Saturday, November 5, 2011

ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ

ಅದು ೧೯೯೪-೯೫ ರ ಸಮಯ ಪಿಯುಸಿ ಓದುತ್ತಿದ್ದ ದಿನಗಳು. ರಸ್ತೆಯೂ ಇಲ್ಲದ ಕುಗ್ರಾಮವಾಗಿದ್ದ ನನ್ನೂರಿನಲ್ಲಿ ಕೃಷಿಯ ಬೆನ್ನೆಲಬು ಮುರಿದು ಬಡತನ ಹೊದ್ದು ಮಲಗಿತ್ತು. ಗುಡಿಸಲಿನಂತಹ ಮನೆಗಳು, ಗಾರೆ ಕಾಣದ ನೆಲಗಳು, ಗುಂಡಿಯಲ್ಲಿನ ರಸ್ತೆಗಳು, ದೀಪವಿಲ್ಲದ ರಾತ್ರಿಗಳು.. ಇವೆಲ್ಲವೂ ಸಾಮಾನ್ಯ ಎನ್ನುವಂತೆಯೇ ಇತ್ತು. ಆಗ ಊರಿನಲ್ಲಿ ೩೦೦ ಮನೆಗಳಿಗೆ ೭ ಮಂದಿ ಪದವೀಧರರು, ೧ ಸ್ನಾತಕೋತ್ತರ ಪದವೀಧರ, ಒಬ್ಬ ವೈದ್ಯ ಶಿಕ್ಷಣ ಪಡೆದಿದ್ದಾರೆ ಎಂಬುದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚುಗಾರಿಕೆಯಾಗಿ ಎದೆಯುಬ್ಬಿಸಿ ನಡೆಯುತ್ತಿದ್ದ ಕಾಲ. ಅದು ಒಂಥಾರ ‘ಸಾಲ’ದ ದಿನಗಳು. ಹಾಸಿಗೆ ಇದ್ದಷ್ಟೂ ಕಾಲು ಚಾಚು ಎಂಬ ಗಾದೆ ಮಾತಿಗೂ ನಿಲುಕದಷ್ಟು ಅರ್ಥಿಕ ಬಡತನ ಕಿತ್ತು ತಿನ್ನುತ್ತಿತ್ತು. ನನ್ನೂರಿನಲ್ಲಿ ಹತ್ತಿ ಮತ್ತು ಮೆಕ್ಕೆಜೋಳವೇ ಪ್ರಮುಖ ಬೆಳೆ. ಒಂದು ವರ್ಷ ಹತ್ತಿಗೆ ಬಂಪರ್ ಬಹುಮಾನದಂತೆ ಬೆಲೆ ಬಂದರೆ, ಮರುವರ್ಷ, ಅದು ಮಕಾಡೆ ಮಲಗಿ ಕಣ್ಬಿಟ್ಟ ದೇವರು ಕಿತ್ತುಕೊಂಡ ಎನ್ನುವ ಸ್ಥಿತಿ. ಇನ್ನು ಹತ್ತಿ ಸಹವಾಸವೇ ಬೇಡ ಎಂದು ಮೆಕ್ಕೆಜೋಳಕ್ಕೆ ಮೊರೆಹೋದವರೆಲ್ಲಾ, ಅದಕ್ಕೆ ಗೊಬ್ಬರ ಹಾಕಿಯೇ ಸುಸ್ತಾಗಿ ಬಂದಷ್ಟು ಬೆಲೆಗೆ ಕೊಟ್ಟು ಗೊಬ್ಬರದ ಸಾಲ ತೀರಿಸಲಾಗದೆ, ಬೆಳೆ ಕೊಂಡ ದಲ್ಲಾಳಿ ಬಳಿಯೇ ನೂರಿನ್ನೂರು ಸಾಲ ಪಡೆದು ಊರಿಗೆ ಹೆಜ್ಜೆ ಹಾಕುವಾಗಲೆಲ್ಲಾ ನಮ್ಮ ಹಣೆಬರಹವನ್ನು ಆ ದೇವರು ಹೀಗೆ ಎಂದು ಬರೆದಾಗ ತಪ್ಪಿಸಲು ನಾವ್ಯಾರೂ ಎಂದು ವೇದಾಂತಿಗಳಂತೆ ಮಾತನಾಡುತ್ತಾ ಎದೆಭಾರವನ್ನು ಕಾಲಿಗೆ ಇಳಿಸಿ ಮುಗ್ಗುಮ್ಮಾಗಿ ಬಿಡುತ್ತಿದ್ದರು. ಆ ದಿನಗಳಲ್ಲಿ ಫೋನ್, ಟಿ.ವಿ ಎನ್ನುವುದು ಒಂದಿಬ್ಬರ ಮನೆಯಲ್ಲಿ ಇದ್ದರೆ ಹೆಚ್ಚು. ಅವರೆಲ್ಲಾ ೨೫ ಎಕರೆ ಜಮೀನು ಹೊಂದಿ, ಒಂದಿಷ್ಟು ಕೊಳವೆ ಬಾವಿ ಹಾಕಿಸಿ ನೀರು ಕಂಡವರು. ತರಕಾರಿ ಬೆಳೆದು ದಿನವೂ ಹಣ ನೋಡುತ್ತಿದ್ದವರು. ಹಾಗಾಗಿ ಊರಿನಲ್ಲಿ ಅವರ ಮಾತುಗಳಿಗೆ ಒಂದಷ್ಟು ’ತೂಕ’ ಮತ್ತು ಪ್ರತಿಷ್ಠೆಯ ’ಅಳತೆ’ ಸಿಕ್ಕಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಊರಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ-೪ ಯಲ್ಲಿ ಹಾದು ಹೋಗುವ ವಾಹನಗಳ ವೇಗಕ್ಕೂ ಊರು ಬೆಳೆಯಲಿಲ್ಲ. ಸದ್ದು ಕೇಳದಂತೆ ರಾತ್ರಿ ಎಣ್ಣೆ ದೀಪದಲ್ಲಿ ಜನ ಕರಗಿ ಹೋಗುತ್ತಿದ್ದರು ಎಂಬುದಷ್ಟೇ ನೆನಪು.
೧೦ ವರ್ಷ ಕಳೆದಿರಬೇಕು.
೨೦೦೬ರ ಹೊತ್ತಿಗೆ ಎರಡು ಪಥ ಇದ್ದ ರಾಷ್ಟ್ರೀಯ ಹೆದ್ದಾರಿ ನೀರು ಹಾದಿ ಬಿಟ್ಟ ಹಾಗೆ ನಾಲ್ಕು ಪಥವಾಗಿ ಬದಲಾವಣೆಯಾಯಿತು. ಅದು ಊರಿನ ದಿಕ್ಕು ಬದಲಾಯಿಸಿತೋ ಅಥವಾ ಜನರ ಹಣೆಬರಹ ಬದಲಾಯಿತೋ ಊರು ನಿಧಾನವಾಗಿ ಬೆಳೆಯಲಾರಂಭಿಸಿತು. ೩೦೦ ಇದ್ದ ಮನೆಗಳು ೫೦೦ ಆದವು, ಅವಿಭಕ್ತ ಕುಟುಂಬಗಳೆಲ್ಲವೂ ವಿಭಕ್ತ ಕುಟುಂಬಳಾಗಿ ಒಡೆದು ಚೂರಾದವೂ, ದೊಡ್ಡ ಮನೆ ಎಂದು ಕಂಬಗಳನ್ನು ನೋಡಿ ಮೂಗಿಗೆ ಬೆರಳುಡುತ್ತಿದ್ದ ಮನೆಯ ನಡುವೆ ಗೋಡೆಗಳೆದ್ದವು..