ಭಾಷಣ ಬಿಗಿಯುತ್ತಲೇ ದುಂಡಗಾಗುವ ರಾಜಕಾರಣಿಗಳು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಬಿಜೆಪಿ ಇನ್ನಷ್ಟು ಪ್ರಭಾವಶಾಲಿಯಾಗಿ ತೋರಿಸುತ್ತಿದೆಯಷ್ಟೇ. ವಿಷಾದವೆಂದರೆ ಕರ್ನಾಟಕದಲ್ಲಿ ಜಾತಿಯ ಮಠಗಳು ಶ್ರೀಮಂತ. ಆ ಜಾತಿಯ ಜನರು ಮಾತ್ರ ಬಡವರು. ವಿಷಯವನ್ನು ಇನ್ನೂ ನೇರವಾಗಿ ಹೇಳುವುದಾದರೆ, ನಾಡನ್ನು ಆಳುತ್ತಿರುವುದು ಪ್ರಬಲ ಜಾತಿಯ ಮಠಗಳು, ನಮ್ಮದು ಪ್ರಜಾತಂತ್ರ ವ್ಯವಸ್ಥೆಯ ಸರಕಾರವಲ್ಲ. ಇದು ನಿಜವಾದ ವೈರುಧ್ಯ.

***

ಬಸವಣ್ಣನವರು ಅನುಭವ ಮಂಟಪ ಕಟ್ಟಿದಾಗ ಅಲ್ಲಿ ಜಾತಿಯ ಗೌಜುಗಳಿರಲಿಲ್ಲ, ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಹೀಗೆ ಎಲ್ಲರು ಶರಣರಾಗಿದ್ದರು. ಆದರೆ, ಆ ಶರಣ ಎಂಬ ಸಂಸ್ಕೃತಿ ಒಂದೊಂದು ಮಠದ ವ್ಯಾಪ್ತಿಗೆ ಸೀಮಿತವಾಗಿ ಸರಕಾರವನ್ನು ಶರಣು ಮಾಡಿಸಿಕೊಂಡಿದೆ. ಲಿಂಗಾಯಿತರು ಎಂಬ ಕಾರಣಕ್ಕಾಗಿ ಯಡಿಯೂರಪ್ಪನವರ ಆಪ್ತ ವ್ಯಾಪ್ತಿಯ ಅಧಿಕಾರಿಗಳೆಲ್ಲಾ ಅದೇ ಜಾತಿಯವರಾಗಿರುತ್ತಾರೆ. ದೇಶಪ್ರೇಮ ಹೇಳುವ ಬಿಜೆಪಿಯವರು ಜಾತಿ ಮೀರಿದ ರಾಜಕಾರಣವನ್ನು ಮಾಡಿ ತೋರಿಸಬಹುದಿತ್ತು. ಅದಕ್ಕೊಂದು ಸದಾವಕಾಶವೂ ಇತ್ತು. ಆದರೆ, ಅವರೂ ಮಾಡಿದ್ದು ಕಾಂಗ್ರೆಸ್ ಹಾಗೂ ಜನತಾದಳಗಳ ಕೆಲಸವನ್ನೆ.

ಈ ಹಿಂದೆ ಕಾಂಗ್ರೆಸ್ ಹಾಗೂ ದಳ ಮಠ ಮಾನ್ಯಗಳನ್ನು ಹಚ್ಚಿಕೊಂಡಿದ್ದವಾದರೂ, ನೆಚ್ಚಿಕೊಂಡಿರಲಿಲ್ಲ. ಹೀಗೆ ಮನಸೋ ಇಚ್ಛೆ ಬೊಕ್ಕಸದ ಹಣವನ್ನು ಧಾರೆಯೆರದಿರಲಿಲ್ಲ. ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಮಠ, ಮಂದಿರಗಳನ್ನು ಇನ್ನಷ್ಟು ಉದ್ಧಾರ ಮಾಡುವ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅದು ಅವರ ಲೋಕಸಭೆ ಎಲೆಕ್ಷನ್ ಲೆಕ್ಕಾಚಾರ ಆಗಿರಬಹುದು. ಆದರೆ, ಮುಂದೊಂದು ದಿನ ಇದೇ ಮಠಗಳ ಯಜಮಾನರು ಪಾಳೆಗಾರರಂತೆ ನಾಡನ್ನು ಆಳುವಾಗ ಪರಿತಪಿಸುವ ಜನ ಶಪಿಸುವುದು ರಾಜಕಾರಣಿಗಳನ್ನೆ ಎಂಬುದನ್ನು ಅವರು ಮರೆತಂತಿದೆ.

***

ಮೇಲ್ವರ್ಗದ ಮಠವೊಂದರ ಶಿಕ್ಷಣ ಸಂಸ್ಥೆಯಲ್ಲಿ ದಲಿತನೊಬ್ಬ ಅತ್ಯಂತ ಸುಲಭವಾಗಿ ಕೆಲಸ ಪಡೆಯಲು ಸಾಧ್ಯವೇ? ಅಂತಹ ಸಾಧ್ಯತೆಗಳು ಶೇ ೨ ರಷ್ಟ್ಟೂ ಇರಲಾರದು. ಹಾಗೆಂದು ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡಲು ಹೊರಟರೆ, ಕೆಪಿಎಸ್‌ಸಿ ಎಂಬ ಕಿತ್ತುತಿನ್ನುವ ನರರಾಕ್ಷಸ ಸೌಧದಲ್ಲಿ ಗರಿಗರಿಯ ನೋಟುಗಳನ್ನು ಎಣಿಸಿಕೊಳ್ಳಲು ಹರಿವಾಣ ಮುಂದಿಟ್ಟು ಕುಳಿತುಕೊಂಡಿದೆ ವ್ಯವಸ್ಥೆ. ಶಿಕ್ಷಣ ಸಂಸ್ಥೆಗಳನ್ನೆಲ್ಲಾ ಸರಕಾರ ಹೀಗೆ ಮಠಗಳಿಗೆ ಧಾರೆಯೆರೆದಿರುವಾಗ ಆದೇ ದಲಿತ ತನ್ನ ಹೊಟ್ಟೆಗಾಗಿ ಸನಾತನ ಧರ್ಮಕ್ಕೆ ತಲೆಬಾಗಲೇಬೇಕು. ಸವರ್ಣೀಯ ವ್ಯವಸ್ಥೆಗೆ ತಲೆಬಾಗುವ ಪದ್ಧತಿ ಅನೂಚಾನವಾಗಿ ಅವರ ಮುಂದಿನ ಪೀಳಿಗೆಗೆ ಮುಂದುವರಿಯಬೇಕು. ಹಾಗಾಗಿ ಮಠಗಳು ಹಾಗೂ ಸ್ವಾಮೀಜಿಗಳು ಜಗದ್ಗುರುಗಳಾಗಿ ಈ ಸರಕಾರದ ನೀತಿ ನಿಯಮಗಳನ್ನು ರೂಪಿಸುವವವರಾಗುತ್ತಾರೆ. ಅದನ್ನು ಈ ನಾಡಿನ ಎಲ್ಲ ಶ್ರೀಸಾಮಾನ್ಯರು ಪಾಲಿಸಬೇಕಾಗುತ್ತದೆ.

ನಾಡಿನ ಮಠಮಂದಿರಗಳಲ್ಲಿ sಸ್ವಾಮೀಜಿ ಆನಂತರ ಇರುವ ಪ್ರಮುಖ ಸ್ಥಾನಗಳಲ್ಲಿ ಅನ್ಯ ಜಾತಿಯವರು ಇದ್ದಾರಾ..ಅಥವಾ ಭಕ್ತರು ಇದ್ದಾರಾ ಎಂದು ನೋಡಿದರೆ, ಊಹೂಂ ಇಲ್ಲ. ಯಾರು ಸ್ವಾಮೀಜಿಗಳಾಗಿದ್ದರೂ, ಅವರ ಕುಟುಂಬದ ಪರಂಪರಾಗತ ಸ್ವತ್ತಾಗಿ ಮಠದ ಪ್ರಮುಖ ಸ್ಥಾನಗಳು ಪರಿಗಣಿತವಾಗಿರುತ್ತದೆ. ಆ ಸ್ವಾಮೀಜಿಯ ಇಡೀ ಕುಟುಂಬದ ಸದಸ್ಯರೇ ಮಠದ ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ!

***

ನೈತಿಕತೆಯ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಮಠಗಳೆಲ್ಲಾ ಇಂದು ಜಾಗತೀಕರಣದ ನೆಪದಲ್ಲಿ ಹಣ ವಸೂಲಿ ಮಾಡುವ ಸೇವಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಸ್ನೇಹಿತರೊಬ್ಬರು ಹೇಳುತ್ತಿದ್ದು ಈಗಲೂ ಪ್ರಸ್ತುತವೆನಿಸುತ್ತದೆ. ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಕೆಲವು ಶ್ರೀಮಂತ ಮಠಗಳ ಸ್ವಾಮೀಜಿಗಳು ಜಗತ್ತಿನ ಅತ್ಯುತ್ತಮ ಸಿಇಓಗಳು ಎಂದು. ಹೌದು, ಅಧ್ಯಾತ್ಮಿಕ ಅನುಭವಗಳ ಶ್ರೀಮಂತಿಕೆಯನ್ನು ಕಟ್ಟಿಕೊಡುವ ಬದಲು, ಎಂಜನಿಯರಿಂಗ್, ಮೆಡಿಕಲ್ ಕಾಲೇಜುಗಳ ವ್ಯವಹಾರವೇ ಪ್ರಸ್ತುತ ಎನಿಸುವ ಅವರ ಕಾರ್ಯವೈಖರಿ, ಶಿಕ್ಷಣ ಕ್ಷೇತ್ರದ ಅಷ್ಟೂ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಅವರ ಹಪಾಪಿತನದ ಬಗ್ಗೆ ಖೇದವೆನಿಸುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವ ಸರಕಾರ ಇನ್ನಾವ ಜನಕಲ್ಯಾಣ ಮಾಡಲು ಸಾಧ್ಯ ಎನ್ನುವುದನ್ನು ನಾವು ಆಲೋಚನೆ ಮಾಡುವ ಕಾಲ ಹತ್ತಿರ ಬಂದಿದೆ.

ಇಂತಹ ಸಂದರ್ಭದಲ್ಲಿ ನನಗೆ ನನ್ನ ಗುರುಗಳಾದ ಪ್ರೊ.ಕೆ.ರಾಮದಾಸ್ ನೆನಪಾಗುತ್ತಾರೆ. ಯಡಿಯೂರಪ್ಪನವರ ಆಯವ್ಯಯ ನೋಡಿದ್ದರೆ, ಅವರೊಬ್ಬರಾದರೂ ಧ್ವನಿಯೆತ್ತಿ ಸರಕಾರದ ಮಠಗಳ ಓಲೈಕೆ ಕ್ರಮವನ್ನು ಬಹಿರಂಗವಾಗಿ ಖಂಡಿಸುತ್ತಿದ್ದರು. ಸರಕಾರದ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದರು. ಜನರ ತೆರಿಗೆ ಹಣವನ್ನು ಬಿಜೆಪಿ ತನ್ನ ಪಕ್ಷದ ಸ್ವತ್ತು ಎಂಬ ಧಾಟಿಯಲ್ಲಿ ಹಂಚಿಕೆ ಮಾಡಲು ಹೋರಟಿರುವುದನ್ನು ವಿರೋಧಿಸಿ ಹೋರಾಟವನ್ನಾದರೂ ಮಾಡುತ್ತಿದ್ದರು. ಈಗ ಅಂತಹ ಧ್ವನಿಯೆತ್ತಲು ನಮ್ಮಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಕನಿಷ್ಟ ಪಕ್ಷ ಅದನ್ನು ಉಗ್ರವಾಗಿ ವಿರೋಧಿಸುವ ತಾಕತ್ತು ಕಾಂಗ್ರೆಸ್ ಹಾಗೂ ಜಾ.ದಳ ಪಕ್ಷಗಳು ಕಳೆದುಕೊಂಡಿವೆಯಲ್ಲ ಎಂಬ ನೋವು ಕಾಡುತ್ತದೆ.

***

ದಲಿತರು,ಹಿಂದುಳಿದವರ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಅವರಿಗೆ ಕಿಂಚಿತ್ತ್ತೂ ಒಳ್ಳೆಯದನ್ನು ಮಾಡಲು ಪ್ರಯತ್ನ ಮಾಡಿಲ್ಲ, ಮಾಡಿದ್ದರೂ, ಅದು ಮಧ್ಯವರ್ತಿಗಳ ಪಾಲಾಗಿದೆ. ಅದನ್ನು ಗಮನಿಸಿಯಾದರೂ, ಯಡಿಯೂರಪ್ಪನವರು ಇನ್ನೂ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ಮಠಗಳಿಗೆ ಕೊಡುವ ಹಣವನ್ನೆ ಜಿಲ್ಲೆಗೊಂದರಂತೆ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಬಳಸಬಹುದಿತ್ತು. ಅಥವಾ ನಿರುದ್ಯೋಗಿಗಳ ನೆರವಿಗೆ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಎಲ್ಲರಂತೆ ತಮ್ಮ ಜಾತಿಯ ಅಂಧಾನುಕರಣೆಯಲ್ಲಿ ಮುಳುಗಿ ಹೋಗಿರುವ ಅವರು ಮತ್ತು ಅವರ ಪಕ್ಷ ಜನರನ್ನು ವಂಚಿಸುವ ಇನ್ನೊಂದು ಸರಕಾರವಾಗಿ ಇತಿಹಾಸದಲ್ಲಿ ದಾಖಲಾಗಿ ಹೋಗುತ್ತದೆ ಎನ್ನುವುದಂತೂ ದಿಟ.

Thursday, February 26, 2009

ಅಮೆರಿಕದ ಸ್ಲಂ ಡಾಗ್‌ಗಳನ್ನು ಕುರಿತು ಒಂದಿಷ್ಟು...



ಕಳೆದ ನಾಲ್ಕು ತಿಂಗಳಿಂದ ಗಂಜೀ ಕೇಂದ್ರಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಸುಮಾರು ೨೮ ಮಿಲಿಯನ್ ಮಂದಿ ಒಂದೊತ್ತಿನ ಆಹಾರಕ್ಕಾಗಿ ಗಂಜೀ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಮುಂದೆ ಇದರ ಸಂಖ್ಯೆ ಹೆಚ್ಚಲಿದೆ.

ಹೀಗೆಂದು ಅಮೆರಿಕದ ಕೃಷಿ ಮತ್ತು ಆಹಾರ ಇಲಾಖೆಯನ್ನು ನೋಡಿಕೊಳ್ಳುವ ಅಧಿಕಾರಿಯೊಬ್ಬ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾನೆ. ಹಾಗಾದರೆ ನಿಜಕ್ಕೂ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಏನಾಗಿದೆ?

ಕಾರಣ ಅರ್ಥಿಕ ಹಿಂಜರಿತ.

***



ಅಮೆರಿಕದಲ್ಲಿ ನಮಗಿಂತ ಜನರು ಕೀಳು ಮಟ್ಟದಲ್ಲಿ ಬದುಕುತ್ತಿದ್ದಾರೆ. ನಿಜಕ್ಕೂ ಭಾರತೀಯರೇ ಧನ್ಯವಂತರು. ಭರತ ಖಂಡದಲ್ಲಿ ಹುಟ್ಟಿದ್ದಾಕ್ಕಾಗಿ ಅವರು ಇಲ್ಲಿಗೆ ಚಿರಋಣಿಯಾಗಿರಬೇಕು

ಹೀಗೆಂದು ಅಮೆರಿಕಕ್ಕೆ ಹೋಗಿಬಂದ ಸ್ನೇಹಿತನೊಬ್ಬ ಹೇಳುತ್ತಿದ್ದರೆ ಆಶ್ವರ್ಯ. ಅಲ್ಲಿಗೆ ಹೋಗಿಬಂದವರೆಲ್ಲಾ ನ್ಯೂಯಾರ್ಕ್‌ನ ಕಣ್ಣು ಕೋರೈಸುವ ಬೆಳಕಿನಲ್ಲಿ ಕಳೆದುಹೋದದ್ದೆ ಹೆಚ್ಚು. ಐಷಾರಾಮಿ ಜೀವನ, ಸ್ವೇಚ್ಛೆಯ ಬದುಕು, ಎಲ್ಲ ರೀತಿಯ ಸ್ವಾತಂತ್ರ್ಯ, ಮುಂದುವರಿದ ತಂತ್ರಜ್ಞಾನ, ಬದುಕುವ ಶಿಸ್ತು... ಹೀಗೆ ಅಮೆರಿಕವನ್ನು ಕೊಂಡಾಡದ ಪ್ರವಾಸಿಗರೇ ಇಲ್ಲ. ಆದರೆ, ಅಲ್ಲಿನ ಬದುಕಿನ ಒಳನೋಟದ ಬಗ್ಗೆ ಪ್ರಸ್ತಾಪವಾಗಿದ್ದೆ ಕಡಿಮೆ. ಹಾಗಾಗಿ ಅಲ್ಲಿನ ಶ್ರೀಸಾಮಾನ್ಯನೊಬ್ಬನ ಬದುಕಿನ ಬಗ್ಗೆ ತಿಳಿಯುವುದು ಸಾಧ್ಯವಿಲ್ಲದ ಸಂಗತಿ.

ಅರ್ಥಿಕ ಹಿಂಜರಿತವಾದ ಅನಂತರ ಅಮೆರಿಕದ ಸುಮಾರು ೨ ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ೩ ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ದಿನವೂ ಸುಮಾರು ೨ ಸಾವಿರ ಮಂದಿ ಪಿಂಕ್ ಸ್ಲಿಪ್ ಪಡೆಯುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿರುದ್ಯೋಗ ಎನ್ನುವುದು ಅಲ್ಲಿನ ಸಾಮಾನ್ಯ ವಿಷಯವಾಗುವ ಎಲ್ಲ ಸಾಧ್ಯತೆಗಳು ಇವೆ. ಕೋಟ್ಯಂತರ ರೂ. ಸಾಲ ನೀಡುವ ಅಮೆರಿಕದ ಸ್ಥಿತಿ ಹೀಗಾದರೆ, ಭಾರತದ್ದು..?

ನಿಜವಾಗಲೂ ನಾವು ಸೇಫ್. ಏಕೆಂದರೆ ಅಮೆರಿಕದಷ್ಟು ವೇಗದ ಜೀವನ ನಮ್ಮದಲ್ಲ. ಸ್ಲಂಡಾಗ್‌ನ ವಾಸ್ತವತೆ ಹೇಗೆ ಅರಿತಿದ್ದೇವೆಯೋ ಹಾಗೆ ಬದುಕುತ್ತಿದ್ದೇವೆ. ದಿನಕ್ಕೊಂದು ಕಾರು, ದಿನಕ್ಕೊಂದು ವೇಷವಿಲ್ಲ. ಹುಟ್ಟಿದಾರಭ್ಯ ಬಡತನದ ಎಲ್ಲ ಬೇಗೆಗಳನ್ನು ನಮ್ಮದೇ ಕೆಟ್ಟ ವ್ಯವಸ್ಥೆಯ ನಡುವೆ ಸಹಿಸಿಕೊಂಡು ಬಂದಿದ್ದೇವೆ. ಅದಕ್ಕಾಗಿ ಇದುವರೆಗೆ ಬೇಸರಿಸಿಕೊಂಡಿಲ್ಲ. ಹಾಗಾಗಿ ಅಮೆರಿಕದವರ ತರಹ ಗಂಜೀ ಕೇಂದ್ರದ ಮುಂದೆ ನಿಲ್ಲುವ ಅವಶ್ಯಕತೆ ನಮಗಿನ್ನೂ ಬಂದಿಲ್ಲ.

***



ಅಮೆರಿಕದಲ್ಲಿ ನಿರುದ್ಯೋಗಿಯೊಬ್ಬ ಕಾರು ಹೊಂದಿದ್ದಾನೆಂದರೆ ಆತನಿಗೆ ಸದ್ಯಕ್ಕೆ ಮನೆಯಿಲ್ಲ ಎಂದೇ ಅರ್ಥ. ವಾಸ್ತವವೆಂದರೆ, ಇಡೀ ಕಾರು ಆತನನ್ನು ದಿನವೂ ನಿಭಾಯಿಸುತ್ತದೆ. ಕಾರನ್ನೇ ಆತ ಮನೆಯ ತರಹ ಅಲಂಕರಿಸಿಕೊಂಡಿರುತ್ತಾನೆ. ಅಗತ್ಯ ವಸ್ತುಗಳನ್ನು ಅಲ್ಲೆ ಇಟ್ಟುಕೊಂಡಿರುತ್ತಾನೆ. ಕೆಲಸ ಸಿಕ್ಕ ಊರಿನಲ್ಲಿ ಉಳಿದುಕೊಳ್ಳುವುದು, ಇಲ್ಲವಾದರೆ ಮುಂದಿನ ಊರು ಎಂಬಂತಹ ಸ್ಥಿತಿ ಆತನದ್ದು. ಸಾವಿರಾರು ಡಾಲರ್ ಸಂಬಳ ಪಡೆದರೂ ಅಲ್ಲಿ ಜೀವನವನ್ನು ನಿಭಾಯಿಸಲು ಸಾಧ್ಯವಿಲ್ಲದಷ್ಟು ಕಡುಬಡತನ. ಅಮೆರಿಕದಲ್ಲಿ ಇತ್ತೀಚಿನ ಬಡವರ ಸಂಖ್ಯೆ ಶೇ.೨೧ ರಷ್ಟು ಏರಿದೆ. ಅಂದರೆ ಬಡತನ ರೇಖೆಗಿಂತ ಕೆಳಗಿರುವವರು ಶೇ.೨೭ ಮಂದಿ. ಅವರಿಗೆ ಅಲ್ಲಿನ ಸರಾಸರಿ ೧೪ ಸಾವಿರ ಡಾಲರ್‌ಗಿಂತಲೂ ಕಡಿಮೆ ವೇತನ ಸಿಗುತ್ತಿದೆ. ಮೂಲಭೂತ ಸೌಕರ್ಯಗಳು ಇಲ್ಲ, ಒಂದೊತ್ತಿನ ಊಟಕ್ಕೂ ಪರದಾಟ ನಡೆಸಬೇಕು. ಹೀಗೆ ಶೇ.೧೨ ರಷ್ಟು ಕುಟುಂಬಗಳು ಕಡುಬಡತನದಿಂದ ನರಳುತ್ತಿವೆ. ಬಹಳಷ್ಟು ಕುಟುಂಬಗಳು ಇರಲು ಸೂರಿಲ್ಲದೆ ಬೀದಿಗಳಲ್ಲಿ, ದೊಡ್ಡ ಬಂಗಲೆಗಳ ಪಕ್ಕದಲ್ಲಿ ವಾಸ ಮಾಡುತ್ತಾ ಕಾಲ ಕಳೆಯುತ್ತಿವೆ ಎಂದು ಅಮೆರಿಕ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳುತ್ತಿವೆ.

ಕಣ್ಣು ಕೋರೈಸುವ ನ್ಯೂಯಾರ್ಕ್ ನಗರ ಹಾಗೂ ಕ್ಯಾಲಿಪೋನಿರ್ಯಾಗಳಲ್ಲಿ ಬಡತನದ ಸಂಖ್ಯೆ ಹೆಚ್ಚಿದೆ. ಅಲ್ಲಿ ನಿರುದ್ಯೋಗಿಗಳು ದಿನೇ ದಿನೇ ಹೆಚ್ಚುತ್ತಿದ್ದಾರೆ ಎಂಬ ಆತಂಕ ಅಮೆರಿಕಾ ಸರಕಾರದ್ದು. ಸುಮಾರು ೧೨ ರಾಜ್ಯಗಳಲ್ಲಿ ಅತಿ ಹೆಚ್ಚು ಬಡತನ ಕಾಣಿಸಿಕೊಂಡಿದೆ. ಪೌಷ್ಟಿಕಾಂಶ ಆಹಾರ, ಸೂರು, ನೀರು ಇವುಗಳನ್ನು ಪಡೆಯಲು ಈ ಬಡವರು ಆಶಕ್ತರಾಗಿದ್ದಾರೆ ಎಂದು ತನ್ನ ವರದಿಯಲ್ಲಿ ಸರಕಾರ ಹೇಳಿಕೊಳ್ಳುತ್ತದೆ.

***



ಅಮೆರಿಕಾದ ಬಡ ಮಕ್ಕಳ ಸಂಖ್ಯೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ಶೇ.೧೮ ರಿಂದ ೨೧ ರವರೆಗೆ ಬಡ ಮಕ್ಕಳು ಅಲ್ಲಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಅವರಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ವಾಷಿಂಗ್ಟನ್ ಸೇರಿದಂತೆ ೧೩ ರಾಜ್ಯಗಳಲ್ಲಿ ಶೇ.೩೩ರಷ್ಟು ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಅಪರಾಧ ಪ್ರಕರಣಗಳು ನಿಯಂತ್ರಣ ಮಾಡಲು ಸಾಧ್ಯವಿಲ್ಲದಷ್ಟು ವೇಗದಲ್ಲಿವೆ. ದೊಂಬಿ, ಗಲಭೆ ನ್ಯೂಯಾರ್ಕ್ ನಗರದಲ್ಲಿ ನಿತ್ಯ ಸಂಗತಿಗಳಾಗಿ ಹೋಗಿವೆ. ಅಮೆರಿಕಾದಲ್ಲಿ ಬಡಗಿ ಮತ್ತು ಬಟ್ಟೆ ತೊಳೆಯುವಾತ ಅತ್ಯಂತ ಕಡಿಮೆ ಸಂಬಳ ತೆಗೆದುಕೊಳ್ಳುವ ಮಂದಿ. ಸುಮಾರು ೧೬ ಸಾವಿರ ಡಾಲರ್ ವಾರ್ಷಿಕ ಆದಾಯದಲ್ಲಿ ಅವರು ಬದುಕಬೇಕಾಗಿದೆ. ಹಾಗೆಯೇ ಮೂರನೇ ದರ್ಜೆ ಕೆಲಸ ಮಾಡುವವರೂ ೨೦ ಸಾವಿರ ಡಾಲರ್‌ಗಿಂತ ಹೆಚ್ಚೇನೂ ಸಂಬಳ ಪಡೆಯುವುದಿಲ್ಲ. ಹೀಗೆ ಅಮೆರಿಕ ಎನ್ನುವುದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಕಾಣುತ್ತದೆ.

****

ಆದರೆ, ಅಮೆರಿಕದ ಜನ ಒಂದು ವಿಚಾರದಲ್ಲಿ ಬುದ್ಧಿವಂತರಾಗಿದ್ದಾರೆ. ಅದು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ. ಆಶ್ಚರ್ಯವೆಂದರೆ, ಅಮೆರಿಕದಲ್ಲಿರುವ ನೈಸರ್ಗಿಕ ಸಂಪತ್ತು ಅಪಾರ. ಅಲ್ಲಿನ ಜನರು ಕೃಷಿ ಮಾಡುವುದು ಕಡಿಮೆಯೇ. ಅವರ ಭೂಮಿಯನ್ನು ಇನ್ನೂ ಫಲವತ್ತಾಗಿಯೇ ಉಳಿಸಿಕೊಂಡಿದ್ದಾರೆ. ಅಮೆರಿಕನ್ನರಿಗೆ ಚೀನಾ ಗೊಂಬೆಗಳು, ಶರ್ಟ್‌ಗಳು, ಭಾರತದ ಗೋಧಿ, ಅಕ್ಕಿ ಇನ್ನಿತರ ವಸ್ತುಗಳು ಬೇಕು. ಆದರೆ, ಅವರು ಬೆಳೆಯಲು ಸಿದ್ಧರಿಲ್ಲ. ಏಕೆ ಹೀಗೆ? ಉತ್ತರ ಬಹಳ ಸುಲಭ. ಮುಂದೊಂದು ದಿನ ವಿಶ್ವದ ಇತರ ರಾಷ್ಟ್ರಗಳ ನೈಸರ್ಗಿಕ ಸಂಪನ್ಮೂಲ ಕಳೆದು ಹೋದ ಮೇಲೆ ಅಮೆರಿಕ ರಂಗಕ್ಕೆ ಧುಮುಕಲಿದೆ. ಆಗ ಒಂದಕ್ಕೆ ದುಪ್ಪಟ್ಟು ಕೊಟ್ಟು ಅಮೆರಿಕದ ವಸ್ತುಗಳನ್ನೆ ಆಶ್ರಯಿಸಿಕೊಳ್ಳಬೇಕಾದ ಅನಿವಾರ್ಯತೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಎದುರಾಗಲಿದೆ. ಅಲ್ಲಿಗೆ ಅಮೆರಿಕಾ ಹೇಳಿದಂತೆ ಕೇಳುವ ದಿನಗಳು ಮುಂದುವರೆಯುತ್ತವೆ. ನಾವು ಇಲ್ಲಿ ಬೆಳೆಯುವ ಮೊದಲ ದರ್ಜೆಯ ಅಕ್ಕಿಯನ್ನು ಅಮೆರಿಕಾ ಆಮದು ಮಾಡಿಕೊಳ್ಳುತ್ತದೆ. ಅದು ಕೆ.ಜಿ.೧೦೦ ರೂ ಆದರೂ, ಸರಿ. ಆದರೆ, ನಾವು ಉತ್ತಮ ದರ್ಜೆಯ ಅಕ್ಕಿ ಅಲ್ಲಿಗೆ ಕಳುಹಿಸಿ ತೃತೀಯ ದರ್ಜೆಯ ಅಕ್ಕಿಯನ್ನು ಊಂಡು ಸಂತೋಷ ಪಡುತ್ತೇವೆ. ಇದು ವಿಪರ್ಯಾಸ. ಅಮೆರಿಕಾ ಕೇವಲ ನಮ್ಮಲ್ಲಿನ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಇಲ್ಲಿನ ಭೂಮಿಯ ಫಲವತ್ತತೆ ಕಡಿಮೆ ಮಾಡುವ ಎಲ್ಲ ತಂತ್ರಗಳನ್ನು ಪರೋಕ್ಷವಾಗಿ ಮಾಡುತ್ತಿದೆ. ನೈಸರ್ಗಿಕವಾಗಿ ನಡೆಯುತ್ತಿದ್ದ ಕೃಷಿಗೆ ರಾಸಾಯನಿಕ ರುಚಿ ತೋರಿಸಿದವರು ಅವರೆ. ಈಗ ಕೃಷಿಯ ವಿಚಾರದಲ್ಲಿ ನಾವು ಅವರು ಹೇಳಿದಂತೆ ಕೇಳಬೇಕಾದ ಸ್ಥಿತಿ.

