
ನೀವು, ಪತ್ರಕರ್ತರಿಗೆ ಬೇರೆ ಕೆಲಸ ಇಲ್ಲವೇ? ಅಂಥ ವ್ಯಕ್ತಿಗಳನ್ನು ನೀವು ಸಂದರ್ಶನ ಮಾಡಬೇಕೆನ್ನುವ ಇರಾದೆ ಯಾತಕ್ಕೆ?
ಪಾಕಿಸ್ತಾನದ ಅಂತರಿಕ ಒಳಾಡಳಿತ ಸಚಿವ ಮುಖಗಂಟಿಕ್ಕಿ ಪ್ರಶ್ನೆ ಮಾಡುತ್ತಾನೆ.
ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದ ಆತನ ಪ್ರಶ್ನೆಗೆ ಆಕೆ ಗಂಡನನ್ನು ಕಳೆದುಕೊಂಡ ನೋವಿನಲ್ಲೂ ಉರಿದು ಬೀಳುತ್ತಾಳೆ.
ಹೌದು, ಪತ್ರಕರ್ತನೊಬ್ಬ ಈ ನಾಗರಿಕ ಸಮಾಜದ ಸ್ವಾಸ್ಥವನ್ನು ಕಾಪಾಡುವ ಸಲುವಾಗಿ ಅಂತಹ ಸಾಹಸಗಳಿಗೆ ತೊಡಗಿಸಿಕೊಳ್ಳಲೇ ಬೇಕಾಗುತ್ತದೆ. ಅದೇ ನಮ್ಮ ಕೆಲಸ
ಸ್ವಲ್ಪ ಕಟುವಾಗಿ ಹೇಳುತ್ತಾಳೆ.
ನೋಡಿ, ಇದು ಭಾರತದ ಕೆಲಸ. ನಿಮ್ಮ ಗಂಡ ಭಾರತದ ಗುಪ್ತಚರ ಪಡೆಗೆ ಪಾಕಿಸ್ತಾನದ ಕೆಲವು ಸಂಗತಿಗಳನ್ನು ರವಾನೆ ಮಾಡುತ್ತಿದ್ದಾನೆ ಎಂಬ ಅನುಮಾನವಿದೆ. ಅದನ್ನು ಮೊದಲು ಪರಿಹರಿಸಿಕೊಳ್ಳಬೇಕಾಗಿದೆ.
ಮಂತ್ರಿ ಟಿಪಿಕಲ್ ರಾಜಕಾರಣಿಯ ವರಸೆ ಪ್ರದರ್ಶಿಸುತ್ತಾನೆ. ಕೆಲಸವಿಲ್ಲದಿದ್ದರೂ, ಆಕೆಯೊಂದಿಗೆ ಮಾತನಾಡಲು ಸಮಯವಿಲ್ಲವೆಂದು ಎದ್ದು ಹೊರಡುತ್ತಾನೆ. ಒಳಗೊಳಗೆ ಅಮೆರಿಕನ್ನರಿನ್ನರಿಗೆ ನಾನು ತಕ್ಕ ಪಾಠ ಕಲಿಸುತ್ತೇನೆ ಎಂಬ ಖುಷಿಯಲ್ಲಿ.
ಎರಡೇ ನಿಮಿಷದಲ್ಲಿ ಮುಗಿದು ಹೋಗುವ ಈ ಸನ್ನಿವೇಶ ಪಾಕಿಸ್ತಾನದ ಆಡಳಿತದ ಬಗ್ಗೆ ಇರುವ ನಿಮ್ಮ ಅಭಿಪ್ರಾಯಗಳನ್ನು ದೃಢೀಕರಿಸಿ ಬಿಡುತ್ತದೆ.