ಹೀಗೆ, ಯಾವ ಊರಿನಲ್ಲಿ ಮೆಕ್ಕೆ ಜೋಳ ಬೆಳೆದು ಸಾಲ ಮಾಡಿ ಮನೆಗೆ ಬರುತ್ತಿದ್ದ ಜನ ಅದಕ್ಕೆ ಪರ್ಯಾಯಾವಾಗಿ ಮುಂದೇನು ಎಂಬ ಹುಡುಕಾಟ ಆರಂಭಿಸಿದರು. ಯಾವ ಕೆಲಸ ನಾವು ಮಾಡಬಾರದು ಎಂದು ಪ್ರತಿಷ್ಠೆ ಮಾಡುತ್ತಾ ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮಾತಿಗೆ ಜೋತು ಬಿದ್ದು ಊರ ಮುಂದಿನ ಕಟ್ಟೆಯಲ್ಲಿಯೇ ಕಾಲ ಕಳೆದು ಎಲ್ಲದಕ್ಕೂ ‘ಸಾಲ’ದವರು ಎಂದು ಕರೆಸಿಕೊಳ್ಳುತ್ತಿದ್ದವರೆಲ್ಲಾ ನಿಧಾನವಾಗಿ ಯಾವ ಕೆಲಸವಾದರೇನು, ದುಡ್ಡು ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದರು...
ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧.
ಊರಲ್ಲಿ ಮನೆಗೊಬ್ಬರು ಪದವೀಧರರು, ಅದರಲ್ಲೂ ಬಹುತೇಕ ಮಂದಿ ನಗರವಾಸಿಗಳು, ಊರನ್ನು ಬಿಟ್ಟು ವರ್ಷಗಳೇ ಕಳೆಯುತ್ತಾ ಬಂದಿದೆ. ಊರಿನ ರಸ್ತೆ ಟಾರು ಕಂಡಿದೆ..ಶಾಲೆಗೆ ಬಣ್ಣ ಬಂದಿದೆ..ಮನೆಮನೆಯ ನೆತ್ತಿಯಲ್ಲಿ ಡಿಶ್ ಆಕಾಶ ನೋಡುತ್ತಾ ಸಿಕ್ಕರೆ ಬಿಟ್ಟಾನೇ ಎಂಬಂತೆ ಗಾಳಿಯಲ್ಲಿ ಹರಿದಾಡುವ ಸಿಗ್ನಲ್‌ಗಳನ್ನು ಹೆಕ್ಕುತ್ತಾ ಮೂರ್ಖರ ಪೆಟ್ಟಿಗೆಗೆ ಬಣ್ಣಬಣ್ಣದ ಕನಸು ರವಾನೆ ಮಾಡುತ್ತಿದೆ. ರಾತ್ರಿ ಏಳಕ್ಕೆ ಊರಿಗೆ ಊರೆ ಸದ್ದಡಗಿ ಸದ್ದಿಲ್ಲದಂತಾಗುತ್ತಿದ್ದ ದಿನಗಳು ಮರೆತೆ ಹೋಯಿತೇನೋ ಎಂಬಂತೆ ಧಾರವಾಹಿಗಳ ಕಣ್ಣೀರಿನ ಕಥೆಗಳನ್ನು ಬಿಟ್ಟ ಕಣ್ಣ ಬಿಟ್ಟಂತೆ ನೋಡುತ್ತಾ ಹತ್ತಾಯಿತೋ, ಹನ್ನೊಂದೋ ಎಂಬಂತೆ ಜನರು ದಿಂಬಿಗೆ ತಲೆಕೊಟ್ಟು ಗಂಭೀರವಧನರಾಗಿಯೇ ಇರುತ್ತಾರೆ...