ಇದು ಭಾರತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿಯನ್ನು ಅಮೆರಿಕ ಮುಂದುವರಿಸಿದೆ. ದುರಂತವೆಂದರೆ, ತಮ್ಮ ನಾಡಿನಲ್ಲಿ ತುತ್ತು ಅನ್ನಕ್ಕಾಗಿ ಗಂಜೀ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ತನ್ನ ಪ್ರಜೆಗಳ ಸಂಕಷ್ಟವನ್ನು ತೆರೆಯ ಮೇಲೆ ತೋರಿಸದ ಅಮೆರಿಕಾ ಭಾರತದಂತಹ ರಾಷ್ಟ್ರಗಳ ಬಡತವನ್ನು ಬಂಡವಾಳ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಅದಕ್ಕೆ ಸ್ಲಂಡಾಗ್ ಮಿಲೇನಿಯರ್ ಉತ್ತಮ ಉದಾಹರಣೆ.

***

ಸ್ಲಂಡಾಗ್ ಮಿಲೇನಿಯರ್ ಚಿತ್ರ ನಿರ್ಮಾಣಕ್ಕೆ ವೆಚ್ಚ ಮಾಡಿದ್ದು ೭೫ ಕೋಟಿ ರೂ. ಆದರೆ ಗಳಿಕೆಯಾದದ್ದು ೮೦೦ ಕೋಟಿ ರೂ. ಎಂದು ಪತ್ರಿಕೆಯೊಂದು ವರದಿ ಮಾಡಿದೆ. ನಮ್ಮದೇ ಬಾಲಿವುಡ್ ಸಿನಿಮಾ ೧೨೦ ರಿಂದ ೧೮೦ ಕೋಟಿ ರೂ. ಗಳಿಕೆ ಮಾಡಿದರೆ, ಅದು ಸಾರ್ವತ್ರಿಕ ದಾಖಲೆಯಾಗುತ್ತದೆ. ಆದರೆ, ಅದೇ ಅಮೆರಿಕ ಹಾಗೂ ಇತರ ರಾಷ್ಟ್ರಗಳು ಹೇಗೆ ಭಾರತದ ಮನೋರಂಜನಾ ಕ್ಷೇತ್ರವನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿವೆ ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ. ದಿನನಿತ್ಯ ನಾವು ಅನುಭವಿಸುವ ಜಂಜಾಟವನ್ನು, ಬದುಕಿನ ಹೋರಾಟವನ್ನೂ ಭಾವುಕವಾಗಿ ಸರಕು ಮಾಡಿಕೊಳ್ಳಬಹುದು ಎಂಬ ಅವರ ಬುದ್ಧಿವಂತಿಕೆಗೆ ಮೆಚ್ಚಲೇಬೇಕು. ಭಾರತದ ಬಡತನದ ಬಗ್ಗೆ ಹೇಳುತ್ತಾ ಹೋಗುವ ಅವರು, ತಮ್ಮದೇ ಬಡತನ ಇನ್ನೆಷ್ಟು ಕ್ರೂರ ಎಂಬುದನ್ನು ತೋರಿಸಲು ಸಿದ್ಧರಿಲ್ಲ. ನ್ಯೂಯಾರ್ಕ್‌ನ ಬೀದಿ ಬೀದಿಗಳಲ್ಲಿ ಭಿಕ್ಷುಕರು ಇರುವುದನ್ನು ತೆರೆಯ ಮೇಲೆ ತರಲು ಅವರು ಮುಂದಾಗುವುದಿಲ್ಲ. ಆದರೆ, ನಾವು ಇನ್ನಷ್ಟು ಹೃದಯವಂತರು. ಅಮೆರಿಕನ್ನರು ನಮ್ಮ ಬಡತವನ್ನು ವಿಶ್ವಾದ್ಯಂತ ತೋರಿಸಲು ಹೊರಟರೂ ಅದಕ್ಕೆ ಪ್ರತಿರೋಧ ತೋರುವುದೇ ಇಲ್ಲ. ಇರುವ ವಾಸ್ತವತೆಗೆ ಪ್ರತಿರೋಧ ಏತಕ್ಕೆ ಎಂಬುದು ನಮ್ಮ ಧೋರಣೆ. ಎಲ್ಲರೂ ನಮ್ಮವರೆ ಎಂದು ಬಂದವರನ್ನು ಆದರಾತಿಥ್ಯದಿಂದ ನೋಡುವ ನಮ್ಮ ಗುಣ ಇನ್ನೂ ಮುಕ್ಕಾಗಿಲ್ಲ. ಅದು ಭಾರತೀಯರ ಕಣಕಣದಲ್ಲೂ ಹಾಸುಹೊಕ್ಕಾಗಿದೆ ಎನ್ನುವುದೂ ಅಷ್ಟೇ ಸತ್ಯ.

***



ಭಾರತದ ಬಡತನವನ್ನು ಒಪ್ಪಿಕೊಳ್ಳುವ ನಾವು ಹಾಗೆಯೇ ಇತರ ದೇಶಗಳ ಬಡತನದ ಬೇಗೆಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಕೇವಲ ರಾಜಕೀಯ ತಂತ್ರಗಳಿಂದ ಅಮೆರಿಕ ದೊಡ್ಡ ದೇಶವಾಗಬಹುದೇ ಹೊರತು, ಅಲ್ಲಿನ ಬಡತನವನ್ನು ಮುಚ್ಚಿಡುವುದರಿಂದ ಅಲ್ಲ. ಒಂದು ಹೊತ್ತು ಬ್ರೆಡ್ ತಿಂದು ದಿನದೂಡುವ ೩೫ ಮಿಲಿಯನ್ ಅಮೆರಿಕದ ಜನರೂ ಇಂದು ಸ್ಲಂಡಾಗ್‌ನಲ್ಲಿ ಕಂಡ ಬಡತನಕ್ಕಿಂತ ಕಟುವಾದ ಬದುಕು ಸಾಗಿಸುತ್ತಿದ್ದಾರೆ. ಆದರೆ, ಬಡತನ ಎನ್ನುವುದು ದೇಶದ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಿದೆಯೇ ಹೊರತು, ಹಸಿವು, ಸೂರು, ಮೂಲಸೌಕರ್ಯಗಳಲ್ಲಿ ಅಲ್ಲ. ಹಾಗೆ ನೋಡಿದರೆ, ಭಾರತ ನಿಜಕ್ಕೂ ನೆಮ್ಮದಿಯ ದೇಶ. ನಾವು ಇಲ್ಲಿ ಪರಸ್ಪರ ವೈರುಧ್ಯಗಳ ನಡುವೆ ಬದುಕು ನಡೆಸುತ್ತೇವೆ. ಅದನ್ನು ಹಾಗೆ ಒಪ್ಪಿಕೊಂಡು ಬಂದಿದ್ದೇವೆ.

***

ನಿಮಗೇನು ಅರ್ಥಿಕ ಹಿಂಜರಿತದ ಪ್ರಭಾವವಾಗಿಲ್ಲವೇ?
ಸ್ನೇಹಿತರೊಬ್ಬರನ್ನು ಕೇಳಿದೆ.
ಹುಟ್ಟಿದಾಗಿನಿಂದ ನಮ್ಮದು ಅರ್ಥಿಕ ಹಿಂಜರಿತ, ಈಗೆಲ್ಲಿಯದು ಎಂದರು ಅವರು!

Friday, February 20, 2009

ಇವನೊಬ್ಬ ರಂಗಭೂಮಿಯ ಸಂತ



ಬಯಲ ಬೆಂಗಾವಲಿನಲ್ಲಿ ಕೆಟ್ಟು ನಿಂತಿರುವ ಎರಡು ಬಸ್‌ಗಳನ್ನೆ ವೇದಿಕೆಯಾಗಿಸಿಕೊಂಡು ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ವಿರುದ್ಧ ಆದೇ ನೆಲದಲ್ಲಿ ನಿಂತು ಲೇವಡಿ ಮಾಡುತ್ತಾನೆ. ಯುದ್ಧ, ಜಾಗತೀಕರಣ, ಉದಾರೀಕರಣಗಳ ಬಗ್ಗೆ ವ್ಯಂಗ್ಯವಾಗಿ ಹಾಡು ಹೇಳುತ್ತಾನೆ. ಅಮೆರಿಕದ ಅಧ್ಯಕ್ಷನನ್ನು ಬಹಿರಂಗವಾಗಿ ತನ್ನ ನಾಟಕದ ಸಂಭಾಷಣೆಗಳಿಂದ ಹೀಗಳೆಯುತ್ತಾನೆ. ಹೀಗೆ ೩೦ ವರ್ಷಗಳಿಂದ ತನ್ನ ಕಾಯಕವನ್ನು ನೆಚ್ಚಿಕೊಂಡು ಬಂದಿದ್ದಾನೆ. ಇಂದಿಗೂ ರಟ್ಟೆ ಮುರಿದು ದುಡಿಯುತ್ತಾ ತನ್ನ ಹೊಲದಲ್ಲಿ ಬೆಳೆದ ಗೋಧಿಯಿಂದಲೇ ಬ್ರೆಡ್ ಮಾಡಿ ತಿಂದು ಬದುಕುತ್ತಾನೆ. ಬ್ರೆಡ್‌ವೊಂದೇ ಆತನ ನಿತ್ಯ ಆಹಾರ.

ಆತನ ಹೆಸರು ಪೀಟರ್ ಶೋಮನ್.

***

ಅದು ಎರಡನೇ ಮಹಾಯುದ್ಧದ ಕಾಲ. ಮಿತ್ರ ರಾಷ್ಟ್ರಗಳು ಜರ್ಮನಿಯ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿದ್ದವು. ಜರ್ಮನಿ ಸೈನಿಕರ ಶವಗಳ ಮೇಲೆ ಅವರ ಅಟ್ಟಹಾಸ ಮುಗಿಲು ಮುಟ್ಟಿತ್ತು. ಕಂಡಲೆಲ್ಲಾ ಹೆಣಗಳ ರಾಶಿ. ಆದರೆ, ಅದೊಂದು ಕುಟುಂಬ ಮಾತ್ರ ಬದುಕುಳಿದಿತ್ತು. ಏಕೆಂದರೆ ಆ ಕುಟುಂಬ ಯುದ್ಧದ ಸಮಯದಲ್ಲಿ ಎರಡೂ ಕಡೆಯವರಿಗೆ ಬ್ರೆಡ್ ಸರಬರಾಜು ಮಾಡುತ್ತಿತ್ತು. ಅನ್ನಕೊಟ್ಟವರನ್ನು ಕೊಲ್ಲಬಾರದೆಂಬ ನ್ಶೆತಿಕತೆಯಲ್ಲಿ ಅವರ ಕುಟುಂಬ ಸೇಫ್.

ಆದರೆ, ಆ ಕುಟುಂಬದ ಯಜಮಾನನಿಗೆ ಎಂದಾದರೂ ಒಮ್ಮೆ ಮಿತ್ರ ಪಕ್ಷಗಳ ಗುಂಡಿನ ದಾಳಿಗೆ ತುತ್ತಾಗುವುದು ಖಂಡಿತ ಎಂದು ಬಲವಾಗಿ ಅನಿಸತೊಡಗಿತು. ಸರಿ ವಯಸ್ಸಾದ ಈ ದೇಹ ಪ್ರಾಣ ತೆತ್ತರು ಸರಿ, ತನ್ನ ಮೊಮ್ಮಕ್ಕಳು ಬದುಕುಳಿಯಲಿ ಎಂಬ ಆಸೆಯಿಂದ ಒಂದು ದಿನ ಅವರನ್ನು ಕರೆದು ತನ್ನಲ್ಲಿ ಕೊಡಲು ಏನೂ ಇಲ್ಲ. ಆದರೆ, ನನ್ನ ಬಳಿ ಇರುವುದು ಬ್ರೆಡ್ ಮಾಡಲು ಬಳಸುವ ಈಸ್ಟ್‌ವೊಂದೆ. ಇದು ಇದ್ದರೆ ನೀವು ಬದುಕಬಹುದು ಎಂದು ಹೇಳಿ ಒಂದಿಷ್ಟು ಈಸ್ಟ್(ಬ್ರೆಡ್ ತಯಾರಿಕೆ ಬಳಸುವ ಉಳಿ ಬಂದಿರುವ ವಸ್ತು) ನೀಡಿದ.

ಅಲ್ಲಿಂದ ಅವರೆಲ್ಲಾ ಅಮೆರಿಕದ ಕಡೆಗೆ ವಲಸೆ ಹೊರಟರು. ನಗರ,ಪಟ್ಟಣಗಳನ್ನು ದಾಟುತ್ತಾ ಬಂದು ನಿಂತದ್ದು ಅಮೆರಿಕದಲ್ಲಿನ ಅಷ್ಟೇನು ಶ್ರೀಮಂತವಲ್ಲದ, ಆದರೆ, ಫಲವತ್ತಾದ ರಾಜ್ಯ ವಾರ್‍ಮೌಂಟ್ ಎಂಬಲ್ಲಿಗೆ.