ಅಂದ ಹಾಗೆ ಸರಿದ ಹೋದ ಫೆ.೨೨ ಕ್ಕೆ ಆಕೆಯ ಗಂಡ ಪಾಕಿಸ್ತಾನಿ ಮೂಲಭೂತವಾದಿಗಳ ಕೈಯಲ್ಲಿ ಹತನಾಗಿ ೬ ವರ್ಷಗಳು ಸಂದಿತು. ಏನೂ ಅರಿಯದೆ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಅತನ ಕುರಿತು ಆಕೆ ಬರೆದ ಪುಸ್ತಕ ಎ ಮೈಟಿ ಹಾರ್ಟ್ ಚಲನಚಿತ್ರವಾಗಿದೆ.
ಆತ ಅಮೆರಿಕದ ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಡೆನಿಯಲ್ ಪರ್ಲ್.
***
ರಿಚರ್ಡ್ ಗೇರ್ ಎಂಬ ಶೂ ಬಾಂಬರ್ ಹಾಗೂ ಆತನ ಸಂಪರ್ಕ ಹೊಂದಿದ ಶೇಖ್ ಮುಬಾರಕ್ ಅಲಿ ಗಿಲಾನಿ ಎಂಬ ಮೂಲಭೂತವಾದಿ ಗುಂಪಿನ ಮುಖಂಡನನ್ನು ಭೇಟಿ ಮಾಡಲು ಜ.೨೩ ೨೦೦೨ ರಂದು ಡೆನಿಯಲ್ ಪರ್ಲ್ ಹೊರಡುತ್ತಾನೆ. ಆತನಿಗೆ ಭೇಟಿ ಮಾಡಿಸುವುದಾಗಿ ಮಸೂದ್ ಎಂಬ ವ್ಯಕ್ತಿಯು ಮುಂದೆ ಬಂದಿರುತ್ತಾನೆ. ಪ್ರಜಾಪ್ರಭುತ್ವವೇ ಸತ್ತು ಹೋಗಿರುವ ಪಾಕಿಸ್ತಾನದಲ್ಲಿ ಪತ್ರಕರ್ತನೊಬ್ಬ ಮೂಲಭೂತವಾದಿಗಳ ಇನ್ನೊಂದು ವಾದನ್ನು ಜಗತ್ತಿಗೆ ತೆರದಿಡಲು ಮಾಡುವ ಪ್ರಯತ್ನ ಇದು ಎಂದು ಪರ್ಲ್ ನಂಬಿದ್ದ. ಅದಕ್ಕಾಗಿ ಏಳು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಸರಿಯಾದ ಸುಳಿವನ್ನು ನೀಡದೇ ಬೆಳಂಬೆಳ್ಳಗ್ಗೆ ಹೊರಟು ನಿಂತ. ಅಂದು ಸಂಜೆಯವರೆಗೆ ಪತ್ನಿಯ ಸೌಖ್ಯವನ್ನು ಮೊಬೈಲ್ನಲ್ಲಿ ವಿಚಾರಿಸುತ್ತಲೇ ಇರುತ್ತಾನೆ. ಆದರೆ, ಸಂಜೆ ಏಳು ಗಂಟೆಯಾದ ಮೇಲೆ ಅತನ ಮೊಬೈಲ್ ಸಂಪರ್ಕ ಕಳೆದುಕೊಳ್ಳುತ್ತದೆ.
