skip to main |
skip to sidebar
ಪತ್ರಕರ್ತರು ಹಾಗೂ ಸಂಕ್ರಾಂತಿ
"ಧರ್ಮ,ಧರ್ಮ..! ಅದಕ್ಕೆ ಯಾವಾಗಲೂ ಯಾವುದಾದರೂ ಒಂದು ಕಂಳಕ ಇದ್ದೇ ಇರುತ್ತದೆ. ಮನುಷ್ಯರಿಗೇನಾಗಿದೆ ಹೇಳಿ?"
-ಬಿಜ್ಜಳ
ಇಂತಹ ಮಾತೊಂದು ಪಿ.ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಬರುತ್ತದೆ. ವಾಸ್ತವದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಇಂತಹ ಮನೋಭಾವದಿಂದ ಅವರು ಆರಿಸಿದ ಪ್ರಜೆಗಳ ಬಗ್ಗೆ ಈ ಮಟ್ಟಿನ ಕಾಳಜಿ ವಹಿಸಿದ್ದು ಕಾಣೆ.
ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಬೇಕಾಗಿ ಬಂದದ್ದೆ ವಿಶೇಷ ಪ್ರಸಂಗ. ಮೈಸೂರು ಜಿಲ್ಲಾ ಪತ್ರಕರ್ತರು ಒಂದು ಹೊಸ ಸಾಹಸಕ್ಕಾಗಿ ಮುನ್ನಡಿಯಿಟ್ಟಿದ್ದಾರೆ. ಸಂಘದ ಸದಸ್ಯರೆಲ್ಲಾ ಪತ್ರಿಕಾ ದಿನಾಚರಣೆಯ ಅಂಗವಾಗಿ ಲಂಕೇಶರ "ಸಂಕ್ರಾಂತಿ" ನಾಟಕವನ್ನು ನಟ, ರಂಗ ನಿರ್ದೇಶಕ ಮಂಡ್ಯ ರಮೇಶ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ತಿಂಗಳ ರಂಗತರಬೇತಿ ಶಿಬಿರದಲ್ಲಿ ಸತತವಾಗಿ ಭಾಗವಹಿಸುವ ಮೂಲಕ ನಾಟಕ ತಾಲೀಮು ನಡೆಸಿ ತಮ್ಮ ಹೊಸ ಪ್ರಯತ್ನಕ್ಕೆ ಅಣಿಯಾಗಿದ್ದಾರೆ.
ಇಷ್ಟೇ ಆಗಿದ್ದರೇ ಇಲ್ಲಿ ಇದನ್ನು ಹೇಳಬೇಕಾಗಿದ್ದಿಲ್ಲ. ಆದರೆ, ಮೂರು ದಶಕಗಳ ನಂತರವೂ ಲಂಕೇಶ ಅವರು ಬರೆದ ಸಂಕ್ರಾಂತಿ ಅದೆಷ್ಟು ಪ್ರಸ್ತುತವಾಗಿದೆ ಎಂಬುದರ ಬಗ್ಗೆ ನನಗೆ ಕೊರೆಯುತ್ತಿರುವ ಅಭಿಪ್ರಾಯಗಳು.
೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ಕ್ರಾಂತಿ ಹೇಗೆ ಜಾತಿ ಪರದೆಯನ್ನು ಮೀರುವ ಯತ್ನ ಮಾಡುತ್ತದೆ ಹಾಗೆಯೇ ಅದಕ್ಕೆ ಬಲಿಷ್ಠ ಜನಾಂಗಗಳು ಹೇಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಚಿತ್ರಣದ ಸುತ್ತ ತೆರೆದುಕೊಳ್ಳುವ ನಾಟಕ ನಿಜವಾಗಿಯೂ ನಮ್ಮನ್ನು ಚಿಂತನೆ ಹಚ್ಚಬಲ್ಲದು ಎನಿಸುತ್ತದೆ. ಇಡೀ ನಾಟಕವನ್ನು ಅವರಿಸಿಕೊಳ್ಳುವ ಬಸವಣ್ಣ ಹಾಗೂ ಅದನ್ನು ನುಂಗುವ ಬಿಜ್ಜಳರ ಪಾತ್ರಗಳು ವಿಶೇಷವೆನಿಸುತ್ತದೆ. ಬಹಳ ವರ್ಷಗಳ ಅನಂತರ ಸಂಕ್ರಾಂತಿ ನಾಟಕವನ್ನು ಮತ್ತೆ ಓದಿದಾದಗ ಕಾಳಜಿಯುಳ್ಳ ಮನುಷ್ಯನೊಬ್ಬನಿಗೆ ಅನಿಸುವುದು ಬಿಜ್ಜಳನ ಒಂದು ಮುಖದ ಅಧಿಕಾರಸ್ಥರು ಇಲ್ಲೆ ಇದ್ದಾರಲ್ಲ ಎಂದು. ವೈದಿಕರನ್ನು ಹಾಗೂ ದಲಿತರನ್ನು (ಶರಣರನ್ನು) ಎದುರು ಹಾಕಿಕೊಳ್ಳದೇ ಅತ್ಯಂತ ಜಾಣ ರಾಜನೀತಿಯಿಂದ ಬಸವಣ್ಣನವರ ಕ್ರಾಂತಿಯ ಬಗ್ಗೆ ವ್ಯಂಗ್ಯವಾಡುತ್ತಲೇ ತನ್ನ ಅಧಿಕಾರವನ್ನು ಚಲಾಯಿಸುವ ಬಿಜ್ಜಳ ಒಮ್ಮೊಮ್ಮೆ ಬಸವಣ್ಣನವರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಂತೆ ಕಾಣುತ್ತಾನೆ.
ನಾಟಕ ಆರಂಭವಾಗುವುದೇ ಹೊಲೆಯರ ಹಟ್ಟಿಯಿಂದ ಮತ್ತು ಕೊನೆಯಾಗುವುದು ಹೊಲೆಯರ ಹಟ್ಟಿಯಲ್ಲಿ. ಆದರೆ, ಇವೆರಡರ ನಡುವೆ ಬರುವ ರುದ್ರ ಮತ್ತು ಉಷಾ ಎಂಬ ಪಾತ್ರಗಳು ಇಡೀ ಸಂಕ್ರಾಂತಿಯ ಮುನ್ನೆಡಸಲು ದಾರಗಳಾಗುತ್ತವೆ. ಬ್ರಾಹ್ಮಣರ ಹುಡುಗಿ ಉಷಾಳನ್ನು ಪ್ರೀತಿಸುವ ದಲಿತ ರುದ್ರ ಮತ್ತು ಅವರ ಪ್ರೇಮ ೧೨ ನೇ ಶತಮಾನದಲ್ಲಿ ಇನ್ನೆಂತಹ ಜಾತಿಯ ನೆಲೆಗಟ್ಟನ್ನು ಹಾಗೂ ಅಂತರವನ್ನು ಹುಟ್ಟುಹಾಕಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ. ಉಷಾಳ ಮೂಲಕ ಬಾಹ್ಮಣರ ಬಂಡವಾಳವಿಲ್ಲದ ಬಡಾಯಿಗಿಂತ ಬಲಿಷ್ಟವಾದ ದಲಿತ ರುದ್ರನ ಮನೆಯಂಗಳ ಆಕೆಗೆ ಹೆಚ್ಚು ಆಪ್ತ ಎನ್ನುವಂತೆ ಕಾಣುವುದು ಮನುಷ್ಯ ಸಹಜ ಕ್ರಿಯೆ ಎನಿಸುತ್ತದೆ. ಏಕೆಂದರೆ ವೇದ ಪುರಾಣಗಳಿಗಿಂತ ವಾಸ್ತವದ ಬದುಕು ಹೆಚ್ಚು ಅರ್ಥ ಪೂರ್ಣ ಎನ್ನುವ ಆಕೆಯ ವಾದ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಅಧಿಕಾರಸ್ಥರ ಜಾಣ ನೀತಿಗಳು ಎಂತಹ ಪ್ರೀತಿ, ಪ್ರೇಮವನ್ನು ಬಲಿಕೊಡುವುದು ಎನ್ನುವುದಕ್ಕೆ ರುದ್ರನ ತಲೆದಂಡ ಸಾಕ್ಷಿಯಾಗುತ್ತದೆ. ಅವನು ಕೇವಲ ಹೊಲೆಯ ಎಂಬ ಕಾರಣಕ್ಕಾಗಿಯಲ್ಲದಿದ್ದರೂ ಅದು ನಿಜವಾದ ಶರಣ ಕ್ರಾಂತಿಯನ್ನು ಬಲಿಕೊಡಲು ಬ್ರಾಹ್ಮಣರು ಬಿಜ್ಜಳನ ಮೇಲೆ ಹೇರಿದ ತಂತ್ರವಾಗಿರಬಹುದು, ಅಥವಾ ಅತ್ಯಂತ ವೇಗವಾಗಿ ಜನಪ್ರಿಯನಾಗುತ್ತಿರುವ ಬಸವಣ್ಣನವರ ಬಗ್ಗೆ ಬಿಜ್ಜಳ ರಾಜನಿಗೆ ಇದ್ದ ಅಧಿಕಾರದ ಭಯ ಕಾರಣವಾಗಬಹುದು.