***

ಆ ಮೊಮ್ಮಕ್ಕಳಲ್ಲಿ ಈ ಪೀಟರ್ ಶೋಮನ್ ಒಬ್ಬ. ಸುಮಾರು ೭೦ ವರ್ಷಗಳ ಹಿಂದೆ ತನ್ನ ತಾತ ನೀಡಿದ ಈಸ್ಟ್‌ನಿಂದಲೇ ಈತ ಬ್ರೆಡ್ ತಯಾರಿಸುತ್ತಾ ಅದನ್ನು ತಿನ್ನುತ್ತಲೇ ಬದುಕು ಸಾಗಿಸಿದ್ದಾನೆ. ಅಮೆರಿಕ ಅಷ್ಟೇ ಅಲ್ಲ ವಿಶ್ವದ ಬಹುಭಾಗದಲ್ಲಿ ಪೀಟರ್ ಪ್ರೀತಿಯಿಂದ ಪೀಟರ್ ಅಜ್ಜ ಎಂದೇ ಕರೆಯಲ್ಪಡುತ್ತಾನೆ. ಆತನನ್ನು ನೋಡಲೆಂದೇ ಸಾವಿರಾರು ಮೈಲಿಗಳಿಂದ ಹಣ ಖರ್ಚು ಮಾಡಿಕೊಂಡು ಆತನಿರುವ ವಾರ್‍ಮೌಂಟ್ ರಾಜ್ಯದ ಗ್ಲೋವರ್ ಎಂಬ ಸ್ಥಳಕ್ಕೆ ನಿತ್ಯ ಜನರು ಬಂದು ಹೋಗುತ್ತಾರೆ.

ರಜಾದಿನಗಳಲ್ಲಿ ಪೀಟರ್ ಅಜ್ಜನ ಜಾತ್ರೆ ನಡೆಯುತ್ತದೆ!

***

೧೯೩೪ ರಲ್ಲಿ ಜರ್ಮನಿಯ ಸಿಸೇಲ್ ಎಂಬಲ್ಲಿ ಹುಟ್ಟಿದ ಈ ಪೀಟರ್ ಶೋಮನ್ ಮೂಲತಃ ನೃತ್ಯ ಮತ್ತು ಶಿಲ್ಪಕಲಾವಿದ. ಖ್ಯಾತ ನಾಟಕಕಾರ ಬ್ರೆಕ್ಟ್‌ನ ತಳಿ. ಎರಡನೇ ಮಹಾಯುದ್ಧದ ಅನಂತರ ೧೯೬೦ ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ತನ್ನ ಪತ್ನಿ ಎಲಿಕಾಳೊಂದಿಗೆ ವಲಸೆ ಬಂದ ಆತ ಅಲ್ಲಿ ಬ್ರೆಡ್ ಅಂಡ್ ಪುಪೆಟ್ ಥಿಯೇಟರ್ ಕಟ್ಟಿದ. ಆದರೆ, ಅದ್ಯಾಕೋ ನ್ರ್ಯೂಯಾರ್ಕ್ ನಗರದಲ್ಲಿ ಇರಲು ಆತನಿಗೆ ಸಾಧ್ಯವಾಗಲಿಲ್ಲ. ಅಲ್ಲಿಂದ ನೇರವಾಗಿ ಬಂದದ್ದು ವಾರ್‍ಮಂಟ್ ರಾಜ್ಯದ ಗ್ಲೋವರ್ ಎಂಬಲ್ಲಿಗೆ. ತನ್ನ ಹೆಂಡತಿಯ ಕಡೆಯಿಂದ ಬಂದ ಅಲ್ಪ ಜಮೀನಿನಲ್ಲಿಯೇ ತನ್ನ ನಿತ್ಯ ಜೀವನಕ್ಕೆ ಬೇಕಾದ ಆಹಾರ ಬೆಳೆಯಲು ಆರಂಭಿಸಿದ. ಬೆಳೆದ ಗೋಧಿಯಲ್ಲಿಯೇ ತನ್ನ ತಾತ ಕೊಟ್ಟ ಈಸ್ಟ್‌ನಿಂದ ಬ್ರೆಡ್ ತಯಾರಿಸಿ ಬದುಕುವುದನ್ನು ರೂಢಿಮಾಡಿಕೊಂಡ. ಆನಂತರ ನಿಧಾನವಾಗಿ ತನ್ನ ರಂಗಭೂಮಿ ತಂಡವನ್ನು ಸಜ್ಜುಗೊಳಿಸಿಕೊಂಡು ಸಣ್ಣ ಪ್ರಹಸನಗಳಿಂದ ಕೂಡಿದ ನಾಟಕಗಳನ್ನು ಮಾಡಲು ಆರಂಭಿಸಿದ. ವಿಶ್ವವನ್ನು ತನ್ನ ಜಾಗತೀಕರಣದಿಂದಲೇ ನಾಶ ಮಾಡಲು ಹೊರಟ ಅಮೆರಿಕದ ಬಗ್ಗೆ ಪೀಟರ್‌ಗೆ ಎಲ್ಲಿಲ್ಲದ ಅಸಹನೆ. ಅದನ್ನು ನಾಟಕ ಮತ್ತು ಪುಪೆಟ್(ಗೊಂಬೆಗಳು) ಪ್ರದರ್ಶನದಲ್ಲಿ ವ್ಯಕ್ತ ಮಾಡತೊಡಗಿದ. ನಿಧಾನವಾಗಿ ಅದು ಜನಪ್ರಿಯವಾಗತೊಡಗಿತು. ಸುಮಾರು ೩೦ ವರ್ಷಗಳ ಕಾಲ ಸರಕಾರದ ವಿರುದ್ಧ ಮೌನವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾನೆ. ಹಾಗಂತ ಎಲ್ಲಿಯೂ ಬ್ಯಾನರ್ ಕಟ್ಟಿ ಪ್ರತಿಭಟನೆಗೆ ಇಳಿಯುವುದಿಲ್ಲ. ತನ್ನ ಪ್ರಹಸನಗಳ ಮೂಲಕವೇ ವಿಶ್ವದ ನಾಶಕ್ಕೆ ಕಾರಣಗಳನ್ನು ಹೇಳುತ್ತಾ ಹೋಗುತ್ತಾನೆ.

***

ಈ ಪೀಟರ್ ಶೋಮನ್ ಯಾರು? ಹೇಗೆ?

ಇಲ್ಲ ಆತ ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗವುದಕ್ಕೆ ಸಾಧ್ಯವೇ ಇಲ್ಲ ಹೀಗೆಂದು ನಮ್ಮ ಪಾಪಾ ಪಾಂಡು ಖ್ಯಾತಿಯ ನಟ ಜಹಂಗೀರ್ ಹೇಳುತ್ತಾರೆ.

ಜಹಂಗೀರ್ ನೀನಾಸಂನಲ್ಲಿ ರಂಗಭೂಮಿ ತರಬೇತಿಯಲ್ಲಿರುವಾಗ ಅಲ್ಲಿಗೆ ಪೀಟರ್ ಶೋಮನ್ ಬಂದಿದ್ದ. ಜಹಂಗೀರ್‌ನನ್ನು ತನ್ನ ಥೀಯೆಟರ್‌ನಲ್ಲಿ ಅಭಿನಯಿಸುವುದಕ್ಕಾಗಿ ಎರಡು ತಿಂಗಳು ಅಮೆರಿಕಕ್ಕೆ ಕರೆಸಿಕೊಂಡ. ಹಾಗೆಂದು ಆತನೇನು ಶ್ರೀಮಂತ ಕಲಾವಿದನಲ್ಲ. ತನ್ನ ರಂಗ ತಂಡದಲ್ಲಿರುವ ಎಂಟತ್ತು ಮಂದಿಗೆ ಸಂಬಳ ಕೊಡುವುದಕ್ಕಾಗಿ ಮತ್ತೊಂದು ಮನೆಯ ಬಣ್ಣ ಹೊಡೆಯಬೇಕಾದ ಸ್ಥಿತಿ. ಇಲ್ಲವೇ ಆ ಊರಿನಲ್ಲಿ ಮನೆ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ. ಅಂತಹ ಸ್ಥಿತಿಯಲ್ಲಿಯೇ ಆತ ವಿಶ್ವದ ಗಮನ ಸೆಳೆಯುವುದು ಸಾಧ್ಯ ಎನ್ನುವುದಾದರೆ, ಅವನೊಳಗಿನ ಕಲಾವಿದ ಎಷ್ಟು ಎತ್ತರದಲ್ಲಿ ಇರಬೇಕು? ಆತನ ಬಳಿ ಇದ್ದು ಬಂದದ್ದು ನನ್ನ ಜೀವನದ ಅತ್ಯಂತ ಸುದೈವಗಳಲ್ಲಿ ಒಂದು ಎಂದು ಜಹಂಗೀರ್ ಹೇಳುತ್ತಾರೆ.

ಕಳೆದ ೩೦ ವರ್ಷಗಳಿಂದಲೂ ಪೀಟರ್ ಯಾರಿಂದಲೂ ನಯಾಪೈಸೆ ಸಹಾಯ ಬೇಡಿಲ್ಲ. ಬೇಸಿಗೆಯ ಸಮಯದಲ್ಲಿ ತನ್ನ ರಂಗ ತಂಡ ನಾಟಕ ಪ್ರದರ್ಶನ ಮಾಡಿದ ಅನಂತರ ತನ್ನ ಹೊಲದ ಗೋಧಿಯಿಂದಲೇ ಮಾಡಿದ ಬ್ರೆಡ್ ಅನ್ನು ನಾಟಕ ನೋಡಲು ಬಂದ ಪ್ರೇಕ್ಷಕರಿಗೆಲ್ಲಾ ಹಂಚುತ್ತಾನೆ. ಅದನ್ನೇ ಅಲ್ಲಿದ್ದವರು ನಮ್ಮ ತಿರುಪತಿ ಲಾಡು ಎಂಬರ್ಥದ ಭಕ್ತಿಭಾವದಲ್ಲಿ ಸ್ವೀಕರಿಸುತ್ತಾರೆ. ಅನಂತರ ತನ್ನ ಟೊಪ್ಪಿ ಹಿಡಿದು ತಂಡದ ಎಲ್ಲರ ಹೊಟ್ಟೆಗಾಗಿ ಅಲ್ಲೆ ಚಂದಾ ಎತ್ತುತ್ತಾನೆ. ಅದರಲ್ಲಿ ಬಂದ ದುಡ್ಡಿನಲ್ಲಿಯೇ ಅವತ್ತಿನ ಊಟ ಮತ್ತು ಇತರೆ ಖರ್ಚು. ಇದು ನಿರಂತರವಾಗಿ ೩೦ ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಇನ್ನೂ ವಿಶೇಷವೆಂದರೆ ಯಾರಾದರೂ ದಾನಿಗಳು ಬಂದು ಆತನ ನಾಟಕ ಶಾಲೆಗೆ ಒಂದೊತ್ತಿನ ಊಟ ಹಾಕಿಸಬಹುದು. ಹಾಗೆಂದು ಯಾರ ಮುಂದೆಯೂ ಕೈ ಒಡ್ಡುವುದಿಲ್ಲ. ಬಂದರೆ ಒಳ್ಳೆಯದು, ಇಲ್ಲದಿದ್ದರೆ ಬ್ರೆಡ್ ಇದ್ದೇ ಇದೆ.

***

ಹೋಗಲಿ ಆತನಿಗೊಂದು ಸುಸಜ್ಜಿತ ರಂಗ ಮಂದಿರವಾದರೂ ಇದೆಯೇ ಎಂದರೆ ಅದೂ ಇಲ್ಲ. ಆತ ನಮ್ಮ ಕರ್ನಾಟಕದ ಮರಗಾಲು ಮಾದರಿಯ ಜಾನಪದ ಕಲೆಗಳನ್ನು ಪ್ರದರ್ಶನ ಮಾಡುತ್ತಾನೆ. ಸುಮಾರು ೪೦ ಅಡಿ ಎತ್ತರದ ಮರಗಾಲು ಹಾಕಿಕೊಂಡು ಆತನೇ ವೇದಿಕೆಯಲ್ಲಿ ಬಂದು ಪ್ರಹಸನ ನೀಡುತ್ತಾನೆ. ಆತನಿರುವ ಸ್ಥಳದಲ್ಲಿ ವಿಸ್ತಾರವಾದ ಹುಲ್ಲುಗಾವಲಿದೆ. ಅದರ ಮೇಲೆಯೇ ಆತನ ನಿತ್ಯ ನಾಟಕ ಪ್ರದರ್ಶನ. ಒಂದು ಪ್ರದರ್ಶನಕ್ಕೆ ಸುಮಾರು ೧೦ ಸಾವಿರ ಮಂದಿ ಸೇರುತ್ತಾರೆ. ಬಂದವರೆಲ್ಲಾ ಅಲ್ಲೆ ನಾಲ್ಕೈದು ದಿನ ತಂಗುತ್ತಾರೆ. ಪೀಟರ್ ಅವರ ಬಳಿ ವಿಶ್ವದ ವಿರೋಧಾಭಾಸಗಳ ಕುರಿತು ಚರ್ಚೆ ನಡೆಸುತ್ತಾನೆ. ಹೀಗೆ ಸಾಗುತ್ತಲೇ ಇದೆ ಅವನ ದಿನಚರಿ.

ಅಚ್ಚರಿಯೆಂದರೆ ಅವನ ಬಳಿ ಕಲಿಯಲೆಂದೇ ವಿಶ್ವದ ನಾನಾಭಾಗಗಳಿಂದ ಜನರು ಬಂದು ಹೋಗುತ್ತಾರೆ. ಯಾರಿಗೂ ಬರಬೇಡಿ ಎನ್ನವುದಿಲ್ಲ. ಬಂದವರಿಗೆ ಸುಸಜ್ಜಿತ ವ್ಯವಸ್ಥೆಯು ಆತನಲ್ಲಿ ಇಲ್ಲ. ಆತನ ಥೀಯೆಟರ್ ಬಳಿ ಕೆಟ್ಟು ನಿಂತಿರುವ ಬಸ್ ಹಾಗೂ ಕಾರುಗಳೇ ವಾಸದ ಮನೆಗಳು. ಬಂದವರು ತಮ್ಮಲ್ಲಿ ಇದ್ದದ್ದನ್ನು ಹಂಚಿ ತಿನ್ನಬೇಕು. ಅಲ್ಲೆ ಕೆಲದಿನಗಳು ಇರುವುದಾದರೆ, ರಂಗತಂಡದ ಎಲ್ಲ ಕೆಲಸಗಳನ್ನು ನಿಭಾಯಿಸುವ ಮನಸ್ಥಿತಿ ಹೊಂದಿರಬೇಕು. ಆತ ಏನನ್ನೂ ಕಲಿಸುವುದಿಲ್ಲ. ಎಲ್ಲರೊಳಗೆ ಒಂದಾಗಿ ಅವರೇ ಕಲಿತು ಹೋಗಬೇಕು. ಪ್ರದರ್ಶನದಲ್ಲಿಯೇ ಅವರ ನಿಜವಾದ ಕಲಾವಿದನ ಶೈಲಿಯನ್ನು ಹೊರಹಾಕಲೆಂದೇ ಪೀಟರ್ ವಿಶೇಷ ಶೈಲಿಗಳನ್ನು ಬಳಸುತ್ತಾನೆ. ಬಡತನ ಎನ್ನುವುದು ಆತನನ್ನು ಎಂದಿಗೂ ಕಾಡಿಲ್ಲ. ನಿತ್ಯ ಗೆಲ್ಲುವ ತಂತ್ರಕ್ಕಾಗಿ ಹೋರಾಟ ನಡೆಸುತ್ತಾನೆ. ಗೊಂಬೆ ಪ್ರದರ್ಶನ ನೋಡಲು ಬರುವ ಪ್ರೇಕ್ಷಕರಿಗೆ ತನ್ನ ನಿಜವಾದ ಸಂದೇಶ ಮುಟ್ಟಿಸಲು ಇನ್ನಿಲ್ಲದ ಆದ್ಯತೆ ಕೊಡುತ್ತಾನೆ. ಅದು ತಲುಪಿದರೆ,ಆದೇ ಸಮಾಧಾನ.

