Thursday, August 13, 2009

ಪತ್ರಿಕೆಗಳು ಬರುತ್ತವೇ ಸುಮ್ಮನಿರು..!

ಹೇಳಿ ಕೇಳಿ ಕಳೆದ ೧೪ ವರ್ಷಗಳಿಂದ ಪತ್ರಿಕೆಯಲ್ಲಿ ಉಸಿರಾಗಿ ದುಡಿದ ನನಗೆ(ಹಾಗೆ ಅಂದುಕೊಳ್ಳುತ್ತೇನೆ) ತಕ್ಷಣ ಕಾರಣಾತಂರದಿಂದ ಇದ್ದ ಪತ್ರಿಕೆಯೊಂದನ್ನು ಬಿಟ್ಟು ಮೂರು ತಿಂಗಳು ಮನೆಯಲ್ಲಿ ಕುಂತರೆ ಹೆಂಗಾಗಬೇಡ..!?
ಇದು ನನ್ನ ವಿಷಯವಲ್ಲ..ಬಹುತೇಕ ಪತ್ರಕರ್ತರ ಕುಟುಂಬಗಳು ಕೆಲಸವಿಲ್ಲದ ಆ ತಲ್ಲಣಗಳನ್ನು ಅನುಭವಿಸಿಯೇ ಇರುತ್ತಾರೆ. ಹಾಗಾಗಿ ಕೆಲಸದಲ್ಲಿದ್ದ ಪತ್ರಿಕೆಯೊಂದನ್ನು ಬಿಟ್ಟು ಬಂದ ತಕ್ಷಣ ಒಂದಿಬ್ಬರು ಆತ್ಮಿಯರು ಪತ್ರಿಕೆಯೊಂದನ್ನು ಮಾಡುವ ಬಗ್ಗೆಯು ಯೋಚಿಸಿದರೂ,ಅದು ಬೇಡ ಎಂದು ಹೇಳಿ ನಾನೇ ಸುಮ್ಮನಾಗಿ ಬಿಟ್ಟೆ.
ಸಾಮಾಜಿಕ ನ್ಯಾಯದ ಬಗ್ಗೆ ಪುಟಗಟ್ಟಲೇ ವರದಿ ಮಾಡುವ ನಮ್ಮ ಪತ್ರಕರ್ತರಿಗೆ ಅದೇಷ್ಟು ಜಾತಿ ಅಭಿಮಾನವಿದೆ ಎಂದು ನಿಮಗೆ ತಿಳಿದರೆ ವಾಕರಿಕೆಯಾಗದಿರದು. ನೈತಿಕತೆ, ಪ್ರಾಮಾಣಿಕತೆ ಹಾಗೂ ಜಾತಿ ಹೆಸರಿನಲ್ಲಿ ಅದೆಷ್ಟೋ ಪತ್ರಕರ್ತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿದ ಕೀರ್ತಿ ನಮ್ಮೂರಿನ ಕೆಲ ಪತ್ರಕರ್ತರಿಗೆ ಸಲ್ಲಬೇಕು. ಹಾಗಾಗಿ ಯಾರ ಬಳಿಯೂ ಕೆಲಸ ಕೇಳುವ ಅಥವಾ ಅದನ್ನು ದಕ್ಕಿಸಿಕೊಳ್ಳುವ ಹೊಸ ಪ್ರಯತ್ನಗಳಿಗೆ ನಾನು ಕೈ ಹಾಕಲೇ ಇಲ್ಲ. ಮೂರು ತಿಂಗಳ ತಲ್ಲಣಗಳನ್ನು ಈ ಹಿಂದೆ ಹಲವು ಬಾರಿ ಅನುಭವಿಸಿದ್ದರಿಂದ ಅದು ಹೊಸ ಅನುಭವ ಎನಿಸಲೇ ಇಲ್ಲ.