ಇದಿಷ್ಟು ವಿವರವನ್ನು ಇಲ್ಯಾಕೆ ಹೇಳಬೇಕಾಯಿತು ಎಂದರೆ ಚಿತ್ರದುರ್ಗದಂತಹ ಬರದ ನಾಡಿನಲ್ಲಿ ನೀರಿಗೆ ಎಂತಹ ತತ್ವಾರ ಎಂದು ಅಲ್ಲಿಯೇ ಹುಟ್ಟಿ ಬೆಳೆದವರಿಗೆಲ್ಲರಿಗೂ ಗೊತ್ತು. ಕಲ್ಲು ಗುದ್ದಿ ನೀರು ತೆಗೆಯಬೇಕಾದ ಜಿಲ್ಲೆಯ ಗ್ರಾಮವೊಂದು ಜಾಗತೀಕರಣದ ಬೇರುಗಳಿಗೆ ನೆಲವಾಗುತ್ತಾ.. ಅದು ಸತ್ಯ ಎಂದು ಒಪ್ಪಿಕೊಳ್ಳುತ್ತಾ. ದಿನವೂ ಸತ್ತು ಹುಟ್ಟುವ ಕನಸುಗಳನ್ನೇ ಅಬ್ಬಾ ಎಂದು ಚಪ್ಪರಿಸುವ ಈಗಿನ ವಾಸ್ತವಕ್ಕೂ ಅಂದಿನ ನಡುವೆ ಎಷ್ಟು ವ್ಯತ್ಯಾಸಗಳಿವೆ ಎಂಬ ಜಿಜ್ಞಾಸೆ.
ಹೌದು ಕೇವಲ ಐದಾರು ವರ್ಷಗಳದಲ್ಲಿ ಇಷ್ಟು ಬದಲಾವಣೆಯಾಗಲು ಕಾರಣ ಎಂಬುದನ್ನು ಹುಡುಕಲು ಅದು ನಿಗೂಢವೂ ಅಲ್ಲ, ಚಿಂತನೆಯ ವಿಚಾರವೂ ಅಲ್ಲ. ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಒಂದಿಷ್ಟು ಅರಿವು ಮತ್ತು ಬದುಕುವ ಅನಿವಾರ್ಯತೆಗಳ ಜಾಗವನ್ನು ಸೃಷ್ಟಿ ಮಾಡಿರುವುದಂತೂ ಸತ್ಯ.
ಯಾವ ಜನ ಮೆಕ್ಕಜೋಳ ಬೆಳೆದು ಸಾಲ ಮಾಡಿ ಹೈರಾಣವಸ್ಥೆಯಲ್ಲಿ ಇರುತ್ತಿದ್ದರೋ ಅವರೆಲ್ಲಾ ಈಗ ಮೆಕ್ಕೆಜೋಳ ಬಿಟ್ಟು ಅಡಕೆ ಬೆಳೆಯಲು ಮುಂದಾಗಿದ್ದಾರೆ. ನೀರಿಗೆ ಪರದಾಡುತ್ತಿದ್ದ ಒಣಭೂಮಿಗಳಲ್ಲಿ ಕೊಳವೆ ಬಾವಿಗಳು ಬಾಯಿತೆರದುಕೊಂಡಿದೆ. ಒಂದಿಂಚು ನೀರು ಬಿದ್ದರೆ ಸಾಕು ಅಡಕೆ ಬೆಳೆದು ನೆಮ್ಮದಿ ಬಾಳು ಸಾಧ್ಯ ಎಂಬ ಕನಸಿನ ಗೋಪುರವನ್ನು ಮನೆಮನೆಯಲ್ಲೂ ಕಟ್ಟಿಕೊಂಡಿದ್ದಾರೆ.