***

ಮನುಷ್ಯ ಬದುಕುವುದಕ್ಕಾಗಿ ಒಂದು ತುಂಡು ಬ್ರೆಡ್ ತಿಂದರೆ ಸಾಕು. ಅದಕ್ಕಾಗಿ ಇನ್ನೊಬ್ಬರ ಮೇಲೆ ಅಕ್ರಮಣವೆಸಗಿ ಅದನ್ನು ರಕ್ತಸಹಿತ ಬಂಡವಾಳವಾಗಿಸಿಕೊಂಡು ಬದುಕಬೇಕೆಂಬ ಅನಿವಾರ್ಯ ಯಾಕೆ? ಇದು ರಾಕ್ಷಸೀ ಗುಣವಲ್ಲವೇ ?

ಇದು ಪೀಟರ್ ಶೋಮನ್ ಖಚಿತ ಅಭಿಪ್ರಾಯ. ಇಡೀ ಜೀವನದಲ್ಲಿಯೇ ಆತ ಹಣಕ್ಕೆ, ಲಾಭಕ್ಕೆ ನಾಟಕಗಳನ್ನು ಮಾಡಲೇ ಇಲ್ಲ. ದಿನವೂ ಸರಕಾರದ ವಿರುದ್ಧ ಮುಗಿಬೀಳುವ ಪೀಟರ್‌ಗೆ ಪ್ರಶಸ್ತಿಗೆ ಕೈಚಾಚುವವನಲ್ಲ. ಒಮ್ಮೆ ಅಮೆರಿಕದ ಅಧ್ಯಕ್ಷನನ್ನು ಹೊಗಳಿದರೆ ಸಾಕು. ಅವು ಮಳೆಯಂತೆ ಆತನ ಉಡಿಗೆ ಬೀಳುತ್ತವೆ. ಅದಾವುದು ಅವನಿಗೆ ಬೇಡವಾಗಿದೆ. ಅದರಿಂದ ಸಾಧಿಸಬೇಕಾದ್ದದ್ದು ಏನೂ ಇಲ್ಲ ಎಂಬ ಅರ್ಥದಲ್ಲಿಯೇ ಆತ ದಿನದೂಡುತ್ತಾನೆ. ತನ್ನ ರಂಗ ತಂಡದ ಜೀವನಕ್ಕೆ ತೊಂದರೆಯಾದರೆ, ನ್ರ್ಯೂಯಾರ್ಕ್ ನಗರದಲ್ಲಿ ಚಿತ್ರಗಳ ಪ್ರದರ್ಶನ ನಡೆಸಿ ಚಂದಾ ಎತ್ತಿ ಅವರಿಗೆಲ್ಲಾ ಸಂಬಳ ಕೊಡುತ್ತಾನೆ. ಹಾಗೆಂದು ನಮ್ಮಂತೆ ಸರಕಾರದ ಅನುದಾನ ಮರ್ಜಿಗೆ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಸಮಾಜವಾದಿ ತತ್ವಗಳನ್ನು ಅಕ್ಷರಶಃ ಪಾಲಿಸುವ ಪೀಟರ್ ಸಮಾಜವಾದಿಯಲ, ಬದಲಿಗೆ ಸಮೂಹಮುಖಿ. ಮನುಷ್ಯ ಯುದ್ಧದಂತಹ ಅನಿಷ್ಠಗಳನ್ನು ತಂದಿಟ್ಟುಕೊಳ್ಳಲು ಅವನಲ್ಲಿನ ಆಸೆ, ವ್ಯಾಮೋಹವೇ ಕಾರಣ ಎಂದು ಬಲವಾಗಿ ನಂಬಿದ್ದಾನೆ. ನಮಗೆ ಗಂಜಿ ಹೇಗೆ ಬದುಕುವ ಅನಿವಾರ್ಯ ಬಳಕೆಯಾಗುವ ಆಹಾರವೋ ಹಾಗೆ ಪಾಶ್ಚಿಮಾತ್ಯರಿಗೆ ಬ್ರೆಡ್. ಅಂತಹ ಬ್ರೆಡ್ ಜನಸಾಮಾನ್ಯರನ್ನು ಪ್ರತಿನಿಧಿಸುತ್ತದೆ. ಅದು ಸಮಾಜದೊಳಗೆ ಅತ್ಯಂತ ಶ್ರೇಷ್ಠ ಆಹಾರ ಎಂದು ಪೀಟರ್ ಹೇಳುತ್ತಾನೆ. ಅದಕ್ಕಾಗಿಯೇ ಆತನ ರಂಗತಂಡಕ್ಕೆ ಆ ಹೆಸರು ಇಟ್ಟಿದ್ದಾನೆ.

***

ಕಲಾವಿದನಾದವನೂ ಶ್ರೀಮಂತನಾಗಬೇಕು ಎಂಬ ಭ್ರಮೆಯಲ್ಲಿ ಬದುಕುವ ನಾವುಗಳು ಪೀಟರ್‌ನಿಂದ ಕಲಿಯುವುದು ತುಂಬಾ ಇದೆ. ಒಂದಿಷ್ಟು ಸಿನಿಮಾ ಮಾಡಿದರೆ, ಲಕ್ಷಗಟ್ಟಲೆ ಬೆಲೆಬಾಳುವ ಕಾರು, ಕೋಟಿ ರೂ. ಬೆಲೆ ಬಾಳುವ ಬಂಗಲೆಯಲ್ಲಿ ಐಷಾರಾಮಿ ಬದುಕುವ ನಡೆಸುತ್ತ ತಮ್ಮನ್ನು ತಾವು ಜನಸಾಮಾನ್ಯರಿಗಿಂತ ತೀರಾ ಭಿನ್ನರು ಎಂದು ತೋರಿಸಿಕೊಳ್ಳುವ ನಮ್ಮ ಚಿತ್ರನಟರಿಗೆ ಪೀಟರ್ ಅನುಕರಣೀಯ ವ್ಯಕ್ತಿಯಾಗುತ್ತಾರೆ. ನೂರಾರು ಕಲಾವಿದರು ಪೀಟರ್‌ನನ್ನು ಒಮ್ಮೆ ಭೇಟಿಯಾದರೆ ಸಾಕು ಎಂದು ಹಾತೊರೆಯುತ್ತಾರೆ. ಅಂತಹ ಅಸಾಮಾನ್ಯ ಪ್ರಭೆ ಬೆಳೆಸಿಕೊಳ್ಳಲು ಹಣದಿಂದ ಸಾಧ್ಯವಿಲ್ಲ ಎಂಬುದು ಆತ ಜಗತ್ತಿಗೆ ತೋರಿಸಿಕೊಟ್ಟ ಮಾದರಿ.

ಹ್ಯಾಟ್ಸ್ ಆಫ್ ಟು ಯು ಪೀಟರ್ ಅಜ್ಜ.

Thursday, February 12, 2009

ನಂಗೂ ಮೊದಲು ನಿಂಗೂ ಮೊದಲು ಈ ಪ್ರೀತಿ-ಪ್ರೇಮ!

ಈ ಪ್ರೀತಿ ಹೇಗೆ ಹುಟ್ಟತ್ತೆ? ಈ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಮೊದಲೇ ಈಗಿನ ಮೊಬೈಲ್ ಪ್ರೀತಿ ತನ್ನ ನವಿರತೆಯನ್ನು ಕಳೆದುಕೊಂಡಿದೆ. ಪ್ರೀತಿ ಮಾಡುವವರನ್ನು ಮದುವೆ ಮಾಡಿಸುತ್ತೇವೆ ಎನ್ನುವ ಶ್ರೀರಾಮನ ಭಕ್ತರಿಗೂ, ಅವರಿಗೆ ಸೆಡ್ಡು ಹೊಡೆದು ಪಿಂಕ್ ಚೆಡ್ಡಿ ಹಂಚುವ ಪ್ರೇಮಿಪರರಿಗೂ ಈ ಪ್ರಶ್ನೆ ಕೇಳಿ ನೋಡಿ..ಊಹ್ಹೂಂ ಉತ್ತರವೇ ಇಲ್ಲ.

ಅದು ೧೯೮೫ರ ದಿನಗಳು, ಈಗಿನಂತೆ ಕೈಗೆ ಕಾಲಿಗೆ ಮೊಬೈಲ್ ಸಿಗುತ್ತಿರಲಿಲ್ಲ. ಪ್ರೀತಿ ನಿವೇದನೆಗೆ ಪತ್ರವೊಂದೇ ಬಾಕಿ. ಅದು ಪ್ರೇಮಿಗಳ ಪಾಲಿಗೆ ದಿನನಿತ್ಯ ಪಠಿಸುವ ಬೈಬಲ್ ಇದ್ದಂತೆ. ಅಂತಹ ಸಂದರ್ಭದಲ್ಲಿಯೂ ಈ ಪ್ರೀತಿ ಪ್ರೇಮ ಯಾವುದೇ ಸದ್ದುಗದ್ದಲವಿಲ್ಲದೆ ಜಾರಿಯಲ್ಲಿತ್ತು. ಆಗಲೂ ಅಪ್ಪಟ ಪ್ರೇಮಿಗಳಿದ್ದರು. ಆದರೆ, ಅದಕ್ಕೊಂದು ಲಕ್ಷ್ಮಣ ರೇಖೆಯಿತ್ತು. ಅದನ್ನೇ ಪ್ರೇಮಿಗಳು ಬದುಕಿನ ಸಂಯಮ ಎಂದುಕೊಂಡಿದ್ದರು. ನಿಜವಾದ ಅರ್ಥದಲ್ಲಿ ಅದು ಪ್ರೇಮದ, ಪ್ರೀತಿಯ ಹೊಳಪು.




ಆಗ ಮೈಸೂರಿನ ಗಂಗೋತ್ರಿಗೆ ಓದಲೆಂದು ಬಂದ ಮಾತೂ ಬಾರದ, ಕಿವಿಯೂ ಕೇಳದ ಹುಡುಗನೊಬ್ಬ ಅಚನಾಕ್ ಆಗಿ ಕಾಲಿಲ್ಲದ ಹುಡುಗಿಯನ್ನು ಭೇಟಿಯಾಗುತ್ತಾನೆ. ಇಬ್ಬರದೂ ಅಪ್ಪಟ ಸ್ನೇಹ. ಅದಕ್ಕೆ ಕೊಂಡಿ ಅವರಿಬ್ಬರು ಮಲೆನಾಡಿನವರು ಎಂಬ ಒಂದು ಕಾರಣ.

ಸರಿ, ಎರಡು ವರ್ಷಗಳ ಓದಿನ ಅನಂತರ ಇಬ್ಬರು ತಮ್ಮ ತಮ್ಮ ಹಾಡುಪಾಡು ನೋಡಿಕೊಳ್ಳಲು ಹೊರಟರು. ಬಹುಶಃ ಅವರಿಬ್ಬರ ಸ್ನೇಹ ಗಂಗೋತ್ರಿಯ ಲೈಬ್ರರಿಯನ್ನು ದಾಟಿ ಆಚೆ ಇಣುಕಿರಲಿಲ್ಲ. ಆತನಿಗೆ ತನ್ನದು ಎಂದು ಹೇಳಿಕೊಳ್ಳುವ ಭಾವನೆಗಳು ಇದ್ದರೂ ಅದನ್ನು ಮಾತಿನಲ್ಲಿ ವ್ಯಕ್ತಪಡಿಸಲಾರ. ಆಕೆಗೆ ಅದು ಅರ್ಥವಾದರೂ, ಅದೆಲ್ಲಾ ಸಾಧ್ಯವೇ ಎಂಬ ದಿಗಿಲು.

ಒಂದೆರಡು ವರ್ಷಗಳು ಕಳೆದಿರಬೇಕು. ಈತ ಸ್ನೇಹಿತನಿಗಾಗಿ ಹೆಣ್ಣು ನೋಡಲು ಹೊರಟ. ಗೊತ್ತಿಲ್ಲದೆ ಆಕೆಯ ಮನೆಗೇ ಹೋಗಬೇಕೆ? ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮ. ಆಕಸ್ಮಿಕವಾಗಿ ಒಂದೆಡೆ ನೋಡಿದಾಗ ಇಬ್ಬರಿಗೂ ಆಶ್ಚರ್ಯ. ಸರಿ ಹುಡುಗಿಯ ನೋಡುವ ಶಾಸ್ತ್ರ ಆರಂಭವಾಯಿತು. ಹುಡುಗಿ ಬಂದಳು. ಒಂದು ಕಾಲು ಊನು. ನೋಡಲು ಸುಂದರವಾಗಿದ್ದರೂ ಸ್ವಾಧೀನವಾಗಿಲ್ಲದ ಕಾಲು. ಹುಡುಗನಿಗೆ ಬಳುಕುವ ಕನ್ಯೆ ಬೇಕು. ಕಾಲಿನ ಕುಂಟನ್ನು ನೋಡುತ್ತಲೇ ಆತನ ಮುಖ ಸಣ್ಣದಾಯಿತು.

ಆದಾಗಿ ಐದಾರು ತಿಂಗಳು ಕಳೆದಿರಬೇಕು. ಆ ಹುಡುಗಿಗೆ ಯಾವುದೇ ಹುಡುಗ ನಿಶ್ಚಯವಾಗಲಿಲ್ಲ ಎಂಬ ಸುದ್ದಿ ಈತನ ಕಿವಿಗೆ ಬಿತ್ತು. ಸ್ನೇಹಿತನೂ ಆಕೆಯನ್ನು ತಿರಸ್ಕರಿಸದ ಸುದ್ದಿಯೂ ಗೊತ್ತಾಗಿತ್ತು. ಆದೇನು ನಿಶ್ಚಯಿಸಿಕೊಂಡನೋ ಏನೋ..ಆಕೆಗೆ ಒಂದು ಪತ್ರ ಬರೆದ. ಅದರ ಸಾರಂಶ ಸರಳ.