ಆದರೆ, ಕೆಲ ಸ್ನೇಹಿತರು ಮಾತ್ರ ದಿನಕ್ಕೊಂದು ಸಲಹೆ, ಸಾಂತ್ವನ ನೀಡುತ್ತಲೇ ಇದ್ದರು. ಕೆಲವರು ಆತ್ಮೀಯತೆಯಿಂದಲೇ ಬೇರೆ ಪತ್ರಿಕೆಗಳಿಗೆ ಸೇರಿಕೊಳ್ಳುವ ಅದಕ್ಕೆ ಬೆಂಬಲ ನೀಡುವ ಮಾತನಾಡಿದರು. ಆದರೆ, ಅದನ್ನು ಕೆಲವರು ಹಾಳುಗೆಡವಲು ನಿಲ್ಲುತ್ತಾರೆ ಎಂಬ ವಿಷಯ ಗೊತ್ತಾದ ತಕ್ಷಣ ನಾನು ಸುಮ್ಮನಾಗಿಬಿಟ್ಟೆ.
ಕಳೆದ ಒಂದು ವಾರದ ಹಿಂದೆ ಕನ್ನಡಪ್ರಭದ ಸಂಪಾದಕ ರಂಗನಾಥ ಅವರು ಪತ್ರಿಕೆ ಬಿಟ್ಟು ಸುವರ್ಣ ಟಿ.ವಿ ಸೇರಿರುವ ವಿಚಾರ ಹಾಗೆಯೇ ಅವರ ಸಮೂಹದಿಂದಲೇ ಸುವರ್ಣ ಕರ್ನಾಟಕ ಎಂಬ ಪತ್ರಿಕೆ ಬರುತ್ತದೆ ಎಂಬ ಸುದ್ದಿ ತಿಳಿದ ಸ್ನೇಹಿತರು ನನಗೆ ಮತ್ತಷ್ಟು ಸಲಹೆ ನೀಡಲು ಮುಂದಾದರು.
ಏಷಿಯನೆಟ್ ಸಮೂಹ, ವಿಜಯಸಂಕೇಶ್ವರ ಹಾಗೂ ರೆಡ್ಡಿ ಸಮೂಹದಿಂದ ಮೂರು ಪತ್ರಿಕೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ನೀನೇನು ಹೆದರಬೇಡ ಎಂದು. ನಿಜವಾಗಿಯು ಅದು ಸಂತೋಷದ ವಿಚಾರವೇ. ಆದರೆ, ಜಾತಿ ಮತ್ತು ಪ್ರಾಮಾಣಿಕರು ಎಂಬ ಸೋಗಿನ ಹೆಸರಿನಲ್ಲಿ ಮೂರು ಪತ್ರಿಕೆಗಳಲ್ಲಿ ಹೊಸ ಹೊಸ ಗುಂಪು ಹುಟ್ಟಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಯಾರು ಸಂಪಾದಕರಾಗುತ್ತಾರೋ ಅವರು ತಮ್ಮ ಜಾತಿಯ ಬಗ್ಗೆ ಒಲವು ಇಟ್ಟುಕೊಳ್ಳವುದಿಲ್ಲ ಎಂಬುದು ಸುಳ್ಳು ಮಾತು. ಬಹುಶಃ ಸುವರ್ಣ ಟಿ.ವಿಯಿಂದ ಹೊರಬಂದಿರುವ ಶಶಿಧರ ಭಟ್ಟರು ಹಿರಿಯ ಪತ್ರಕರ್ತರಾಗಿದ್ದರೂ ಇಂತಹ ತಪ್ಪನ್ನು ಮಾಡಿದ್ದಾರೆ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ. ತಮ್ಮವರಿಗೆ ಅವರು ಮೊದಲ ಆದ್ಯತೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಈಗ ಪ್ರಾರಂಭವಾಗಲಿರುವ ಪತ್ರಿಕೆಗಳಿಗೆ ಯಾರು ಸಂಪಾದಕರಾಗುತ್ತಾರೆ ಎಂಬುದೇ ಕುತೂಹಲದ ವಿಷಯ. ಸಂಪಾದಕರು ನಿರ್ಧಾರವಾದ ನಂತರವಷ್ಟೇ ಅಲ್ಲಿನ ಸಿಬ್ಬಂದಿಯ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಬಿಡಬಹುದು. ಅದನ್ನು ಆಡಳಿತ ಮಂಡಳಿ ನಿರ್ವಹಿಸದೆ ಸಂಪಾದಕರ ತೀರ್ಮಾನಕ್ಕೆ ಬಿಡುವ ಸಾಧ್ಯತೆ ಹೆಚ್ಚಿರುವುದರಿಂದ ಜಾತಿವಾರು ಪತ್ರಕರ್ತರ ಹುಡುಕಾಟ ನಡದೇ ತೀರುತ್ತದೆ.
ಹಾಗಾಗಿ ಜಿಲ್ಲಾವಾರು ಆಯ್ಕೆಯಲ್ಲೂ ಜಾತಿ ಪ್ರಮುಖ ಪಾತ್ರ ವಹಿಸುವುದರಿಂದ ಅದರ ಬಗ್ಗೆ ಒಲವು ಇಟ್ಟುಕೊಳ್ಳುವುದು ಬೇಡ ಎನಿಸಿತು. ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪತ್ರಿಕೆಗಳ ಆಗಮನ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಆಶಿಸೋಣ.
ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ದಲಿತನೊಬ್ಬ ರಾಜ್ಯ ಮಟ್ಟದ ದಿನಪತ್ರಿಕೆಯೊಂದಕ್ಕೆ ಸಂಪಾದಕನಾಗುವ ಆರ್ಹತೆ ಇನ್ನು ಪಡೆದುಕೊಂಡಿಲ್ಲ ಎನ್ನುವುದು ನೋವು ತರುತ್ತದೆ. ಹಾಗೆ ಲೆಕ್ಕ ಹಾಕಿ ನೋಡಿದರೆ, ಈಗ ಇರುವ ಎಲ್ಲ ಪ್ರಮುಖ ದಿನಪತ್ರಿಕೆಗಳ ಸಂಪಾದಕರು ಒಂದೇ ಜಾತಿಗೆ ಸೇರಿದವರು. ಈ ನಾಡಿನ ಬಹುಸಂಖ್ಯಾತರಾಗಿರುವ ದಲಿತರಲ್ಲಿ ಒಬ್ಬ ಪತ್ರಕರ್ತ ಸಂಪಾದಕನಾಗುವ ಅರ್ಹತೆ ಪಡೆದಿಲ್ಲವೇ?. ಇದಕ್ಕೆ ಮತ್ತೆ ಪತ್ರಿಕೋದ್ಯಮದ ಜಾತಿ ಲೆಕ್ಕಚಾರ ಅಡ್ಡಗಾಲಾಗುತ್ತದೆ. ಅವರ ಪ್ರಾಮಾಣಿಕತೆಯ ಹೆಸರಿನಲ್ಲಿ ಜಾತಿ ಸೋಗು ಹಾಕಿಕೊಂಡ ಕುಂಟು ನೆಪಗಳು ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ಕಿವಿಕಚ್ಚುತ್ತವೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ.
ಹ್ಹಾ ಮರೆತಿದ್ದೇ...ಒಂದಿಷ್ಟು ಸ್ನೇಹಿತರು ಸೇರಿಕೊಂಡು ೫ಪಿಎಂ ಎಂಬ ಸಂಜೆ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ. ತೀರಾ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಸುದ್ದಿ ವೈವಿದ್ಯತೆಯಲ್ಲಿ ಒಬ್ಬ ಓದುಗನನ್ನು ಸೆಳೆಯಬಹುದು ಎಂಬ ಸಂಗತಿ ನಮಗೆ ಅರಿವಾಗಿದೆ. ಅದಕ್ಕಾಗಿ ತಯಾರಿ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ೨೫ ಕ್ಕೆ ಪತ್ರಿಕೆ ಮೊದಲ ಸಂಚಿಕೆ ನಿಮ್ಮ ಕೈಯಲ್ಲಿರುತ್ತದೆ.