ಸಂಕ್ರಾಂತಿಯಲ್ಲಿ ಕಾಣುವ ಬಿಜ್ಜಳನ ರಾಜನೀತಿಯ ತಂತ್ರಗಳನ್ನು ಇಂದಿನ ರಾಜಕಾರಣಿಗಳು ಮುಂದುವರಿಸುತ್ತಿದ್ದಾರೆ ಎನ್ನುವುದು ಸರ್ವಿವಿಧಿತ.
ಶರಣ ಎನ್ನುವುದು ಎಲ್ಲ ಜಾತಿಗಳನ್ನು ಒಳಗೊಂಡ ಒಂದು ಸಾಂಸ್ಕೃತಿಕ ಪರಂಪರೆ ಎಂಬುದನ್ನು ನಾಟಕ ಧ್ವನಿಸುತ್ತದೆಯಾದರೂ, ಅದನ್ನು ಇಂದಿನವರು ಜಾತಿಯನ್ನಾಗಿಸಿರುವುದು ವಿಚಿತ್ರವೆನಿಸುತ್ತದೆ.
ಸಂಕ್ರಾಂತಿ ನಾಟಕ ಮಾಡಲು ಹೊರಾಟಾಗ ನಮ್ಮ ಪರಿಸರದಲ್ಲಿಯೇ ಇರುವ ಕೆಲವರು ನಾಟಕವನ್ನು ಔಟ್‌ಡೇಟೆಡ್ ಎಂದು ಜರಿದದ್ದು ಉಂಟು. ಆದರೆ, ನಾಟಕದಲ್ಲಿ ಧ್ವನಿಸುವ ಜಾತಿಯ ಅಡ್ಡ ಮಾತುಗಳು, ಬಿಜ್ಜಳನ ರಾಜನೀತಿಯ ತಂತ್ರಗಳು, ರುದ್ರನಂತವರ ತಲೆದಂಡಗಳು ಇಂದಿಗೂ ನಡೆಯುತ್ತಿವೆ. ಬಲಿಷ್ಠ ಕೋಮುಗಳ ಒತ್ತಡಕ್ಕೆ ಸರಕಾರ ಶೋಷಿತರ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಲೇ ಇದೆ. ಅದು ಔಟ್‌ಡೇಟೆಡ್ ಹೇಗಾದಿತು. ಅಂದು ಬಿಜ್ಜಳ ಹಾಗೂ ಬಸವಣ್ಣ ಅಪ್ತರಾಗಿದ್ದರೂ, ಬಿಜ್ಜಳ ಮೇಲೆ ಬಸವಣ್ಣನವರಿಗಿಂತ ಪ್ರಭಾವ ಬೀರುವಷ್ಟು ವೈದಿಕ ಸಮುದಾಯ ಅವರ ಸುತ್ತ ಇತ್ತು. ಅಂತಹ ವ್ಯವಸ್ಥೆ ಇಂದಿನ ಸರಕಾರದ ಮುಖ್ಯಮಂತ್ರಿಯ ಸುತ್ತಲೂ ಇದೆ. ಅವರ ಜಾತಿಯ ಮಂದಿ ಮಾಗಧರೇ ಅಲ್ಲಿ ತುಂಬಿ ತುಳಿಕಿದ್ದಾರೆ. ದುರಂತವೆಂದರೆ " ಅವನಾರವ ಅವನಾರವ ಎನಬೇಡ, ಅವ ನಮ್ಮವ ಅವ ನಮ್ಮನ ಎನ್ನಿರಯ್ಯ " ಎಂದು ಹೇಳಿ ಶರಣ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರಕಾರ ಬಿಜ್ಜಳನಂತೆ ರುದ್ರರನ್ನು ಬಲಿಕೊಡುತ್ತಲೇ ಇದೆ. ಇದು ವಿಪರ್ಯಾಸ.