ಮೊನ್ನೆ ಊರಿಗೆ ಹೋದಾಗ ಇಡೀ ಊರಿನ ಒಟ್ಟು ಸಾಂಸ್ಥಿಕ ಬದಲಾವಣೆ ನನ್ನ ಅರಿವಿಗೆ ಬಂತು. ಬದಲಾವಣೆಯೇ ಜಗದ ನಿಯಮವಾಗಿರುವಾಗ ನನ್ನೂರಿನ ಬದಲಾವಣೆಯೇನು ದೊಡ್ಡ ವಿಚಾರವಾಗಿರಲಿಲ್ಲ. ಆದರೆ, ಬದಲಾಗುವ ವೇಗ ಮಾತ್ರ ಆಚ್ಚರಿ ಹುಟ್ಟಿಸುವಂತಿತ್ತು.
ಊರಿನ ಮನೆಗಳಲ್ಲಿ ಮಾತ್ರ ಗೋಡೆಗಳೆದ್ದಿರುವುದಲ್ಲ, ಜತೆಗೆ ಜಮೀನು ಹಂಚಿ ಹೋಗಿರುವುದು ಗಮನಕ್ಕೆ ಬಂತು. ಸಿಕ್ಕ ತುಂಡು ಭೂಮಿಗಳನ್ನೆ ಹಸನು ಮಾಡಿಕೊಂಡು ವಾಣಿಜ್ಯ ಬೆಳೆ ಅಡಕೆ ಮರ ತಲೆ ಎತ್ತಿವೆ. ಹಸಿರು ಕಂಗೊಳಿಸುತ್ತದೆ. ಸಣ್ಣ ರೈತರ ಮನಸ್ಥಿತಿಯ ಬಗ್ಗೆ ಆಚ್ಚರಿಯಾಯಿತು. ಏಕೆಂದರೆ ಇಡೀ ಚಿತ್ರದುರ್ಗದಲ್ಲಿ ಭೀಮಸಮುದ್ರ ಮಾತ್ರ ಅಡಕೆ ಬೆಳೆಗೆ ಹೇಳಿ ಮಾಡಿಸಿದ ಜಾಗ ಎಂದೇ ಪ್ರತೀತಿ. ಆದರೆ, ನನ್ನೂರಿನ ಭರಮಸಾಗರ ಹೋಬಳಿಯಲ್ಲಿ ಬರುವ ೨೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆಬಾವಿಯ ಸಹಾಯದಿಂದ ಅಡಕೆ ಬೆಳೆಯಲು ರೈತರು ಮುಂದಾಗಿದ್ದಾರೆ ಎಂಬುದು ಕೃಷಿ ವ್ಯವಸ್ಥೆಯ ಮಗ್ಗಲು ಬದಲಾವಣೆ ಎಂದು ನನಗೆ ಅನಿಸಿತು.
ಈಗ ಗ್ರಾಮದ ಸುಮಾರು ೫೦೦ ಎಕರೆ ಜಮೀನಿನಲ್ಲಿ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಮನೆಮನೆಯಲ್ಲೂ ಮಣ್ಣಿನ ನೆಲ ಹೋಗಿ ದುಬಾರಿ ಟೈಲ್ಸ್ ಬಂದು ಕೂತಿವೆ, ಹೆಂಚು ಕಳೆದು ಆರ್‌ಸಿಸಿ ತಾರಸಿ ಮನೆಗಳು ಎದ್ದು ನಿಂತಿದೆ. ಐದು ವರ್ಷಗಳಲ್ಲಿ ಅಡಕೆಯ ಹಣ ಕೈಗೆ ಬರುತ್ತಲೇ ರೈತರು ಬದುಕು ಬದಲಾಗುತ್ತಾ ಹೋಗಿದೆ. ಅದಿಷ್ಟೇ ಆಗಿದ್ದರೆ ಅದೊಂದು ನೆಮ್ಮದಿಯ ಸಂಗತಿ. ಹತ್ತಾರು ವರ್ಷಗಳ ಕಾಲ ಸಾಲ ಮಾಡಿ ಅದನ್ನು ತೀರಿಸಲಾಗದೆ ಕಣ್ಣೀರಿಟ್ಟ ರೈತ ಈಗ ಲಾಭದಲ್ಲಿದ್ದಾನೆ ಎಂಬ ಸಮಾಧಾನದಲ್ಲಾದರೂ ಇರಬಹುದಿತ್ತು. ಆದರೆ, ಬಂದ ಹಣ ನೆಮ್ಮದಿ ತರಲಿಲ್ಲ. ದುಬಾರಿ ಜೀವನ ಶೈಲಿ ಹಾಸು ಹೊಕ್ಕಿದೆ. ಬಸ್ ಬಾರದ ಊರಿಗೆ ೨ ಕೀ.ಮಿ. ನಡದೆ ಹೋಗುತ್ತಿದ್ದ ಜನರು ಈಗ ಬೈಕ್ ಬಿಟ್ಟು ಕೆಳಗಿಳಿಯದ ಸ್ಥಿತಿಗೆ ಬಂದಿದ್ದಾರೆ.