ಬದುಕು ನಾವುಂದುಕೊಂಡಂತೆ ನಿರ್ಧಾರವಾಗದಿದ್ದರೂ, ಅದನ್ನು ನಾವು ಇನ್ನೂ ಸುಂದರಗೊಳಿಸಬಹುದು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಮನಸ್ಸಿನಲ್ಲಿ ನನ್ನ ಕಿವಿಡುತನ ಮತ್ತು ಮೂಗ ಎಂಬ ಕುರಿತು ಯಾವುದೇ ಕೆಟ್ಟ ಭಾವನೆ ಇಲ್ಲದಿದ್ದರೆ, ನಾನು ನಿಮ್ಮೊಂದಿಗೆ ಸುಖವಾಗಿ ಬದುಕಬಲ್ಲೆ ಎಂಬ ವಿಶ್ವಾಸವಿದ್ದರೆ, ನಿಮ್ಮನ್ನು ವಿವಾಹವಾಗಲು ನಾನು ಸಿದ್ಧನಿದ್ದೆನೆ. ಖಂಡಿತ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ಪತ್ರದಲ್ಲಿ ಯಾವುದೇ ಉದ್ವೇಗ, ಆದರ್ಶ, ಆಕರ್ಷಣೆ ಇತ್ಯಾದಿಗಳಿರಲಿಲ್ಲ. ಅಥವಾ ಕುಂಟು ಹುಡುಗಿಗೆ ನಾನು ಬಾಳು ನೀಡುತ್ತೇನೆ ಎಂಬ ಒಣ ಅಹಂಭಾವದ ಪ್ರದರ್ಶನವೂ ಇರಲಿಲ್ಲ.

***

ಕೆಲ ದಿನಗಳ ಕಾಲ ಆಕೆಯಿಂದ ಉತ್ತರವಿಲ್ಲ. ಈತನಿಗೆ ತಾನು ಆಕೆಗೆ ಇಷ್ಟವಾಗಲಿಲ್ಲವೇನೋ ಎಂಬ ಕಾರಣಕ್ಕಾಗಿ ಸುಮ್ಮನಾದ. ಬದುಕಿಗೊಂದು ದಾರಿ ಹುಡುಕುವ ಅವಸರದಲ್ಲಿ ಮೈಸೂರಿಗೆ ಬಂದ. ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ತನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂಬ ಕಾರಣಕ್ಕೆ ಅದರ ಪ್ರಸ್ತಾಪವನ್ನೆ ಮರೆತುಬಿಟ್ಟ.

ಆಶ್ಚರ್ಯ! ಒಂದು ದಿನ ಆಕೆಯಿಂದ ಪತ್ರ.

ನಾನು ನಿಮ್ಮ ಬದುಕಿನಲ್ಲಿ ಜೊತೆಯಾಗಲು ಇಚ್ಚಿಸುತ್ತಿದ್ದೇನೆ. ನಾಳೆಯೇ ಮೈಸೂರಿಗೆ ಬರುತ್ತೇನೆ ಒಂದೇ ಸಾಲಿನ ಉತ್ತರ. ಮನತುಂಬಿ ಹೋದ. ಪತ್ರ ಬಂದ ಬೆಳಗ್ಗೆ ಆಕೆ ತನ್ನ ಸೂಟ್‌ಕೇಸ್‌ನೊಂದಿಗೆ ಮೈಸೂರಿನ ಆತನ ರೂಮಿನ ಮುಂದೆ ಹಾಜರ್. ಸರಿ ಎರಡು ದಿನದೊಳಗೆ ಸರಳ ವಿವಾಹ. ಇದ್ದ ಸಣ್ಣ ರೂಮಿನಲ್ಲಿಯೇ ಸಂಸಾರ ಆರಂಭ.

ಈತನಿಗೆ ಪರಿಪೂರ್ಣ ಕಿವಿಡುತನ, ಆಕೆಗೆ ಕಾಲಿನ ವಿಕಲತೆ. ಇವರಿಬ್ಬರು ಏನನ್ನು ಸಾಧಿಸಿಯಾರು? ಮುಂದೊಂದು ದಿನ ಈ ನಿರ್ಧಾರಕ್ಕೆ ಪ್ರಶ್ಚಾತ್ತಾಪ ಪಡುತ್ತಾರೆ ಎಂಬುದು ಇಬ್ಬರ ಮನೆಯವರ ಲೆಕ್ಕಾಚಾರ. ಜಾತಿ, ಕುಲ, ಎಲ್ಲ ಬೇರೆ ಬೇರೆಯಾದರೂ, ಇಬ್ಬರ ಮನಸ್ಸು ಒಂದಾಗಿತ್ತು.

ಇದೀಗ ಬೆಳೆದು ನಿಂತ ಇಬ್ಬರು ಮುದ್ದಾದ ಮಕ್ಕಳು, ಬದುಕಿನಲ್ಲಿ ಇದುವರೆಗೆ ಒಮ್ಮೆಯೂ ಒಬ್ಬರಿಗೆ ಒಬ್ಬರು ಹೊರೆ ಎಂದು ಭಾವಿಸಿಕೊಂಡೇ ಇಲ್ಲ. ಪ್ರೀತಿ ಪ್ರೇಮ ಎಂಬುದನ್ನು ಆಕರ್ಷಣೆಗೆ ಸೀಮಿತ ಮಾಡಿಕೊಳ್ಳಲಿಲ್ಲ.

ಆಶ್ಚರ್ಯವೆಂದರೆ, ದೊಡ್ಡ ಮಗಳು ಪೋಲಿಯೋ ಪೀಡಿತ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾಳೆ. ಅವರದೂ ಪ್ರೇಮ ವಿವಾಹ. ಅದು ಧರ್ಮ,ಧರ್ಮಗಳ ಅಂತರದಲ್ಲಿ. ಇಡೀ ಕುಟುಂಬವೇ ಸುಖಿ.

***

ಮೇಲಿನ ಘಟನೆಯನ್ನು ಪ್ರಸ್ತಾಪ ಮಾಡಿದ ಉದ್ದೇಶವಿಷ್ಟೇ. ಪ್ರೀತಿ ಎಂಬುದು ಎಲ್ಲಿ, ಹೇಗೆ, ಯಾವ ಕಾರಣಕ್ಕಾಗಿ ಹುಟ್ಟುತ್ತದೆ ಎಂಬುದು ಬಗೆಹರಿಯದ ಪ್ರಶ್ನೆ. ಆದರೆ, ಅದೊಂದು ಅಮೂರ್ತ ಭಾವ ಎನ್ನುವುದು ಸತ್ಯ. ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಮಾತಿನಂತೆ ಪ್ರೀತಿ ಎಂಬುದು ಜಾತಿ, ಧರ್ಮ, ಕುಲ, ಸಮುದಾಯ, ಸಮಾಜ, ರಾಜ್ಯ ಅಥವಾ ದೇಶ-ದೇಶಗಳನ್ನು ಮೀರಿದ್ದು.

ಫೆ.೧೪ ರಂದೆ ತನಗೆ ಪ್ರೀತಿ ಹುಟ್ಟುತ್ತದೆ, ಅವತ್ತಿನ ದಿನವೇ ತನ್ನ ಪ್ರೀತಿ ತೋಡಿಕೊಂಡರೆ ಆದಕ್ಕೊಂದು ಅರ್ಥ ಎನ್ನುವ ಮೂರ್ಖ ಕಾರಣಗಳು ಮತ್ತು ಜಾಗತೀಕರಣದ ಕೆಲವು ಸತ್ಯಗಳನ್ನು ನಾವುಗಳು ಅರಗಿಸಿಕೊಳ್ಳಲೇ ಬೇಕಾಗಿದೆ.

ಯಾವುದೇ ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಯಾಗದ ಕಾಲದಲ್ಲೂ ಈ ಪ್ರೀತಿ-ಪ್ರೇಮ ಎಂಬ ವಿಚಾರ ಜೀವಂತವಾಗಿ ಈ ಸಮುದಾಯದ ಸ್ವಾಸ್ಥವನ್ನು ಕಾಪಾಡುತ್ತಲೇ ಬಂದಿದೆ. ಆದರೆ, ಅದನ್ನು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳುವ ಮತ್ತು ಆ ಮತ್ತಿನಲ್ಲೇ ಅದನ್ನು ಆಚರಿಸಲು ಹೊರಡುವ ಮನಸುಗಳಿಗೆ ಮೇಲಿನ ಉದಾಹರಣೆ ಸರಿಯಾದ ಪಾಠ ಎನ್ನುವುದು ನನ್ನ ಅನಿಸಿಕೆ.

***

ಪ್ರೀತಿ ಎನ್ನುವುದು ಎರಡು ಮನಸುಗಳಿಗೆ ಸಂಬಂಧಿಸಿದ ವಿಚಾರ. ಅದೊಂದು ತೀರಾ ಖಾಸಗಿ ಮತ್ತು ವೈಯಕ್ತಿಕ ಎಂಬುದು ನಮ್ಮ ಶ್ರೀರಾಮನ ಭಕ್ತರಿಗೆ ಗೊತ್ತಿಲ್ಲ. ಗೊತ್ತಿದ್ದರೂ ಜಾಣ ಪೆದ್ದರಂತೆ ಆಡುವುದು ಅವರಿಗೆ ಆಗಿರುವ ತರಬೇತಿಯ ಸಾರಂಶ. ಆದರೆ, ವ್ಯಾಲೆಂಟೇನ್ಸ್ ಡೇ ಎನ್ನವುದನ್ನು ಇನ್ನಷ್ಟು ರೋಚಕವಾಗಿ ಮಾಡಲು ಹೊರಟ ಶ್ರೀರಾಮನ ಭಕ್ತರು ಮತ್ತು ಜಾಗತೀಕರಣದ ಮೂಸುದಾರರು, ಅದನ್ನು ಇಂದಿನ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿರುವುದು ಮಾತ್ರ ಅತ್ಯಂತ ಕ್ಷುಲ್ಲಕವಾಗಿ ಕಾಣುತ್ತಿದೆ.

ಪ್ರೀತಿ ಮಾಡುವವರನ್ನು ವಿರೋಧಿಸುವ ಮನೆಯವರಿಗೆ ಬುದ್ಧಿ ಹೇಳಿ, ಅವರಿಗೆ ಜಾತಿ ವಿನಾಶದ ಕಲ್ಪನೆಯ ಬಗ್ಗೆ ಗೌರವ ಹುಟ್ಟಿಸಬಹುದಾದ ಕೆಲಸವನ್ನು ಶ್ರೀರಾಮನ ಭಕ್ತರು ಮಾಡಿದ್ದರೆ ಅದು ನಿಜವಾಗಿಯೂ ಒಂದು ಸಂಘಟನೆ ಹಾಗೂ ಒಂದು ಶಕ್ತಿಯಾಗಿ ಇಡೀ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯು ಮಾದರಿ ಕಾರ್ಯ ಎಂದು ಬೆನ್ನುತಟ್ಟಬಹುದಿತ್ತು. ಅದರೆ, ಈಗ ಆಗುತ್ತಿರುವುದೇ ಬೇರೆ. ಪ್ರೀತಿಯನ್ನು ರಸ್ತೆಯಲ್ಲಿಟ್ಟು ಮಾರಾಟಕ್ಕೆ ಕುಳಿತ ಬಂಡವಾಳಶಾಹಿಗಳು ಇದೊಂದೆ ದಿನ ನಿಮ್ಮ ಅದ್ಬುತ ಪ್ರೀತಿ ಉಕ್ಕಿ ಹರಿಯುತ್ತದೆ ಎಂದು ಇನ್ನಿಲ್ಲದ ಬೊಗಳೆ ಬಿಡುತ್ತಾ ತಮ್ಮ ಸರಕು ಖಾಲಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದರೆ, ಇತ್ತ ಶ್ರೀ ರಾಮನ ಭಕ್ತರು ಈ ಸಮಾಜಕ್ಕೆ ಪ್ರೇಮಿಗಳೇ ನಿಜವಾದ ಭಯೋತ್ಪಾದಕರು ಎಂಬರ್ಥದಲ್ಲಿ ತಾಳಿ ಹಿಡಿದು ಮದುವೆ ಮಾಡಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದೇನು ಹುಚ್ಚರ ಸಂತೆಯೇ?

***

ಪ್ಯಾರ ಕಿಯಾ ತೋ ಡರ್‌ನಾ ಕ್ಯಾ..

ಪ್ರೇಮಿಗಳೇ, ನಿಜವಾಗಿ ನಾಳೆಯೊಂದೇ ದಿನ ಪ್ರೀತಿ ಹುಟ್ಟುವುದಿಲ್ಲ. ಅಥವಾ ಅದೊಂದು ಪವಿತ್ರ ದಿನವೂ ಅಲ್ಲ. ಪ್ರೇಮಿಗಳಿಗೆ ದಿನವೂ ಪವಿತ್ರ. ಆದರೆ, ನಿಮ್ಮೊಳಗೆ ಪ್ರೀತಿ ಮೊಳಕೆಯೊಡೆಯುವಾಗ ಅದಕ್ಕೆ ಯಾರಪ್ಪಣೆಯೂ ಬೇಡ. ನಾವು ಬೇಡವೆಂದರೂ, ಈ ಸಮಾಜ ಎದುರಾಗಿ ನಿಂತರೂ ನಿಮ್ಮೊಡನೆ ಗಟ್ಟಿಯಾಗಿ ನಿಲ್ಲುವುದು ಅದೊಂದೆ. ಅದಕ್ಕೊಂದು ದೀರ್ಘವಾದ ಆಯುಷ್ಯ ಇದೆ. ಅದು ನಿಮ್ಮ ಬದುಕಿನ ಕೊನೆಯವರೆಗೆ ನಡೆದು ಬರುತ್ತದೆ.

ಅಂತಹದೊಂದು ಪವಿತ್ರ ಬಂಧನಕ್ಕೆ ಒಳಗಾಗಿರುವ ನೀವು ಯಾರಿಗೂ ಹೆದರುವುದು ಅವಶ್ಯಕವಿಲ್ಲ. ಪ್ರೀತಿಸುವುದು ನಿಮ್ಮ ಹಕ್ಕು. ಅದನ್ನು ಇನ್ನೊಬ್ಬ ಕಸಿದುಕೊಳ್ಳಲಾಗದು.

***

ಈ ಪ್ರೀತಿ ಒಂಥರಾ ಕಚಗುಳಿ..

ಇಂತಹ ಪ್ರೀತಿಯ ಬಗ್ಗೆ ಅದೆಷ್ಟು ಕಾದಂಬರಿಗಳು, ಕಥೆಗಳು, ಕವನಗಳು ಬಂದು ಹೋಗಿದೆಯೋ ಗೊತ್ತಿಲ್ಲ. ಎಲ್ಲ ಪ್ರೀತಿಯು ಒಂದೇ. ಆದರೆ ಪ್ರೀತಿಯ ಕುರಿತು ಇದ್ದ ಸಾಫ್ಟ್ ಕಲ್ಪನೆಗಳೆಲ್ಲಾ ಇಂದು ಕರಗಿಹೋಗಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪ್ರೀತಿಸುವವರಲ್ಲೂ ಬದಲಾವಣೆಯಾಗಿದೆ. ಪ್ರೀತಿಯ ಭಾಷೆ ಬದಲಾಗುತ್ತಿದೆ. ಆದರೆ, ಹೃದಯ, ಮನಸು ಮಾತ್ರ ಒಂದೇ. ಎಲ್ಲ ಪ್ರೇಮಿಗಳಲ್ಲಿ ಆರಂಭದ ದಿಗಿಲು, ನಾಚಿಕೆ ಇದ್ದೇ ಇರುತ್ತದೆ. ಅದು ಬಿಟ್ಟೂಬಿಡದೆ ಕಾಡುತ್ತದೆ. ತಾವೇ ಜಗತ್ತಿನ ಅಮರ ಪ್ರೇಮಿಗಳು ಎಂಬರ್ಥದಲ್ಲಿಯೇ ಇರುತ್ತಾರೆ. ಆದರೆ, ತದನಂತರದ ಬೆಳವಣಿಗೆಯಲ್ಲಿ ಎಲ್ಲವೂ ಉಲ್ಟಾ ಪಲ್ಟ.

ಇವತ್ತು ಪ್ರೇಮಿಗಳು, ನಾಳೆ ನಾವ್ಯಾರೋ ಗೊತ್ತೇ ಇಲ್ಲ ಎಂದು ವರ್ತಿಸುವ ಪ್ರೇಮಿಗಳದ್ದು ನಿಜವಾದ ಪ್ರೀತಿಯಲ್ಲ. ಅದೊಂದು ಆ ಕ್ಷಣದ ಆಕರ್ಷಣೆ. ಪ್ರೀತಿ ಮನಸ್ಸಿಗೆ ಸಂಬಂಧಿಸಿದ್ದು. ಅದೊಂದು ಪರಿಶುದ್ಧವಾದ ಪರಿಧಿಯಲ್ಲಿ ತಿರುಗುತ್ತದೆ. ಅದನ್ನು ಕಾಪಾಡಿಕೊಳ್ಳುವುದಷ್ಟೆ ನಮ್ಮ ಕೆಲಸ. ಪ್ರೀತಿಯನ್ನು ವಿರೋಧಿಸುತ್ತಿರುವ ಶ್ರೀರಾಮಭಕ್ತರು ಒಮ್ಮೆ ಇತಿಹಾಸದ ಪ್ರೀತಿ ಪ್ರೇಮದ ಕಥೆಗಳನ್ನು ಓದಿಕೊಂಡರೇ ಒಳ್ಳೆಯದು.

***

Thursday, February 5, 2009

ಕಾಲ ಮತ್ತೊಮ್ಮೆ ನಮಗಾಗಿ ಬಂತು..


ಅಣ್ಣಾ ಒಂದು ನೂರು ರೂಪಾಯಿ ಸಾಲ ಬೇಕಾಗಿತ್ತುಅವನ ಧ್ವನಿ ತೀರಾ ಅಸಹಾಯಕ ಸ್ಥಿತಿಯಲ್ಲಿ ಇತ್ತು. ಸಾಲ ಕೇಳುತ್ತಿರುವುದು ತೀರಾ ಪರಿಚಯದ ಗೆಳಯನಿಗೆ. ಆದರೆ, ಸಂದರ್ಭ ಮಾತ್ರ ಕೆಟ್ಟದಾಗಿತ್ತು. ಅಷ್ಟಿಲ್ಲ ಇಷ್ಟಿದೆ ತಗೋ.. ಕೈಗೆ ಏನೋ ಆಗಿದೆ ಅನುಕಂಪದಿಂದಲೇ ಕೇಳಿದ ಗೆಳೆಯ. ದಯನೀಯ ಮನಸ್ಥಿತಿಯಲ್ಲಿದ್ದ ಈತ ಕೊಟ್ಟಿದ್ದನ್ನು ಹಿಡಿಮನಸ್ಸಿನೊಂದಿಗೆ ಜೇಬಿಗಿಳಿಸಿ ಹೌದು...ನಿನ್ನೆ ಬಿದ್ದಿದ್ದೆ ಎಂದೆ, ಉತ್ತರವೇ ನೀರಸ.

ಗೆಳೆಯನ ಕಚೇರಿಯ ಹೊರಗೆ ಇಟ್ಟಿದ್ದ ನೀರನ್ನು ಕುಡಿಯಬಹುದೇ ಎಂದರೆ, ನನ್ನನು ಕೇಳಬೇಕು ಎನ್ನುವ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದ ಸೆಕ್ಯುರಿಟಿಯವಾ..ನೀರು ಗಂಟಲಿಗೆ ಇಳಿಯುವ ಮುನ್ನವೇ ಹಣ ಕೊಟ್ಟು ಒಳ ಹೋದ ಗೆಳೆಯನೊಂದಿಗೆ ಕೆಲವರು ಜೋರಾಗಿ ನಕ್ಕು ಮಾತನಾಡುವುದು ಬೇಡವೆಂದರೂ ಈತನ ಕಿವಿಗೆ ಬಿತ್ತು.

ಆಗ್ಲೆ ಹೊಸ ನಾಟಕ ಮಾಡ್ಕೊಂಡು ಬಂದ ಹಣ ಕೇಳಿದ್ನಾ..? ಬಲೇ ಕಲಾವಿದ ಕಣಯ್ಯ ಅವ್ನು ಮತ್ತೆ ಜೋರಾಗಿ ನಕ್ಕರು.ವಿಚಿತ್ರವೆಂದರೆ ಆದೇ ಕಚೇರಿಯಲ್ಲಿ ನಗುವವರಿಗಿಂತಲೂ ಮೊದಲು ದುಡಿದು ಹೊರಬಂದವನು ಈತ. ಆಗ ಹೊಸದಾಗಿ ಬಂದು ಅಮಾಯಕರಂತೆ ನಿಂತು ನೋಡುತ್ತಿದ್ದ ಅವರಿಗೆಲ್ಲ ಟೀ ಕುಡಿಸಿ, ಇದೆಲ್ಲಾ ಬೆಟ್ಟವಲ್ಲ, ಮಂಜಿನಂತೆ ಕರಗಿ ಹೋಗುವ ಕರಗತ ವಿದ್ಯೆ ಎಂದು ಎಷ್ಟೋ ಸಂಜೆಗಳಲ್ಲಿ ಹೇಳಿಕೊಟ್ಟಿದ್ದಾತ.

ಮಾತುಗಳು ಹೃದಯಕ್ಕೆ ಚುಚ್ಚಿದಂತಾಯಿತು. ಗಂಟಲಿಗೆ ಇಳಿದ ನೀರು ಎದೆಯಾಳದೆಲ್ಲೆಲ್ಲೋ ಭಾರವಾದಂತೆ ದಡದಡನೇ ಅಲ್ಲಿಂದ ಆತ ಹೊರಬಿದ್ದ...

****

ಹಾಗಾದರೆ ಇಂತಹದೊಂದು ಸಂದರ್ಭಕ್ಕೆ ಯಾರನ್ನ ದೂಷಣೆ ಮಾಡುವುದು?,ಇದು ಆತನ ಸೋಲೋ ಅಥವಾ ಆತನ ಹಣೆಬರಹವೇ..?ಬೇಕಾದವರು ಬೇಕಾದ್ದಂಗೆ ಹೇಳಲಿ, ಆದರೆ, ಮೇಲಿನ ಘಟನೆಯ ರೀತಿಯಲ್ಲಿಯೇ ಬಹುತೇಕರು ಅವಮಾನಕರ ಪ್ರಸಂಗವನ್ನು ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸಿರುತ್ತಾರೆ. ಅದೊಂದು ಕಾಲಘಟ್ಟವೇ ಇರಬೇಕು.ಸೋತವರನ್ನು ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗೆಂದು ಸೋತವರೆಲ್ಲಾ ಸದಾ ಸೋತೇ ಇರುವುದಿಲ್ಲ. ಆದರೆ ಆ ಟೈಮ್ ಮನುಷ್ಯನನ್ನು ಎಂತ ದುಸ್ಥಿತಿಯಲ್ಲಿ ನೋಡುತ್ತದೆ ಎಂದರೆ, ಅಲ್ಲಿಯವರೆಗೆ ಆತನ ಪ್ರತಿಭೆ, ಯಶಸ್ಸು, ಒಳ್ಳೆಯತನ, ಧೈರ್ಯ, ಪ್ರಾಮಾಣಿಕತೆ ಎಲ್ಲವೂ ಒಂದೇ ಇಡೀ ಗಂಟಿಗೆ ಮಾರವಾಡಿಯ ಅಂಗಡಿಯಲ್ಲಿ ಅಡವಿಟ್ಟಂತೆ ಅವಿತುಕೊಂಡಿರುತ್ತವೆ. ಅವನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಆತ ಜೀವನದ ಬಹುತೇಕ ವರ್ಷಗಳೇ ಸಾಲಗಾರ ಎನಿಸಿಕೊಂಡು ಅವರಿವರಿಂದ ಬಂದ ಕಣ್ರಯ್ಯ ಎಂದು ಬೇಕಾರ್ ಎಂಬ ಪಟ್ಟವನ್ನು ಪಡೆದುಕೊಳ್ಳುವ ದುರಂತ ಪರ್ವ.

ಇಂತಹ ಬದುಕನ್ನು ಎದುರಿಸಿದ ಯಾರಿಗಾದರೂ ಒಮ್ಮೆ ಅಪ್ತವಾಗಿ ಅದರ ನೆನಪು ಮಾಡಿ ನೋಡಿ, ಒಂದು ಕ್ಷಣ ಅವಕ್ಕಾದವರಂತೆ ಬೆಚ್ಚಿ ಕುಳಿತು ಆನಂತರ ವಿಷಾದದ ನಗೆ ಅವರ ಮುಖದ ಮೇಲೆ ತೇಲಿ ಹೋಗುತ್ತದೆ., ಆದರೆ, ಅದನ್ನು ನಿಮ್ಮೊಂದಿಗೆ ತೀರಾ ಹಂಚಿಕೊಳ್ಳಲಾರರು. ಏಕೆಂದರೆ ಅದು ಅವರ ಪ್ರಕಟವಾಗದ ಬದುಕಿನ ಪುಟಗಳು. ಮತ್ತೊಮ್ಮೆ ನೆನಸಿಕೊಂಡರೆ ಎಲ್ಲಿ ಆತುಕೊಳ್ಳೋತ್ತದೆಯೋ ಎಂಬ ಅಂಜಿಕೆ.

***

ಎಂತಹ ಸೋಲಾದರೂ ಮನುಷ್ಯ ತಡೆದುಕೊಳ್ಳಬಲ್ಲ. ಆದರೆ, ತನ್ನ ಜೀವನಸ್ಥಿತಿಯಲ್ಲಿ ಆರಂಭವಾಗುವ ಸೋಲಿನ ಸರಮಾಲೆಗಳನ್ನು ಭರಿಸುವ ಶಕ್ತಿ ಮಾತ್ರ ಆತನಿಗೆ ಇರುವುದಿಲ್ಲ. ಒಮ್ಮೆ ನಸೀಬು ಕೆಟ್ಟರೆ, ಬಂಗ್ಲೆಯಲ್ಲಿ ಇದ್ದಾತ ಪುಟಪಾತ್ ಎನ್ನುವ ಮಾತನ್ನು ಆಗಾಗ ಕೇಳುತ್ತಲೇ ಇರುತ್ತೀರಿ. ಈ ಸೋಲು ಒಂದು ತರಹಾ ಹಾಗೆ. ಎ.ಸಿ.ರೂಮಗಳಲ್ಲಿ ಕೂತು ಹತ್ತಾರು ಮಂದಿಗೆ ಕೆಲಸ ಹಂಚುತ್ತಿದ್ದವ ಅಥವಾ ತನ್ನದೆ ಸ್ವಂತ ವ್ಯಾಪಾರದಲ್ಲಿ ನೆಮ್ಮದಿ ಕಂಡು ಒಂದಿಬ್ಬರು ಹುಡುಗರಿಗೆ ಮನತುಂಬವಷ್ಟು ಸಂಬಳ ಕೊಡುತ್ತಿದ್ದವ, ಬೀದಿ ಬಂದರೆ ಮುಗೀತು. ಅವನ ಅಲ್ಲಿಯವರೆಗಿನ ಶ್ರಮ,ಪ್ರತಿಭೆ,ಚಿಂತನಾ ಶಕ್ತಿ ಎಲ್ಲದಕ್ಕಿಂತ ದಿನವೂ ದಣಿವರಿಯದೆ ದುಡಿದು ನಾಳೀನ ಕನಸುಗಳ ಬುತ್ತಿ ಕಟ್ಟುವ ಪ್ರಕ್ರಿಯೆಗಳಿಗೆ ಶನಿ ಪ್ರವೇಶ ಎಂಬುದು ಖಾಯಂ. ಅಲ್ಲಿಂದ ಆತನ ಪ್ರತಿಭೆ ಬಡ್ಡಿಗೆ ಸಾಲ ನೀಡುವವನ ಮುಂದೆ ಮಕಾಡೆ ಮಲಗಿಕೊಂಡು ಬಿಟ್ಟಿರುತ್ತದೆ. ಸೋಲು ಆರಂಭವಾಗುವುದೇ ಅಲ್ಲಿಂದ, ಬಡ್ಡಿಗೆ ತಂದ ಸಾಲ ಮೊದಲು ಅವನ ವೃತ್ತಿ ಮತ್ತು ಪ್ರವ್ಲತ್ತಿಯನ್ನು ಮುಳುಗಿಸುತ್ತದೆ, ಆನಂತರ ನಿಧಾನವಾಗಿ ಮನೆಯಲ್ಲಿನ ನಂಬಿಕೆಯ ಗೋಡೆಗಳನ್ನು ಕೆಡವಲು ಆರಂಭಿಸುತ್ತದೆ. ಅಲ್ಲಿಗೆ ಆತ ಗಡ್ಡಧಾರಿ. ನಗುವುದನ್ನು ಮರೆತುಬಿಟ್ಟಿರುತ್ತಾನೆ. ಏಕೆಂದರೆ ಸಾಲ ಕೊಟ್ಟಾತನ ವಿಕಟನಗು ನಿದ್ದೆಯನ್ನೂ ಕದ್ದಿರುತ್ತದೆ.ಇನ್ನು ಮನೆಯವರು ಬಿಡಿ, ಸ್ವಂತ ಹೆಂಡತಿ ಆತನನ್ನು ಕಂಡರೆ ಉದಾಸೀನ ಮಾಡುಲು ಆರಂಭಿಸುತ್ತಾಳೆ. ಗೆಳೆಯರು ತಪ್ಪಿಸಿಕೊಂಡು ಓಡಾಡುತ್ತಾರೆ. ಇನ್ನೂ ಕೆಲವರು ಬಿಟ್ಟಿ ಸಲಹೆಗಳನ್ನು ಕೊಟ್ಟು ಅನುಕಂಪ ತೋರಿಸುತ್ತಲೇ ಎಲ್ಲರ ಮುಂದೆ ಕಾಲೇಳೆಯಲು ಆರಂಭಿಸುತ್ತಾರೆ. ಕೊಟ್ಟ ಸಾಲ ತೀರಿಸಲು ಇನ್ನೊಂದು ಸಾಲ..ಹೀಗೆ ಸಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡವನಿಗೆ ಈ ಹಿಂದೆ ಕೆಲಸಕೊಡಲು ತಾ ಮುಂದೆ ನಾ ಮುಂದು ಪೈಪೋಟಿ ನಡೆಸುತ್ತಿದ್ದ ಮಂದಿ ಈಗ ಎಲ್ಲರ ಮುಂದೆಯೇ ಅವನ ಪ್ರಾಮಾಣಿಕತೆ, ಪ್ರಯತ್ನಶೀಲತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.

ಇಲ್ಲದ ನೆವದೊಂದಿಗೆ ಎಲ್ಲಿ ಆತನ ದುರಾದೃಷ್ಟ ತಮ್ಮನ್ನೂ ನುಂಗಿಬಿಡುತ್ತದಯೋ ಎಂಬಂತೆ ಸಾಗಹಾಕುವುದನ್ನೆ ಕಾದು ನೋಡುತ್ತಾರೆ. ಅಲ್ಲಿಗೆ ಆತನ ಮಾನಸಿಕ ಧೈರ್ಯ ಫಿನಿಷ್. ಇದಕ್ಕೆ ಸಾಥ್ ಎಂಬಂತೆ ಮನೆಯಲ್ಲಿ ಹೆಂಡತಿಯೂ ಆದೇ ಸ್ಥಿತಿಯಲ್ಲಿ ಆತನನ್ನು ಪ್ರಶ್ನೆ ಮಾಡುತ್ತಾ ಹೋದರೆ, ಆತ ನಿಜವಾಗಿಯೂ ಬೇಕಾರ್.

****

ಇದು ಮುಗಿಯದ ಘಟ್ಟವಲ್ಲ. ಎಂದೋ ಒಂದು ದಿನ ಎಲ್ಲವೂ ಮುಗಿದು ನಿಧಾನವಾಗಿ ಆತ ಆ ಪರ್ವದಿಂದ ಹೊರಬರುತ್ತಾನೆ. ಮತ್ತೆ ಮುಕ್ಕಾಗದೆ ಉಳಿಸಿಕೊಂಡ ಕಲಿತ ವಿದ್ಯೆಯನ್ನು ಉಪಯೋಗಿಸಿಯೇ ಮೇಲೆರುತ್ತಾನೆ. ಆಗ ಸ್ನೇಹಿತರಲ್ಲಾ ಸಕ್ಕರೆಗೆ ಇರುವೆ ಮುಕ್ಕುವಂತೆ. ಆದರೆ, ಅಷ್ಟು ದಿನಗಳ ಕಾಲ ಅನುಭವಿಸಿದ ಯಾತನೆ ಮುಂದಿನ ಏಳು ಜನ್ಮಕ್ಕಾಗುವಷ್ಟು ಸಾಕಾಗಿರುತ್ತದೆ. ಕೆಲವರು ಅದನ್ನು ಎದುರಿಸಲಾಗದೆ ಸಾವಿನ ದಾರಿಯನ್ನೆ ಹಿಡಿದಿರುತ್ತಾರೆ. ಬಹಳಷ್ಟು ಮಂದಿ ಕಟ್ಟಿಕೊಂಡ ಬದುಕಿನ ಜಂಜಾಟ ಅನಾಥವಾಗುತ್ತದೆಯಲ್ಲಾ ಎಂಬ ಕಾರಣಕ್ಕೆ ಹೆಂಡತಿ,ಮಕ್ಕಳು,ಸಮಾಜ ಹೀಗೆ ನೂರಾರು ಜಟಿಲ ಸಂಬಂಧದೊಳಕ್ಕೆ ಬಂಧಿ. ಕಂಡರೆ ಕ್ಯಾಕರಿಸುವ ಸಂಬಂಧಿಕರನ್ನು ಸಹಿಸಿಕೊಂಡು ಸೋಲನ್ನು ಎದುರಿಸಲು ಹೊರಟವನಿಗೆ ಒಬ್ಬನೇ ಒಬ್ಬ ಸಾಂತ್ವನ ಅಥವಾ ಸಾಥ್ ಹೇಳುವುದಿಲ್ಲ. ಈಗಿನ ಕಾಲದಲ್ಲಿ ಹೇಳಲು ಸಾಧ್ಯವೇ ಇಲ್ಲ ಬಿಡಿ. ಬಿದ್ದಾತನ ಬಳಿ ದುಡಿಸಿಕೊಳ್ಳುವುದು ಹೇಗೆ ಎಂಬುದು ಕೆಲವರಿಗೆ ಕಲಿಸದೇ ಬಂದ ವಿದ್ಯೆ. ಇನ್ನೂ ಕೆಲವರು ನಾವು ಸೋಲುವುದೇ ಇಲ್ಲ ಎಂಬರ್ಥದಲ್ಲಿ ಹೀಗೆ ನೆಲ ಹಿಡಿದವರ ಜುಟ್ಟು ಹಿಡಿದು ಜಗ್ಗಾಡುವುದನ್ನು ಎದೆಯೊಳಗೆ ಇಟ್ಟುಕೊಂಡಿರುತ್ತಾರೆ. ಆದರೆ, ಈಗಿನ ವೇಗದ ಜಗತ್ತಿನಲ್ಲಿ ಯಾರೊಬ್ಬರು ಸೋತು ಕೂತವನಿಗೆ ಒಂದೊಳ್ಳೆ ಸಲಹೆ ನೀಡಿ ಜೊತೆಗೆ ಕರೆದು ಕೆಲಸ ಮಾಡುವ ಮನಸ್ಸು ಕಳೆದುಕೊಂಡಿರುವುದು ನೋಡಿದರೆ ವೇದನೆಯಾಗುತ್ತದೆ. ಸೋಲು ಎನ್ನುವುದು ಜಾಗತೀಕರಣದಿಂದಲೋ ಅಥವಾ ಬಡವರ ಮನೆಯ ಕೊಣೆಯಿಂದಲೂ ಹುಟ್ಟಿದ ಕೂಸಲ್ಲ. ಅದೊಂದು ಸಂದರ್ಭ. ಅದನ್ನೂ ಬಂಡವಾಳವಾಗಿಸಿಕೊಳ್ಳುವ ಈ ಸುಸಂಸ್ಕೃತ ಜಗತ್ತಿನ ಮುಖವಾಡಗಳ ತುಂಬಾ ಅಳಿಸಿಹೋಗುವ ಬಣ್ಣಗಳಿವೆ.

****

ಬಹಳ ವಿಚಿತ್ರವೆಂದರೆ ಹಾಗೆ ಒಮ್ಮೆ ಸೋತು ಗೆದ್ದವನು ಮತ್ತೆ ಸೋಲುವ ಪ್ರಸಂಗಗಳು ಅತಿ ವಿರಳ. ಅದೊಂದು ತರಹ ವರ್ಷವೀಡಿ ಸುಖವಾಗಿದ್ದು, ವಾರವೊಂದರ ಕಾಲ ಜ್ವರ ಪೀಡಿತರಾಗಿ ರಿಫ್ರೇಶ್ ಆದಂತೆ. ಸೋಲು ಆತನ್ನು ಗೆಲುವಿಗಾಗಿ ಅಷ್ಟೊಂದು ತಹತಹಿಸುವಂತೆ ಮಾಡಿರುತ್ತದೆ. ಆ ಸೋಲು ಎಂದೂ ಆರದ ಒಂದಿಷ್ಟು ಗಾಯಗಳನ್ನು ಶಾಶ್ವತವಾಗಿ ನಮ್ಮೊಂದಿಗೆ ಬಿಟ್ಟು ಹೋಗಿರುತ್ತದೆ.

***

ಹೀಗೆ ಆನಾಯಾಚಿತವಾಗಿ ಬರುವ ಸೋಲನ್ನು ಹೀಗೀಗೇ ಗೆಲ್ಲಬೇಕು ಎಂದು ಹೇಳಿಕೊಡಲು ಅಸಾಧ್ಯವೇ. ಆದರೆ, ಮನಿ ಮ್ಯಾನೇಜ್‌ಮೆಂಟ್(ಹಣಕಾಸು ನಿರ್ವಹಣೆ) ವಿಚಾರದಲ್ಲಿ ಮಾತ್ರ ಸೋಲನ್ನು ಒಂದಿಷ್ಟು ನಿರೋಧಿಸಬಹುದು. ಅದು ಈ ಸೋಲಿಗೆ ಇರುವ ಏಕೈಕ ಗುಳಿಗೆ. ಗಳಿಕೆಯಲ್ಲಿ ಕೂಡಿಡುವ ಕಾಗುಣಿತ ಗೊತ್ತಿದ್ದರೆ,ಅದು ಸುಲಭ. ಎಲ್ಲದಕ್ಕಿಂತ ಮುಖ್ಯವಾಗಿ ಹಣ ಕೊಟ್ಟರೆ ಇಂತಿಷ್ಟೆ ಸಮಯಕ್ಕೆ ಹಿಂತಿರುಗಿ ಕೊಡಬೇಕು ಎನ್ನುವ ಗೆಳೆಯರನ್ನು ಸಾಧ್ಯವಾದಷ್ಟು ದೂರವಿಡಿ. ಅದು ಅವರವರ ಹಣಕಾಸು ಶಿಸ್ತು ಇರಬಹುದು. ಒಂದು ಪಕ್ಷ ನಿಮಗೆ ಇಂತಹ ಸೋಲು ಬೆನ್ನತ್ತಿದರೆ, ನಿಮ್ಮ ಆ ಶಿಸ್ತಿನ ಗೆಳೆಯರೆಲ್ಲಾ ಕಂಡವರ ದುಡ್ಡಿನಲ್ಲಿ ಟೀ ಕುಡಿಯುತ್ತಾ ಸಂಜೆ ರಸಗಳಿಗೆ ಕಳೆಯಲು ನಿಮನ್ನು ಬೇಕಾರ್ ಮಾಡುತ್ತಾರೆ. ಹಣಕಾಸು ವಿಚಾರದಲ್ಲಿ ನಾವೇಷ್ಟು ಶಿಸ್ತು ಬದ್ಧರು ಎಂಬುದನ್ನು ಇನ್ನೊಬ್ಬರಿಗೆ ತೋರಿಸಿಕೊಳ್ಳುವ ಆತುರದಲ್ಲಿ ನಿಮ್ಮನ್ನು ಹಾಗೂ ಮನುಷ್ಯತ್ವವನ್ನು ಹಣದ ಅಳತೆಯಂತೆ ತಕ್ಕಡಿಯಲ್ಲಿ ತೂಕಕ್ಕಿಟ್ಟು ಪಕಪಕನೆ ನಗುತ್ತಾ ಕಾಲೆಳೇಯುತ್ತಾರೆ.

****

ಎಲ್ಲದಕ್ಕಿಂತ ನೀವು ನಿಮ್ಮೊಳಗೆ ಉಳಿದುಕೊಳ್ಳಲು ಯತ್ನಿಸಿ.ಇಂತಹ ಒಂದು ಸೋಲು ಜೀವನದ ಪಾಠ ಎಂದುಕೊಳ್ಳಿ, ಜೀವನದಲ್ಲಿ ಓದಿ ಮುಗಿಸಬೇಕಾದ ಎಷ್ಟೋ ಪಾಠಗಳು ಬಾಕಿ ಉಳಿದಿವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಯಾರೋ ನಾಲ್ವರು ನಿಮಗೆ ಮಾಡಿದ ಅವಮಾನ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಅಥವಾ ಮಾಡಿದ ಸಾಲ, ತೀರಿಸಲು ಅಸಾಧ್ಯವಾದ ಋಣವೂ ಅಲ್ಲ. ಅದೊಂದು ಲೆಕ್ಕಾಚಾರ. ಆದರೆ, ಸೋಲು,ಗೆಲವು, ಸುಖ,ದುಃಖ, ಕಳೆಯುವುದು,ಗಳಿಸುವುದು ಈ ಎಲ್ಲ ಕಾಗುಣಿತಕ್ಕಿಂತ ನಿಮ್ಮ ಜೀವ ದೊಡ್ಡದು ಎಂಬುದು ಮಾತ್ರ ಸದಾ ನೆನಪಿರಲಿ.ನೀವಿದ್ದರೇ ಇಂತಹ ಮತ್ತೊಂದು ಲೋಕ ಸೃಷ್ಟಿ ಮಾಡಲೂಬಹುದು ಎಂಬ ಅರಿವೂ ನಿಮ್ಮಲ್ಲಿ ಇರಲಿ.

ಸೋಲು ಮತ್ತು ಸಾಲಗಳ ಬಗ್ಗೆ ಮಾತುಕತೆ ಆರಂಭ ಮಾಡಿದ್ದು ಬೇಸರವಾದರೆ ಕ್ಷಮೆ ಇರಲಿ.ಆದರೆ, ಬದುಕಿನ ಪ್ರಮುಖ ಘಟ್ಟದಲ್ಲಿ ಹಾದು ಬಂದಿರುವ ಎಲ್ಲರು ಅದರಿಂದ ಹೊರತಾಗಿಯೂ ಹೊಸ ಬದುಕು ಆರಂಭಿಸಿರುತ್ತಾರೆ. ಅದು ಅವರ ಗೆಲವಿನ ಹೊಸ ಮೆಟ್ಟಿಲು..ಇದು ನನ್ನ ನಿಮ್ಮ ಮಾತುಕತೆಯ ಹೊಸಕಟ್ಟೆಯಾಗಲಿ ಎಂದುಕೊಳ್ಳೊಣ್ಣ..

ಕಾಲ ಮತ್ತೊಮ್ಮೆ ನಮಗಾಗಿ ಬಂತು..