"ಇಂದು ಹೋದಿತು ಕತ್ತಲು ನಾಳೆ ಬೆಳಕು ಹರಿದು ಎಲ್ಲಾ ಬೆಳ್ಳಾಂಬೆಳಗಾಗಿ ಎಲ್ಲ ನೋಡೆವು ಅಂತ ಕಾಯ್ತ ಇದೀವಿ" ಎಂದು ರುದ್ರ ಉಷಾಳಿಗೆ ಹೇಳುತ್ತಾನೆ. ದಲಿತರಿಗೆ ಅಂತಹ ಕ್ಷಣವಿನ್ನೂ ಪೂರ್ತಿಯಾಗಿ ಬಂದಿಲ್ಲ ಎನ್ನುವುದು ಸತ್ಯ ದಲಿತರನ್ನು ಶರಣರನ್ನಾಗಿಸಿ ಅವರ ಬದಕಿನ ಪರಂಪರೆಗೆ ಹೊಸ ಅರ್ಥಕೊಡಲು ಹೊರಟ ಬಸವಣ್ಣ, ಬಿಜ್ಜಳ ರಾಜನೀತಿಯಲ್ಲಿ ಸಿಲುಕಿ ರುದ್ರನ ತಲೆದಂಡವಾಗುವಾಗ ಮೌನವಾಗುತ್ತಾನೆ. ಇದು ಬಸವಣ್ಣನವರ ಅಸಹಾಯಕತೆಯೇ ಎಂಬ ಅನುಮಾನ ಮೂಡುತ್ತದೆ.
ಸದಾ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಯಾಂತ್ರಿಕವಾಗಿ ಬಿಡುವ ಪತ್ರಕರ್ತರನ್ನು ಇಂತಹ ಹೊಸ ಪ್ರಯತ್ನಕ್ಕೆ ಅಣಿಮಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿನವೂ ಬಿಜ್ಜಳರಂತಹ ರಾಜಕಾರಣಿಗಳ ತಂತ್ರಗಳ ಬಗ್ಗೆ ಪುಟಗಟ್ಟಲೇ ಸುದ್ದಿ ಬರೆಯುವ ಪತ್ರಕರ್ತರಿಗೆ ಸಂಕ್ರಾಂತಿ ನಾಟಕ ಬಸವಣ್ಣನ ಕ್ರಾಂತಿ ಹಾಗೂ ರುದ್ರನ ತಲೆದಂಡದಂತಹ ಮಾನವೀಯ ಪ್ರಕರಣಗಳು ಆ ತಂತ್ರದಲ್ಲಿ ಹೇಗೆ ಬಲಿಯಾಗುತ್ತವೆ ಎನ್ನುವ ಹೊಸ ಪಾಠವನ್ನು ಹೇಳಿಕೊಟ್ಟಿದೆ ಎನ್ನುವುದರಲ್ಲಿ ಅತಿಶೋಕ್ತಿಯಿಲ್ಲ.
2 comments:
ಸಂಕ್ರಾತಿ ನಾಟಕವನ್ನು ಬಹಳ ಆಸ್ಥೆಯಿಂದ ಓದಿದ್ದೆ,ಲಂಕೇಶರ ಬರವನಿಗೆಯಲಿನ ತಿಕ್ಷ್ನತೆ ಸಮಾಜ ಸುಧಾರಣೆಗೆ ಒರಟ ಬಸವಣ್ಣ ಅದೇ ಜಾತೀಯತೆಯ ಮೂಲಕೆ ಸಿಕ್ಕಿಕೊಲ್ಲುವನಂತ ವಿಪರ್ಯಾಸ ನಮ್ಮ ಜನರ ಜೀವನದ ಅಣಕವೇ ಸರಿ.....ಸಹಾಯಾತ್ರಿ.ಬ್ಲಾಗ್ಸ್ಪಾಟ್
ನಿಜ ಸರ್...ರುದ್ರನಂತವರ ತಲೆದಂಡ ನಿರಂತರ ನಡೆಯುತ್ತಲೇ ಇದೆ....
Post a Comment