ಇದರ ಜತೆಗೆ ಊರ ಸುತ್ತಮುತ್ತ ಕೋಳಿ ಫಾರಂಗಳು ತಲೆಯೆತ್ತಿವೆ. ಇವು ಊರಿನಲ್ಲಿ ಪಿಯುಸಿವರೆಗೆ ಓದಿ ಮುಂದೆ ಆಗುವುದಿಲ್ಲ ಎಂದು ಕೈ ಚೆಲ್ಲಿದ ಐವತ್ತಕ್ಕೂ ಹೆಚ್ಚು ಯುವಕರಿಗೆ ಕೆಲಸ ಕೊಟ್ಟಿವೆ. ಕೈ ತುಂಬ ಸಂಬಳದಿಂದ ಮನೆಗೆ ಎರಡೆರಡು ಮೊಬೈಲುಗಳು ರಿಂಗಣಿಸುತ್ತಿವೆ. ಅದು ಇಲ್ಲದೆ ಮನೆಯಲ್ಲಿ ಏನೋ ಭಣ ಭಣ... ಎಂಬಂತೆ ಜನರು ವರ್ತಿಸುತ್ತಿದ್ದಾರೆ. ಸುಖ ದುಃಖ ತೋಡಿಕೊಳ್ಳಲಾದರೂ ನೀರಿಗೆ ಬಂದಾಗ, ದೇವಸ್ಥಾನಕ್ಕೆ ಬಂದಾಗ ಮಾತನಾಡಿಕೊಳ್ಳುತ್ತಿದ್ದ ಜನ ಸಂಜೆಯಾದರೆ, ಧಾರವಾಹಿಗಳೇ ಸರ್ವಸ್ವ ಎಂಬಂತೆ ಅತ್ತ ಮುಖ ಮಾಡಿದ್ದಾರೆ...
ಹೀಗೆ ಐದೇ ವರ್ಷದಲ್ಲಿ ಊರಿಗೆ ಊರೇ ಜಗತ್ತಿನ ವರ್ತಮಾನದೆಡೆಗೆ ಮುಖ ಮಾಡಿ ನಿಂತಿದೆ. ಕೂಲಿಯಾಳು ಸಿಗುವುದಿಲ್ಲ ಎಂಬ ಕಾರಣಕ್ಕೇನೋ ದಿನಕ್ಕೆ ೬೦ ರೂಪಾಯಿ ಕೊಡಲು ಕಷ್ಟ ಎನ್ನುತ್ತಿದ್ದ ಗುತ್ತಿಗೆದಾರರು ೫೦೦ ರೂಪಾಯಿ ಕೊಡಲು ಸಿದ್ಧವಾಗಿದ್ದಾರೆ. ಒಟ್ಟಿನಲ್ಲಿ ಇಡೀ ಊರು ಮುಂದೆ ದಕ್ಕದೋ ಎಂಬಂತೆ ಹಣದ ಹಿಂದೆ ಬಿದ್ದಿದೆ.