ಗಂಡ ಮುಖ್ಯವಾದ ಕೆಲಸಕ್ಕೆ ಹೋಗಿದ್ದಾನೆ. ಬರುತ್ತಾನೆ ಎಂಬ ಆಶಾವಾದದಲ್ಲಿಯೇ ಆಕೆ ಆ ರಾತ್ರಿ ಕಳೆಯುತ್ತಾಳೆ. ಆದರೆ, ಬೆಳಗ್ಗೆಯ ಹೊತ್ತಿಗೆ ಆತ ಯಾವುದೋ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಆಕೆಗೆ ಬಲವಾಗಿ ಅನಿಸತೊಡಗುತ್ತದೆ. ತುಂಬು ಗರ್ಭಿಣಿಯ ಮೊಗದಲ್ಲಿ ನೂರಾರು ಯೋಚನೆಗಳು ಬಂದು ಹೋಗುತ್ತದೆ. ಎರಡನೇ ದಿನವೂ ಆತನ ಬರುವಿಕೆಗಾಗಿ ಕಾಯುತ್ತಾಳೆ. ಇನ್ನೂ ಕಾಯುವುದು ಸಾಧ್ಯವೇ ಇಲ್ಲ ಎಂದಾಗ ತನ್ನ ಗೆಳತಿಗೆ ಕಷ್ಟ ಹೇಳುತ್ತಾಳೆ. ಅಲ್ಲಿಂದ ಆಕೆಯ ೩೦ ದಿನಗಳ ನೋವಿನ ಸರಮಾಲೆ ಆರಂಭವಾಗುತ್ತದೆ. ಗೆಳತಿ ಅಮೆರಿಕ ದೂತವಾಸಕ್ಕೆ ವಿಷಯ ಮುಟ್ಟಿಸುತ್ತಾಳೆ. ಅಮೆರಿಕ ದೂತವಾಸ ಪಾಕಿಸ್ತಾನದ ಸಿಐಡಿಗೆ ವಿಚಾರ ಹೇಳುತ್ತದೆ. ಇಡೀ ತನಿಖಾ ತಂಡವೇ ಪರ್ಲ್ ಮನೆಯಲ್ಲಿ ಬೀಡು ಬಿಡುತ್ತದೆ. ಗಂಡ ಕಾಣೆಯಾಗಿರುವ ನೋವಿನ ನಡುವೆಯೂ ಪಾಕಿಸ್ತಾನಿ ಪೊಲೀಸರಿಗೆ ಸಹಕರಿಸುವುದು ಅವಳಿಗೆ ಅನಿವಾರ್ಯವಾಗುತ್ತದೆ. ಆ ಗರ್ಭಿಣಿ ಹೆಣ್ಣು ಮಗಳ ತಾಳ್ಮೆಯೇ ಮೂರ್ತಿವೆತ್ತಂತೆ ವರ್ತಿಸುತ್ತಾಳೆ.
***
ವಿಷಯ ಇನ್ನಷ್ಟು ಕಗ್ಗಂಟಾಗತೊಡಗುತ್ತದೆ. ಆತನಿಗೆ ಸಂದರ್ಶನ ಕೊಡಿಸುವುದಾಗಿ ಹೇಳಿದವರ್ಯಾರು ಎಂಬುದನ್ನು ಪತ್ತೆ ಹಚ್ಚಲು ಪಾಕಿಸ್ತಾನಿ ಪೊಲೀಸರು ಮುಂದಾಗುತ್ತಾರೆ. ಆದರೂ, ಎಫ್ಬಿಐ ಅಧಿಕಾರಿಗಳೊಂದಿಗೆ ಅವರು ಸಹಕರಿಸಲು ವಿಳಂಬ ಮಾಡತೊಡಗುತ್ತಾರೆ. ಇಡೀ ವ್ಯವಸ್ಥೆಯ ಬಗ್ಗೆ ಪರ್ಲ್ ಪತ್ನಿ ಮರೀನಾ ನಂಬಿಕೆ ಕಳೆದುಕೊಳ್ಳ ತೊಡಗುತ್ತಾಳೆ. ಆಕೆ ಗರ್ಭಿಣಿ, ಮಾನಸಿಕವಾಗಿ ಕುಗ್ಗಬಾರದು ಎಂಬ ಕಾರಣಕ್ಕಾಗಿ ಅಮೆರಿಕ ದೂತವಾಸದ ಅಧಿಕಾರಿಗಳು ಸಮಾಧಾನ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಒಮ್ಮೊಮ್ಮೆ ಆಕೆ ಬಿಕ್ಕಳಿಸುತ್ತಾಳೆ. ಆದರೆ, ಅವರೆದುರಿಗೆ ಧೈರ್ಯ ಕಳೆದುಕೊಳ್ಳದಂತೆ ವರ್ತಿಸುತ್ತಾಳೆ. ಅದೊಂದು ವಿಚಿತ್ರ ಸನ್ನಿವೇಶ. ಆ ಸಂದರ್ಭದಲ್ಲಿಯೆ ಅಂದರೆ ಜ.೨೭ ರಂದು ಈ-ಮೇಲ್ವೊಂದು ಪತ್ರಿಕಾ ಕಚೇರಿಗಳಿಗೆ ಹಾಗೂ ಆಕೆಗೆ ತಲುಪುತ್ತದೆ. ಪಾಕಿಸ್ತಾನಿ ಸ್ವಾಯತ್ತತಾ ರಾಷ್ಟ್ರೀಯ ಚಳವಳಿ ಸಂಘಟನೆಯ ಹೆಸರಿನಲ್ಲಿ ಪರ್ಲ್ ಅಮೆರಿದ ಗುಪ್ತಚರ ಸಂಸ್ಥೆ ಸಿಐಎ ಏಜೆಂಟ್ ಎಂದು ಅಪಾದಿಸಲಾಗಿರುತ್ತದೆ. ಹಾಗೆಯೇ ಆತನಿಗೆ ಕೈ ಕೊಳ ತೊಡಿಸಿರುವ ಕೆಲವು ಚಿತ್ರಗಳನ್ನು ಕಳುಹಿಸಿರುತ್ತಾರೆ. ಇದನ್ನು ಕಂಡ ಪರ್ಲ್ ಪತ್ನಿ ಮರೀನಾ ತನ್ನ ಗಂಡ ಇನ್ನೂ ಬದುಕಿರುವ ಬಗ್ಗೆ ನಂಬಿಕೆ ಹೊಂದುತ್ತಾಳೆ. ಆದರೆ, ಅದೇ ಈ ಮೇಲ್ನಲ್ಲಿ ಕ್ಯೂಬಾದಲ್ಲಿರುವ ಅಮೆರಿಕ ಸೇನಾ ನೆಲೆಯಲ್ಲಿ ಬಂಧಿಸಿಟ್ಟಿರುವ ಅಲ್ ಖೈದಾ ಹಾಗೂ ಇತರ ಸಂಘಟನೆಯ ಉಗ್ರರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತಾಕೀತು ಮಾಡಿರುವುದು ಪ್ರಮುಖ ಅಂಶವಾಗಿರುತ್ತದೆ. ಇಲ್ಲದಿದ್ದರೆ ಪರ್ಲ್ನನ್ನು ಕೊಲ್ಲುವುದಾಗಿಯೂ ಎಚ್ಚರಿಸಲಾಗಿರುತ್ತದೆ. ಇದು ಅಮೆರಿಕ ಹಾಗೂ ಪಾಕಿಸ್ತಾನ ಆಡಳಿತವನ್ನು ಇನ್ನಷ್ಟು ಮುಜುಗರಕ್ಕೆ ಈಡು ಮಾಡುತ್ತದೆ. ಅಲ್ಲಿಯವರೆಗೆ ಪರ್ಲ್ ಮನೆಯಲ್ಲಿ ಬೇಯುತ್ತಿದ್ದ ಬೇಗೆ ಇಡೀ ಜಗತ್ತಿಗೆ ಬಹಿರಂಗವಾಗುತ್ತದೆ. ಅಲ್ಲಿಂದ ಪೊಲೀಸರ ಬೇಟೆಯೂ ಬಿರುಸಾಗುತ್ತದೆ.
***
ಜನವರಿ ೨೭ ರ ಅನಂತರ ಸತತವಾಗಿ ಅಮೆರಿಕ ಹಾಗೂ ಪಾಕಿಸ್ತಾನ ಆಡಳಿತಗಳು ಪರ್ಲ್ ಪತ್ತೆಗಾಗಿ ಪ್ರಯತ್ನ ಆರಂಭಿಸುತ್ತಾರೆ. ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆಯ ಸಂಪಾದಕರೂ ಆತ ಸಿಐಎ ಏಜೆಂಟ್ ಅಲ್ಲ ಎಂಬುದನ್ನು ಪದೇ ಪದೇ ದೃಢೀಕರಿಸುತ್ತಾರೆ. ಇದ್ಯಾವುದಕ್ಕೂ ಉಗ್ರರು ಬಗ್ಗವುದಿಲ್ಲ. ಫೆ.೧ ರಂದು ಇನ್ನೊಂದು ಈ ಮೇಲ್ ಬರುತ್ತದೆ. ೨೪ ಗಂಟೆಯೊಳಗೆ ತಮ್ಮ ಬೇಡಿಕೆ ಈಡೇರಿಸಬೇಕು ಹಾಗೂ ೨ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನೀಡಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಆದರೆ, ಅದರ ಬಗ್ಗೆ ಚರ್ಚೆ ನಡೆಸಬೇಕು ಎನ್ನುವುದರೊಳಗೆ ಅಮೆರಿಕದ ಸಿಎನ್ಎನ್ ಹಾಗೂ ಫಾಕ್ಸ್ ಸುದ್ದಿ ಸಂಸ್ಥೆಗಳಿಗೆ ಮತ್ತೊಂದು ಮೇಲ್ ಬರುತ್ತದೆ. ಪರ್ಲ್ನನ್ನು ಕೊಲೆ ಮಾಡಲಾಗಿದೆ ಎಂಬುದು ಈ ಮೇಲ್ನ ತಿರುಳು. ಅಲ್ಲಿಂದ ಕಥೆ ಇನ್ನೊಂದು ತಿರುವು ಪಡೆದುಕೊಳ್ಳತ್ತದೆ. ಅಲ್ಲಿಯವರೆಗೆ ಪರ್ಲ್ ಪತ್ನಿ ಮರೀನಾ ತನ್ನ ಗಂಡನನ್ನು ಕೊಲೆ ಮಾಡಿರುವುದನ್ನು ನಂಬುವುದೇ ಇಲ್ಲ. ಆತನನ್ನು ಬಿಡುಗಡೆ ಮಾಡುವಂತೆ ಆಕೆ ಅಪಹರಣಕಾರರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಕೊನೆಗೂ ಅಪಹರಣದ ಮುಖ್ಯ ಸೂತ್ರಧಾರಿ ಅಹಮದ್ ಓಮರ್ ಸೀದ್ ಶೇಖ್ನನ್ನು ಫೆ.೧೨ ರಂದು ಬಂಧಿಸಿ, ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಪರ್ಲ್ನನ್ನು ಕರಾಚಿಯಲ್ಲಿಯೇ ಇಟ್ಟಿರುವ ಬಗ್ಗೆ ಆತ ಸುಳಿವು ನೀಡುತ್ತಾನೆ. ಫೆ.೧೪ ರಂದು ಆತನನ್ನು ಕೋರ್ಟ್ಗೆ ಹಾಜರು ಪಡಿಸಿದಾಗ ಪರ್ಲ್ನನ್ನು ಕೊಲೆ ಮಾಡಿರುವ ಬಗ್ಗೆ ಆತ ಹೇಳಿಕೆ ನೀಡುತ್ತಾನೆ. ಫೆ.೨೨ ರಂದು ಪರ್ಲ್ನನ್ನು ಉಗ್ರರು ಕೊಲೆ ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡ ಕ್ಯಾಸೆಟ್ವೊಂದು ಪಾಕಿಸ್ತಾನಿ ಪೊಲೀಸರ ಕೈಗೆ ಸೇರುತ್ತದೆ. ಅಲ್ಲಿಗೆ ಅಮೆರಿಕ ಪರ್ಲ್ ಸಾವಿನ ಬಗ್ಗೆ ಅಧಿಕೃತವಾದ ಘೋಷಣೆ ಮಾಡುತ್ತದೆ.
***
ಆತ ಮತ್ತು ನನ್ನ ಸಿದ್ದಾಂತಗಳು ಒಂದೇ ತೆರನಾಗಿದ್ದವು. ಅದಕ್ಕಾಗಿ ಪರಸ್ಪರ ಪ್ರೀತಿ ಮಾಡಿ ಮದುವೆಯಾದೆವು. ಜೊತೆಗೆ ನಮ್ಮ ಇಡೀ ಜೀವನವನ್ನು ವಿವಿಧ ನಾಗರಿಕತೆಗಳ ನಡುವಿನ ಕೊಂಡಿಯನ್ನು ಜೋಡಿಸುವುದಕ್ಕಾಗಿಯೇ ಮುಂದುವರೆಸಿದ್ದೆವು
ಹೀಗೆಂದು ಪರ್ಲ್ ಪತ್ನಿ ಮರೀನಾ ಆನಂತರ ಸಿಎನ್ಎನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಾಳೆ. ತುಂಬು ಗರ್ಭಿಣಿಯೊಬ್ಬಳು ಆ ಒಂದು ತಿಂಗಳು ತನ್ನ ಗಂಡನನ್ನು ಕಳೆದುಕೊಂಡು ಅನುಭವಿಸಿರಬಹುದಾದ ಸಂಕಟ, ನೋವು, ದುಖಃ ಬಹುಶಃ ಇವುಗಳನ್ನು ನಾವ್ಯಾರು ಅಂದಾಜು ಮಾಡಲು ಸಾಧ್ಯವೇ ಇಲ್ಲ. ಅಷ್ಟೂ ದಿನಗಳು ಆಕೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿರುತ್ತಾಳೆ. ಹುಟ್ಟಲಿರುವ ತನ್ನ ಮಗುವಿಗಾಗಿಯಾದರೂ, ಉಗ್ರರು ಪರ್ಲ್ನನ್ನು ಬಿಡುಗಡೆ ಮಾಡುತ್ತಾರೆ ಎಂಬ ಆಚಲವಾದ ನಂಬಿಕೆ ಇಟ್ಟುಕೊಂಡಿರುತ್ತಾಳೆ. ಆದರೆ, ಅದು ಕೊನೆಗೂ ಹುಸಿಯಾಗುತ್ತದೆ.
***
ಎ ಮೈಟಿ ಹಾರ್ಟ್ ಚಿತ್ರವನ್ನು ಮಿಖೆಲ್ ವಿಂಟರ್ಬಾಟಮ್ ಎಂಬಾತ ನಿರ್ದೇಶನ ಮಾಡಿದ್ದಾನೆ. ಆ ಚಿತ್ರದಲ್ಲಿ ಆಂಜಲಿನ ಜೋಲಿ ಪರ್ಲ್ ಹೆಂಡತಿ ಮರೀನಾಳ ಪಾತ್ರ ಮಾಡಿದ್ದಾಳೆ. ನಿಜವಾಗಿಯೂ ಆಕೆಯ ಅಭಿನಯ ಕೊನೆಗೂ ನಿಮಗೆ ಕಣ್ಣೀರು ತರಿಸುತ್ತದೆ. ಗಂಡನನ್ನು ಅಪಹರಣಕಾರರು ಒತ್ತೆ ಇಟ್ಟುಕೊಂಡಿದ್ದಾರೆ. ಆತ ಮತ್ತೆ ಬರುವ ಸಾಧ್ಯತೆಗಳೇ ಇಲ್ಲ ಎನ್ನುವುದು ಒಂದೊಂದು ದಿನವೂ ದೃಢವಾಗುತ್ತಿದ್ದರೂ, ಆ ಮನಸ್ಸಿನ ತುಮಲವನ್ನು ತೋರಿಸುತ್ತಲೇ ಆ ದಿನಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ನೋಡಿದರೆ ನಿಟ್ಟುಸಿರು ಬಿಡುವುದೊಂದೇ ಬಾಕಿ. ಇಡೀ ಚಿತ್ರದ ತಲ್ಲಣಗಳನ್ನು ನಿರ್ದೇಶಕ ಬಿಡುಸು ಬಿಡಸಾಗಿ ತೆರೆದಿಡುತ್ತಾ ಹೋಗುತ್ತಾನೆ. ನಿಜ ಘಟನೆಯೊಂದನ್ನು ಚಿತ್ರವಾಗಿಸುವುದು ಅತ್ಯಂತ ಸವಾಲಿನ ಸಂಗತಿ. ಏಕೆಂದರೆ ಅದರಲ್ಲಿ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಅದನ್ನು ಚಿತ್ರ ಮಾಡುವಾಗ ಎದುರಾಗುವ ಸನ್ನಿವೇಶಗಳ ಬಗ್ಗೆಯೂ ನಿರ್ದೇಶಕನಿಗೆ ಅರಿವಿರಬೇಕಾಗುತ್ತದೆ. ಅದನ್ನು ಮೀರಿ ಆತ ಒಳ್ಳೆಯ ಚಿತ್ರ ಮಾಡಿದ್ದಾನೆ. ಹಿಂದಿ ಚಿತ್ರ ತಾರೆ ಇರ್ಫಾನ್ ಖಾನ್ ಚಿತ್ರದಲ್ಲಿ ಪಾಕಿಸ್ತಾನಿ ಸಿಐಡಿ ಮುಖ್ಯಸ್ಥನ ಪಾತ್ರ ಮಾಡಿದ್ದಾನೆ. ಬಹುತೇಕ ಪಾಕಿಸ್ತಾನಿ ನಟರನ್ನೆ ಇದರಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಏಷ್ಯಾ ಉಪಖಂಡದಲ್ಲಿನ ಭಯೋತ್ಪಾದಕತೆಯ ಕರಾಳ ಮುಖಗಳನ್ನು ನಿರ್ದೇಶಕ ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗಲಾಗಿದೆ. ಡೇನಿಯಲ್ ಪರ್ಲ್ ಅಮೆರಿಕದ ಪತ್ರಕರ್ತ ಎಂಬ ಕಾರಣಕ್ಕಾಗಿ ಆತನನ್ನು ಹತ್ಯೆ ಮಾಡಲಾಯಿತೇ? ಎಂಬ ಸಂಗತಿ ಇನ್ನೂ ಜಟಿಲವಾಗಿದೆ.
***
ಪಾಕಿಸ್ತಾನದಲ್ಲಿ ಈಗ ಪ್ರಜಾಪ್ರಭುತ್ವಕ್ಕೆ ಇನ್ನೊಮ್ಮೆ ಕಂಟಕ ಬಂದಂತೆ ಕಾಣುತ್ತದೆ. ನಮ್ಮೆಲ್ಲಾ ವಾದಗಳನ್ನು ಬದಿಗಿಟ್ಟು ನೋಡುವುದಾದರೆ, ಅಲ್ಲಿರುವ ಎಲ್ಲರೂ ಉಗ್ರರಲ್ಲ. ಎಲ್ಲರೂ ಭಯೋತ್ಪಾದನೆಯನ್ನು ಒಪ್ಪಿಕೊಳ್ಳುವುದಿಲ್ಲ. ಬಹುತೇಕ ಮಂದಿ ಶಾಂತಿಯುತ ಬದುಕನ್ನು ಆರಿಸಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರೂ, ಅದು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೆಲವು ಪ್ರಾಂತ್ಯದಲ್ಲಿ ಉಗ್ರರು ತಮ್ಮ ಹಿಡಿತವನ್ನು ಬಿಗಿ ಮಾಡಿಕೊಳ್ಳುತ್ತಿದ್ದಾರೆ. ಮೂಲಭೂತವಾದ ಹಾಗೂ ಕೋಮುವಾದ ಒಂದೇ ನಾಣ್ಯದ ಎರಡು ಮುಖಗಳು. ಅವುಗಳನ್ನು ಬೆಳೆಸುವುದು ಮತ್ತು ಪೋಷಿಸುವುದು ಅತ್ಯಂತ ಘೋರವಾದ ಸಂಗತಿ ಎಂಬುದು ಆ ರಾಷ್ಟ್ರದ ಗಮನಕ್ಕೆ ಬರಲೇಬೇಕಾಗಿದೆ. ಈಗಾಗಲೇ ಪಾಕಿಸ್ತಾನ ಆಡಳಿತ ಭಯೋತ್ಪಾದನೆಯನ್ನು ದಮನ ಮಾಡುವ ಶಕ್ತಿಯನ್ನು ಕಳೆದುಕೊಂಡಿದೆ. ಮುಂದೆ ಪಾಕಿಸ್ತಾನ ಇನ್ನೊಂದು ತಾಲಿಬಾನ್ ನೆಲೆಯಾದರೆ ಆಶ್ಚರ್ಯ ಪಡುವಂತಿಲ್ಲ.
***
ನಿಸ್ಸಂಶಯವಾಗಿ ಪತ್ರಕರ್ತನ ಈ ಹತ್ಯೆ ಅತ್ಯಂತ ಅಮಾನುಷ. ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಭಯೋತ್ಪಾದನೆಗೆ ಪತ್ರಕರ್ತನೇ ಬಲಿಯಾಗಿದ್ದು ವಿಪರ್ಯಾಸ. ಎ ಮೈಟಿ ಹಾರ್ಟ್ ನಮ್ಮ ನಿಮ್ಮನ್ನು ಬದುಕಿನ ನಾಳೆಯ ಭವಿಷ್ಯದ ಪ್ರಶ್ನೆಗಾಗಿ ತಲ್ಲಣಗೊಳಿಸುತ್ತದೆ. ಆತ ನಿಜವಾಗಿಯೂ ಭಯೋತ್ಪಾದನೆ ಪ್ರತಿಪಾದಿಸುವ ಮೂಲಭೂತವಾದಿಗಳ ಅನಿವಾರ್ಯತೆಗಳೇನು ಎಂಬ ಬಗ್ಗೆ ಸುದ್ದಿ ಮಾಡಲು ಹೋದಾತ. ಆದರೆ, ಅದನ್ನೆ ಉಗ್ರರು ತಮ್ಮ ಇನ್ನೊಂದು ಕೆಲಸಕ್ಕೆ ಬಳಸಿಕೊಂಡರು. ಆ ಚಿತ್ರವನ್ನು ನೋಡಿದರೆ, ಬದುಕನ್ನೆ ಪಣವಾಗಿಟ್ಟು ಯಾವುದೋ ತನ್ನ ಸಿದ್ಧಾಂತಕ್ಕೆ ಜೀವ ತೆರುವ ಪತ್ರಕರ್ತನ ಜೀವನದ ಬಗ್ಗೆ ಆತಂಕ ಮೂಡುತ್ತದೆ.
***
ಅಂದ ಹಾಗೆ ಡೇನಿಯಲ್ ಹೆಸರಿನಲ್ಲಿ ಪ್ರತಿ ವರ್ಷ ಪತ್ರಿಕೋದ್ಯಮದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪರ್ಲ್ ಪ್ರಸಿದ್ಧ ವಾಯಲಿನ್ ವಾದಕನೂ ಆಗಿದ್ದ. ಅದಕ್ಕಾಗಿ ಆತನ ಹೆಸರಿನಲ್ಲಿ ಸಂಗೀತ ಮೇಳಗಳು ನಡೆಯುತ್ತವೆ. ಪರ್ಲ್ ಹೀಗೆ ಅಮರನಾಗಿದ್ದಾನೆ.