Friday, August 7, 2009

ಸ್ವಗತ..

ಹುಟ್ಟಿನಿಂದ ಮಂತ್ರದಲ್ಲೆ
ಬೆಳೆದ
ಮಿರುಗುವ
ನನ್ನ ಮೈಗೆ
ಅವನೊಬ್ಬ ಬೇಕಾಗಿದ್ದ..
ಅವನೊಬ್ಬನೇ ಬೇಕಾಗಿದ್ದ..!
ಅವನದೋ
ಮತ್ತೆ ಮತ್ತೆ ಕಾಡುವ
ಮಣ್ಣಿನ ವಾಸನೆ..!
ಊರು ಹೊಡೆದ ಮಂತ್ರಗಳು
ನನ್ನೊಳಗಿನ ಹೆಣ್ತನಕ್ಕೆ
ಜೀವಕೊಡಲಾರವು ಅನ್ನಿಸಿದಾಗಲೆಲ್ಲಾ
ಅವನ ಕಣ್ಣು ನನ್ನ ಕನಸಾಗುತ್ತಿತ್ತು.
ಅವನೊಳಗಿನ ಬೆವರು
ನನ್ನ ಮೈಯೊಳಕ್ಕೆ ಇಳಿದರೆ..
ನಾನು ನಿಜವಾಗಿಯೂ
ಹೆಣ್ಣಾಗುತ್ತಿದ್ದೆ...
ಅಮ್ಮನ ಒಡಲಿನಿಂದ ಬಂದ
ಉಷಾಳಂತೆ..!

ನಾನು ತಪ್ಪೇ ಮಾಡಲಿಲ್ಲ..!?
ಮನುಷ್ಯರಾಗಲೂ ಬಿಡದ
ನಮ್ಮೊಳಗಿನ
ಮಂತ್ರ, ತಂತ್ರ,
ವೇದ, ಪುರಾಣಗಳಿಗೆ
ಲಜ್ಜೆಗಳಿರಲಿಲ್ಲ..ಅದು ಗೊತ್ತೂ ಇರಲಿಲ್ಲ..
ಅಮ್ಮನ ಮೌನ
ಅಪ್ಪನ ಮಂತ್ರದೊಳಗೆ
ಕಳೆದು ಹೋಗುತ್ತಲೇ
ನಾನು ರುದ್ರನ ಕಸುವಿಗೆ
ಕೂಸಾಗಿದ್ದೆ..
ಅವನ ಹಟ್ಟಿಯೊಳಗೆ
ನಾನು ಮತ್ತೆ ಮತ್ತೆ ಹೆಣ್ಣಾಗಿದ್ದೆ..!

ಅವನು ಶರಣನಾದ
ನನ್ನ ರುದ್ರನಾಗಲಿಲ್ಲ..
ಕಸುವಿಗೆ ಕುಲಾವಿ ಹೊಲೆಸಲು
ಹಾತೊರೆದ
ನಮ್ಮ ಪ್ರೇಮದಾಚೆ
ಬಸವಣ್ಣನ ಶರಣತನ
ಅಪ್ಪನ ಮಂತ್ರಗಳು
ನನ್ನ ರುದ್ರನನ್ನು ಕೊಂದು ಹಾಕಿದವು..
ಮತ್ತೆ ನಾನೀಗ
ಬ್ರಾಹ್ಮಣರ ವಿಧುವೆ...
ಅಲ್ಲಲ್ಲ
ಅವರ ತಂತ್ರಗಳಿಗೆ
ತಲೆ ಕೊಟ್ಟ
ರುದ್ರನ ಪತ್ನಿ...!

Thursday, August 6, 2009

ಪತ್ರಕರ್ತರು ಹಾಗೂ ಸಂಕ್ರಾಂತಿ


"ಧರ್ಮ,ಧರ್ಮ..! ಅದಕ್ಕೆ ಯಾವಾಗಲೂ ಯಾವುದಾದರೂ ಒಂದು ಕಂಳಕ ಇದ್ದೇ ಇರುತ್ತದೆ. ಮನುಷ್ಯರಿಗೇನಾಗಿದೆ ಹೇಳಿ?"
-ಬಿಜ್ಜಳ
ಇಂತಹ ಮಾತೊಂದು ಪಿ.ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಬರುತ್ತದೆ. ವಾಸ್ತವದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಇಂತಹ ಮನೋಭಾವದಿಂದ ಅವರು ಆರಿಸಿದ ಪ್ರಜೆಗಳ ಬಗ್ಗೆ ಈ ಮಟ್ಟಿನ ಕಾಳಜಿ ವಹಿಸಿದ್ದು ಕಾಣೆ.
ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಬೇಕಾಗಿ ಬಂದದ್ದೆ ವಿಶೇಷ ಪ್ರಸಂಗ. ಮೈಸೂರು ಜಿಲ್ಲಾ ಪತ್ರಕರ್ತರು ಒಂದು ಹೊಸ ಸಾಹಸಕ್ಕಾಗಿ ಮುನ್ನಡಿಯಿಟ್ಟಿದ್ದಾರೆ. ಸಂಘದ ಸದಸ್ಯರೆಲ್ಲಾ ಪತ್ರಿಕಾ ದಿನಾಚರಣೆಯ ಅಂಗವಾಗಿ ಲಂಕೇಶರ "ಸಂಕ್ರಾಂತಿ" ನಾಟಕವನ್ನು ನಟ, ರಂಗ ನಿರ್ದೇಶಕ ಮಂಡ್ಯ ರಮೇಶ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ತಿಂಗಳ ರಂಗತರಬೇತಿ ಶಿಬಿರದಲ್ಲಿ ಸತತವಾಗಿ ಭಾಗವಹಿಸುವ ಮೂಲಕ ನಾಟಕ ತಾಲೀಮು ನಡೆಸಿ ತಮ್ಮ ಹೊಸ ಪ್ರಯತ್ನಕ್ಕೆ ಅಣಿಯಾಗಿದ್ದಾರೆ.
ಇಷ್ಟೇ ಆಗಿದ್ದರೇ ಇಲ್ಲಿ ಇದನ್ನು ಹೇಳಬೇಕಾಗಿದ್ದಿಲ್ಲ. ಆದರೆ, ಮೂರು ದಶಕಗಳ ನಂತರವೂ ಲಂಕೇಶ ಅವರು ಬರೆದ ಸಂಕ್ರಾಂತಿ ಅದೆಷ್ಟು ಪ್ರಸ್ತುತವಾಗಿದೆ ಎಂಬುದರ ಬಗ್ಗೆ ನನಗೆ ಕೊರೆಯುತ್ತಿರುವ ಅಭಿಪ್ರಾಯಗಳು.
೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ಕ್ರಾಂತಿ ಹೇಗೆ ಜಾತಿ ಪರದೆಯನ್ನು ಮೀರುವ ಯತ್ನ ಮಾಡುತ್ತದೆ ಹಾಗೆಯೇ ಅದಕ್ಕೆ ಬಲಿಷ್ಠ ಜನಾಂಗಗಳು ಹೇಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಚಿತ್ರಣದ ಸುತ್ತ ತೆರೆದುಕೊಳ್ಳುವ ನಾಟಕ ನಿಜವಾಗಿಯೂ ನಮ್ಮನ್ನು ಚಿಂತನೆ ಹಚ್ಚಬಲ್ಲದು ಎನಿಸುತ್ತದೆ. ಇಡೀ ನಾಟಕವನ್ನು ಅವರಿಸಿಕೊಳ್ಳುವ ಬಸವಣ್ಣ ಹಾಗೂ ಅದನ್ನು ನುಂಗುವ ಬಿಜ್ಜಳರ ಪಾತ್ರಗಳು ವಿಶೇಷವೆನಿಸುತ್ತದೆ. ಬಹಳ ವರ್ಷಗಳ ಅನಂತರ ಸಂಕ್ರಾಂತಿ ನಾಟಕವನ್ನು ಮತ್ತೆ ಓದಿದಾದಗ ಕಾಳಜಿಯುಳ್ಳ ಮನುಷ್ಯನೊಬ್ಬನಿಗೆ ಅನಿಸುವುದು ಬಿಜ್ಜಳನ ಒಂದು ಮುಖದ ಅಧಿಕಾರಸ್ಥರು ಇಲ್ಲೆ ಇದ್ದಾರಲ್ಲ ಎಂದು. ವೈದಿಕರನ್ನು ಹಾಗೂ ದಲಿತರನ್ನು (ಶರಣರನ್ನು) ಎದುರು ಹಾಕಿಕೊಳ್ಳದೇ ಅತ್ಯಂತ ಜಾಣ ರಾಜನೀತಿಯಿಂದ ಬಸವಣ್ಣನವರ ಕ್ರಾಂತಿಯ ಬಗ್ಗೆ ವ್ಯಂಗ್ಯವಾಡುತ್ತಲೇ ತನ್ನ ಅಧಿಕಾರವನ್ನು ಚಲಾಯಿಸುವ ಬಿಜ್ಜಳ ಒಮ್ಮೊಮ್ಮೆ ಬಸವಣ್ಣನವರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಂತೆ ಕಾಣುತ್ತಾನೆ.
ನಾಟಕ ಆರಂಭವಾಗುವುದೇ ಹೊಲೆಯರ ಹಟ್ಟಿಯಿಂದ ಮತ್ತು ಕೊನೆಯಾಗುವುದು ಹೊಲೆಯರ ಹಟ್ಟಿಯಲ್ಲಿ. ಆದರೆ, ಇವೆರಡರ ನಡುವೆ ಬರುವ ರುದ್ರ ಮತ್ತು ಉಷಾ ಎಂಬ ಪಾತ್ರಗಳು ಇಡೀ ಸಂಕ್ರಾಂತಿಯ ಮುನ್ನೆಡಸಲು ದಾರಗಳಾಗುತ್ತವೆ. ಬ್ರಾಹ್ಮಣರ ಹುಡುಗಿ ಉಷಾಳನ್ನು ಪ್ರೀತಿಸುವ ದಲಿತ ರುದ್ರ ಮತ್ತು ಅವರ ಪ್ರೇಮ ೧೨ ನೇ ಶತಮಾನದಲ್ಲಿ ಇನ್ನೆಂತಹ ಜಾತಿಯ ನೆಲೆಗಟ್ಟನ್ನು ಹಾಗೂ ಅಂತರವನ್ನು ಹುಟ್ಟುಹಾಕಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ. ಉಷಾಳ ಮೂಲಕ ಬಾಹ್ಮಣರ ಬಂಡವಾಳವಿಲ್ಲದ ಬಡಾಯಿಗಿಂತ ಬಲಿಷ್ಟವಾದ ದಲಿತ ರುದ್ರನ ಮನೆಯಂಗಳ ಆಕೆಗೆ ಹೆಚ್ಚು ಆಪ್ತ ಎನ್ನುವಂತೆ ಕಾಣುವುದು ಮನುಷ್ಯ ಸಹಜ ಕ್ರಿಯೆ ಎನಿಸುತ್ತದೆ. ಏಕೆಂದರೆ ವೇದ ಪುರಾಣಗಳಿಗಿಂತ ವಾಸ್ತವದ ಬದುಕು ಹೆಚ್ಚು ಅರ್ಥ ಪೂರ್ಣ ಎನ್ನುವ ಆಕೆಯ ವಾದ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಅಧಿಕಾರಸ್ಥರ ಜಾಣ ನೀತಿಗಳು ಎಂತಹ ಪ್ರೀತಿ, ಪ್ರೇಮವನ್ನು ಬಲಿಕೊಡುವುದು ಎನ್ನುವುದಕ್ಕೆ ರುದ್ರನ ತಲೆದಂಡ ಸಾಕ್ಷಿಯಾಗುತ್ತದೆ. ಅವನು ಕೇವಲ ಹೊಲೆಯ ಎಂಬ ಕಾರಣಕ್ಕಾಗಿಯಲ್ಲದಿದ್ದರೂ ಅದು ನಿಜವಾದ ಶರಣ ಕ್ರಾಂತಿಯನ್ನು ಬಲಿಕೊಡಲು ಬ್ರಾಹ್ಮಣರು ಬಿಜ್ಜಳನ ಮೇಲೆ ಹೇರಿದ ತಂತ್ರವಾಗಿರಬಹುದು, ಅಥವಾ ಅತ್ಯಂತ ವೇಗವಾಗಿ ಜನಪ್ರಿಯನಾಗುತ್ತಿರುವ ಬಸವಣ್ಣನವರ ಬಗ್ಗೆ ಬಿಜ್ಜಳ ರಾಜನಿಗೆ ಇದ್ದ ಅಧಿಕಾರದ ಭಯ ಕಾರಣವಾಗಬಹುದು.
ಸಂಕ್ರಾಂತಿಯಲ್ಲಿ ಕಾಣುವ ಬಿಜ್ಜಳನ ರಾಜನೀತಿಯ ತಂತ್ರಗಳನ್ನು ಇಂದಿನ ರಾಜಕಾರಣಿಗಳು ಮುಂದುವರಿಸುತ್ತಿದ್ದಾರೆ ಎನ್ನುವುದು ಸರ್ವಿವಿಧಿತ.
ಶರಣ ಎನ್ನುವುದು ಎಲ್ಲ ಜಾತಿಗಳನ್ನು ಒಳಗೊಂಡ ಒಂದು ಸಾಂಸ್ಕೃತಿಕ ಪರಂಪರೆ ಎಂಬುದನ್ನು ನಾಟಕ ಧ್ವನಿಸುತ್ತದೆಯಾದರೂ, ಅದನ್ನು ಇಂದಿನವರು ಜಾತಿಯನ್ನಾಗಿಸಿರುವುದು ವಿಚಿತ್ರವೆನಿಸುತ್ತದೆ.
ಸಂಕ್ರಾಂತಿ ನಾಟಕ ಮಾಡಲು ಹೊರಾಟಾಗ ನಮ್ಮ ಪರಿಸರದಲ್ಲಿಯೇ ಇರುವ ಕೆಲವರು ನಾಟಕವನ್ನು ಔಟ್‌ಡೇಟೆಡ್ ಎಂದು ಜರಿದದ್ದು ಉಂಟು. ಆದರೆ, ನಾಟಕದಲ್ಲಿ ಧ್ವನಿಸುವ ಜಾತಿಯ ಅಡ್ಡ ಮಾತುಗಳು, ಬಿಜ್ಜಳನ ರಾಜನೀತಿಯ ತಂತ್ರಗಳು, ರುದ್ರನಂತವರ ತಲೆದಂಡಗಳು ಇಂದಿಗೂ ನಡೆಯುತ್ತಿವೆ. ಬಲಿಷ್ಠ ಕೋಮುಗಳ ಒತ್ತಡಕ್ಕೆ ಸರಕಾರ ಶೋಷಿತರ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಲೇ ಇದೆ. ಅದು ಔಟ್‌ಡೇಟೆಡ್ ಹೇಗಾದಿತು. ಅಂದು ಬಿಜ್ಜಳ ಹಾಗೂ ಬಸವಣ್ಣ ಅಪ್ತರಾಗಿದ್ದರೂ, ಬಿಜ್ಜಳ ಮೇಲೆ ಬಸವಣ್ಣನವರಿಗಿಂತ ಪ್ರಭಾವ ಬೀರುವಷ್ಟು ವೈದಿಕ ಸಮುದಾಯ ಅವರ ಸುತ್ತ ಇತ್ತು. ಅಂತಹ ವ್ಯವಸ್ಥೆ ಇಂದಿನ ಸರಕಾರದ ಮುಖ್ಯಮಂತ್ರಿಯ ಸುತ್ತಲೂ ಇದೆ. ಅವರ ಜಾತಿಯ ಮಂದಿ ಮಾಗಧರೇ ಅಲ್ಲಿ ತುಂಬಿ ತುಳಿಕಿದ್ದಾರೆ. ದುರಂತವೆಂದರೆ " ಅವನಾರವ ಅವನಾರವ ಎನಬೇಡ, ಅವ ನಮ್ಮವ ಅವ ನಮ್ಮನ ಎನ್ನಿರಯ್ಯ " ಎಂದು ಹೇಳಿ ಶರಣ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರಕಾರ ಬಿಜ್ಜಳನಂತೆ ರುದ್ರರನ್ನು ಬಲಿಕೊಡುತ್ತಲೇ ಇದೆ. ಇದು ವಿಪರ್ಯಾಸ.
"ಇಂದು ಹೋದಿತು ಕತ್ತಲು ನಾಳೆ ಬೆಳಕು ಹರಿದು ಎಲ್ಲಾ ಬೆಳ್ಳಾಂಬೆಳಗಾಗಿ ಎಲ್ಲ ನೋಡೆವು ಅಂತ ಕಾಯ್ತ ಇದೀವಿ" ಎಂದು ರುದ್ರ ಉಷಾಳಿಗೆ ಹೇಳುತ್ತಾನೆ. ದಲಿತರಿಗೆ ಅಂತಹ ಕ್ಷಣವಿನ್ನೂ ಪೂರ್ತಿಯಾಗಿ ಬಂದಿಲ್ಲ ಎನ್ನುವುದು ಸತ್ಯ ದಲಿತರನ್ನು ಶರಣರನ್ನಾಗಿಸಿ ಅವರ ಬದಕಿನ ಪರಂಪರೆಗೆ ಹೊಸ ಅರ್ಥಕೊಡಲು ಹೊರಟ ಬಸವಣ್ಣ, ಬಿಜ್ಜಳ ರಾಜನೀತಿಯಲ್ಲಿ ಸಿಲುಕಿ ರುದ್ರನ ತಲೆದಂಡವಾಗುವಾಗ ಮೌನವಾಗುತ್ತಾನೆ. ಇದು ಬಸವಣ್ಣನವರ ಅಸಹಾಯಕತೆಯೇ ಎಂಬ ಅನುಮಾನ ಮೂಡುತ್ತದೆ.
ಸದಾ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಯಾಂತ್ರಿಕವಾಗಿ ಬಿಡುವ ಪತ್ರಕರ್ತರನ್ನು ಇಂತಹ ಹೊಸ ಪ್ರಯತ್ನಕ್ಕೆ ಅಣಿಮಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿನವೂ ಬಿಜ್ಜಳರಂತಹ ರಾಜಕಾರಣಿಗಳ ತಂತ್ರಗಳ ಬಗ್ಗೆ ಪುಟಗಟ್ಟಲೇ ಸುದ್ದಿ ಬರೆಯುವ ಪತ್ರಕರ್ತರಿಗೆ ಸಂಕ್ರಾಂತಿ ನಾಟಕ ಬಸವಣ್ಣನ ಕ್ರಾಂತಿ ಹಾಗೂ ರುದ್ರನ ತಲೆದಂಡದಂತಹ ಮಾನವೀಯ ಪ್ರಕರಣಗಳು ಆ ತಂತ್ರದಲ್ಲಿ ಹೇಗೆ ಬಲಿಯಾಗುತ್ತವೆ ಎನ್ನುವ ಹೊಸ ಪಾಠವನ್ನು ಹೇಳಿಕೊಟ್ಟಿದೆ ಎನ್ನುವುದರಲ್ಲಿ ಅತಿಶೋಕ್ತಿಯಿಲ್ಲ.