ಇಂತಹ ಬದಲಾವಣೆ ನನ್ನೂರಿನ ಜನರಿಗೆ ಸಾಮಾನ್ಯ ಎನಿಸುವಷ್ಟು ಸರಾಗವಾಗಿ ಬಿಟ್ಟಿದೆ. ಆದರೆ, ಅದರ ಮುಂದಿನ ಸತ್ಯಗಳನ್ನು ಮಾತ್ರ ಅವರಿಗೆ ಬಣ್ಣದ ಕನಸುಗಳಲ್ಲಿ ಕಾಣದೆ ಹೋಗಿದ್ದಾರೆ ಎಂಬುದಂತೂ ಸತ್ಯ. ಒಂದು ಕಾಲದಲ್ಲಿ ಇಡೀ ಊರಿಗೆ ಊರೇ ಹತ್ತಿ ಬೆಳೆಯಲು ಹೋಗಿ ಕೈ ಸುಟ್ಟುಕೊಂಡ ಅನಂತರ ಯಾರೋ ಒಬ್ಬರು ಮೆಕ್ಕೆ ಜೋಳ ಹಾಕಿದರೆಂದು ಅದನ್ನು ಎಲ್ಲರು ಬೆಳೆಯಲು ಹೋಗಿ ಲಾಭದ ಬದಲು ಸಾಲ ಮಾಡಿಕೊಂಡರು. ಈಗ ಆ ಸ್ಥಾನವನ್ನು ಅಡಕೆ ತುಂಬಿದೆ. ಊರಿಗೆ ಹತ್ತಿಪ್ಪತ್ತು ಮನೆಗಳು ಅಡಕೆ ತೋಟ ಹೊಂದಿದ್ದರೇನೋ ಸರಿ. ಆದರೆ, ಪ್ರತಿ ಮನೆಯಲ್ಲೂ ಅಡಕೆ ತೋಟ ಮಾಡಿ ಬೆಲೆ ಕಡಿಮೆಯಾದರೆ ಯಾರು ಹೊಣೆ. ಆಗ ಬರುವ ಕಷ್ಟಗಳನ್ನು ಎದುರಿಸುವವರು ಯಾರು? ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ.
ಇನ್ನೊಂದು ಅಂಶವೆಂದರೆ ಸಾಮಾಜಿಕವಾಗಿ ಇಡೀ ಊರು ವಿಘಟನೆಯಾಗುತ್ತಿದೆ. ಬಹುಶಃ ಇಂದಿನ ಸಾಮಾಜಿಕ ಸಂಪ್ರದಾಯದ ಪದರಗಳು ಉಳಿದುಕೊಂಡಿರುವುದೇ ಗ್ರಾಮಗಳಲ್ಲಿ. ಅಂತಹ ಗ್ರಾಮಗಳೇ ನಗರೀಕರಣದ ಪ್ರಭಾವದಿಂದ ಅವುಗಳನ್ನು ಮರೆತು ಬಿಟ್ಟರೆ ಗತಿಯೇನು ಎಂಬ ಆತಂಕ ಕಾಡದೆ ಇರದು. ವರ್ಷದಲ್ಲಿ ಹತ್ತಿಪ್ಪತ್ತು ಹಬ್ಬಗಳನ್ನು ಮಾಡಿ ನೆಂಟರಿಷ್ಟರನ್ನು ಕರೆದುಕಳಿಸಿ ಸಂಬಂಧಗಳನ್ನು ಬಡತನದಲ್ಲೂ ಗಟ್ಟಿಯಾಗಿಸಿಕೊಳ್ಳುತ್ತಿದ್ದ ಆ ದಿನಗಳಿಗೂ, ಸಂಜೆ ಬಂದು ಹಬ್ಬ ಮಾಡಿ ಬೆಳಗ್ಗೆ ಹೊತ್ತುಟ್ಟುವ ಮುನ್ನವೆ ನಗರದೆಡೆಗೆ ಮುಖ ಮಾಡುವ ಈಗಿನ ಗ್ರಾಮದ ಜನರೆಲ್ಲಿ ಎಂಬ ಜಿಜ್ಞಾಸೆ ಮೂಡುತ್ತದೆ.
ಹಾಗೆಂದು ಗ್ರಾಮೀಣ ಜನರ ಬದುಕು ಬದಲಾಗಲೇಬಾರದು ಎಂದಿಲ್ಲ. ಆದರೆ, ಬದಲಾಗುವ ಜೀವನ ಶೈಲಿಯಲ್ಲಿ ಸೊಗಡಿಲ್ಲದ ಅಧುನಿಕತೆ ಅವಶ್ಯವಿದೆಯೇ ಎಂಬುದು ಯೋಚಿಸಬೇಕಾದ ಅಂಶ. ಕೃಷಿ ವ್ಯವಸ್ಥೆಯೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಬೆಳೆಯ ಪರ್ಯಾಯಾ ಹುಡುಕಿಕೊಳ್ಳುವುದು ತಪ್ಪಲ್ಲ. ಆದರೆ, ಅದರ ನೆರಳಲ್ಲಿಯೇ ಇರುವ ಸಾಂಸ್ಥಿಕ ವ್ಯವಸ್ಥೆಯನ್ನು ಚೂರು ಮಾಡಿಕೊಳ್ಳುವುದು ನಮ್ಮ ಸಂಸ್ಕೃತಿಗೆ ನಾವೇ ಕೊಡಲಿ ಪೆಟ್ಟು ಹಾಕಿಕೊಂಡಂತೆ...
ಊರಿನ ಈ ಬದಲಾವಣೆ ನೋಡಿ ಒಂದೆಡೆ ದಿಗ್ಬ್ರಮೆ ಮತ್ತೊಂದೆಡೆ ಆತಂಕದಲ್ಲಿದ್ದ ನಾನು ಊರ ಮುಂದಲ ಹೊಂಡದ ಕಟ್ಟೆಯ ಮೇಲೆ ಕುಳಿತಿದ್ದ ಹೀರಿಕರೊಬ್ಬರನ್ನು "ಏನಜಾ ಈಗ ಭಜನೆ ಕಾರ್ಯಕ್ರಮ ನಡೆಲ್ವೇನೂ? ಎಂದು ಕೇಳಿದೆ.. ಆ ಹೀರಿಕರು ನನ್ನ ಗುರುತು ಸಿಗದೆ ಹೋದವರಂತೆ " ಎಲ್ಲಪ್ಪಾ ಹನುಮಂತ ದೇವರಿಗೊಂದು ಕಡ್ಡಿ ಹಚ್ಚಿದ್ರೆ ಸಾಕು ಅನ್ನಂಗಾಗೇದಾ ಇನ್ನು ಭಜನೆ ಮಾಡಾಕೆ ನಮ್ಮ ಜನಕ್ಕೆ ಟೈಮ್ ಎಲ್ಲೈತಿ" ಎಂದು ಉತ್ತರಿಸಿದರು.
ಮತ್ತೇನೂ ಪ್ರಶ್ನೆ ಕೇಳಬಾರದೆನಿಸಿತು. ನನ್ನೂರು ಓಡುತ್ತಿರುವ ಜಗತ್ತಿನ ಹಿಂದೆ ಬಿದ್ದು ಬಾರಿ ದಿನಗಳೇ ಆದವು ಎಂಬುದು ಆ ಹೀರಿಕರ ಮಾತಿನಲ್ಲೇ ಗೊತ್ತಾಗುತ್ತಿತ್ತು..
ಏನ್ ಮಾಡೋದು? ಕಾಲೈ ತಸಮೈ ನಮಃ

No comments: